ಬೆಂಗಳೂರು: ಕಂದು ಕೋಳಿಯ ಕಂದು ಮೊಟ್ಟೆಗೆ ಭಾರೀ ಡಿಮ್ಯಾಂಡ್. ಇದು ನಾಟಿ ಕೋಳಿ. ತಳಿಯ ಹೆಸರು ಬಿವಿ–380. ಡಜನ್ ಮೊಟ್ಟೆಗೆ ನೂರು ರೂಪಾಯಿ.
‘ಹೌದು ಕಂದು ಬಣ್ಣದ ಸಾವಯವ ಮೊಟ್ಟೆ ಬೇಡಿಕೆ ಪಡೆಯುತ್ತಿದೆ. ರಾಸಾಯನಿಕ ಮುಕ್ತ, ಸಹಜವಾಗಿ ಬೆಳೆಸಲಾದ ಕೋಳಿಗಳ ಮೊಟ್ಟೆಯಿದು’ ಎಂದರು ಅಭಿಲಾಷ್ ಹ್ಯಾಚರೀಸ್ ಕಂಪನಿಯ ಪ್ರತಿನಿಧಿಗಳು.
ಕೇರಳದ ಎರ್ನಾಕುಲಂ ಜಿಲ್ಲೆಯ ಎಡಕುನ್ನು ಎಂಬ ಊರಿನಿಂದ ಈ ಕೋಳಿ–ಮೊಟ್ಟೆಗಳು ವಿವಿಧೆಡೆಗೆ ಪೂರೈಕೆ ಯಾಗುತ್ತಿವೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ತಾಯಂದಿರಿಗೆ, ರೋಗಿಗಳಿಗೆ ಈ ಮೊಟ್ಟೆ ಕೊಡಲಾಗುತ್ತದೆ. ‘ಆಸ್ಪತ್ರೆ ಆಸುಪಾಸಿನ ಅಂಗಡಿಗಳಿಂದ ಹಿಡಿದು ರಸ್ತೆಬದಿ ಆಮ್ಲೆಟ್ ತಯಾರಕರವರೆಗೂ ಈ ಮೊಟ್ಟೆಗೆ ಬೇಡಿಕೆ ಇದೆ. ಈ ತಳಿಯ ಕೋಳಿ ವರ್ಷಕ್ಕೆ ಸರಾಸರಿ 300 ಮೊಟ್ಟೆ ಇಡುತ್ತದೆ. ಸಾಕಲು ಬಯಸುವ ರೈತರಿಗೆ ಕಂಪನಿಯೇ ಕೋಳಿಮರಿ ಹಾಗೂ ಆಹಾರವನ್ನು ಪೂರೈಸುತ್ತದೆ. ರೈತರಿಗೆ ಇದರಲ್ಲಿ ಉದ್ಯಮ ಅವಕಾಶವೂ ಇದೆ’ ಎಂದರು ಈ ಕಂಪನಿಯವರು.
ಇಷ್ಟು ಮಾತ್ರವಲ್ಲ. ಮೇಳದಲ್ಲಿ ಮುದ್ದಾದ ಬಿಳಿ ಮೊಲಗಳು, ಮಾಂಸಕ್ಕಾಗಿ ಸಾಕುವ ಮೊಲಗಳು, ಆಲಂಕಾರಿಕ ಮೀನುಗಳು, ದೇಸಿ ಹಸುಗಳು ಗಮನ ಸೆಳೆದವು.
ಕಪ್ಪುವರ್ಣದ ‘ಖಡಕ್‌ನಾಥ’
ಕಪ್ಪುವರ್ಣದ ‘ಖಡಕ್‌ನಾಥ’ನ ಬಗ್ಗೆ ಕುಕ್ಕುಟಪ್ರಿಯರಿಗೆ ಬಹಳ ಪ್ರೀತಿ. ಮಳಿಗೆಗಳ ಸಾಲಿನಲ್ಲಿ ಜನರು ಹುಡುಕಿಕೊಂಡು ಬಂದು ಈ ಕೋಳಿಯ ದರ್ಶನ ಪಡೆಯುತ್ತಿದ್ದರು.
ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡ ರಾಜ್ಯಗಳ ಬುಡಕಟ್ಟು ಜನರು ಉಳಿಸಿಕೊಂಡು ಬಂದ ಕೋಳಿಯ ತಳಿ ಇದು. ಇದರ ರಕ್ತ ಕರಿವರ್ಣದ್ದು. ಮೂಳೆ ಹಾಗೂ ಮಾಂಸವೂ ಕಪ್ಪು. ಅವಸಾನದ ಅಂಚನ್ನು ತಲುಪಿದ್ದ ಈ ಕೋಳಿ ತಳಿಯನ್ನು ಮತ್ತೆ ಅಭಿವೃದ್ಧಿಪಡಿಸಲಾಗಿದೆ. ಐದಾರು ವರ್ಷಗಳಿಂದ ಈ ಕೋಳಿಯನ್ನು ರಾಜ್ಯದಲ್ಲೂ ರೈತರು ಸಾಕುತ್ತಿದ್ದಾರೆ.
‘ಈ ಕೋಳಿಯ ರಕ್ತ ಹಾಗೂ ಮಾಂಸದಲ್ಲಿ ಕಬ್ಬಿಣದ ಅಂಶ ಜಾಸ್ತಿ. ಹಾಗಾಗಿ ಇದರ ಬಣ್ಣ ಕಪ್ಪಗಿರುತ್ತದೆ. ಕೆಲವು ಬಗೆಯ ಕಾಯಿಲೆಗೂ ಇದನ್ನು ಔಷಧವಾಗಿ ಬಳಸುತ್ತಾರೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಖ್ಯ ಪಶುವೈದ್ಯಾಧಿಕಾರಿ ಅನಿಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಕೋಳಿಯ ಮಾಂಸದಲ್ಲಿ ಶೇ 26ರಷ್ಟು ಪ್ರೋಟೀನ್ ಅಂಶವಿದೆ. ಕೊಬ್ಬಿನಾಂಶ ತುಂಬಾ ಕಡಿಮೆ. ಈ ಕೋಳಿಯ ಮಾಂಸ ಲೈಂಗಿಕ ಶಕ್ತಿವರ್ಧನೆಗೆ ಸಹಕಾರಿ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ಇದರ ಮಾಂಸವನ್ನು ಹೆಚ್ಚು ಇಷ್ಟಪಡುತ್ತಾರೆ’ ಎಂದು ಇದನ್ನು ಪ್ರದರ್ಶನಕ್ಕಿಟ್ಟಿದ್ದ ಹಾಸನದ ಅಬ್ದುಲ್ಲಾ ತಿಳಿಸಿದರು.
‘ಬಲಿತ ಕೋಳಿ 1 ಕೆ.ಜಿವರೆಗೂ ತೂಗುತ್ತದೆ. ಇದಕ್ಕೆ ₹ 2 ಸಾವಿರದವರೆಗೂ ಬೆಲೆ ಇದೆ’ ಎಂದು ಅವರು ಹೇಳಿದರು.
ಇಲ್ಲಿದೆ ‘ಕೌಡಂಗ್ ಕೇಕ್’!
‘ನೋಡಿ ಇದು ಕೌಡಂಗ್ ಕೇಕ್. ಶುದ್ಧ ನಾಟಿ ಹಸುಗಳ ಗೋಮಯದಿಂದ ತಯಾರಿಸಿದ್ದು. ಇದನ್ನು ಸುಡುವುದರಿಂದ ಬರುವ ಹೊಗೆ ಆರೋಗ್ಯಕ್ಕೆ ಒಳ್ಳೆಯದು’.
ಬೆರಣಿಯ ಹಿರಿಮೆಯನ್ನು ಹಿರಿಯೂರಿನ ಗೋ ರಾಘವೇಂದ್ರ ಅವರು ಜನರಿಗೆ ವಿವರಿಸುತ್ತಿದ್ದ ಪರಿ ಇದು. ಬೆರಣಿಯನ್ನೂ ಪೊಟ್ಟಣದಲ್ಲಿ ಮಾರಾಟ ಮಾಡುತ್ತಿದ್ದುದನ್ನು ಕಂಡು ಜನ ಬೆರಗಾದರು.
ಗೋಮೂತ್ರ ಹಾಗೂ ಗೋಮಯದಿಂದ ತಯಾರಿಸಿದ ವಿವಿಧ ಉತ್ಪನ್ನಗಳನ್ನು ಅವರು ಪ್ರದರ್ಶನಕ್ಕಿಟ್ಟಿದ್ದರು. ಒಂದು ಬೆರಣಿಗೆ ₹ 8ರಂತೆ ಮಾರಾಟ ಮಾಡಿದರು. ಐದು ದೊಡ್ಡ ಗಾತ್ರದ ಬೆರಣಿಗಳಿದ್ದ ಪೊಟ್ಟಣಕ್ಕೆ ₹ 40 ಹಾಗೂ ಸಣ್ಣಗಾತ್ರದ ಬೆರಣಿಯ ಪೊಟ್ಟಣಕ್ಕೆ ₹ 30 ಬೆಲೆ ನಿಗದಿಪಡಿಸಿದ್ದರು.
ಬೆರಣಿಗೆ ಲವಂಗ, ಉಪ್ಪು ಸೇರಿಸಿ ಸುಟ್ಟು ಅದರ ಮಸಿಯಿಂದ ತಯಾರಿಸಿದ ಹಲ್ಲುಜ್ಜುವ ಪುಡಿಯೂ ಇವರ ಬಳಿ ಲಭ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.