ಇತ್ತೀಚೆಗಷ್ಟೇ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‍ಪೇಟೆಯಲ್ಲಿ ನಡೆದ ಘಟನೆ ಇದು. ಕೆಲವು ಎಮ್ಮೆಗಳು ಹಿಂಭಾಗದ ಊತ, ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು ಮತ್ತು ಸಗಣಿ ಗಟ್ಟಿಯಾಗಿ ಪ್ಲಾಸ್ಟಿಕ್‍ನಲ್ಲಿ ಸುತ್ತಿದ ಹಾಕಿರುವಂತಹ ಲಕ್ಷಣಗಳಿಂದ ಬಳಲಿ ಸಾವನ್ನಪ್ಪಿದವು. ಈ ರಾಸುಗಳನ್ನು ವಿವಿಧ ರೀತಿಯ ರೋಗ ತಪಾಸಣೆಗೆ ಒಳಪಡಿಸಿದ ನಂತರ, ಇವೆಲ್ಲ ವಾಯುವಿಳಂಗ ಗಿಡದ ಸೊಪ್ಪು ಸೇವಿಸಿ, ವಿಷಬಾಧೆಯಿಂದ ಸತ್ತಿವೆ ಎಂಬುದು ಸ್ಪಷ್ಟವಾಯಿತು.
ವಾಯುವಿಳಂಗ ಗಿಡ ( Embelia tserium cottom) ಮರಗಳ ನಡುವೆ ಹಾಗೂ ಸ್ವಲ್ಪ ತೇವಾಂಶ ಇರುವ ಜಾಗದಲ್ಲಿ ಹುಲುಸಾಗಿ ಬೆಳೆಯುತ್ತದೆ. ಜಾನುವಾರುಗಳು ಗಿಡದ ಸೊಪ್ಪನ್ನು ತಿಂದಾಗ ಅದು ವಿಷವಾಗಿ ಪರಿಣಿಮಿಸಿ, ಸಾವನ್ನಪ್ಪುತ್ತವೆ. ಇಂಥ ಘಟನೆಗಳು ಸಾಕಷ್ಟು ನಡೆದಿವೆ.
ಆರಂಭಿಕ ಲಕ್ಷಣಗಳು
ಜಾನುವಾರುಗಳು ವಾಯುವಿಳಂಗ ಗಿಡದ ಸೊಪ್ಪನ್ನು ಯಥೇಚ್ಚವಾಗಿ ತಿಂದಾಗ ಮಾತ್ರ ರೋಗ ಲಕ್ಷಣಗಳು ಕಂಡು ಬರುತ್ತವೆ. ಸೊಪ್ಪು ತಿಂದ ಒಂದೆರಡು ದಿನ ಯಾವುದೇ ರೋಗ ಲಕ್ಷಣ ಕಾಣಿಸುವುದಿಲ್ಲ. ಸ್ವಲ್ಪ ದಿನಗಳ ನಂತರ ಜಾನುವಾರಿನ ಮೇವು ಚೀಲದ ನಿಷ್ಕ್ರಿಯತೆ ಪ್ರಾರಂಭವಾಗಿ, ಮೇವು ತಿನ್ನುವುದನ್ನು ಬಿಡುತ್ತದೆ. ನಂತರ ಮಲಬದ್ಧತೆ ಲಕ್ಷಣಗಳು ಕಂಡು ಬರುತ್ತವೆ.
ರೋಗದ ಪ್ರಾರಂಭಿಕ ಲಕ್ಷಣಗಳೆಂದರೆ ಜಾನುವಾರುಗಳು ಒದ್ದಾಡುವುದು, ಉಸಿರಾಟದ ತೊಂದರೆ, ಜೊಲ್ಲು ಸುರಿಸುವುದು, ಕಣ್ಣಲ್ಲಿ ನೀರು ಬರುವುದು ಮತ್ತು ಶರೀರದ ತಾಪಮಾನ ಕಡಿಮೆಯಾಗುವುದು. ಈ ಹಂತದಲ್ಲಿ ಜಾನುವಾರು ಅಹಾರ ಮತ್ತು ನೀರು ಸೇವಿಸುವುದನ್ನು ನಿಲ್ಲಿಸುತ್ತದೆ.
ಜಾನುವಾರಿನ ಗುದದ್ವಾರದ ಸುತ್ತ ಮುತ್ತ ಮತ್ತು ಕೆಳ ಭಾಗದಲ್ಲಿ ಊತ ಪ್ರಾರಂಭವಾಗುತ್ತದೆ. ಎಮ್ಮೆ ಹಾಗೂ ಆಕಳುಗಳಲ್ಲಿ ಯೋನಿಯ ಸುತ್ತ ಗಣನೀಯ ಪ್ರಮಾಣದಲ್ಲಿ ಊತ ಕಂಡು ಬರುತ್ತದೆ. ಗಂಡು ಜಾನುವಾರುಗಳಲ್ಲಿ ವೃಷಣದ ಸುತ್ತ ಊತ ಕಂಡು ಬರುತ್ತದೆ. ಹಾಕಿದ ಸಗಣಿ ಅತ್ಯಂತ ಗಟ್ಟಿಯಾಗಿರುತ್ತದೆ. ಒಂಥರಾ ಪ್ಲಾಸ್ಟಿಕ್‍ನಲ್ಲಿ ಸುತ್ತಿದಂತಿರುತ್ತದೆ. ಸೊಪ್ಪನ್ನು ತಿಂದ 5-6 ದಿನಗಳ ನಂತರ ಮಲಬದ್ಧತೆ ಹೆಚ್ಚಾಗುತ್ತದೆ. ಮಲಗಿದ ಜಾನುವಾರು ಏಳಲು ತುಂಬಾ ಕಷ್ಟ ಪಡುತ್ತದೆ. ಒಂದು ಪಕ್ಷ ಹೆಚ್ಚಾಗಿ ಸೊಪ್ಪು ತಿಂದಿದ್ದರೆ, ಏಳರಿಂದ ಹತ್ತು ದಿನಗಳಲ್ಲಿ ಸಾವನ್ನಪ್ಪತ್ತವೆ.
ಪ್ರಾಯೋಗಿಕ ಪರೀಕ್ಷೆ, ವರದಿ
ಪ್ರಾಯೋಗಿಕವಾಗಿ ಜಾನುವಾರುಗಳಿಗೆ ಈ ಸೊಪ್ಪನ್ನು ತಿನ್ನಿಸಿ ನೋಡಿದಾಗ, ಈ ಮೇಲೆ ಉಲ್ಲೇಖಿಸಿದ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಸೊಪ್ಪು ತಿಂದು ವಿಷಬಾಧೆಯಿಂದ ಸತ್ತ ಜಾನುವಾರಿನ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಜಾನುವಾರುಗಳು ಬಹು ಅಂಗ ವೈಫಲ್ಯವಾಗಿ ಮರಣವನ್ನಪ್ಪಿವೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಅದರಲ್ಲೂ ಹೃದಯ, ಶ್ವಾಸಕೋಶ, ಪಿತ್ತಜನಕಾಂಗ, ಮೂತ್ರ ಪಿಂಡಗಳು ಹಾಳಾಗಿರುವುದು ಕಂಡು ಬಂದಿದೆ.
ಸಾಮಾನ್ಯವಾಗಿ 200 ಕೆ.ಜಿ ತೂಕದ ಜಾನುವಾರು 2-3 ಕೆಜಿ ಸೊಪ್ಪನ್ನುತಿಂದಾಗ ತೀವ್ರತರಹದ ರೋಗ ಲಕ್ಷಣಗಳು ಕಂಡು ಬರುತ್ತವೆ. ಇದಕ್ಕಿಂತ ಕಡಿಮೆ ತಿಂದಾಗ ಅಲ್ಪ ಸ್ವಲ್ಪ ಪ್ರಮಾಣದ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತಕ್ಷಣ ಚಿಕಿತ್ಸೆ ಕೊಡಿಸಿದರೆ, ಅವು ಚೇತರಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ.
ವಿಷಬಾಧೆಯ ಪ್ರಾರಂಭಿಕ ಹಂತದಲ್ಲಿ ಮಾತ್ರ ಚಿಕಿತ್ಸೆ ಪರಿಣಾಮಕಾರಿಯಾಗುತ್ತದೆ. ಇದಕ್ಕೆ ನಿಖರವಾದ ಚಿಕಿತ್ಸೆಯನ್ನು ಕಂಡು ಹಿಡಿಯಲು ಸಂಶೋಧನೆ ನಡೆಯುತ್ತಿದೆ.
ವಾಯುವಿಳಂಗ ಸೊಪ್ಪನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿದಾಗ, ಅದರಲ್ಲಿ ಸಯನೈಡ್, ನೈಟ್ರೇಟ್, ಅಲ್ಕಲೋಯ್ಡ್ಸ್, ವೋನಾಯ್ಡ್ಸ್, ಟರ್ಪೀನ್ಸ್, ಸ್ಟಿರಾಯ್ಡ್ಸ್ ಇತ್ಯಾದಿ ವಿಷಕಾರಿ ರಾಸಾಯನಿಕಗಳ ಸಂಕೀರ್ಣವೇ ಇದೆ ಎಂದು ತಿಳಿದು ಬಂದಿದೆ.
ಎಲ್ಲೆಲ್ಲಿ ಹೇರಳವಾಗಿದೆ ?
ರಾಜ್ಯದ ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳ ವಿವಿಧ ತಾಲೂಕುಗಳಲ್ಲಿರುವ ಕಾಡಿನಲ್ಲಿ ಈ ಗಿಡವು ಹೇರಳವಾಗಿದೆ. ಮಾರ್ಚ್ ತಿಂಗಳಿಂದ ಜೂನ್ ತಿಂಗಳುಗಳಲ್ಲಿ ಈ ಗಿಡವು ಸೊಗಸಾಗಿ ಚಿಗುರುತ್ತದೆ. ಆದಷ್ಟು ಜಾನುವಾರುಗಳು ಈ ಗಿಡದ ಸೊಪ್ಪನ್ನು ತಿನ್ನದಂತೆ ರೈತರು ಎಚ್ಚರಿಕೆ ವಹಿಸುವುದು ಒಳ್ಳೆಯದು.
ಹಲವು ಸಸ್ಯಗಳ ಸೇವನೆಯಿಂದ ಜಾನುವಾರುಗಳಲ್ಲಿ ಗುದದ್ದಾರ ಊದಿಕೊಳ್ಳುವಂತಹ ಕಾಯಿಲೆ ಬರುತ್ತದೆ. ಅಂಥ ಲಕ್ಷಣ ಕಂಡಾಗ, ಪ್ರಥಮ ಚಿಕಿತ್ಸೆಯಾಗಿ ಅದನ್ನು ಒಂದು ಒದ್ದೆ ಬಟ್ಟೆಯಲ್ಲಿ ಸುತ್ತಿ ನಿಧಾನವಾಗಿ ಹಿಂಡುತ್ತಾ ಊತವನ್ನ ಕಡಿಮೆ ಮಾಡಬೇಕು. ಆ ಭಾಗವನ್ನು ಕಾಗೆ, ಹಕ್ಕಿಗಳು ಕುಕ್ಕದಂತೆ ನೋಡಿಕೊಳ್ಳಬೇಕು. ಜಾನುವಾರಿಗೆ ಸಾಕಷ್ಟು ನೀರು ಕುಡಿಸಬೇಕು. ಅದು ಮಲಗುವಾಗ ಮುಂಭಾಗವನ್ನು ತಗ್ಗಿಸಿ ಹಿಂಬಾಗ ಎತ್ತರಿಸಿಕೊಂಡಿರುವಂತೆ ನೋಡಿಕೊಳ್ಳಬೇಕು. ತಜ್ಞ ಪಶುವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸುವುದು ಬಹಳ ಮುಖ್ಯ.
ಅರಿವು ಮೂಡಿಸಿ
ಜಾನುವಾರುಗಳಲ್ಲಿ ಮೇಲೆ ತಿಳಿಸಿದ ಲಕ್ಷಣಗಳು ಕಂಡುಬಂದರೆ ತಜ್ಞರನ್ನು ಸಂಪರ್ಕಿಸಿ. ಜಾನುವಾರುಗಳಿಗೆ ಅಪಾಯ ತಂದೊಡ್ಡುವ ವಾಯುವಿಳಂಗ ಗಿಡದ ಬಗ್ಗೆ ರೈತರಲ್ಲಿ ಸೂಕ್ತ ಅರಿವು ಮೂಡಿಸುವುದು ಎಲ್ಲರ ಕರ್ತವ್ಯ.
ವಾಯುವಿಳಂಗ ಸೇವನೆಯಿಂದ ಜಾನುವಾರುಗಳ ಮೇಲಾಗುವ ಪರಿಣಾಮ ಕುರಿತ ಹೆಚ್ಚಿನ ಮಾಹಿತಿಗಾಗಿ ದೂ– 9448059777 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.