‘ನೀವು ನೋಡ್ತಿರೊ ಈ ಬೆಳೆಗಳೆಲ್ಲ ಹೆಚ್ಚುಕಮ್ಮಿ ಮಳೆ ನೀರಿನಲ್ಲೇ ಬೆಳೆದಿರುವುದು. ನಮ್ಮ ಜಮೀನಿನ ಮೇಲೆ ಸುರಿಯುವ ಹನಿ ಮಳೆ ನೀರೂ ವ್ಯರ್ಥವಾಗಲು ಬಿಡುವುದಿಲ್ಲ..’ ಎನ್ನುತ್ತಾ ಸೊಂಪಾಗಿ ಬೆಳೆದಿದ್ದ ಕನಕಾಂಬರ, ಸೇವಂತಿಗೆ, ನಿಂಬೆ, ನುಗ್ಗೆಯತ್ತ ಕೈ ತೋರಿದರು ಕೃಷಿಕ ಗಂದೋಡಿ ಬಸವರಾಜ್.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಂತಹ ಬಿಸಿಲು ಪ್ರದೇಶದಲ್ಲಿ, ನುಜ್ಜುಕಲ್ಲಿನ ಮಸಾರಿ ನೆಲದಲ್ಲಿ ಮಳೆ ನೀರಲ್ಲಿಇಷ್ಟೆಲ್ಲ ಬೆಳೆ ಬೆಳೆಯೋಕೆ ಸಾಧ್ಯವೇ‘ ಎಂಬ ಪ್ರಶ್ನೆಯೂ ನನ್ನನ್ನು ಕಾಡುತ್ತಿತ್ತು. ಕಾಡುವ ಪ್ರಶ್ನೆಯ ಜತೆ ಬಸವರಾಜ್ ಅವರೊಂದಿಗೆ ಹೊಲ ಸುತ್ತಾಡುತ್ತಿದ್ದಾಗ, ಹೊಲದ ಮೂಲೆಗಳಲ್ಲಿ ಮಾಡಿಸಿದ್ದ ಬೃಹತ್ ಕೃಷಿ ಹೊಂಡಗಳನ್ನು ತೋರಿಸಿದರು. ‘ನೋಡಿ, ಇವೇ ಹೊಲದ ಬೆಳೆಗಳಿಗೆ ನೀರು ಪೂರೈಸುವ ಜಲಮೂಲಗಳು‘ ಎಂದರು. ಕಪ್ಪು ತಾಡಪಾಲು (ಜಿಯೋ ಮೆಂಬ್ರೆನ್ ಹಾಳೆ) ಹೊದಿಸಿದ್ದ ಕೃಷಿ ಹೊಂಡಗಳಲ್ಲಿ ಭರ್ತಿ ನೀರಿತ್ತು. ಆ ಹೊಂಡದಿಂದ ಎಲ್ಲ ಬೆಳೆಗಳಿಗೆ ಹನಿ ನೀರಾವರಿ ಮೂಲಕ ನೀರು ಪೂರೈಸುವ ಪೈಪುಗಳು ಕಾಣುತ್ತಿದ್ದವು.
ಕೃಷಿ ಹೊಂಡಗಳೆಂಬ ಜಲಪಾತ್ರೆ
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಹಳ್ಳಿ ಜಂಗಮ ಸೋವೆನಹಳ್ಳಿ. ಇಲ್ಲಿಯ ರೈತ ಬಸವರಾಜ್ ಅವರಿಗೆ ಸುಮಾರು ನಾಲ್ಕೂವರೆ ಎಕರೆ ಜಮೀನಿದೆ. ಬಹುತೇಕ ಕಲ್ಲು ಮಿಶ್ರಿತ ಇಳಿಜಾರಿನ ಮಸಾರೆ ಕೃಷಿ ಭೂಮಿ. ಇದು ವಾರ್ಷಿಕ ಸರಾಸರಿ 625 ಮಿಮೀ ಮಳೆ ಬೀಳುವ ಪ್ರದೇಶ. ವರ್ಷದಲ್ಲಿ ಸುರಿಯುವ ಮಳೆ ನೀರನ್ನು ಹೊಂಡಗಳಲ್ಲಿ ಸಂಗ್ರಹಿಸಿ, ಅದರಿಂದಲೇ ಎಲ್ಲ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಬಸವರಾಜ್. ಕೊಳವೆ ಬಾವಿ ಇದ್ದರೂ ಅದರಲ್ಲಿ ಸಾಕಷ್ಟು ನೀರು ಇಲ್ಲದ ಕಾರಣ, ಮೂರು ವರ್ಷಗಳ ಹಿಂದೆ ಎರಡು ಕೃಷಿ ಹೊಂಡಗಳನ್ನು ಮಾಡಿಸಿದ್ದರು.
ಹೊಂಡಗಳಿಗಾಗಿ ವಿನ್ಯಾಸ..
ಕೃಷಿ ಭೂಮಿಯ ಮೇಲ್ಮೈಗೆ ತಕ್ಕಂತೆ ಜಮೀನನ್ನು ಎರಡು ಪಟ್ಟೆಗಳಾಗಿ(ಪ್ಲಾಟ್) ವಿಂಗಡಿಸಿ, ಅದರಲ್ಲಿ ಸುಮಾರು 17 ಗುಂಟೆ (40 ಸೆಂಟ್ಸ್) ನಷ್ಟು ಜಾಗದಲ್ಲಿ ಕೃಷಿ ಹೊಂಡಗಳನ್ನು ಮಾಡಿಸಿದ್ದಾರೆ. ಒಂದು ಕೃಷಿ ಹೊಂಡ 21X21X3 ಮೀಟರ್ ಅಳತೆ. ಇದಕ್ಕೆ ಸರ್ಕಾರದ ಪ್ರೋತ್ಸಾಹ ಧನವೂ ದೊರೆತಿದೆ. ಇನ್ನೊಂದು, 18X5X3 ಮೀಟರ್ ಅಳತೆಯದ್ದು. ಇದನ್ನು ಸ್ವಂತ ಖರ್ಚಿನಲ್ಲಿ ಮಾಡಿಸಿದ್ದಾರೆ.
ಪ್ರತಿ ಪಟ್ಟೆಯಲ್ಲಿ ಬೀಳುವ ಮಳೆ ನೀರಿನ ಜತೆಗೆ, ಅಕ್ಕಪಕ್ಕದ ಹೊಲಗಳ ಮೇಲೆ ಸುರಿದ ಹರಿದು ಬರುವ ಮಳೆ ನೀರು ಕೃಷಿ ಹೊಂಡಕ್ಕೆ ತಲುಪುವಂತೆ ಕಾಲುವೆ ಮಾಡಿಸಿದ್ದಾರೆ. ಈ ಎರಡೂ ಕೃಷಿ ಹೊಂಡಗಳ ನೀರಿನ ಸಂಗ್ರಹ ಸಾಮರ್ಥ್ಯ ಕ್ರಮವಾಗಿ 9.8 ಲಕ್ಷ ಲೀಟರ್ ಮತ್ತು 1.51 ಲಕ್ಷ ಲೀಟರ್‌ಗಳು. ಒಂದು ಬಾರಿ ಹೊಂಡಗಳು ತುಂಬಿದರೆ ಅಂದಾಜು 10 ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತದೆ. 40 ರಿಂದ 45 ಮಿ.ಮೀ ಮಳೆ ಸುರಿದರೆ ಈ ಹೊಂಡಗಳು ತುಂಬುತ್ತವೆ.
‘ಮಳೆ ನೀರು ಹರಿಯುವ ಪ್ರಮಾಣ ಅಂದಾಜು ಮಾಡಿ, ಆಯಕಟ್ಟಿನ ಪ್ರದೇಶಗಳಲ್ಲಿ ಕೃಷಿ ಹೊಂಡಗಳನ್ನು ತೆಗೆಸಿದ್ದೇನೆ. ಅಕ್ಕಪಕ್ಕದವರ ಹೊಲಗಳಲ್ಲಿ ಹೆಚ್ಚಾಗಿ, ಬದು ಒಡೆದು ಹರಿಯುವ ನೀರು ಕೃಷಿ ಹೊಂಡ ಸೇರುತ್ತದೆ. ಕೃಷಿ ಹೊಂಡದ ಸುತ್ತ ಸಿಲ್ವರ್ ಗಿಡಗಳನ್ನು ಬೆಳೆಸಿದ್ದು ಆರು ಅಡಿ ಎತ್ತರ ಬೆಳೆದು ನಿಂತಿವೆ‘ ಎನ್ನುತ್ತಾರೆ ಬಸವರಾಜ್.
‘ತೊಟ್ಟಿ’ ಕ್ಕುವ ನೀರಿಗೂ ಬೆಲೆ..!
ಜಮೀನಿನಲ್ಲಿ ಒಂದು ಪುಟ್ಟ ಕೊಠಡಿ ಕಟ್ಟಿದ್ದಾರೆ. ಕೊಠಡಿ ಸೂರಿಗೆ ತಗಡು ಹೊದಿಸಿದ್ದಾರೆ. ಇದರ ಪಕ್ಕದಲ್ಲೇ 9X6X2 ಮೀಟರ್ ಅಳತೆಯ ತೊಟ್ಟಿ ಕಟ್ಟಿಸಿದ್ದಾರೆ. ಕೊಠಡಿ ಮೇಲೆ ಬೀಳುವ ಮಳೆ ನೀರು ಈ ತೊಟ್ಟಿಯಲ್ಲಿ ಸಂಗ್ರಹವಾಗುತ್ತದೆ. ತೊಟ್ಟಿ ಒಮ್ಮೆ ಭರ್ತಿಯಾದರೆ, ಅಂದಾಜು 1.8 ಲಕ್ಷ ಲೀಟರ್ ಲಭ್ಯವಾಗುತ್ತದೆ. ಇದೇ ಹೊಂಡದ ನೀರನ್ನು ಪ್ರತಿ ವರ್ಷ ನುಗ್ಗೆ ಬೆಳೆಗೆ ಪೂರೈಸುತ್ತಾರೆ. ಜನವರಿ-ಏಪ್ರಿಲ್ ನಡುವೆ 18 ರಿಂದ 20 ದಿನಕ್ಕೊಮ್ಮೆ ಒಟ್ಟು ನಾಲ್ಕು ತಿಂಗಳು ನುಗ್ಗೆ ಗಿಡಗಳಿಗೆ ನೀರು ಪೂರೈಸುತ್ತಾರೆ. ಮೇ ತಿಂಗಳಿಗೆ ಸರಿಯಾಗಿ ನುಗ್ಗೆ ಕಾಯಿ ಕೊಯ್ಲಿಗೆ ಬರುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ನುಗ್ಗೆ ಮರದ ಸುತ್ತಾ ಮೂರು ಅಡಿ ಸುತ್ತಳತೆಯಲ್ಲಿ ಮಡಿ ಮಾಡಿದ್ದಾರೆ. ಒಂದು ಮಡಿಗೆ ಒಂದು ನಿಮಿಷದಂತೆ ಸಮಯ ನಿಗದಿಪಡಿಸಿ ನೀರು ಹನಿಸುತ್ತಾರೆ. ಇಪ್ಪತ್ತು ದಿನಗಳಲ್ಲಿ 1000 ನುಗ್ಗೆ, 500 ಕರಿಬೇವು, 500 ನಿಂಬೆ ಗಿಡಗಳಿಗೆ ಸರಾಸರಿ 16 ರಿಂದ 18 ಲೀಟರ್ ನೀರು ಪೂರೈಕೆಯಾಗುತ್ತದೆ. ಈ ಬೆಳೆಗಳ ಜತೆಗೆ ಮೆಣಸಿನಕಾಯಿ, ಕನಕಾಂಬರ, ಸುಂಗಧರಾಜ, ಗುಲಾಬಿ ಹೂವಿನ ಬೆಳೆಗಳೂ ಇವೆ.
ಜಲ ಮರುಪೂರಣ, ಮಿತಬಳಕೆ
ಹತ್ತು ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಿದ್ದಾರೆ. ಅದರಲ್ಲಿ ನೀರಿನ ಇಳುವರಿ ಕಡಿಮೆಯಾದ ಮೇಲೆ, ಕೊಳವೆಬಾವಿ ಸುತ್ತ 3ಮೀ X3ಮೀ X3 ಮೀ ಅಳತೆಯ ಇಂಗುಗುಂಡಿ ಮಾಡಿಸಿದ್ದಾರೆ. ಜಮೀನಿನಲ್ಲಿ ಎಲ್ಲೇ ಮಳೆ ಸುರಿದರೂ ಆ ನೀರು ಕೊಳವೆಬಾವಿಯ ಇಂಗು ಗುಂಡಿ ಸೇರುತ್ತದೆ. ‘ಯಾವಾಗ್ಲೋ ಈ ಬೋರ್‌ವೆಲ್ ನಿಂತು ಹೋಗ್ಬೇಕಿತ್ತು. ಮಳೆ ನೀರು ಮರುಪೂರಣ ಮಾಡಿದ್ದರಿಂದ ಉಳಿದುಕೊಂಡಿದೆ. ಇದೇ ಕೊಳವೆಬಾವಿ ಕೊಡುವ ನೀರಲ್ಲೇ ಒಂದೂವರೆ ಎಕರೆಯಲ್ಲಿ ಹೂವು, ಹಣ್ಣು ತರಕಾರಿ ಬೆಳೆದು ನಿತ್ಯ ₹300 ರಿಂದ ₹ 400 ಸಂಪಾದನೆ ಮಾಡುತ್ತಿದ್ದೇನೆ‘ ಎನ್ನುತ್ತಾರೆ ಬಸವರಾಜ್.
ಮಳೆ ನೀರು ಸಂಗ್ರಹಿಸುವ ಜತೆಗೆ, ನೀರನ್ನು ಮಿತವಾಗಿ ಬಳಸವುದನ್ನೂ ರೂಢಿಸಿಕೊಂಡಿದ್ದಾರೆ. ಡ್ರಿಪ್ ಪೈಪ್‌ಗಳಿಗೆ ಗೇಟ್‌ವಾಲ್ ಜತೆಗೆ, ಮೂರು ಅಡಿಗೊಂದು ನಲ್ಲಿ (ನಳ) ಅಳವಡಿಸಿದ್ದಾರೆ. ‘ಈ ವಿಧಾನದಿಂದ ಬೆಳೆಗಳಿಗೆ ಅಗತ್ಯವಿರುವಷ್ಟು ನೀರನ್ನು ವೇಗವಾಗಿ ಮತ್ತು ಸಂತೃಪ್ತವಾಗಿ ಕೊಡಲು ಸಹಕಾರಿ ಆಗುತ್ತದೆ’ ಎನ್ನುವುದು ಬಸವರಾಜ್ ಅಭಿಪ್ರಾಯ.
ಬಸವರಾಜ್ ಅವರ ಸಂಪರ್ಕಕ್ಕೆ: 9980576553
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.