ಹಿರೇಕೆರೂರು: ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ನೂರಾರು ಕನಸು ಕಟ್ಟಿಕೊಂಡಿದ್ದರುರಟ್ಟೀಹಳ್ಳಿ ತಾಲ್ಲೂಕಿನ ಹುಲ್ಲತ್ತಿ ಗ್ರಾಮದ ಕೆಂಚಮ್ಮ ಹನುಮಂತಪ್ಪ ದಿವಿಗೀಹಳ್ಳಿ ಎಂಬ ರೈತ ಮಹಿಳೆ. ಆ ನಿಟ್ಟಿನಲ್ಲಿ ಅವರು ನರೇಗಾ ಯೋಜನೆ ಉಪಯೋಗಿಸಿಕೊಂಡು ಕುರಿ ಸಾಕಾಣಿಕೆಯಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಾರ ನರೇಗಾ ಯೋಜನೆಯಲ್ಲಿ ಕುರಿ ಶೆಡ್ ನಿರ್ಮಿಸಿಕೊಂಡಿದ್ದು, ಈ ಕುರಿ ಶೆಡ್ ನಿರ್ಮಾಣದ ಪೂರ್ವದಲ್ಲಿ ಇವರು ಸಾಂಪ್ರದಾಯಿಕ ಬೆಳೆಗಳಾದ ಮೆಕ್ಕೆಜೋಳ, ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆ ಬೆಳೆಯುತ್ತಿದ್ದರು. ನಂತರದ ದಿನದಲ್ಲಿ ಬೀಜದ ಬೆಳೆಗೆ ಆದ್ಯತೆ ನೀಡಿ ಟೊಮೆಟೊ, ಬೆಂಡೆ ಬೀಜ ಬೇಸಾಯದಲ್ಲಿ ತೊಡಗಿದರು. ಆದರೆ ಜಮೀನಿನಲ್ಲಿ ಕೂಲಿಯಾಳುಗಳ ಕೊರತೆ ಮತ್ತು ಅತಿಯಾದ ಖರ್ಚು ಇವರನ್ನು ಹೈರಾಣಾಗುವಂತೆ ಮಾಡಿತ್ತು.
ಇದರಿಂದ ಇವರಿಗೆ ನಿರೀಕ್ಷಿತ ಆದಾಯ ಗಳಿಕೆ ಕಷ್ಟವಾಗಿ ಹೋಯಿತು. ಮುಂದೇನು ಮಾಡುವುದು ಎಂದು ಯೋಚನೆ ಮಾಡುತ್ತಿದ್ದಾಗ ಈ ಕುಟುಂಬಕ್ಕೆ ನೆರವಾಗಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ. 2021-22ನೇ ಸಾಲಿನಲ್ಲಿ ಹುಲ್ಲತ್ತಿ ಗ್ರಾಮ ಪಂಚಾಯ್ತಿಯಿಂದ ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿ, ಕುರಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ನರೇಗಾ ಯೋಜನೆಯಡಿ ₹10,115 ಕೂಲಿ ಹಣ, ₹44,250 ಸಾಮಗ್ರಿ ಹಣ ಸೇರಿ ಒಟ್ಟು ₹54,345 ಪ್ರೋತ್ಸಾಹ ಧನ ಪಡೆದುಕೊಂಡಿದ್ದಾರೆ. ಅಲ್ಲದೆ ತಮ್ಮ ಬಂಡವಾಳ ಹಾಕಿ ಸುಸಜ್ಜಿತ ಕುರಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಈ ಕುರಿ ಶೆಡ್ ನಲ್ಲಿ ಒಂದೇ ಬಾರಿ 50ಕ್ಕೂ ಹೆಚ್ಚು ಕುರಿಗಳ ಸಾಕಾಣಿಕೆ ಮಾಡುವ ಮೂಲಕ ಆದಾಯ ಪಡೆಯುತ್ತಿದ್ದಾರೆ.
ಐದು ಎಕರೆ ಜಮೀನು ಹೊಂದಿರುವ ಇವರು ಕುರಿ ಶೆಡ್ ನಿರ್ಮಿಸಿಕೊಂಡ ನಂತರದಲ್ಲಿ ಕೃಷಿಯೊಂದಿಗೆ, ಕುರಿ ಮತ್ತು ಕೋಳಿ ಸಾಕಾಣಿಕೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಕೆಂಚಮ್ಮ ಅವರೇ ಈ ಕುರಿ ಶೆಡ್ ಮೇಲುಸ್ತುವಾರಿಗಳಾಗಿದ್ದಾರೆ. ಕಳೆದೆರಡು ವರ್ಷದಿಂದ ಈ ಕುರಿ ಶೆಡ್ ನ ಸಂಪೂರ್ಣ ಜವಾಬ್ದಾರಿಯೊಂದಿಗೆ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಪತಿ ಹನುಮಂತಪ್ಪ ಜಮೀನು ನೋಡಿಕೊಂಡರೆ, ಪತ್ನಿ ಕೆಂಚಮ್ಮ ಕುರಿ ಶೆಡ್ ನೋಡಿಕೊಂಡು ಹೋಗುತ್ತಿದ್ದಾರೆ. ಈವರೆಗೆ 200ಕ್ಕೂ ಹೆಚ್ಚು ಕುರಿಗಳ ಮಾರಾಟ ಮಾಡಿ,₹20 ಲಕ್ಷ ವಹಿವಾಟು ನಡೆಸಿದ್ದಾರೆ. ಮರಿಕುರಿಗಳ ಖರೀದಿ, ಮೇವು, ಶೆಂಗಾ ಹಿಂಡಿ, ಶೆಡ್ ನಿರ್ಮಾಣ ಸೇರಿದಂತೆ ಇತರೆ ಖರ್ಚು, ವೆಚ್ಚವನ್ನು ತೆಗೆದರೆ ವಾರ್ಷಿಕ ₹2 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ಕುರಿ ಸಾಕಾಣಿಯೊಂದಿಗೆ ಕೋಳಿ ಸಾಕಾಣಿಕೆ ಮಾಡಿಕೊಂಡಿದ್ದಾರೆ.
ಒಂದೇ ಬಾರಿಗೆ ₹20 ಸಾವಿರಕ್ಕೆ 40ಕ್ಕೂ ಹೆಚ್ಚು ಕೋಳಿ ಖರೀದಿಸಿ, ಅವುಗಳನ್ನು ಬೆಳೆಸಿ ಮೊಟ್ಟೆ ಮತ್ತು ಕೋಳಿಗಳನ್ನು ಮಾರಾಟ ಮಾಡಿ 75 ಸಾವಿರಕ್ಕೂ ಹೆಚ್ಚು ಲಾಭ ಗಳಿಸಿದ್ದಾರೆ. ಹೀಗಾಗಿ ನರೇಗಾ ಯೋಜನೆಯ ನೆರವಿನಿಂದ ರೈತರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದವೇ ಎಂದು ರೈತ ಮಹಿಳೆ ಕೆಂಚಮ್ಮ ದಿವಿಗೀಹಳ್ಳಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.