ADVERTISEMENT

ಚೆಂದದ ಬಂಡೂರು ಕುರಿ ನೋಡಲು ನೆರೆದ ದಂಡು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 19:37 IST
Last Updated 15 ನವೆಂಬರ್ 2018, 19:37 IST
ಬಂಡೂರು ಕುರಿಗಳು
ಬಂಡೂರು ಕುರಿಗಳು   

ಬೆಂಗಳೂರು: ಕತ್ತಿನಲ್ಲಿದ್ದ ‘ಕೊಳ್ಳು ಮಾಲೆ’ಯನ್ನು ಅತ್ತಿತ್ತ ಅಲ್ಲಾಡಿಸುತ್ತಾ, ಹುಲ್ಲು ತಿಂದು ಬಾಯಿ ಚಪ್ಪರಿಸುತ್ತಿದ್ದ ಬಂಡೂರು ಕುರಿಗಳ ಚೆಂದವನ್ನು ಮಾತಿನಲ್ಲಿ ವರ್ಣಿಸುವುದು ಕಷ್ಟ.

ಉದ್ದ ಶರೀರ, ಗಿಡ್ಡ ಕಾಲು, ಕಾಲುಗಳ ತುಂಬಾ ರೋಮ, ಪುಟ್ಟ ತಲೆಯ ಕೊಬ್ಬಿದ ದೇಹದ ಆ ಕುರಿಗಳ ಅಂದವನ್ನು ಕಣ್ತುಂಬಿಕೊಳ್ಳಲು ಜನರ ದಂಡೇ ಕೃಷಿಮೇಳದಲ್ಲಿ ನೆರೆದಿತ್ತು.

ಹಲವು ತಲೆಮಾರುಗಳಿಂದ ಈ ಕುರಿಗಳ ತಳಿಯನ್ನು ಜತನದಿಂದ ಕಾಪಾಡುತ್ತಾ ಬಂದಿರುವ ಮಂಡ್ಯ ಜಿಲ್ಲೆಯ ಮಳವಳ್ಳಿಯ ಬೋರೇಗೌಡ ಅವರು ಐದಾರು ಬಂಡೂರು ಕುರಿಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಈ ಕುರಿಯ ಶುದ್ಧ ತಳಿಯನ್ನು ಗುರುತಿಸುವ ಬಗೆ ಹೇಗೆ ಎಂಬುದನ್ನು ಅವರು ಎಳ್ಳಷ್ಟೂ ತಾಳ್ಮೆ ಕಳೆದುಕೊಳ್ಳದೇ ಜನರಿಗೆ ವಿವರಿಸುತ್ತಿದ್ದರು.

ADVERTISEMENT

‘ಬಲಿತ ಕುರಿ 30 ಕೆ.ಜಿ.ಯಿಂದ 50 ಕೆ.ಜಿ.ವರೆಗೆ ತೂಗುತ್ತದೆ. ರುಚಿಕರ ಮಾಂಸಕ್ಕೆ ಹೆಸರುವಾಸಿಯಾಗಿರುವ ಈ ಕುರಿಗೆ ₹ 10 ಸಾವಿರದಿಂದ ₹ 1.5 ಲಕ್ಷದವರೆಗೆ ಬೆಲೆ ಇದೆ. ಒಂದು ಕೆ.ಜಿ. ಮಾಂಸವು ₹ 1.5 ಸಾವಿರದಿಂದ ₹ 2 ಸಾವಿರದವರೆಗೆ ಮಾರಾಟವಾಗುತ್ತದೆ. ಅನೇಕರಿಗೆ ಶುದ್ಧ ತಳಿಯ ಕುರಿ ಹೇಗಿರುತ್ತದೇ ಎಂದೇ ಗೊತ್ತಿಲ್ಲ. ಮಿಶ್ರ ತಳಿಯ ಕುರಿಗಳನ್ನೇ ಬಂಡೂರು ಕುರಿ ಎಂದು ತಪ್ಪಾಗಿ ತಿಳಿಯುತ್ತಾರೆ. ಜನರಿಗೆ ಈ ತಳಿಯನ್ನು ಪರಿಚಯಿಸುವ ಉದ್ದೇಶದಿಂದಲೇ ಇದನ್ನು ಪ್ರದರ್ಶನಕ್ಕೆ ತಂದಿದ್ದೇನೆ’ ಎಂದು ಬೋರೇಗೌಡ ತಿಳಿಸಿದರು.

ಬಗೆ ಬಗೆಯ ಮೇಕೆಗಳು

ಇಸ್ರೇಲ್‌ ಮೂಲದ ಅವಾಸಿ ಮೇಕೆ, ಸ್ವಿಟ್ಜರ್ಲೆಂಡ್‌ ಮೂಲದ ಸಾನೆನ್‌ ಮೇಕೆ, ಸೈಪ್ರಸ್‌ ಮೂಲದ ಶಾಮಿ, ಉತ್ತರ ಪ್ರದೇಶದ ಜಮ್ನಾಪರಿ ಮೇಕೆಗಳನ್ನು ದಕ್ಷಿಣ ಆಫ್ರಿಕಾ ಮೂಲದ ಡಾರ್ಪರ್ ಕುರಿಗಳನ್ನು ಒಂದೇ ಕಡೆ ಕಣ್ತುಂಬಿಕೊಳ್ಳುವುದಕ್ಕೆ ಕೃಷಿ ಮೇಳ ಅವಕಾಶ ಕಲ್ಪಿಸಿದೆ. ಚಿಕ್ಕದೇವನಹಳ್ಳಿಯ ಮೆಟ್ರೊ ಫಾರಮ್‌ನ ಮೆಲ್ವಿನ್‌ ಅವರು ಇವುಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಇಟೊವಾದ ಬ್ಲ್ಯಾಕ್‌ ಬೀಟಲ್‌ ಹಾಗೂ ಬೋಯರ್‌ ತಳಿಗಳನ್ನು ಮಾರೇನಹಳ್ಳಿಯ ಸತೀಶ್‌ ಪ್ರದರ್ಶಿಸಿದ್ದರು.

ಡಾರ್ಪರ್‌ ಕುರಿಯ ಮಾಂಸವು ಬಂಡೂರು ಕುರಿಯಂತೆಯೇ ಬಲು ರುಚಿಕರ. ಇದು ಏಕಕಾಲಕ್ಕೆ ಮೂರು ಮರಿಗಳನ್ನು ಹಾಕುತ್ತದೆ. ಒಂದೇ ವರ್ಷದಲ್ಲಿ 80 ಕೆ.ಜಿ.ವರೆಗೆ ತೂಕ ಬರುತ್ತದೆ. ಇದಕ್ಕೆ ₹ 3 ಲಕ್ಷದವರೆಗೂ ಬೆಲೆ ಇದೆ’ ಎಂದು ಮೆಲ್ವಿನ್‌ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.