ಚಿಂತಾಮಣಿ, ಗಂಗಾ, ತುಂಗಾ, ಭದ್ರಾ, ಕಾವೇರಿ, ದುರ್ಗಾ, ಯಮುನಾ... ಎಂದು ಈ ಅಮ್ಮ ಕರೆದರೆ ಸಾಕು, ಎಲ್ಲವೂ ಓಡೋಡಿ ಬರುತ್ತವೆ. ಸದ್ಯ ಈ ಅಮ್ಮನದ್ದು 17 ಮಕ್ಕಳ ಮಹಾಕುಟುಂಬ. ಈ `ಮಕ್ಕಳು' ಹುಟ್ಟಿದ ದಿನ, ಆಟಪಾಠ, ದಿನಚರಿ ಎಲ್ಲವೂ ಈ ಅಮ್ಮನಿಗೆ ಚೆನ್ನಾಗಿ ಗೊತ್ತು. ಎಲ್ಲವೂ ಪುಸ್ತಕದಲ್ಲಿ ಅಕ್ಷರರೂಪು ಪಡೆದಿವೆ.
ಅಂದ ಹಾಗೆ ಈ ಅಮ್ಮ ಹಾವೇರಿ ಜಿಲ್ಲೆ ಹಾನಗಲ್ಲ ತಾಲ್ಲೂಕಿನ ಯಳವಟ್ಟಿ ಗ್ರಾಮದ ಮೋಹಿನಿ ಸುಂಕದ. ಇವರ ಮಕ್ಕಳೆಂದರೆ ವಿವಿಧ ತಳಿಯ ಗೋವುಗಳು. ಮದುವೆಯಾದ ಹೊಸತರಲ್ಲಿ ಬೇಸರ ಕಳೆಯಲು ಒಂದು ಹಸುವಿನಿಂದ ಆರಂಭಿಸಿರುವ ಇವರ ಹೈನುಗಾರಿಕೆ ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಎಚ್.ಎಫ್ ತಳಿಯ 17 ಹಸುಗಳು ಈ ಅಮ್ಮನ ಆರೈಕೆಯಲ್ಲಿ ದಷ್ಟಪುಷ್ಟವಾಗಿ ಬೆಳೆಯುತ್ತಿವೆ. ಇವರ ಆರೈಕೆ ಎಷ್ಟರ ಮಟ್ಟಿಗಿದೆ ಎಂದರೆ ಆ ಹಸುಗಳ ಹೆಸರು ಕೂಗಿದೊಡನೆ ಅವೇ ಹಸುಗಳು ಇವರತ್ತ ತಿರುಗಿ ನೋಡುತ್ತವೆ!
ಹಸುಗಳ ಮಾಹಿತಿ
ಹಸುಗಳ ಬಗ್ಗೆ ಮಾಹಿತಿಯನ್ನು ಬರೆದಿಡುವ ಪರಿಪಾಠವನ್ನು ಮೋಹಿನಿ ಬೆಳೆಸಿಕೊಂಡಿದ್ದಾರೆ. ಗರ್ಭಧಾರಣೆ ಮಾಡಿದ ದಿನಾಂಕ, ಲಸಿಕೆ, ಕಾಯಿಲೆಗೆ ನೀಡಿದ ಔಷಧಿ ವಿವರಗಳು, ಕರು ಹುಟ್ಟಿದ ದಿನಾಂಕ, ಅವುಗಳ ತೂಕ, ಹಸುಗಳು ಹಾಲು ಕೊಡುವ ಹಾಲಿನ ಪ್ರಮಾಣ ಇತ್ಯಾದಿ ಎಲ್ಲವೂ ಇವರ ಬಳಿ ಇದೆ.
ಹಸುಗಳು ಹಾಲು ಕೊಡುವುದು ಕಡಿಮೆಯಾದರೆ ಅವುಗಳಿಗೆ ಏನು ಮಾಡಬೇಕು ಎಂದು ಪರಿಶೀಲಿಸುತ್ತಾ ಹಸುಗಳ ವಾಸಕ್ಕೆ ಸಾಕಷ್ಟು ಗಾಳಿ ಬೆಳಕು ಇರುವ ಎರಡು ಕೊಟ್ಟಿಗೆಗಳನ್ನು ನಿರ್ಮಿಸಿದ್ದಾರೆ. ದಿನಕ್ಕೆ ಎರಡು ಬಾರಿ ಕೊಟ್ಟಿಗೆಯನ್ನು ಶುಚಿಗೊಳಿಸುತ್ತಾರೆ. ಹಸುಗಳ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡುತ್ತಿದ್ದಾರೆ.
ನಸುಕಿನ 4ಗಂಟೆಯಿಂದಲೇ ಇವರ ಕಾಯಕ ಪ್ರಾರಂಭ. ಹಸುಗಳ ಕೊಟ್ಟಿಗೆಯ ಸ್ವಚ್ಛತೆಯ ಕಾರ್ಯ ಮುಗಿಸಿ ಅವುಗಳಿಗೆ ಸ್ನಾನ ಮಾಡಿಸಿ, ಮುಸುರಿ ಇಟ್ಟು 9ಗಂಟೆಗೆ ಮೇವು ನಂತರ ವಿಶ್ರಾಂತಿ. 1ಗಂಟೆಗೆ ಆಹಾರ, 3 ಗಂಟೆಗೆ ಹಸಿರು ಹುಲ್ಲು, 6 ಗಂಟೆಗೆ ಮುಸುರಿ, ಮಲಗುವ ಮುಂಚೆ ಪುನಃ ಹುಲ್ಲು ಹೀಗೆ ದಿನಂಪ್ರತಿ ಹಸುಗಳ ಆರೈಕೆ ಇವರದ್ದೇ.
20 ವರ್ಷದಿಂದ ಈ ಕಾಯಕವನ್ನು ಮಾಡಿಕೊಂಡು ಬರುತ್ತಿದ್ದಾರೆ ಮೋಹಿನಿ. ಇವರಿಗೆ ಸಾಥ್ ನೀಡುತ್ತಿದ್ದಾರೆ ಪುತ್ರ. `ತಿಂಗಳಿಗೆ 60 ಸಾವಿರ ರೂಪಾಯಿ ಲಾಭ ಬರುತ್ತದೆ. ಅದರಲ್ಲಿ ಖರ್ಚು ವೆಚ್ಚ ಎಲ್ಲ ಕಳೆದರೂ ಕನಿಷ್ಠ 30 ಸಾವಿರವಾದರೂ ಲಾಭವಿದೆ' ಎನ್ನುತ್ತಾರೆ ಅವರು. ಇದರ ಜೊತೆಗೆ ಹಸುಗಳ ಗೊಬ್ಬರ ಮಾರಾಟ ಮಾಡಿದರೆ ವರ್ಷಕ್ಕೆ ಏನಿಲ್ಲವೆಂದರೂ 35 ಸಾವಿರ ಲಾಭ ಕಟ್ಟಿಟ್ಟ ಬುತ್ತಿ ಎನ್ನುವುದು ಅವರ ಮಾತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲಾಭವನ್ನು ಇವರು ಪಡೆದುಕೊಂಡಿದ್ದಾರೆ. ರಾಜ್ಯ ಮಟ್ಟದ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ವತಿಯಿಂದ ನಡೆದ ರಾಜ್ಯ ಮಟ್ಟದ 32ನೇ ಕೃಷಿ ಮೇಳದಲ್ಲಿ ಇವರ ಆಕಳು ಚಿಂತಾಮಣಿಗೆ `ಉತ್ತಮ ಆಕಳು' ಪ್ರಶಸ್ತಿಯೂ ಬಂದಿದೆ.
ಹಾಲು ಮೊಸರು ತುಪ್ಪ ಇತ್ಯಾದಿಗಳಿಂದಲೂ ಲಾಭ ಗಳಿಸಬಹುದು, ಜೊತೆಗೆ ಸಾವಯವ ಗೊಬ್ಬರವನ್ನೂ ಪಡೆಯಬಹುದು ಎನ್ನುವುದು ಮೋಹಿನಿ ಅವರ ಅನುಭವದ ನುಡಿ. ಇಷ್ಟೆಲ್ಲ ಲಾಭ ಗಳಿಸಬೇಕೆಂದರೆ ಗೋವುಗಳನ್ನು ಮಕ್ಕಳಂತೆ ಸಾಕಬೇಕು ಎಂದು ಹೇಳುವುದನ್ನೂ ಅವರು ಮರೆಯುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.