ADVERTISEMENT

ಜೀವವೈವಿಧ್ಯದ ಖಜಾನೆ

ಸಂಧ್ಯಾ ಹೆಗಡೆ
Published 19 ನವೆಂಬರ್ 2018, 19:45 IST
Last Updated 19 ನವೆಂಬರ್ 2018, 19:45 IST
ಡಾ.ಎಂ.ಎಚ್.ಮರಿಗೌಡ -ಚಿತ್ರಗಳು: ಲೇಖಕರವು
ಡಾ.ಎಂ.ಎಚ್.ಮರಿಗೌಡ -ಚಿತ್ರಗಳು: ಲೇಖಕರವು   

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮತ್ತು ಯಲ್ಲಾಪುರ ತಾಲ್ಲೂಕುಗಳ ಗಡಿಯಲ್ಲಿರುವ ಪುಟ್ಟ ಹಳ್ಳಿ ಕಾನಕೊಡ್ಲು. ಶಿರಸಿಯಿಂದ ಹೊರಟರೆ, ಇಸಳೂರಿನಿಂದ ಉಮ್ಮಚಗಿ ತಲುಪುವ ರಸ್ತೆಯಲ್ಲಿ ಸುಮಾರು 10 ಕಿ.ಮೀ ಸಾಗಬೇಕು. ಅಲ್ಲಿಂದ ಕಚ್ಚಾರಸ್ತೆಯಲ್ಲಿ ತಿರುಗಿದರೆ, ಸಿಗುವುದು ಸಾಗುವಾನಿ ನೆಡುತೋಪು, ಮರದ ಕೆಳಗೆ ಬಿದ್ದಿರುವ ತರಗೆಲೆಗಳು ಮಾತ್ರ. ಹಾಗೆಯೇ ಮೂರು ಕಿ.ಮೀ ಮುಂದೆ ಹೋದರೆ, ಅಲ್ಲೊಂದು ಪುಟ್ಟ ಹೊಳೆಯಿದೆ. ಅಲ್ಲಿ ವಾಹನವನ್ನು ನಿಲ್ಲಿಸಿ, ಕಾಲಿಗೆ ಚಲನೆ ನೀಡಿ, ಬೆಟ್ಟದಲ್ಲಿರುವ ಕಾಲುದಾರಿಗಿಂತ ತುಸು ಅಗಲವಾದ ಮಾರ್ಗದಲ್ಲಿ ಅರ್ಧ ಕಿ.ಮೀ ಹೆಜ್ಜೆ ಹಾಕಿದರೆ, ಪ್ರಗತಿಪರ ಕೃಷಿಕ ಪ್ರಸಾದ ರಾಮ ಹೆಗಡೆ ಅವರ ಮನೆಯ ಬೋರ್ಡ್ ಕಣ್ಣಿಗೆ ಬೀಳುತ್ತದೆ.

ನಾಗರಿಕ ಸೌಲಭ್ಯಗಳು ಅತಿ ಕಡಿಮೆಯಿರುವ ಈ ಹಳ್ಳಿಯಲ್ಲಿ ಅದ್ಭುತವಾದ ಕೃಷಿಲೋಕವೊಂದನ್ನು ಸೃಷ್ಟಿಸಿದ್ದಾರೆ ಪ್ರಸಾದ ಹೆಗಡೆ. ಅವರಿಗಿರುವುದು ಐದು ಎಕರೆ ಕೃಷಿಭೂಮಿ. ಒಂದು ಭಾಗದಲ್ಲಿ ಅಡಿಕೆ ತೋಟ ಹಾಗೂ ಅದರೊಳಗೆ ಉಪಬೆಳೆಗಳಾದ ಕಾಳುಮೆಣಸು, ಏಲಕ್ಕಿ, ವೆನಿಲ್ಲಾ, ಅರಿಸಿನ, ಕಾಫಿ, ವೀಳ್ಯದ ಎಲೆ, ಬಾಳೆ, ಹಲವಾರು ಔಷಧ ಸಸ್ಯಗಳು ಇವೆ. ತೋಟದ ಏರಿಯ ಮೇಲೆ ಅಗರ್‌ವುಡ್ ಮರಗಳು ನೆರಳು ನೀಡುತ್ತಿವೆ. ತುಸು ಮುಂದಕ್ಕೆ ಹೋದರೆ, ದಾಲ್ಚಿನಿಯ ಪರಿಮಳ ಮೂಗಿಗೆ ಬಡಿಯುತ್ತದೆ. ಒಂದು ಎಕರೆಯಲ್ಲಿ ದಾಲ್ಚಿನಿ ಗಿಡಗಳನ್ನು ಬೆಳೆಸಿದ್ದಾರೆ. ನಾಲ್ಕು ಜಾತಿಯ ದಾಲ್ಚಿನಿ ಗಿಡಗಳು ಅವರ ಜಮೀನಿನಲ್ಲಿವೆ.

ಅದನ್ನು ಕಂಡು ಮೇಲಕ್ಕೆ ಬಂದರೆ, ಜೀವವೈವಿಧ್ಯಗಳ ಸಂಗಮ ಅನಾವರಣಗೊಳ್ಳುತ್ತದೆ. ಹೆಜ್ಜೆಗೊಂದು ಹೊಸ ಗಿಡದ ಕೌತುಕ. ‘ಯಾವುದೇ ಹೊಸ ಜಾಗಕ್ಕೆ ಹೋದರೂ ತಿರುಗಿ ಬರುವಾಗ ಹೊಸದೊಂದು ಗಿಡ ತರುವ ಅಥವಾ ತಂತ್ರಜ್ಞಾನದ ಮಾಹಿತಿ ಪಡೆದುಕೊಂಡು ಬರುವ ಅಭ್ಯಾಸ ಮಾಡಿಕೊಂಡಿದ್ದೇನೆ’ ಎನ್ನುತ್ತ ಪ್ರಸಾದ ಹೆಗಡೆ ಮುಂದಕ್ಕೆ ಹೋಗುತ್ತಿದ್ದರೆ, ನಾವು ಅವರ ಮಾತಿಗೆ ಕಿವಿಯಾಗುತ್ತ, ಹಿಂದಕ್ಕೆ ಹೆಜ್ಜೆ ಹಾಕಿದೆ.

ADVERTISEMENT

ತೋಟದಲ್ಲಿ ಎಲ್ಲೂ ಎಡವಿಬೀಳುವ ಸಂದರ್ಭವಿಲ್ಲ, ಉದ್ದಕ್ಕೂ ಶಿಸ್ತಿನ ಕಾಲುದಾರಿಗಳು, ಅಲ್ಲಲ್ಲಿ ಮಾಹಿತಿ ನೀಡುವ ಫಲಕಗಳು ಇವೆ. ಕಳೆ ಗಿಡಗಳು ತೀರಾ ಕಡಿಮೆ. ಮನೆಯ ಜಗುಲಿಯನ್ನು ಇಟ್ಟುಕೊಳ್ಳುವಷ್ಟೇ ಅಚ್ಚುಕಟ್ಟಿನಿಂದ ಅವರು ಇಡೀ ಕೃಷಿಭೂಮಿಯನ್ನು ನಿರ್ವಹಣೆ ಮಾಡಿದ್ದಾರೆ. ಅವರ ಜಮೀನಿನಲ್ಲಿ ನಿಂತು 360 ಡಿಗ್ರಿಯಲ್ಲಿ ಹೇಗೆ ತಿರುಗಿ ನೋಡಿದರೂ ಹೊಸದೊಂದು ಗಿಡ ಕಾಣುತ್ತದೆ.

‘ಕಾಲೇಜಿಗೆ ಹೋಗುವಾಗ ಸೈನ್ಯ ಸೇರಬೇಕೆಂಬ ಹಂಬಲದಲ್ಲಿ ಅರ್ಜಿ ಹಾಕಿದೆ. ಸಂದರ್ಶನಕ್ಕೆ ಪತ್ರವೂ ಬಂತು. ಅನಿವಾರ್ಯ ಕಾರಣದಿಂದ ಹೋಗಲಾಗಲಿಲ್ಲ. ನಂತರ ಡಿಗ್ರಿ ಮುಗಿದ ಮೇಲೆ ನಾನು ಆಯ್ಕೆ ಮಾಡಿಕೊಂಡಿದ್ದು ಕೃಷಿ. ಅಲ್ಲಿಯೇ ಹೊಸ ಪ್ರಯೋಗಗಳನ್ನು ಮಾಡಲು ಶುರು ಮಾಡಿದೆ. 15 ವರ್ಷಗಳ ಹಿಂದೆ ಕೃಷಿ ಆರಂಭಿಸುವಾಗ ನನ್ನ ವಾರ್ಷಿಕ ಆದಾಯ ಹೆಚ್ಚೆಂದರೆ ₹ 20ಸಾವಿರ’ ಎನ್ನುತ್ತ ಪ್ರಸಾದ ಅವರು ಕೃಷಿ ಅನುಭವ ಬಿಚ್ಚಿಡುತ್ತ ಹೋದರು.

‘ಆಗ ಆರ್ಥಿಕ ಮುಗ್ಗಟ್ಟು. ಸುವರ್ಣಗಡ್ಡೆ, ಕೆಸುವಿನ ಗಡ್ಡೆಯಂತಹ ಬೆಳೆಗಳನ್ನು ಬೆಳೆಯುತ್ತಿದ್ದೆ. ಈಗ ಇವುಗಳ ಜತೆಗೆ, ಸುಮಾರು 250 ಪ್ರಭೇದದ 900ಕ್ಕೂ ಅಧಿಕ ಗಿಡಗಳು ಜಮೀನಿನಲ್ಲಿವೆ. ಒಂದು ಎಕರೆಯಲ್ಲಿ ನಾಲ್ಕು ಜಾತಿಯ ದಾಲ್ಚಿನಿ ಸಸ್ಯಗಳಿವೆ. ಇವುಗಳ ಚಕ್ಕೆ ಹಾಗೂ ಮೊಗ್ಗಿಗೆ ಹೆಚ್ಚು ಬೇಡಿಕೆಯಿದೆ. ಸಂಬಾರು ಬೆಳೆಗಳ ಧಾರಣೆ ಕಡಿಮೆಯಾಗಿದ್ದರೂ, ಲಾಭಕ್ಕೆ ಕೊರತೆಯಿಲ್ಲ. 90 ಜಾತಿ ಔಷಧ ಸಸ್ಯಗಳಿವೆ’ ಎಂದ ಅವರು, ಬರ್, ಬೋರೆಹಣ್ಣು, ಜತ್ರೋಪಾ, ವಾಟರ್ ಫ್ರುಟ್, ಎಗ್ ಫ್ರುಟ್, ದೂಪ, ರುದ್ರಾಕ್ಷಿ, ಸಿಲ್ವರ್ ಓಕ್, ಚಿಕ್ಕು, ಭಾರತದ ಇಂಗು, ಫ್ಯಾಷನ್ ಫ್ರುಟ್, ಬಿಳಿ ನೇರಲು, ರಾಜನೆಲ್ಲಿ, ಕಪ್ಪು ಲಕ್ಕಿ, ಶ್ರೀಗಂಧ, ಮೆಹಂದಿ, ಬಿಳಿಸೂಜಿ ಮೆಣಸು ಹೀಗೆ ಪಟಪಟನೆ ಅಲ್ಲಿರುವ ಗಿಡಗಳನ್ನು ಪರಿಚಯಿಸುತ್ತ ಹೋದರು.

‘10 ಗುಂಟೆಯಲ್ಲಿ 40 ಜಾತಿಯ ಅಪ್ಪೆಮಾವು ಇದೆ. 1 ಎಕರೆ ಹೊಸ ಅಡಿಕೆ ತೋಟ. 1ಎಕರೆ 8ಗುಂಟೆಯಲ್ಲಿ ತೆಂಗು, 30 ಜಾತಿಯ ಮಾವಿನ ಮರಗಳಿವೆ. 1 ಎಕರೆ 5 ಗುಂಟೆಯ ಅಡಿಕೆ ತೋಟದಲ್ಲಿ ಇರುವ ಕಾಳುಮೆಣಸು ಬಳ್ಳಿಯಿಂದ 16 ಕ್ವಿಂಟಲ್‌ನಿಂದ 17 ಕ್ವಿಂಟಲ್ ಇಳುವರಿ ಸಿಗುತ್ತದೆ. ಇವುಗಳಲ್ಲಿ 15 ತಳಿ ವೈವಿಧ್ಯಗಳಿವೆ. ಐದು ಬಗೆಯ ವೀಳ್ಯದೆಲೆ, 10 ವಿಧದ ಬಾಳೆಯಿದೆ. ತೋಟದ ಅಂಚಿನಲ್ಲಿರುವ ಜಲಮೂಲದಲ್ಲಿ ಅಂತರಗಂಗೆಯನ್ನು ಬೆಳೆಸಿದ್ದೇನೆ. ಇದರಿಂದ ಜಲಸಂರಕ್ಷಣೆಯಾಗುತ್ತದೆ. ಕೆರೆಯಲ್ಲಿ ಮೀನು ಕೃಷಿ ಮಾಡಿದ್ದೂ ಇದೆ. ತೋಟದ ಅಂಚಿನ ಇಂಗುಗುಂಡಿಗಳು ನೀರಿನ ವರತೆಯನ್ನು ಚೆನ್ನಾಗಿಟ್ಟಿವೆ’ ಎಂದು ಅವರು ತಡೆಯಿಲ್ಲದೇ ಹೇಳುತ್ತಿದ್ದರೆ, ಕಣ್ಣರಳಿಸಿ ಕೇಳುವ ಸರದಿ ನನ್ನದಾಗಿತ್ತು.

ಎರೆಹುಳು ಗೊಬ್ಬರ, ಕಾಂಪೋಸ್ಟ್, ಜೈವಿಕ ಗೊಬ್ಬರಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಸಾವಯವ ಕೃಷಿಗೆ ಒತ್ತು ನೀಡುವ ಅವರಿಗೆ ರಾಸಾಯನಿಕದ ಬಗ್ಗೆ ಮಡಿವಂತಿಕೆಯೇನಿಲ್ಲ. ‘ಅಗತ್ಯವಾದಾಗ ಕೆಲವೊಮ್ಮೆ ರಾಸಾಯನಿಕ ಬಳಸಬೇಕಾಗುತ್ತದೆ’ ಎನ್ನುತ್ತಾರೆ.

ಸ್ವ ಪರಿಶ್ರಮ, ಯಂತ್ರೋಪಕರಣಗಳ ಸದ್ಬಳಕೆಯೇ ಪ್ರಸಾದರ ಕೃಷಿಯ ಯಶಸ್ಸಿನ ಮೂಲ. ವೀಡ್‌ ಕಟರ್, ಸ್ಪ್ರೇಯರ್, ಚಾಲಿ ಅಡಿಕೆ ಬಿಡಿಸುವ, ಅಗತೆ ಕೊಚ್ಚುವ, ಕಾಳುಮೆಣಸು ಸ್ವಚ್ಛಗೊಳಿಸುವ ಯಂತ್ರ ಹೀಗೆ ಹಲವಾರು ಆಧುನಿಕ ಯಂತ್ರಗಳನ್ನು, ಕೃಷಿಯಿಂದ ಬಂದಿರುವ ಆದಾಯದಲ್ಲಿ ಖರೀದಿಸುತ್ತಾರೆ. ‘ಇದು ಕೂಲಿವೆಚ್ಚ ಹಾಗೂ ಸಮಯ ಉಳಿತಾಯ ಮಾಡುತ್ತದೆ. ವಾರ್ಷಿಕ ₹ 20ಸಾವಿರವಿದ್ದ ಆದಾಯ ಈಗ ಹೆಚ್ಚು ಕಡಿಮೆ ₹ 15 ಲಕ್ಷಕ್ಕೆ ತಲುಪಿದೆ. ಕೃಷಿ ವೆಚ್ಚ ಅಂದಾಜು ₹ 5ಲಕ್ಷ ಕಳೆದರೂ ಉಳಿದದ್ದು ಲಾಭವೇ’ ಎನ್ನುವಾಗ ಪ್ರಸಾದ ಅವರ ಮೊಗದಲ್ಲಿ ಸಾಧನೆಯ ಸಂತೃಪ್ತಿಯಿತ್ತು.

ಅವರ ತೋಟ ನೋಡಲು ವರ್ಷಕ್ಕೆ ಸುಮಾರು 1200 ಜನರು, 50ಕ್ಕೂ ಹೆಚ್ಚು ವಿಜ್ಞಾನಿಗಳು ಬರುತ್ತಾರೆ. ಪ್ರಸಾದ ಅವರ ನೆಲಮೂಲದ ಜ್ಞಾನ, ಅತಿಥಿಗಳಿಗೆ ಮಾಹಿತಿ ನೀಡುವ ಆತ್ಮವಿಶ್ವಾಸವನ್ನು ತಗ್ಗಿಸುವುದಿಲ್ಲ. ಅವರ ಕೃಷಿ, ತೋಟಗಾರಿಕಾ ಸಾಧನೆ ಗಮನಿಸಿ, ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ, ಮಾವು ತಳಿ ಸಂರಕ್ಷಕ ರಾಷ್ಟ್ರೀಯ ಮನ್ನಣೆ, ಕರ್ನಾಟಕ ಜೀವವೈವಿಧ್ಯ ಮಂಡಳಿಯಿಂದ ಪಾರಂಪರಿಕ ರಕ್ಷಕ, ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪಂಡಿತ, ತೀರಾ ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯದ ಡಾ.ಎಂ.ಎಚ್.ಮರಿಗೌಡ ದತ್ತಿ ಪ್ರಶಸ್ತಿ ದೊರೆತಿವೆ. ಕಳೆದ ವಾರವಷ್ಟೇ ನಡೆದ ಕೃಷಿ ಮೇಳದಲ್ಲಿ ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಪ್ರಸಾದ ಹೆಗಡೆ ಸಂಪರ್ಕ ಸಂಖ್ಯೆ: 937913868

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.