ಬೆಂಗಳೂರು: ಸಾವಯವ ಪದ್ಧತಿ ಅನುಸರಿಸಿ ಬೆಳೆದ ಬೆಳೆ ಮತ್ತು ಸಿರಿಧಾನ್ಯಕ್ಕೆ ಈಗ ಕಾಲ ಬಂದಿದೆ. 2013ರಲ್ಲಿ ಆರಂಭವಾದ ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲಾ ಸಹಕಾರ ಸಾವಯವ ರೈತರ ಒಕ್ಕೂಟ ಈಗ ಬರೊಬ್ಬರಿ ವಾರ್ಷಿಕ ₹ 1 ಕೋಟಿ ವಹಿವಾಟು ನಡೆಸುತ್ತಿದೆ.
‘ಸಾವಯವ ಕೃಷಿ ನೀತಿಯೂ ಇಲ್ಲದ ಸಂದರ್ಭದಲ್ಲಿಛಲಬಿಡದೆ ಮುನ್ನುಗ್ಗಿದ ಬೆರಳೆಣಿಕೆಯಷ್ಟು ರೈತರು ಸಂಘಟಿತರಾಗಿ ಪರಸ್ಪರ ಸಹಕಾರದೊಂದಿಗೆ ಈ ಪದ್ಧತಿ ಮುಂದುವರಿಸಿದೆವು. 2013ರಲ್ಲಿ ಒಕ್ಕೂಟದ ಸ್ವರೂಪ ನೀಡಿದೆವು. ಈಗ3,000 ರೈತರನ್ನು ಒಳಗೊಂಡ ದೊಡ್ಡ ಒಕ್ಕೂಟವಾಗಿ ತಲೆ ಎತ್ತಿದೆ’ ಎಂದು ಒಕ್ಕೂಟದ ಅಧ್ಯಕ್ಷ ಸಿ.ಆರ್. ಬೂದಿಹಾಳ್ ಹೇಳಿದರು.
ಸಿರಿಧಾನ್ಯ, ದ್ವಿದಳಧಾನ್ಯ, ಎಣ್ಣೆಕಾಳು, ಸಾಂಬಾರ ಪದಾರ್ಥಗಳನ್ನು ಸಾವಯವ ಪದ್ಧತಿಯಲ್ಲೇ ಬೆಳೆಯಲಾಗುತ್ತಿದೆ. ರೈತರಿಗೆ ಒಕ್ಕೂಟವೇ ಬಿತ್ತನೆ ಬೀಜ ನೀಡಿ ಬೆಳೆದ ಉತ್ಪನ್ನವನ್ನು ಖರೀದಿ ಮಾಡುತ್ತಿದೆ ಎಂದರು.
ಸಂಸ್ಕರಣಾ ಘಟಕ: ಒಕ್ಕೂಟವೇ ಸ್ವಂತಸಂಸ್ಕರಣಾ ಘಟಕ ಹೊಂದಿದ್ದು, ರೈತರಿಂದ ಖರೀದಿಸುವ ಎಣ್ಣೆಕಾಳುಗಳನ್ನು ಸಾಂಪ್ರದಾಯಿಕ ಪದ್ಧತಿಯಂತೆ ಗಾಣದಲ್ಲಿ ಅರೆದು ಎಣ್ಣೆ ತೆಗೆಯಲಾಗುತ್ತದೆ ಎಂದು ಬೂದಿಹಾಳ್ ತಿಳಿಸಿದರು.
‘ನಮ್ಮ ಘಟಕದಲ್ಲಿ ಉತ್ಪತ್ತಿಯಾಗುವಸೂರ್ಯಕಾಂತಿ ಎಣ್ಣೆ, ಕುಸುಬೆ ಎಣ್ಣೆ ಮತ್ತು ಕಡಲೆಕಾಯಿ ಎಣ್ಣೆಗೆ ಸಾಕಷ್ಟು ಬೇಡಿಕೆ ಇದೆ. ಬೇಡಿಕೆಗೆ ತಕ್ಕಷ್ಟು ಉತ್ಪತ್ತಿ ಮಾಡುವುದು ಕಷ್ಟವಾಗಿದೆ. ಮುಂದಿನ ದಿನಗಳಲ್ಲಿ ಘಟಕ ವಿಸ್ತರಿಸುವ ಆಲೋಚನೆಯೂ ಇದೆ. ‘ಇದರೊಂದಿಗೆ ಮೆಣಸಿನಕಾಯಿ, ಅರಿಶಿನಪುಡಿ ತಯಾರಿಸುವ ಮತ್ತು ಪ್ಯಾಕಿಂಗ್ ಮಾಡುವ ಘಟಕವೂ ನಮ್ಮಲ್ಲಿದೆ’ ಎಂದು ವಿವರಿಸಿದರು.
ಉತ್ತಮ ಬೆಲೆ: ಆರೋಗ್ಯದ ಬಗ್ಗೆ ಜನರಲ್ಲಿ ಕಾಳಜಿ ಹೆಚ್ಚಾಗಿರುವ ಕಾರಣ ವಿಷಮುಕ್ತ ಮತ್ತು ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಹೀಗಾಗಿ ಈ ಉತ್ಪನ್ನಗಳಿಗೆ ತಾನಾಗಿಯೇ ಬೆಲೆ ಬಂದಿದೆ ಎಂದರು ಬೂದಿಹಾಳ್.
‘ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಒಪ್ಪಂದವನ್ನು ಸರ್ಕಾರ ಮಾಡಿಸಿಕೊಟ್ಟಿದೆ. ಆದರೆ, ಆ ಕಂಪನಿಗಳಿಗೆ ಆಹಾರ ಪದಾರ್ಥ ಮಾರಾಟ ಮಾಡುವುದರಿಂದ ನಮಗೆ ಲಾಭ ಕಡಿಮೆಯಾಗುತ್ತದೆ. ಕಡಿಮೆ ಬೆಲೆಗೆ ನಮ್ಮಿಂದ ಖರೀದಿಸಿ, ಮೂರುಪಟ್ಟು ಹೆಚ್ಚು ಬೆಲೆಗೆ ಆ ಕಂಪನಿಗಳು ಗ್ರಾಹಕರಿಗೆ ಮಾರಾಟ ಮಾಡುತ್ತವೆ. ಹೀಗಾಗಿ ಆ ನಾವೇ ಮಾರುಕಟ್ಟೆ ಸೃಷ್ಟಿಸಿಕೊಂಡು ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿದ್ದೇವೆ’ ಎಂದರು.
‘ನಮ್ಮ ಒಕ್ಕೂಟದ ಉತ್ಪನ್ನಗಳಿಗೆ ರಾಜ್ಯದಲ್ಲಿ ಮಾತ್ರವಲ್ಲದೇ ಹೊರ ರಾಜ್ಯದಲ್ಲೂ ಬೇಡಿಕೆ ಇದೆ. ಇತ್ತೀಚೆಗೆ ಕೇರಳಕ್ಕೆ 50 ಕ್ವಿಂಟಾಲ್ ಮೆಣಸಿನಕಾಯಿ ಪುಡಿ ಕಳುಹಿಸಿಕೊಟ್ಟಿದ್ದೇವೆ’ ಎಂದು ವಿವರಿಸಿದರು.
ಸಾವಯವ ತರಕಾರಿಗೆ ಬೇಡಿಕೆ
ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ರೈತರ ಒಕ್ಕೂಟ ನೈಸರ್ಗಿಕ ಮತ್ತು ಸಾವಯವ ಪದ್ಧತಿಯ ಮೂಲಕ ಬೆಳೆಯುವ ತರಕಾರಿಗೆ ಎಲ್ಲಿಲ್ಲದ ಬೇಡಿಕೆ ಇದೆ.
ಬೆಂಗಳೂರಿನಲ್ಲಿ ಈ ತರಕಾರಿಗೆ ಬೇಡಿಕೆ ಹೆಚ್ಚಿರುವ ಕಾರಣ ಒಕ್ಕೂಟ ರೈತರ ಮೂಲಕ ತರಕಾರಿ ಬೆಳೆಗಳನ್ನೇ ಹೆಚ್ಚಾಗಿ ಬೆಳೆಸುತ್ತಿದೆ. ಒಕ್ಕೂಟದಲ್ಲಿ 2,100 ರೈತರಿದ್ದು, 31 ಗುಂಪುಗಳನ್ನು ಒಕ್ಕೂಟ ಒಳಗೊಂಡಿದೆ.
ಸಾವಯವ ತರಕಾರಿ, ಸೊಪ್ಪು, ಮಾವು, ಸೀಬೆ, ಸಪೋಟ, ನೆಲ್ಲಿ, ಪರಂಗಿ ಹಣ್ಣು, ಬಾಳೆ, ರಾಗಿ, ಹುರುಳಿ, ತೊಗರಿ, ಅರಿಶಿಣ ಮತ್ತು ಸಿರಿಧಾನ್ಯಗಳನ್ನು ರೈತರು ಬೆಳೆದು ಒಕ್ಕೂಟಕ್ಕೆ ಮಾರಾಟ ಮಾಡುತ್ತಾರೆ.
ಒಕ್ಕೂಟವೇ ಶೇಂಗಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ತೆಗೆಯುವ ಘಟಕ ಹೊಂದಿದ್ದು, ಅಕ್ಕಿ, ರಾಗಿ, ಗೋಧಿ ಮತ್ತು ಜೋಳದ ಹಿಟ್ಟು ತಯಾರಿಕೆ ಯಂತ್ರವನ್ನೂ ಹೊಂದಿದೆ. ಉತ್ಪನ್ನಗಳನ್ನು ಪ್ಯಾಕೇಟ್ ಮಾಡಿ ಮಾರುಕಟ್ಟೆ ಬಿಡಲಾಗುತ್ತಿದೆ ಎಂದು ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರವಿ ‘ಪ್ರಜಾವಾಣಿ’ಗೆ ವಿವರಿಸಿದರು.
ಆಕರ್ಷಿಸಿದ ಮೈಸೂರು ಪೇಟ
ಸಿರಿಧಾನ್ಯ ಮೇಳದ ಮಳಿಗೆಯೊಂದರಲ್ಲಿ ಮೈಸೂರು ಪೇಟ ತೊಟ್ಟು ಕುಳಿತಿದ್ದ ರೈತ ಜನರ ಆಕರ್ಷಣೆಯಾಗಿದ್ದರು.
ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯ ಕೃಷಿಕರ ಸಂಘಗಳ ಒಕ್ಕೂಟದ ಮಳಿಗೆಯಲ್ಲಿ ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಶ್ರೀನಿವಾಸ್ ಎಂಬ ರೈತ ವೇಷ ತೊಟ್ಟಿದ್ದರು.
ಉತ್ಪನ್ನಗಳನ್ನು ಖರೀದಿಸುತ್ತಿದ್ದ ಗ್ರಾಹಕರು ಅವರೊಂದಿಗೆ ಸೆಲ್ಫಿಯನ್ನೂ ತೆಗೆದುಕೊಳ್ಳುತ್ತಿದ್ದರು.
ಈ ಒಕ್ಕೂಟದಲ್ಲಿ 61 ಸಂಘಗಳಿದ್ದು, 5,500 ರೈತರು ನೋಂದಾಯಿಸಿಕೊಂಡಿದ್ದಾರೆ. ಭತ್ತ, ರಾಗಿ, ಕಬ್ಬು, ತರಕಾರಿ, ಹಣ್ಣು ಹಾಗೂ ಸಿರಿಧಾನ್ಯಗಳನ್ನು ರೈತರಿಂದ ಬೆಳೆಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ ಎಂದು ಶ್ರೀನಿವಾಸ್ ಹೇಳಿದರು.
ಬೊರ್ನ್‌ವಿಟ ಅಲ್ಲ ಸ್ಪ್ರೋವಿಟ...
ಮೊಳಕೆ ಕಾಳುಗಳನ್ನು ಪುಡಿಯಿಂದ ತಯಾರಿಸಿದ ಸ್ಪ್ರೋವಿಟ ಪುಡಿಯ ಕಾಫಿ ಸ್ವಾದ ಮೇಳದಲ್ಲಿ ಜನರನ್ನು ಆಕರ್ಷಿಸಿತು.
ಹೆಸರು ಕಾಳು, ಅವರೇಕಾಳು, ಹಲಸಂದೆ ಕಾಳು, ಜೋಳ
ಸೇರಿದಂತೆ ಹತ್ತಾರು ಮೊಳಕೆ ಕಾಳಿನ ಪುಡಿಯನ್ನು ಸೇರಿಸಿ ತಯಾರಿಸಿದ ಸ್ಪ್ರೋವಿಟ ಮಾರಾಟಕ್ಕೆ ತಮಿಳುನಾಡಿನ ರೈತರು ಮಳಿಗೆ
ತೆರದಿದ್ದಾರೆ.
‘ಸ್ಪ್ರೋವಿಟ ಸಕ್ಕರೆ ಮತ್ತು ಹಾಲು ಬೆರೆಸಿ ಕಡಿದರೆ ಬೊರ್ನ್‌ವಿಟದಂತಹ ಪೇಯಕ್ಕಿಂತ ಹೆಚ್ಚು ರುಚಿಕರ ಮತ್ತು ಆರೋಗ್ಯಕರ’ ಎನ್ನುತ್ತಾರೆ ಅಲ್ಲಿನ ರೈತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.