ಬಾಳೆಗೆ ಬೇರಿನಿಂದ ಕೊಡುವ ಪೋಷಕಾಂಶಗಳು ಗೊನೆಯಲ್ಲಿರುವ ಎಲ್ಲ ಕಾಯಿಗಳಿಗೂ ಸರಿಯಾಗಿ ಸಿಗುವುದಿಲ್ಲ. ಹಾಗಾಗಿ ಗೊನೆಯ ತುದಿಯಲ್ಲಿರುವ ಕಾಯಿಗಳು ಸರಿಯಾಗಿ ಬೆಳವಣಿಗೆಯಾಗುವುದಿಲ್ಲ.
ಹಾಗಾಗಿ ಬಾಳೆಗೊನೆಗೆ ನೇರವಾಗಿ ಪೋಷಕಾಂಶಗಳನ್ನು ಪೂರೈಸುವಂತಹ ವಿಧಾನವೊಂದನ್ನು ತುಮಕೂರು ಭಾಗದ ಕೆಲ ರೈತರು ಅನುಸರಿಸುತ್ತಿದ್ದಾರೆ. ಆ ವಿಧಾನ ಹೀಗಿದೆ.
ಪೋಷಕಾಂಶ ಪೂರೈಕೆ ವಿಧಾನ
1 ಕೆ.ಜಿ. ಸಗಣಿ, 1 ಲೀಟರ್ ಗಂಜಲ ಮತ್ತು 1 ಲೀಟರ್ ನೀರನ್ನು ಮಿಶ್ರಣ ಮಾಡಿ. ಆ ಮಿಶ್ರಣವನ್ನು ಒಂದು ಕವರ್‍ನಲ್ಲಿ ತುಂಬಿ. ಕವರಿನ ಬಾಯಿಯನ್ನು ಗೊನೆಗೆ ಕಟ್ಟಬೇಕು. ಕಟ್ಟುವಾಗ ಗೊನೆಗಳಲ್ಲಿನ ಹೂವನ್ನು ಓರೆಯಾಗಿ ಕತ್ತರಿಸಿ, ಗೊನೆಯ ತುದಿ ಮಿಶ್ರಣ ತುಂಬಿದ ಕವರ್ ಒಳಗೆ ಪೂರ್ತಿ ಮುಳುಗಿಸಿ, ಕವರ್ ಬಾಯಿಯನ್ನು ಬಿಗಿಯಾಗಿ ಕಟ್ಟಬೇಕು (ಚಿತ್ರ ನೋಡಿ). ಈ ಮಿಶ್ರಣ ರೂಪದಲ್ಲಿ ಗೊನೆಗಳಿಗೆ ಪೋಷಕಾಂಶ ಪೂರೈಸುವುದರಿಂದ ಕಾಯಿಗಳು ಬೆಳವಣಿಗೆ ಹೊಂದುತ್ತವೆ. ಜತೆಗೆ, ನೋಡಲೂ ಆಕರ್ಷಕವಾಗಿರುತ್ತವೆ ಎನ್ನುವುದು ಈ ಪ್ರಯೋಗ ಬಳಸಿ ನೋಡಿರುವ ರೈತರ ಅಭಿಪ್ರಾಯ. ‘ಕೆಲವು ರೈತರು ಈ ವಿಧಾನ ಅನುಸರಿಸುತ್ತಿದ್ದಾರೆ. ಆದರೆ, ವೈಜ್ಞಾನಿಕವಾಗಿ ಇದು ದೃಢಪಟ್ಟಿಲ್ಲ’ ಎನ್ನುತ್ತಾರೆ ನಿವೃತ್ತ ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಿ ಡಾ.ಎಸ್.ವಿ.ಹಿತ್ತಲಮನಿ.
ಅಂದ ಹಾಗೆ ಮಿಶ್ರಣ ಕಟ್ಟುವ ಮುನ್ನ ಈ ಅಂಶಗಳನ್ನು ಗಮನಿಸಿ; ಮಿಶ್ರಣ ಕಟ್ಟಲು ಆರಿಸಿಕೊಳ್ಳುವ ಗೊನೆಗಳಲ್ಲಿ ಕಾಯಿಗಳು ಬೆಳವಣಿಗೆ ಹಂತದಲ್ಲಿರಬೇಕು.ಗೊನೆಯ ಕೆಳಭಾಗದಲ್ಲಿರುವ ಕಾಯಿಗಳು ಮೇಲ್ಭಾಗದಲ್ಲಿರುವ ಕಾಯಿಗಳಿಗಿಂತ ಕಡಿಮೆ ಬೆಳವಣಿಗೆ ಹೊಂದಿರಬೇಕು. ಇಂಥ ಗೊನೆಯ ತುದಿಗೆ ಮೇಲಿನ ಮಿಶ್ರಣವಿರುವ ಕವರ್ ಕಟ್ಟಬೇಕು ಎಂಬುದು ರೈತರ ಸಲಹೆಯಾಗಿದೆ.
ಪ್ರಯೋಗ ಕುರಿತು ಮಾಹಿತಿಗಾಗಿ ರಾಘವೇಂದ್ರ ಬೈಚೇನಹಳ್ಳಿ: 9972206554 (ಸಮಯ: ಸಂಜೆ 5ರ ನಂತರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.