ಅವರು ಔಷಧಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದವರು.ಲಂಡನ್‌ನ ಕೆಲವು ಪ್ರತಿಷ್ಠಿತ ಫಾರ್ಮಾಸಿಸ್ಟ್ ಕಂಪನಿಗಳಲ್ಲಿ 25 ವರ್ಷಗಳ ಕಾಲ ಉನ್ನತ ಹುದ್ದೆಗಳನ್ನು ನಿರ್ವಹಿಸಿದವರು. ಸೈಕಲ್ ಅಗರ್‌ಬತ್ತಿ ಕಾರ್ಖಾನೆಗೆ ಅಧ್ಯಕ್ಷರಾಗಿದ್ದರು. ಇವೆಲ್ಲವನ್ನೂ ಬಿಟ್ಟು ಈಗ ನಾಲ್ಕೈದು ವರ್ಷಗಳಿಂದ ಊರಿಗೆ ಮರಳಿ ಕೃಷಿ ಮಾಡುತ್ತಿದ್ದಾರೆ. 200ಕ್ಕೂ ಹೆಚ್ಚು ಹಳ್ಳಿಕಾರ್ ಸೇರಿದಂತೆ ದೇಸಿ ತಳಿಗಳನ್ನು ಪೋಷಿಸುತ್ತಾ, ನಾಲ್ಕಾರು ಮಂದಿಗೆ ಉದ್ಯೋಗ ನೀಡಿದ್ದಾರೆ.
ಅವರ ಹೆಸರುಡಾ.ಪ್ರಾಣೇಶ್. ಮೂಲತಃ ಆನೇಕಲ್–ಡೆಂಕಣಿಕೋಟೆ ಗಡಿಗ್ರಾಮ ಹಿರದಾಳಂ ನವರು. ಸದ್ಯ ಬೆಂಗಳೂರಿನಲ್ಲಿದ್ದಾರೆ. ಆ ಗ್ರಾಮದಲ್ಲಿ ಅವರ ಜಮೀನಿದೆ. ಅಲ್ಲಿಯೇ ಇವರ ಹಳ್ಳಿಕಾರ್ ತಳಿಗಳ ಫಾರಂ ಹೌಸ್ ಇದೆ.
ಹೈನುಗಾರಿಕೆ ಮಾಡಬೇಕೆನ್ನುವುದು ತಂದೆಯ ಒತ್ತಾಸೆ. ಅದಕ್ಕಾಗಿಯೇ ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಹುದ್ದೆ ಬಿಟ್ಟು ನಾಲ್ಕೈದು ವರ್ಷಗಳ ಹಿಂದೆಹೈನುಗಾರಿಕೆಯನ್ನೇ ಉದ್ಯಮವಾಗಿಸಲು ಆರಂಭಿಸಿದರು. ಆರಂಭದಲ್ಲಿ 20 ಹಳ್ಳಿಕಾರ್ ಆಕಳುಗಳೊಂದಿಗೆ ಫಾರ್ಂಹೌಸ್ ಆರಂಭಿಸಿದರು. ಆಗ ‘ಇವರಿಂದ ಇದು ಸಾಧ್ಯವಾ’ ಎಂದು ಕೊಂಕು ನುಡಿದ ವರೇ ಹೆಚ್ಚು. ಆದರೂ ಅವೆಲ್ಲಕ್ಕೂ ತಲೆಕೆಡಿಸಿಕೊಳ್ಳದೇ, ಹಾಲು ಪೂರೈಕೆ ಶುರು ಮಾಡಿದರು. ಆರಂಭದಲ್ಲಿ ಒಂದಷ್ಟು ಸಮಸ್ಯೆಗಳು ಎದುರಾದವು. ಎಲ್ಲವನ್ನೂ ಧೈರ್ಯದಿಂದ ಎದುರಿಸಿದರು.
ಒಮ್ಮೆ ಫೇಸ್‌ಬುಕ್‌ನಲ್ಲಿ ‘ನಮ್ಮಲ್ಲಿ ನಾಟಿ ಹಸುಗಳ ಹಾಲು ಸಿಗುತ್ತದೆ’ ಎಂದು ಪೋಸ್ಟ್ ಮಾಡಿದರು. ಆ ಪೋಸ್ಟ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಂಗಳೂರಿನಎಲೆಕ್ಟ್ರಾನಿಕ್ ಸಿಟಿ ಸುತ್ತಲಿನಲ್ಲಿ 10 ಮಂದಿ ಹಾಲಿಗೆ ಬೇಡಿಕೆ ಇಟ್ಟರಂತೆ.‘ಹೀಗೆ ಸೈಕಲ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಹಾಲು ಪೂರೈಕೆ ಮಾಡುವ ಯೋಜನೆ ಆರಂಭವಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಡಾ.ಪ್ರಾಣೇಶ್.
ಉದ್ಯಮವಾಗಿ ಪರಿವರ್ತನೆ
ಮನೆ ಮನೆಗೆ ಹಾಲು ಪೂರೈಸುತ್ತಿರುವಾಗ ನಾಟಿ ತಳಿ ಆಕಳ ಹಾಲಿನ ರುಚಿ ಗ್ರಾಹಕರಿಂದ ಗ್ರಾಹಕರಿಗೆ ವರ್ಗವಾಗುತ್ತಾ ಹೋಯಿತು. ಕ್ರಮೇಣ ಗ್ರಾಹಕರಿಂದ ಬೇಡಿಕೆಯೂ ಹೆಚ್ಚಾಯಿತು. ಈ ಬೇಡಿಕೆ ಪೂರೈಸುವುದಕ್ಕಾಗಿ ಫಾರಂನಲ್ಲಿ ಹಸುಗಳ ಸಂಖ್ಯೆಯೂ ಏರುತ್ತಾ ಹೋಯಿತು. ಸದ್ಯಅವರ ಬಳಿ 220 ಹಳ್ಳಿಕಾರ್ ಹಸುಗಳಿವೆ. ದಿನವೊಂದಕ್ಕೆ 500 ಲೀಟರ್ ಹಾಲು ಕರೆಯುತ್ತಾರೆ.ಈ ಹಾಲನ್ನು ನಿತ್ಯ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ಬೆಂಗಳೂರಿನ ಕೆಲ ಭಾಗಗಳ 700 ಕುಟುಂಬಗಳಿಗೆ ಪೂರೈಕೆ ಮಾಡುತ್ತಾರೆ.
20 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಹೆಂಚಿನ ಶೆಡ್ ನಿರ್ಮಿಸಿ ಕೊಟ್ಟಿಗೆ ಮಾಡಿದ್ದಾರೆ.‘ಹಳ್ಳಿಕಾರ್ ಹಸುಗಳಿಗೆ ತಂಪಾಗಲು ಶೆಡ್ ಮಾಡಿದ್ದೇವೆ. ಇಲ್ಲಿ ನಿತ್ಯ 30 ಮಂದಿ ಕೆಲಸಗಾರರು ಹಸುಗಳ ಪೋಷಣೆ ಮಾಡುತ್ತಾರೆ. ಹಾಲು ಸರಬರಾಜು ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ವಾರ್ಷಿಕವಾಗಿ ₹1.50 ಕೋಟಿ ವಹಿವಾಟು ನಡೆಯುತ್ತಿದೆ’ ಎಂದು ವಿವರ ನೀಡುತ್ತಾರೆ ಡಾ. ಪ್ರಾಣೇಶ್.
ಇದು ದೇಸಿ ತಳಿಗಳ ಫಾರಂ
ಪ್ರಾಣೇಶ್ ಅವರು ಕೇವಲ ಹಳ್ಳಿಕಾರ್ ತಳಿಗಳನ್ನಷ್ಟೇ ಸಾಕಾಣೆ ಮಾಡುತ್ತಿಲ್ಲ. ಇವುಗಳ ಜತೆಗೆಪುಂಗನೂರು, ಮಲ್ನಾಡ್ ಗಿಡ್ಡ, ಅಮೃತಮಹಲ್, ಜಾವರಿ, ಕಿಲ್ಲಾರಿ, ಗೀರ್ ಸೇರಿದಂತೆ ಕೆಲ ಅಪರೂಪದ ದೇಸಿ ತಳಿಗಳ ಹಸುಗಳೂ ಇವೆ. ಈ ನಾಟಿ ಹಸುಗಳ ಕೆಚ್ಚಲು ಭಾಗ ಸೂಕ್ಷ್ಮವಾಗಿರುವುದರಿಂದ, ಹಾಲು ಕರೆಯಲು ಯಂತ್ರಗಳನ್ನು ಬಳಸುವುದಿಲ್ಲವಂತೆ.
ಹಾಲು ಕೆಡದಂತೆ ಇಡಲು, ಚಿಲ್ಲಿಂಗ್ ಮಾಡಿ ಪ್ಯಾಕ್ ಮಾಡಲಾಗುತ್ತದೆ. ಆಗಾಗಿ ಶುದ್ಧ ಮತ್ತು ತಾಜಾ ಹಾಲು ಗ್ರಾಹಕರಿಗೆ ಸಿಗುತ್ತಿದೆ. ದಿನದಲ್ಲಿ ಉಳಿದ ಹಾಲನ್ನು ತುಪ್ಪ ಮತ್ತು ಬೆಣ್ಣೆ ಮಾಡುತ್ತಾರೆ. ಇದರಿಂದ ಹೆಚ್ಚುವರಿ ಆದಾಯವೂ ಬರುತ್ತದೆ.
ಮೇವು ಮತ್ತು ನೀರು
ಹೈನೋದ್ಯಮದಲ್ಲಿ ಮೇವು ಮತ್ತು ನೀರು ಪೂರೈಸುವುದೇ ದೊಡ್ಡ ಸವಾಲು. ಆದರೆ, ಹಿರದಾಳಂ ಫಾರಂ ಸಮೀಪದಲ್ಲಿ ಇವೆರಡಕ್ಕೂ ಕೊರತೆ ಇಲ್ಲವಂತೆ. ಫಾರಂ ಹೌಸ್‌ಗೆ ಸೇರಿದ 20 ಎಕರೆ ಜಮೀನು ಜೌಗುಪ್ರದೇಶದಲ್ಲಿದೆ. ಸುತ್ತಲೂ ಸ್ವಾಭಾವಿಕವಾದ ಕುಂಟೆಗಳಿವೆ(ಹೊಂಡಗಳು). ಇವುಗಳಲ್ಲಿ ವರ್ಷದ ಮುಕ್ಕಾಲುಪಾಲು ನೀರು ಇರುತ್ತದೆ. ಇವು ಊರಿನ ರಾಸುಗಳಿಗೆ ನೀರು ಪೂರೈಸುವ ಬಾನಿಗಳು. ಸಮೀಪದಲ್ಲೇ ಕುರುಚಲು ಕಾಡು, ಹುಲ್ಲುಗಾವಲು ಇದೆ. ರಾಸುಗಳು ಅಲ್ಲಿಗೆ ಮೇಯಲು ಹೋಗುತ್ತವೆ. ಮಳೆಗಾಲದಲ್ಲಿ ಸಾವಯವ ವಿಧಾನದಲ್ಲಿ ರಾಗಿ, ಭತ್ತ ಬೆಳೆಯುತ್ತಾರೆ. ಕೊಟ್ಟಿಗೆಯಲ್ಲಿ ಸಂಗ್ರಹವಾಗುವ ಸಗಣಿ, ಮೇವಿನ ಉಳಿಕೆ, ತ್ಯಾಜ್ಯವನ್ನು ಗೊಬ್ಬರವಾಗಿಸಿ, ಹೊಲ ಮತ್ತು ಗದ್ದೆಗೆ ಬಳಸುತ್ತಾರೆ. ಗಂಜಲವನ್ನು ಪಂಚಗವ್ಯ ತಯಾರಿಕೆಗೆ ಬಳಸಲಾಗುತ್ತದೆ.
ಕಾಳು ಕೊಯ್ದನಂತರ ಹುಲ್ಲನ್ನು ಸಂಗ್ರಹಿಸುತ್ತಾರೆ. ಬೇಸಿಗೆಯಲ್ಲಿ ಕಾಡು, ಹುಲ್ಲುಗಾವಲಿನಲ್ಲಿ ಮೇವಿನ ಕೊರತೆಯಾದಾಗ, ಭತ್ತ, ರಾಗಿ ಹುಲ್ಲನ್ನು ಬಳಸುತ್ತಾರಂತೆ. ಇದಲ್ಲದೇ ವರ್ಷಕ್ಕೆ ಸುಮಾರು 7ಸಾವಿರ ಟನ್ ಹಸಿ ಮೇವು ಬೇಕಾಗುತ್ತದೆ. ತಿಂಗಳಿಗೆ 20 ರಿಂದ 50 ಟನ್ ಬೂಸಾ ಕೂಡ ಬೇಕು. ಇವೆಲ್ಲನ್ನು ಖರೀದಿಸಿ ತರುತ್ತಾರೆ.
‘ಇಷ್ಟೊಂದು ರಾಸುಗಳಿವೆ. ಇವುಗಳ ಆರೋಗ್ಯ ತಪಾಸಣೆ, ರೋಗ ರುಜಿನ ಬಂದರೆ ಚಿಕಿತ್ಸೆಗೆ ಏನು ಮಾಡುತ್ತೀರಿ’? ಎಂದುಕೇಳಿದರೆ, ‘ಇಲ್ಲಿ ಪರಿಸರವೇ ಶುದ್ಧವಾಗಿದೆ. ಇಂಥ ಪರಿಸರದಲ್ಲಿ ನಾಟಿ ಹಸುಗಳಿಗೆ ರೋಗರುಜಿನ ಕಡಿಮೆ. ಔಷಧೋಪಚಾರದ ಅಗತ್ಯಬಿದ್ದಿಲ್ಲ’ ಎನ್ನುತ್ತಾರೆ ಫಾರಂನಲ್ಲಿ ರಾಸುಗಳನ್ನು ಪೋಷಿಸುವ ಹಲಗಪ್ಪ. ಸ್ವಾಭಾವಿಕವಾಗಿಯೇ ರಾಸುಗಳು ಗರ್ಭಧರಿಸುತ್ತವೆ, ಸ್ವಾಭಿಕವಾಗಿಯೇ ಕರು ಹಾಕುತ್ತವೆ. ಹೀಗಾಗಿ ವೈದ್ಯರ ಅಗತ್ಯ ಅಷ್ಟಾಗಿ ಬಂದಿಲ್ಲ ಎನ್ನುವುದು ಫಾರಂ ಸಿಬ್ಬಂದಿ ಅಭಿಪ್ರಾಯ.
ಚಿತ್ರಗಳು: ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.