ADVERTISEMENT

ಅತಿಸಾಂದ್ರ ಪದ್ಧತಿಯಲ್ಲಿ ಗೇರು ಬೆಳೆ: ಹೊಸ ಭರವಸೆ ಮೂಡಿಸಿದ ನೀಚಡಿ ಕ್ಲಸ್ಟರ್

ಡಾ.ಮೋಹನ್ ತಲಕಾಲುಕೊಪ್ಪ
Published 8 ಜೂನ್ 2019, 13:29 IST
Last Updated 8 ಜೂನ್ 2019, 13:29 IST
ಗೇರು ಬೆಳೆ ತೋಟದಲ್ಲಿ ಚಂದ್ರು
ಗೇರು ಬೆಳೆ ತೋಟದಲ್ಲಿ ಚಂದ್ರು   

ಗೇರು ಅಪರಿಚಿತವಲ್ಲದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನೀಚಡಿ, ಉಳ್ಳೂರು, ತ್ಯಾಗರ್ತಿ, ಹೊಸಂತೆ, ನಂದಿತಳೆ ಗ್ರಾಮಗಳಲ್ಲಿ ವ್ಯವಸ್ಥಿತ ಗೇರು ಕೃಷಿಯ ಹೊಸರೂಪ – ‘ಅತಿಸಾಂದ್ರ ಪದ್ಧತಿ’ಯ ಬೇಸಾಯ ಬೇರು ಬಿಡುತ್ತಿದೆ. ಸರಿಯಾಗಿ ಕೃಷಿ ಮಾಡಿದರೆ ಎರಡನೇ ವರ್ಷದಲ್ಲೇ ಎಕರೆಗೆ 4ಕ್ವಿಂಟಲ್ ಗಿಂತಲೂ ಜಾಸ್ತಿ ಇಳುವರಿ ಕೊಡುವ ಸಾಮರ್ಥ್ಯವಿರುವ ಈ ಪದ್ಧತಿ ದೀರ್ಘಾವದಿ ಬೆಳೆಯಾದ ಗೇರಿನ ಕೃಷಿಯಲ್ಲಿ ಹೊಸ ಆಶಾಕಿರಣ. ಮಾಮೂಲಿ ಪದ್ಧತಿಯಲ್ಲಿ ಮೊದಲ ಬೆಳೆಗೆ ಮೂರು ವರ್ಷ ಕಾಯಬೇಕಿದ್ದರೆ ಇದರಲ್ಲಿ ಎಂಟು ತಿಂಗಳಿಗೆ ಬೆಳೆ ಶುರುವಾಗಿ ಅಲ್ಲಿನ ಕೃಷಿಕರಲ್ಲಿ ಅಚ್ಚರಿ ಮೂಡಿಸಿದೆ. ಈ ಧನಾತ್ಮಕ ಬೆಳವಣಿಗೆಯ ಬಗ್ಗೆ ವಿವರಗಳಿಲ್ಲಿವೆ.

‘ಈ ವರ್ಷ ಗೇರು ಬೀಜ ಕೆಜಿಗೆ ನೂರೈವತ್ತು ರೂಪಾಯಿ ಇರುತ್ತಿದ್ದರೆ, ನನಗೆ ಈ ಗೇರು ತೋಟಕ್ಕೆ ಮಾಡಿದ ಅರ್ಧ ಖರ್ಚು ವಾಪಾಸು ಬಂದಿರುತ್ತಿತ್ತು’ ಪ್ರಗತಿಪರ ಕೃಷಿಕ ಚಂದ್ರು ಅವರ ಮಾತು. ಅವರ ಗೇರು ತೋಟದ ವಯಸ್ಸೆಷ್ಟು ಗೊತ್ತಾ? ಬರೀ ಒಂದೂವರೆ ವರ್ಷ ಅಷ್ಟೆ!! ಗೇರಿನಂತಹ ದೀರ್ಘಾವಧಿ ಬೆಳೆಗಳಲ್ಲಿ ಹಾಕಿದ ಖರ್ಚು ವಾಪಾಸು ಬರಬೇಕೆಂದರೆ ಏಳೆಂಟು ವರ್ಷಗಳೇ ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಚಂದ್ರು ಅಳವಡಿಸಿದ ಕೃಷಿ ಪದ್ಧತಿ ಮಹತ್ವ ಪಡೆಯುತ್ತದೆ. ಇವರು ಸಾಗರ ಪೇಟೆಯಿಂದ ಶಿವಮೊಗ್ಗ ರಸ್ತೆಯಲ್ಲಿ ಹತ್ತು ಕಿಮೀ ದೂರವಿರುವ ಉಳ್ಳೂರಿನಲ್ಲಿ ಅತಿಸಾಂದ್ರ ಪದ್ಧತಿಯಲ್ಲಿ ಗೇರು ತೋಟ ಮಾಡಿದ್ದಾರೆ. ಕೆಂಪು ಗೊಚ್ಚು ಮಣ್ಣು (ಕಲ್ಲು ಮತ್ತು ಮಣ್ಣು ಮಿಶ್ರಣ) ಇರುವ ಅವರ ತೋಟದಲ್ಲಿ ಈ ಪದ್ಧತಿಗೆ ಹೊಂದುವ ವಿಆರ್‌ಐ-3 ತಳಿಯ ಇನ್ನೂರೈವತ್ತು ಗಿಡಗಳಿವೆ. ಇಂತಹ ಮಣ್ಣಿನಲ್ಲಿ ಇನ್ಯಾವ ಬೆಳೆಯೂ ಇಷ್ಟು ಚೆನ್ನಾಗಿ, ಲಾಭದಾಯಕವಾಗಿ ಬರಲಾರದು. ‘ನನಗನ್ನಿಸುವಂತೆ ಗೇರಿನಲ್ಲಿ ಮುಖ್ಯವಾಗಿ ಎರಡು ರೀತಿಯ ಕೃಷಿ ಮಾಡಬಹುದು. ಒಂದು ಬಹಳ ಜಾಸ್ತಿ ಗಮನ ಕೊಟ್ಟು 10 ಅಡಿ x 10 ಅಡಿ ಅಂತರದಲ್ಲಿ- ಅಂದರೆ ಅತಿಸಾಂದ್ರ ಪದ್ಧತಿಯಲ್ಲಿ ಗಿಡವನ್ನು ಪೊದೆಯ ರೀತಿಯಲ್ಲಿ ನಿರ್ವಹಣೆ ಮಾಡಿ ಬೇಗ ಲಾಭ ಪಡೆಯುವುದು. ಇನ್ನೊಂದು ಆರಾಮವಾಗಿ ಮಾಡುವ ಕೃಷಿ- 25 ಅಡಿ x 25 ಅಡಿ ಅಂತರ ಕೊಟ್ಟು ದೀರ್ಘಾವಧಿಯಲ್ಲಿ ಲಾಭ ಪಡೆಯುವುದು’ ವಿಶ್ಲೇಷಿಸುತ್ತಾರೆ ಸಾಗರ ಪ್ರಾಂತ್ಯದಲ್ಲಿ ರೇಷ್ಮೆ, ರಬ್ಬರ್ ಮತ್ತು ಪಪಾಯ ಕೃಷಿಯಲ್ಲಿ ಗಣನೀಯ ಸಾಧನೆ ಮಾಡಿದ ಚಂದ್ರು.

‘ಗೇರಿನಲ್ಲಿ ಅತಿಸಾಂದ್ರ ಪದ್ಧತಿ ಬಹಳ ಭರವಸೆ ಮೂಡಿಸುವ ವಾಣಿಜ್ಯ ಉದ್ದೇಶದ ಕೃಷಿಕ್ರಮ. ಎರಡು-ಮೂರು ವರ್ಷಗಳಲ್ಲಿ ಹೆಚ್ಚಿನ ಲಾಭ ಪಡೆದುಬಿಡಬಹುದು. ಸಾಮಾನ್ಯ ಪದ್ಧತಿಯಲ್ಲಿ ಒಂದು ಎಕರೆಯಲ್ಲಿ 8-10 ವರ್ಷಗಳಲ್ಲಿ ತೆಗೆಯಬಹುದಾದ ಇಳುವರಿಗಿಂತ ಜಾಸ್ತಿ ಇಲ್ಲಿ ಮೂರು-ನಾಲ್ಕು ವರ್ಷಗಳಲ್ಲಿ ತೆಗೆದುಬಿಡಬಹುದು’ ಹೀಗೆಂದವರು ನೀಚಡಿ ಸಮೀಪದ ನಂದಿತಳೆ ಊರಿನ ಕೃಷಿಕ ವೆಂಕಟೇಶ್. ಸುಮಾರು ಎರಡು ಸಾವಿರ ವಿಆರ್‌ಐ-3 ತಳಿಯ ಗಿಡಗಳನ್ನು ಅವರು ಅತಿಸಾಂದ್ರ ಪದ್ಧತಿಯಲ್ಲಿ ಬೆಳೆಸಿದ್ದಾರೆ.

ADVERTISEMENT
ವೆಂಕಟೇಶ್

ಭರವಸೆಯ ಪದ್ಧತಿ:ಅತಿಸಾಂದ್ರ ಪದ್ಧತಿಯನ್ನು ಗೇರಿನಲ್ಲಿ ಕಂಡುಹಿಡಿದು ಅದಕ್ಕೆ ರೂಪ ಕೊಟ್ಟವರು ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಗಂಗಾಧರ ನಾಯಕ್. ಬಹಳ ದೀರ್ಘಕಾಲದಿಂದ ಗೇರು ತಳಿಗಳ ಪ್ರೂನಿಂಗ್ (ಸವರುವಿಕೆ) ಸ್ಪಂದನೆ ಗಮನಿಸಿ ಈ ವಿಧಾನವನ್ನು ರೂಪಿಸಿದ್ದಾರೆ. (ವಿವರಗಳಿಗೆ ಮೊದಲ ಟೇಬಲ್ ನೋಡಿ). ‘ಈ ವಿಧಾನಕ್ಕೆ ವಿಆರ್‌ಐ-3 ಮತ್ತು ಹೆಚ್-130 ತಳಿಗಳು ಬಹಳ ಸೂಕ್ತ’. ‘ನಮ್ಮ ದೇಶದಲ್ಲಿ ಈಗ ಸುಮಾರು 8 ಲಕ್ಷ ಟನ್ ಗೇರು ಉತ್ಪಾದನೆಯಾಗುತ್ತಿದೆ. ಆದರೆ 18–20 ಲಕ್ಷ ಟನ್‌ಗಳಷ್ಟು ಗೇರು ಬೀಜದ ಬೇಡಿಕೆ ಇದೆ. ಮುಂಬರುವ ವರ್ಷಗಳಲ್ಲಿ ಇದು ಇನ್ನೂ ಹೆಚ್ಚಾಗುತ್ತದೆ. ಸರಿಯಾದ ತಳಿ ಮತ್ತು ಅತಿಸಾಂದ್ರ ಪದ್ಧತಿಯನ್ನು ತಿಳಿದು ಅನುಸರಿಸಿದರೆ ಹೆಕ್ಟೇರ್ ಒಂದಕ್ಕೆ 2 ಟನ್ ಗಳಿಗಿಂತಲೂ ಜಾಸ್ತಿ ಬೆಳೆ ಬೆಳೆಯಬಹುದು. ಇದು ದೇಶದಲ್ಲಿ ಗೇರು ಬೀಜದ ಉತ್ಪಾದನೆಯ ಕೊರತೆ ನೀಗಲು ಸಹಾಯಕವಾಗುತ್ತದೆ’ ಎನ್ನುವ ಭರವಸೆ ಡಾ. ನಾಯಕ್ ಅವರದು.

ಈ ಪದ್ಧತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುತ್ತಮುತ್ತಲಿನ ಕೃಷಿಕರಲ್ಲಿ– ತಿಂಗಳಾಡಿಯ ಸುಭಾಷ್ ರೈ, ದೇರ್ಲದ ಕರುಣಾಕರ ರೈ, ಪಾಪನಡ್ಕದ ದೇರಣ್ಣ ರೈ, ಈಶ್ವರ ಮಂಗಲದ ನಟೇಶ್ ಮೂಡಾಯೂರು, ಮಂಚಿಯ ಸತ್ಯಭಾಮ ಇತ್ಯಾದಿ ಕೃಷಿಕರ ತೋಟಗಳಲ್ಲಿ ಈಗಾಗಲೇ ಬಹಳ ಒಳ್ಳೆಯ ಫಲಿತಾಂಶ ನೀಡುತ್ತಿದೆ. ಹಾಂ, ಅತಿಸಾಂದ್ರ ಪದ್ಧತಿಯ ಕೃಷಿ ಗೇರಿಗೆ ಮಾತ್ರ ಸೀಮಿತವಲ್ಲ. ಬಾಳೆ, ಪೇರಳೆ, ಮಾವು, ಹಲಸು, ಲಿಚಿ ಮುಂತಾದ ಬೆಳೆಗಳಲ್ಲೂ ಈಗ ಜನಪ್ರಿಯವಾಗುತ್ತಿದೆ.

ಕೆಲಸದ ಆರಂಭ:ಎರಡು ವರ್ಷದ ಹಿಂದಿನ ಮಾತು. ನಾನು ಕೆಲಸ ಮಾಡುವ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯಕ್ಕೆ ನೀಚಡಿ ಊರು ಮತ್ತು ಆಸುಪಾಸಿನ ಕೆಲ ಕೃಷಿರು ಬಂದಿದ್ದರು. ಗೇರಿನಲ್ಲಿ ಜನಪ್ರಿಯವಾಗುತ್ತಿರುವ ಅತಿಸಾಂದ್ರ ಪದ್ಧತಿ ಹಾಗೂ ಹೊಸ ತಳಿಗಳ ವಿಚಾರ ಹಂಚಿಕೆ ಮತ್ತು ಪುತ್ತೂರಿನ ಆಸುಪಾಸಿನ ಕೃಷಿಕರ ಹೊಲದಲ್ಲಿನ ಈ ತಂತ್ರಜ್ಞಾನದ ಅನುಷ್ಠಾನವನ್ನು ಅವರಿಗೆ ತೋರಿಸಿದ್ದೆವು. ಬಂದವರಲ್ಲಿ ಕೆಲವರಿಗೆ ಗೇರು ನರ್ಸರಿಯನ್ನು ಮಾಡುವ ಉತ್ಸಾಹವೂ ಇತ್ತು! ಅದಕ್ಕೆ ಬೇಕಾದ ಕಸಿಕಡ್ಡಿ ಹಾಗೂ ಅಡಿಗಿಡಗಳನ್ನು ಎಬ್ಬಿಸಲು ಬೇಕಾದ ಬೀಜ ಕೊಡುವ ಕೃಷಿಕರ ಮತ್ತು ಕಸಿ ಕಟ್ಟುವ ನಿಪುಣ ಕೆಲಸಗಾರರ ಸಂಪರ್ಕವನ್ನೂ ಒದಗಿಸಿಕೊಟ್ಟಿದ್ದೆವು. ನಾನು ಬಹುತೇಕ ಒಂದಿಡೀ ದಿನವನ್ನು ಅವರೊಡನೆ ಕಳೆದಿದ್ದೆ. ನಂತರ ನಮ್ಮ ಸಂಶೋಧನೆಯ ಕೆಲಸದ ನಡುವೆ ಈ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಲಾಗಿರಲಿಲ್ಲ.

ಈಗೊಂದು ತಿಂಗಳ ಹಿಂದೆ ಊರಿಗೆ ಹೋದಾಗ, ನೀಚಡಿ ಗ್ರಾಮದಲ್ಲಿ ಗೇರಿನ ಕೆಲಸ ಏನು ನಡೆದಿದೆ ಅಂತ ನೋಡೋಣ ಅಂತ ಕುತೂಹಲದಿಂದ ಹೋಗಿದ್ದೆ. ಸುಮಾರು ನಾಲ್ಕೂವರೆಯ ಹೊತ್ತಿಗೆ ಹೋದರೆ ಹಲವಾರು ಕೃಷಿಕರು ಕಾಯುತ್ತಿದ್ದರು.. ಅವರ ಉತ್ಸಾಹ ನೋಡಿ ನನಗೆ ಅಚ್ಚರಿ!! ನೀಚಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು 35 ಜನ ಕೃಷಿಕರು 30,000 ಕ್ಕಿಂತಲೂ ಹೆಚ್ಚು ಗಿಡಗಳನ್ನು ಅತಿಸಾಂದ್ರ ಪದ್ಧತಿಯಲ್ಲಿ ನೆಟ್ಟಿದ್ದಾರೆ. ಮೊದಲು ಭೇಟಿ ನೀಡಿದ್ದು ವೆಂಕಟೇಶ್ ನಂದಿತಳೆಯವರ ತೋಟಕ್ಕೆ. ವಿಆರ್‌ಐ-3 ತಳಿಯ ಸುಮಾರು 2000 ಗಿಡಗಳನ್ನು ಅತಿಸಾಂದ್ರ ಪದ್ಧತಿಯಲ್ಲಿ ನೆಟ್ಟಿದ್ದರು. ಅದಾಗಲೇ ಇಳುವರಿ ಶುರುವಾಗಿತ್ತು. ಜೊತೆಗೆ ಕಲ್ಲಂಗಡಿಯನ್ನು ಅಂತರಬೆಳೆಯಾಗಿ ಬೆಳೆದು ಕೊಯಿಲು ಮಾಡಿದ್ದರು. ಕಡಿಮೆ ಮಾತಿನ ವೆಂಕಟೇಶ್ ಕೆಲಸ ಜಾಸ್ತಿ ಮಾಡುವವರು! ಅವರು ಪಾಲಿಹೌಸಿನಲ್ಲಿ ಈ ವರ್ಷ ವಿಆರ್‌ಐ -3 ಮತ್ತು ವೆಂಗುರ್ಲಾ-7 ತಳಿಯ ಸುಮಾರು ಮೂವತ್ತು ಸಾವಿರ ಕಸಿಗಿಡಗಳನ್ನು ಬೆಳೆಸುತ್ತಿದ್ದಾರೆಇನ್ನೊಬ್ಬ ಕೃಷಿಕ ಪ್ರಶಾಂತ್ ಜೋಯಿಸ್.

ಪ್ರಶಾಂತ್ ಜೋಯಿಸ್ 440 ಗಿಡಗಳನ್ನು ಬೆಳೆಸಿದ್ದಾರೆ. ಮಂಜುನಾಥ್ ಅವರ ತೋಟದಲ್ಲಿ 1400 ವಿಆರ್‌ಐ-3 ತಳಿಯ ಗಿಡಗಳಿವೆ. ಜೊತೆಗೆ ವೆಂಗುರ್ಲಾ-7ನ್ನು ಸಾಮಾನ್ಯ ಪದ್ಧತಿಯಲ್ಲಿ ನೆಟ್ಟಿದ್ದಾರೆ. ನಂತರ ಪ್ರಸಾದ್ ಅವರ ನರ್ಸರಿ ಭೇಟಿ. ಎರಡು ದಿನ ಬಿಟ್ಟು ಉಳ್ಳೂರಿನ ಚಂದ್ರು ಅವರ ತೋಟಕ್ಕೂ ಹೋಗಿದ್ದೆ. ಅವರು ವಿಆರ್‌ಐ-3 ತಳಿಯ 250 ಗಿಡಗಳನ್ನು ಬೆಳೆಸಿದ್ದಾರೆ. ಅಲ್ಲಲ್ಲಿ ಮಧ್ಯೆ ದ್ವಿದಳ ಧಾನ್ಯದ ಗಿಡಗಳೂ ಇದ್ದವು. ಡ್ರಿಪ್ ಮೂಲಕ ನೀರಾವರಿ ಹಾಗೂ ಪ್ರತಿಯೊಂದು ಗೇರು ಗಿಡಕ್ಕೂ ಪ್ಲಾಸ್ಟಿಕ್ ಶೀಟ್ ಮಲ್ಚಿಂಗ್ ಮಾಡಿದ್ದಾರೆ. ಪ್ರೂನಿಂಗ್ ಕೂಡ ಬಹಳ ಸಮರ್ಪಕವಾಗಿತ್ತು. ಚಂದ್ರು ಅವರ ಗೇರು ನರ್ಸರಿಯಲ್ಲಿ ಈ ವರ್ಷ ವಿಆರ್‌ಐ-3 ಮತ್ತು ವೆಂಗುರ್ಲಾ-7 ತಳಿಗಳ ಸುಮಾರು 3೦,೦೦೦ ಗಿಡಗಳನ್ನು ಮಾಡುವ ಗುರಿ ಅವರದು.

ನೀಚಡಿಯ ಕಾರ್ಯಕ್ರಮ:ನನ್ನ ಮೊದಲ ಭೇಟಿಯಲ್ಲಿ ನೀಚಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಕೃಷಿಕರ ಉತ್ಸಾಹವನ್ನು ಹೆಜ್ಜೆ ಹೆಜ್ಜೆಗೂ ಗಮನಿಸಿದ್ದೆ. ಸಾಗರ ಪ್ರಾಂತ್ಯದಲ್ಲಿ ವೆನಿಲ್ಲಾ ಪರಾಗಸ್ಪರ್ಶ ಕಲಿತು ಮಾಡಿದ ಮೊದಲ ಗ್ರಾಮ ನೀಚಡಿ ಅಂತ ಆ ಪ್ರಾಂತ್ಯದ ಕೃಷಿಕರು ಹೇಳುತ್ತಾರೆ. ಜಲಸಾಕ್ಷರತೆಯಲ್ಲೂ ನೀಚಡಿ ಭಾಗದ ಕೃಷಿಕರು ಮುಂದಿದ್ದಾರೆ. ‘ನಮ್ಮಲ್ಲಿ ನೀವು ನಮಗೆ ಗೇರು ಕೃಷಿಯ ಬಗ್ಗೆ ಮಾಹಿತಿ ನೀಡಬೇಕು’ ಎಂದಿದ್ದರು. ಅದರಂತೆ ಮೇ ಹನ್ನೆರಡನೇ ತಾರೀಕು ನೀಚಡಿಯಲ್ಲಿ ಗೇರು ಬೆಳೆಯ ಬಗ್ಗೆ ಮಾಹಿತಿ ಕಾರ್ಯಾಗಾರವೊಂದನ್ನು ನಡೆಸಿದ್ದೆ. ಅಂದು ಅತಿಸಾಂದ್ರ ಪದ್ಧತಿಯಲ್ಲಿ ಗೇರು ಬೆಳೆಯುವ ಬಗ್ಗೆ ಸಾಕಷ್ಟು ವಿಚಾರ ವಿನಿಮಯ ನಡೆಯಿತು.

ಗೇರು ಬೆಳೆಕುರಿತು ರೈತರೊಂದಿಗೆ ಸಂವಾದ ನಡೆಸುತ್ತಿರುವ ವಿಜ್ಞಾನಿಗಳು

ಮಣ್ಣಿನ ಆಳ ಕಡಿಮೆ ಇರುವಲ್ಲಿ ಸೂಕ್ತ ಅತಿಸಾಂದ್ರ ಪದ್ಧತಿ:ನೀಚಡಿಗೆ ಹೋದಾಗ, ಸಾಗರದ ಮಕ್ಕಳ ತಜ್ಞ ಡಾ. ಪುಟ್ಟಪ್ಪ ಬೇತೂರು ಅವರ ಗೇರು ತೋಟಕ್ಕೂ ಭೇಟಿ ಕೊಟ್ಟೆ. ಅವರ ಹೊಲದಲ್ಲಿ ನಾಲ್ಕೈದು ಅಡಿಯಷ್ಟು ಮಾತ್ರ ಮೇಲ್ಮಣ್ಣು ಇದೆ. ಅದರ ಕೆಳಗೆ ಮುರಕಲ್ಲಿನ ಹಾಸು. ಅಂತಲ್ಲಿಯೂ ವಿಆರ್‌ಐ-3 ತಳಿ ಚೆನ್ನಾಗಿ ಬಂದಿದೆ. ನೆಟ್ಟು ಅರು ತಿಂಗಳು. ಈಗಾಗಲೇ ಹೂ ಬರಲಿಕ್ಕೆ ಆರಂಭವಾಗಿದೆ. ಅಂತಹ ಪ್ರದೇಶಕ್ಕೆ ಅತಿಸಾಂದ್ರ ಪದ್ಧತಿ ಬಹಳ ಹೊಂದುವ ಹಾಗೆ ಕಾಣುತ್ತದೆ. ನಾಲ್ಕೈದು ವರ್ಷ ಬೆಳೆ ತೆಗೆದು ಮತ್ತೆ ಎಲ್ಲ ಗಿಡಗಳನ್ನೂ ತೆಗೆದು ಮರುನಾಟಿ ಮಾಡುವುದು ಅಂತಹ ಮಣ್ಣಿಗೆ ಸೂಕ್ತವಾದೀತು. ಡಾಕ್ಟರಿಗೆ ನೀರು ಬೇಡದ ಗೇರು ಬೆಳೆ ಬಗ್ಗೆ ಬಹಳ ಭರವಸೆ ಹಾಗೂ ಅತ್ಯುತ್ಸಾಹ! ಎಲ್ಲರಲ್ಲೂ ಅದು ಮೂಡುತ್ತಿದೆ.

ಸಾಗಬೇಕಾದ ದಾರಿ:ನೀಚಡಿ ಮತ್ತು ಸುತ್ತಮುತ್ತಲಿನ ಎಲ್ಲ ಕೃಷಿಕರು ಗೇರು ಸಂಶೋಧನಾ ಕೇಂದ್ರದ ಮಾರ್ಗದರ್ಶನದಲ್ಲಿ ನರ್ಸರಿ ಮತ್ತು ತೋಟವನ್ನು ಈಗ ತಾನೇ ಬೆಳೆಸಿದ್ದಾರೆ. ಆದರೆ ಅಲ್ಲಿನ ಗ್ರಾಮಗಳಲ್ಲಿ ಮಾಡಬೇಕಾದ ಕೆಲಸ ಸಾಕಷ್ಟಿದೆ.

ಪ್ರಶಾಂತ್ ಜೋಯಿಸ್

1) ಅಲ್ಲಿರುವ ನರ್ಸರಿಗಳನ್ನು ಆಯಾ ಮಾಲೀಕರು ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ, ಕೊಚಿನ್ ಇವರಿಂದ ದೃಢೀಕರಣ ಮಾಡಿಸುವುದು ಮತ್ತು ಅದರ ಮೂಲಕ ಆ ಪ್ರಾಂತ್ಯದ ಕೃಷಿಕರಿಗೆ ಉತ್ತಮ ಗೇರು ಗಿಡಗಳ ಪೂರೈಕೆಯಾಗುವಂತೆ ನೋಡಿಕೊಳ್ಳುವುದು.

2) ರೈತ ಉತ್ಪಾದಕ ಕಂಪನಿಯಡಿ ನೀಚಡಿ ಮತ್ತು ಹಲವಾರು ಗ್ರಾಮಗಳನ್ನು ಸೇರಿಸಿಕೊಂಡು ಅಲ್ಲಿ ಒಂದು ಗೇರು ಬೀಜ ಮತ್ತು ಹಣ್ಣಿನ ಸಂಸ್ಕರಣಾ ಕೇಂದ್ರವನ್ನು ತೆರೆಯುವುದು. ಅಲ್ಲಿನದೇ ಒಂದು ಬ್ರಾಂಡ್ ಮಾಡಿ ಹತ್ತಿರದ ಸಾಗರ ಪೇಟೆ, ಶಿವಮೊಗ್ಗ, ಬೆಂಗಳೂರು, ಮುಂಬಯಿ ಇತ್ಯಾದಿ ನಗರಗಳಿಗೆ ಅಲ್ಲಿನ ಉತ್ಪನ್ನಗಳನ್ನು ತಲುಪಿಸುವುದು. ಅಮೇರಿಕಾ, ಯುರೋಪುಗಳಿಗೂ ಪ್ರಯತ್ನಿಸಬಹುದು. ಕನಸು ಕಂಡು ನನಸು ಮಾಡುವ ಛಲ ಬೇಕಷ್ಟೆ. ಇದಕ್ಕೆ ಅಲ್ಲಿನ ಕೃಷಿಕರು ಬೀಜ ಮತ್ತು ಹಣ್ಣಿನ ಸಂಸ್ಕರಣೆಯನ್ನು ಮೊದಲು ಕಲಿಯಬೇಕಿದೆ. ನಂತರ ಮಾರುಕಟ್ಟೆ ಅಧ್ಯಯನ ಇತ್ಯಾದಿ.

3) ಕೃಷಿಕರು ಸಂಘಟಿತರಾಗಿ ಗ್ರಾಹಕರಿಗೆ ನೇರ ಮಾರಾಟ ಮಾಡಿದರೆ ಮಾತ್ರ ಉದ್ಧಾರ ಸಾಧ್ಯ. ಇದಕ್ಕೆ ರೈತ ಉತ್ಪಾದಕ ಕಂಪನಿಯೊಂದನ್ನು ಅವರು ಹುಟ್ಟುಹಾಕಬೇಕು. ಆ ನಿಟ್ಟಿನಲ್ಲಿ ಅಡಿಕಟ್ಟು ಕೆಲಸಗಳು ಆರಂಭವಾಗಿವೆ. ಇದು ಎಲ್ಲಾ ಗೇರು ಬೆಳೆಯುವ ಹೋಬಳಿಗಳಲ್ಲಿ ಆಗಬೇಕಾಗಿರುವ ಕೆಲಸ.

ಇವೆಲ್ಲ ಆಗುವುದಕ್ಕೆ ನೀಚಡಿ ಊರಿನ ಕೃಷಿಕರ ಉತ್ಸಾಹ ಹೀಗೇ ಮುಂದುವರೆಯಬೇಕು! ನಮ್ಮ ಗೇರು ಸಂಶೋಧನಾ ಕೇಂದ್ರ ಬೇಕಾದ ಎಲ್ಲ ರೀತಿಯ ಸಹಾಯಹಸ್ತ ನೀಡಲು ಸದಾ ಸಿದ್ಧವಿರುತ್ತದೆ.

ಗಮನಿಸಿ: ನೀಚಡಿ ಕ್ಲಸ್ಟರಿನ ಈ ಬೆಳವಣಿಗೆ ಮುಂದೆ ಯಾವ ರೀತಿ ರೂಪುಗೊಳ್ಳುತ್ತದೆ ಎಂಬುದನ್ನು ಇನ್ನೂ ಮೂರ್ನಾಲ್ಕು ವರ್ಷ ಗಮನಿಸಬೇಕಿದೆ. ಈಗಲೇ ಇದನ್ನು ‘ಅಭೂತಪೂರ್ವ ಯಶಸ್ಸು’ ಎಂಬ ಷರಾ ಬರೆದು ಮುಗಿಸುವುದು ತಪ್ಪಾದೀತು. ಸಾಗಬೇಕಾದ ದಾರಿ ಸಾಕಷ್ಟಿದ್ದರೂ ಈ ಧನಾತ್ಮಕ ಬೆಳವಣಿಗೆಯ ಬಗ್ಗೆ ದಾಖಲಿಸುವುದು ಕೃಷಿಕರಿಗೆ ಉತ್ತೇಜನಕಾರಿ ಎಂಬ ದೃಷ್ಟಿಯಿಂದ ಈ ನುಡಿಚಿತ್ರ.

ಗೇರು ಭವಿಷ್ಯದ ಭರವಸೆಯ ಬೆಳೆ:

1) ಬರಡು ಭೂಮಿಯಲ್ಲಿ, (ಗುಡ್ಡೆ, ಬ್ಯಾಣ, ಕುಮ್ಕಿ) ನೀರೇ ಇಲ್ಲದ ಜಾಗದಲ್ಲಿ ಚೆನ್ನಾಗಿ ಬೆಳೆಯುತ್ತದೆ (ಮಾರ್ಚ್- ಎಪ್ರಿಲ್ ನಲ್ಲಿ ನೀರು ಲಭ್ಯವಿದ್ದರೆ, ಕೊಟ್ಟರೆ ಚೆನ್ನಾಗಿ ಸ್ಪಂದಿಸುತ್ತದೆ. ಇಲ್ಲದಿದ್ದರೂ ತೊಂದರೆ ಇಲ್ಲ), ನೀರಿನ ತತ್ವಾರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇಂತಹ ಸನ್ನಿವೇಶದಲ್ಲಿ ಗೇರು ಭರವಸೆಯ ಬೆಳೆ.

2) ಹೆಚ್ಚುತ್ತಿರುವ ಜಾಗತಿಕ ತಾಪಮಾನಕ್ಕೆ ಸುಲಭವಾಗಿ ಹೊಂದಿಕೊಳ್ಳುವ ಬೆಳೆ. ಬಿಸಿಲಿಗೆ ಹೆದರುವುದಿಲ್ಲ. ಆದರೆ ಈ ಬೆಳೆಗೆ ನೆರಳು ಆಗುವುದೇ ಇಲ್ಲ.

3) ಸಾಕಷ್ಟು ಎಲೆ ಉದುರಿಸಿ ಮಣ್ಣನ್ನು ಫಲವತ್ತು ಮಾಡುತ್ತದೆ.

4) ಕಾಡುಪ್ರಾಣಿಗಳ ಕಾಟ ಬಹಳ ಕಡಿಮೆ. (ಅಲ್ಲಲ್ಲಿ ಮುಳ್ಳುಹಂದಿ, ನವಿಲು, ಕ್ಯಾಸಳಿಲು(ಕೆಂಜಳಿಲು) ಬೀಜವನ್ನು ಒಡೆದು ತಿನ್ನುವ ವರದಿಗಳಿವೆ. ಮಂಗ, ಕಾಡುಹಂದಿ, ದನ ಹಾಗೂ ಎಮ್ಮೆಗಳು ಹಣ್ಣನ್ನು ತಿಂದು ಬೀಜವನ್ನು ಬಿಸಾಡುತ್ತವೆ)

5) ಕರಾವಳಿ, ಮಲೆನಾಡು, ಬಯಲುಸೀಮೆ ಹೀಗೆ ಎಲ್ಲ ಕಡೆಗಳಲ್ಲೂ ಚೆನ್ನಾಗಿ ಬರುತ್ತದೆ (ಆದರೆ ಅತ್ಯಂತ ಚಳಿ/ಶೀತ ವಾತಾವರಣ ಬರುವ ಅಥವಾ ಹಿಮಪಾತವಾಗುವ ಸ್ಥಳ ಇದಕ್ಕೆ ಸೂಕ್ತವಲ್ಲ)

6) ತುಂಬಾ ಕಡಿಮೆ ಕೆಲಸಗಾರರು ಸಾಕು. ಕೆಲಸವೂ ಕಡಿಮೆ

7) ಕೊಯ್ಲಾದ ಮೇಲೆ ಬೀಜವನ್ನು ಒಂದು ವರ್ಷದವರೆಗೂ ಒಣಗಿಸಿ ಚೀಲದಲ್ಲಿ ಕಟ್ಟಿಡಬಹುದು.. ಇದರಿಂದ ಒಳ್ಳೆಯ ಮಾರುಕಟ್ಟೆ ದರಕ್ಕೆ ಕಾದು ಕೊಡಬಹುದು. ಹಣ್ಣನ್ನು ಸಾಫ್ಟ್ ಡ್ರಿಂಕ್ಸ್, ಜಾಮ್, ಜೆಲ್ಲಿ ಇತ್ಯಾದಿ ಮಾಡಲು ಬಳಸಬಹುದು. ಹಣ್ಣನ್ನು ಕತ್ತರಿಸಿ, ಒಣಗಿಸಿ ಪುಡಿ ಮಾಡಿ ಬಿಸ್ಕಿಟ್ ಮುಂತಾದವಕ್ಕೆ ಬಳಸಬಹುದು. ಕೋಳಿ ಆಹಾರವಾಗಿಯೂ ಉಪಯೋಗಿಸಬಹುದು. ಇದಾಗದಿದ್ದರೆ ಹಣ್ಣನ್ನು ಗೋಬರ್ ಗ್ಯಾಸ್, ಬಯೋಡೈಜೆಸ್ಟರ್ ಹಾಗೂ ಜಾನುವಾರುಗಳಿಗೂ ಹಾಕಬಹುದು.

8) ಬೀಜ ಸಂಸ್ಕರಣೆಯನ್ನೂ ಕೃಷಿಕರು ಸುಲಭವಾಗಿ ಮಾಡಬಹುದು. ಮಾವು ಅಥವಾ ಬಾಳೆ ಹಣ್ಣುಗಳ ಹಾಗೆ ಸಮಯ ಮಿತಿಯ ರಗಳೆಯಿಲ್ಲ

9) ಆಹಾರ ಬೆಳೆ. ಹಾಗಾಗಿ ಇದಕ್ಕೆ ನಿಷೇಧದ ಗುಮ್ಮ ಕಾಡುವುದಿಲ್ಲ

10) 40-50 ವರ್ಷ ದೀರ್ಘಾವಧಿಯ ಆಯುಷ್ಯ ಈ ಬೆಳೆಗಿದೆ.

ಗೇರು ಬೆಳೆಕುರಿತು ರೈತರೊಂದಿಗೆ ಸಂವಾದ ನಡೆಸುತ್ತಿರುವ ವಿಜ್ಞಾನಿಗಳು

ಹೆಚ್ಚಿನ ಮಾಹಿತಿಗೆ ವಿಜ್ಞಾನಿಗಳಾದ ಡಾ.ಮೋಹನ್ (ಮೊ- 99022 73468) ಮತ್ತು ಡಾ.ಗಂಗಾಧರ್ (ಮೊ-94484 57269) ಅವರನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.