ಯಳಂದೂರು:ತಾಲ್ಲೂಕಿನಲ್ಲಿ ಹೂ, ತರಕಾರಿ, ಹಣ್ಣು, ರೇಷ್ಮೆ ಹೀಗೆ ಹತ್ತಾರು ಬೆಳೆಗಳನ್ನು ಒಬ್ಬರೇರೈತರು ಬೆಳೆದ ಯಶೋಗಾಥೆಗಳು ಹಲವು ಇವೆ. ಇಂಥವರ ನಡುವೆ ಮದ್ದೂರು ವಿಶ್ವನಾಥ ಅವರು ಭಿನ್ನವಾಗಿ ನಿಲ್ಲುತ್ತಾರೆ. ಕಾಫಿ ಮತ್ತು ಜೇನು ಕೃಷಿಯಲ್ಲಿ ಮಾದರಿಯ ಸಾಗುವಳಿದಾರಎನ್ನುವ ಹೆಗ್ಗಳಿಕೆ ಪಡೆಯುವತ್ತ ದಾಪುಗಾಲು ಇಟ್ಟಿದ್ದಾರೆ.
ವಿಶ್ವನಾಥ ಮತ್ತು ಅವರ ಪತ್ನಿ ಶ್ರುತಿ ಎಂಕಾಂ ಪದವೀಧರರು. ಈಗ ಪೂರ್ಣ ಪ್ರಮಾಣದಒಕ್ಕಲುತನದಲ್ಲಿ ಖುಷಿಯಾಗಿ ಇದ್ದಾರೆ. ಪ್ಲಾಂಟೇಷನ್ ಬೆಳೆಗಳ ವಿಚಾರದಲ್ಲಿ ಅವರಿಗೆಹೆಚ್ಚಿನ ಭರವಸೆ ಇದ್ದು, ಬಯಲು ಸೀಮೆಯ ನಡುವೆ ಗುಣಮಟ್ಟದ ಕಾಫಿ ಬೆಳೆದಿದ್ದಾರೆ.
ರಾಸಾಯನಿಕ ಮುಕ್ತ ಕೃಷಿ ವಿಧಾನ ಅನಿವಾರ್ಯ ಎಂಬುದನ್ನು ಒಪ್ಪಿಕೊಂಡಿರುವ ಅವರು, ಸಾವಯವವಿಧಾನದಲ್ಲಿ ಬೆಳೆಗಳನ್ನು ಬೆಳೆಸಿ ಸೈ ಎನಿಸಿಕೊಂಡಿದ್ದಾರೆ.ವಿಶ್ವನಾಥ್ ಅವರು ಮೈಸೂರು ವಿವಿಯಲ್ಲಿ ಅಧ್ಯಯನ ಮಾಡಿದವರು. ಉನ್ನತ ಉದ್ಯೋಗ ಗಿಟ್ಟಿಸುವಹಾದಿಯಲ್ಲಿ ಇದ್ದರು. ಕೆಲವು ದಿನ ವೃತ್ತಿ ನೈಪುಣ್ಯ ಪಡೆಯಲು ಶ್ರಮಿಸಿದ್ದರು. ತಿಂಗಳಸಂಬಳ ಅಪಥ್ಯವಾಯಿತು. ಬಾಲ್ಯದಿಂದಲೂ ಅಪ್ಪನ ಆಸರೆಯಲ್ಲಿ ಉತ್ತಿ, ಬಿತ್ತಿದ್ದಜಮೀನಿನ ಸೆಳತವೇ ಹೆಚ್ಚಾಯಿತು. ಹಾಗಾಗಿ, ನಗರಗಳತ್ತ ಸುಳಿಯದೆ ಗ್ರಾಮದ ಹಾದಿ ಹಿಡಿದರು.ಸಾಂಪ್ರದಾಯಿಕ ಬೇಸಾಯದ ಜತೆಗೆ ಆರ್ಥಿಕ ಸುಸ್ಥಿರತೆ ಸಾಧಿಸಲು ಯಾವ ಮಾರ್ಗವನ್ನು ಅನುಸರಿಬೇಕು ಎನ್ನುವ ಬಗ್ಗೆ ಕುಟುಂಬದವರ ಜತೆ ಚರ್ಚಿಸಿ, ಮಿಶ್ರ ಬೇಸಾಯದಲ್ಲಿತೊಡಗಿಸಿಕೊಂಡರು.
ಯಾವ್ಯಾವ ಬೆಳೆ?: ವಿಶ್ವನಾಥ್ ಅವರು ಆರು ಎಕರೆಯಲ್ಲಿ ಕಬ್ಬು, ಒಂದು ಎಕರೆಯಲ್ಲಿ ಕಾಫಿ, 1 ಎಕರೆ ಪ್ರದೇಶದಲ್ಲಿ ಕೋಳಿ ಸಾಕಣೆ ಕೈಗೊಂಡಿದ್ದಾರೆ. ಗದ್ದೆಯ ಸುತ್ತಮುತ್ತ ಜೇನಿನ ಝೇಂಕಾರವೂ ಕೇಳಿ ಬರುತ್ತಿದೆ. ಕಾಫಿಯ ಹಸಿರು ತುಂಬಿಕೊಂಡಿದೆ. ಸದಾಹಸಿರನ್ನೇ ಧ್ಯಾನಿಸುವ ಇವರು ಅಗತ್ಯ ಇದ್ದಾಗ ಮಾತ್ರ ಶ್ರಮಿಕರನ್ನು ತೊಡಗಿಸುತ್ತಾರೆ.ಉಳಿದಂತೆ ಹೆಚ್ಚಿನ ಕೃಷಿ ಕೆಲಸಗಳನ್ನು ಮನೆಯವರೇ ಮಾಡಿಕೊಳ್ಳುತ್ತಾರೆ. ಹನಿ ನೀರಾವರಿ ಹಾಗೂ ಇಳುವರಿಹೆಚ್ಚಿಸುವ ತಾಂತ್ರಿಕತೆಗೆ ಒತ್ತು ನೀಡಿದ್ದಾರೆ.
2 ಬೆಳೆ ಪದ್ಧತಿ: ಮಳೆ ಆಶ್ರಯದಲ್ಲಿ ಕಾಫಿ ಏಕ ಬೆಳೆಯನ್ನು ಮಾತ್ರ ಬೆಳೆಯಬಹುದು. ಆದರೆ, ಹನಿ ನೀರಾವರಿ ಬಳಸಿ,ವಾರ್ಷಿಕವಾಗಿ 2 ಬೆಳೆ ತೆಗೆಯಬಹುದು. ಮಿಶ್ರ ಬೆಳೆಗಳು ನಷ್ಟ ತಪ್ಪಿಸಿ, ನಮ್ಮಕೈಹಿಡಿಯುತ್ತದೆ. ಶಿಕ್ಷಿತರು ಈಚೆಗೆ ಕೃಷಿಯತ್ತ ವಾಲುತ್ತಿದ್ದಾರೆ. ಜನರ ಸ್ವಾಸ್ಥ್ಯಕಾಪಾಡುವ ದೃಷ್ಟಿಯಲ್ಲಿ ಉತ್ತಮ ಫಸಲು ಪೂರೈಸುವ ಚಿತ್ತ ನಮ್ಮದಾಗಬೇಕು. ಕೊಟ್ಟಿಗೆಹಾಗೂ ಹಸಿರು ಗೊಬ್ಬರ ಬಳಕೆ ವ್ಯಾಪಕ ಆಗಬೇಕು. ಸೆಣಬು, ಡಾಯಂಚ, ಗ್ಲೀಡಿಸೀಡಿಯಾ, ಹುರುಳಿ, ಹಲಸಂದೆ ಬಿತ್ತಿ ಮಣ್ಣಿನ ಆರೋಗ್ಯ ಕಾಪಾಡಬೇಕು. ಈ ವಿಧಾನದಲ್ಲಿ ಬೆಳೆದ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಮತ್ತು ಬೇಡಿಕೆ ಇದೆ. ಪ್ರತಿ ಲೀಟರ್ ಜೇನಿಗೆ ರೂ ₹550 ಹಾಗೂ ಕಾಫಿಯನ್ನು ಮಾರುಕಟ್ಟೆ ದರಕ್ಕೆ ಮಾರಾಟ ಮಾಡುವೆ’ ಎಂದು ವಿಶ್ವನಾಥ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಕಾಫಿಗೆ ತಂಪು:ಭೂಮಿಗೆ ಸಾವಯವ ಅಂಶಗಳನ್ನು ಪೂರೈಸಿ ಅತ್ಯುತ್ತಮ ಕೃಷಿ ಮಾಡಬಹುದು. ಇದಕ್ಕೆ ಅಗತ್ಯತಾಳ್ಮೆ ಮತ್ತು ಸವಾಲು ಮೆಟ್ಟಿನಿಲ್ಲುವ ದೃಢತೆ ನಮ್ಮದಾಗಬೇಕು ಎಂದು ಹೇಳುತ್ತಾರೆ ವಿಶ್ವನಾಥ.
‘ಮೂರು ವರ್ಷಗಳಹಿಂದೆ ನೆಟ್ಟ ಅರೇಬಿಕಾ ಕಾಫಿ ಈ ಬಾರಿ ಕೊಯ್ಲಿಗೆ ಬಂದಿದೆ. ಕಾಫಿಗೆ 15 ರಿಂದ 25 ಡಿಗ್ರಿಉಷ್ಣಾಂಶ ಇರುವಂತೆ ವ್ಯವಸ್ಥೆ ಮಾಡಿದ್ದೇನೆ. ಎಲ್ಲ ಬೆಳೆಗಳಿಗೂ ಜೀವಾಮೃತ, ಕೋಳಿಗೊಬ್ಬರ, ಕೆಂಪು ಮಣ್ಣು ಮತ್ತು ಸಗಣಿ, ಗಂಜಲ ಬಳಕೆ ಮಾಡುತ್ತೇನೆ. ಹೂವಾಡುವ ಹಂತದಲ್ಲಿಜೇನು ಪರಾಗಸ್ಪರ್ಶ ನೆರವೇರಿಸುತ್ತವೆ. ಬೆಳೆಗಳಿಗೆ ಕೀಟನಾಶಕ ಬಳಕೆ ತಪ್ಪಿಸಿ,ಸಸ್ಯಜನ್ಯ ನಾಶಕ ಬಳಸಿ ರಾಸಾಯನಿಕ ಮುಕ್ತ ಸಾಗುವಳಿ ಸಾಧ್ಯ ಎಂಬುದನ್ನು ಪಕ್ಕಾಮಾಡಿದ್ದೇನೆ’ ಎಂದು ಆತ್ಮವಿಶ್ವಾಸದಿಂದ ವಿಶ್ವನಾಥ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.