ಭಾರತದ ಆಹಾರ ಸ್ವಾವಲಂಬನೆಗೆ ಬಾಬು ಜಗಜೀವನರಾಮ್ ಅವರು ಜಾರಿಗೊಳಿಸಿದ ‘ಹಸಿರು ಕ್ರಾಂತಿ’ ದೊಡ್ಡ ಅಡಿಪಾಯ ಹಾಕಿತು. ಈ ಯೋಜನೆಯ ಪ್ರೇರಣೆಯಿಂದ ದೇಶದ ಹಲವು ರಾಜ್ಯಗಳಲ್ಲಿ ನೀರಾವರಿ ಯೋಜನೆಗಳು ಅನುಷ್ಠಾನಗೊಂಡವು. ನದಿಯ ನೀರನ್ನು ಯಂತ್ರಗಳ ಸಹಾಯದಿಂದ ಹಿಮ್ಮುಖವಾಗಿ ಶೇಖರಿಸುವ ವಿಶ್ವದಲ್ಲೇ ಅಪರೂಪವೆನಿಸಿದ ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿದ ಕರ್ನಾಟಕದ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ರೈತರಿಗೂ ಬಾಬೂಜಿ ಯೋಜನೆಯೇ ಪ್ರೇರಣೆ ಎಂದರೆ ಅತಿಶಯೋಕ್ತಿಯಲ್ಲ.
1983ರಲ್ಲಿ ಜಮಖಂಡಿ ಹಾಗೂ ಅಥಣಿ ತಾಲ್ಲೂಕಿನ ರೈತರು ಕೃಷ್ಣಾ ತೀರ ರೈತ ಸಂಘ ಸ್ಥಾಪಿಸಿದರು. ಎಂಬತ್ತರ ದಶಕದಲ್ಲಿ ಕೃಷ್ಣೆಯು ಮಳೆಗಾಲದಲ್ಲಿ ಮೈದುಂಬಿ ಹರಿದು, ಬೇಸಿಗೆಯಲ್ಲಿ ಒಣಗುತ್ತಿತ್ತು. ಇದರ ಪರಿಣಾಮ ಇಲ್ಲಿನ ರೈತರು ವಾಣಿಜ್ಯ ಬೆಳೆಗಳಿಂದ ವಂಚಿತರಾಗುತ್ತಿದ್ದರು. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಪರಿತಪಿಸುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ರೈತರು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನತ್ತ ಮಹತ್ವದ ಹೆಜ್ಜೆ ಇಟ್ಟರು. ಎಲ್ಲಾ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಸರ್ಕಾರದಿಂದ ಅನುದಾನ ಪಡೆಯದೇ ಚಿಕ್ಕಪಡಸಲಗಿ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಲು ಕಾರ್ಯೋನ್ಮುಖರಾದರು. ಅನ್ನದಾತರ ಪರಿಶ್ರಮದ ಫಲವಾಗಿ ರೂಪುಗೊಂಡಿದ್ದೇ ‘ಶ್ರಮಬಿಂದು ಸಾಗರ’.
1989ರಲ್ಲಿ ರೈತರ ವಂತಿಗೆ ಹಾಗೂ ಶ್ರಮದಾನದಿಂದ 2.5 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಶ್ರಮಬಿಂದು ಸಾಗರ ಬ್ಯಾರೇಜ್ ಕಾಮಗಾರಿಯು ಕೇವಲ 11 ತಿಂಗಳಲ್ಲಿ ಪೂರ್ಣಗೊಂಡಿತು. ಆ ವೇಳೆ 35 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಯಿತು. ಜೊತೆಗೆ ಅಥಣಿ ತಾಲ್ಲೂಕಿನ 10 ಗ್ರಾಮಗಳು, ಜಮಖಂಡಿ ನಗರ ಸೇರಿದಂತೆ ಆ ತಾಲ್ಲೂಕಿನ 21 ಗ್ರಾಮಗಳ 4 ಲಕ್ಷ ಜನತೆಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಯಿತು. ರೈತರ ಶ್ರಮದಾನದಿಂದ ನಿರ್ಮಾಣವಾಗಿರುವ ಬ್ಯಾರೇಜ್ ಇಡೀ ದೇಶದ ಗಮನ ಸೆಳೆದಿತ್ತು. ದಿನಕಳೆದಂತೆ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿ ಪಾತ್ರದ ಜನರು ವಾಣಿಜ್ಯ ಬೆಳೆಗಳತ್ತ ಆಕರ್ಷಿತರಾಗಿ ಕಬ್ಬು ಬೆಳೆಯಲು ಮುಂದಾದರು.
ಇದರಿಂದ ಪ್ರತಿವರ್ಷ ಕಬ್ಬು ಬೆಳೆಯುವ ಕ್ಷೇತ್ರ ವಿಸ್ತಾರವಾಗುತ್ತ ಬೇಸಿಗೆಯಲ್ಲಿ ಬ್ಯಾರೇಜ್‍ನಲ್ಲಿ ಮತ್ತೆ ನೀರಿನ ಕೊರತೆ ಎದುರಾಯಿತು. ಇದರಿಂದ ರೈತರ ಕೋಟ್ಯಂತರ ಮೌಲ್ಯದ ಕಬ್ಬು ಒಣಗಿ ಹೋಗುತ್ತಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೆರೆಯ ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟೆಯ ನೀರಿಗೆ ಇಲ್ಲಿನ ರೈತರು ದುಡ್ಡು ಕೊಟ್ಟು ಅಂಗಲಾಚಿದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ನೀರು ಹರಿಯಲಿಲ್ಲ.
ಸಂಕಷ್ಟದಲ್ಲಿದ್ದ ರೈತರನ್ನು ಪಾರು ಮಾಡಲು ಅಂದಿನ ರೈತ ಮುಖಂಡರಾಗಿದ್ದ ದಿವಂಗತ ಸಿದ್ದು ನ್ಯಾಮಗೌಡ ಅವರು ರೈತರೊಂದಿಗೆ ಸಭೆ ಸೇರಿ ಸುದೀರ್ಘವಾಗಿ ಚರ್ಚಿಸಿದರು. ಕೊನೆಗೆ ನೀರಿನ ಪರ್ಯಾಯ ಮೂಲ ದೊರಕದಿದ್ದಾಗ ಬ್ಯಾರೇಜ್‍ನ ಕೆಳಭಾಗದಲ್ಲಿರುವ ಆಲಮಟ್ಟಿ ಅಣೆಕಟ್ಟೆಯ ಹಿನ್ನೀರನ್ನು ವಿದ್ಯುತ್‍ಚಾಲಿತ ಯಂತ್ರಗಳಿಂದ ಶ್ರಮಬಿಂದು ಸಾಗರ ಬ್ಯಾರೇಜ್‍ಗೆ ಹಿಮ್ಮುಖವಾಗಿ ಸಂಗ್ರಹಿಸುವ ಐತಿಹಾಸಿಕ ನಿರ್ಧಾರ ಕೈಗೊಂಡರು. ಇದಕ್ಕೆ ತಗುಲುವ ವಿದ್ಯುತ್ ಬಿಲ್ಲನ್ನು ರೈತರೇ ವಂತಿಗೆ ಮೂಲಕ ಸಂಗ್ರಹಿಸಲು ತೀರ್ಮಾನಿಸಿದರು.
ಇದಕ್ಕಾಗಿ ಹಲವಾರು ಎಂಜಿನಿಯರ್‌ಗಳಿಂದ ತಾಂತ್ರಿಕ ಮಾಹಿತಿ ಪಡೆದು ಪ್ರತಿವರ್ಷ 1ರಿಂದ 1.5 ಟಿಎಂಸಿ ಅಡಿ ನದಿಯ ನೀರನ್ನು ನದಿಯಲ್ಲಿಯೇ ಹಿಮ್ಮುಖವಾಗಿ ಸಂಗ್ರಹಿಸುವಂತಹ ಐತಿಹಾಸಿಕ ಪ್ರಯೋಗವನ್ನು ಸಾಕಾರಗೊಳಿಸಿ ದೇಶವನ್ನೇ ಚಿಕ್ಕಪಡಸಲಗಿಯತ್ತ ತಿರುಗಿ ನೋಡುವಂತೆ ಮಾಡಿದ್ದು ವಿಶೇಷ.
ಹಿಮ್ಮುಖವಾಗಿ ನೀರು ಸಂಗ್ರಹಿಸಿದ ನಂತರ ನದಿ ಪಾತ್ರದ ರೈತರೆಲ್ಲರೂ ಸ್ವಯಂಪ್ರೇರಿತರಾಗಿ ಶನಿವಾರ ಮತ್ತು ಭಾನುವಾರದಂದು ತಮ್ಮ ಕೃಷಿ ಪಂಪ್‌ಸೆಟ್‍ಗಳನ್ನು ಸ್ಥಗಿತಗೊಳಿಸಿ ನೀರಿನ ಲಭ್ಯತೆಯನ್ನು ಮತ್ತಷ್ಟು ದಿನಗಳ ಕಾಲ ಮುಂದುವರಿಸುತ್ತಾರೆ. ಸಮಯಾನುಸಾರ ಮಳೆ ಬೀಳದಿರುವ ಅಪಾಯದಿಂದ ಪಾರಾಗುತ್ತಾರೆ. ಹೀಗಾಗಿ ಇಲ್ಲಿ ಸದಾ ಹಚ್ಚಹಸಿರಿನ ನಂದನವನ ಕಂಗೊಳಿಸುತ್ತಿದೆ. ಸದ್ಯ ಬ್ಯಾರೇಜ್ 9.75 ಮೀಟರ್ ಎತ್ತರವಿದ್ದು, 4.3 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಬ್ಯಾರೇಜ್‍ನಿಂದ ಅಂದಾಜು ಒಂದು ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
ಈ ಭಾಗದಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುತ್ತಿವೆ. ಬೆಳೆದ ಕಬ್ಬು ಕಾರ್ಖಾನೆಗೆ ಪೂರೈಕೆಯಾಗಿ ರೈತರ ಜೀವನಮಟ್ಟದ ಸುಧಾರಣೆಗೂ ಬ್ಯಾರೇಜ್ ಸಹಕಾರಿಯಾಗಿದೆ.
ರೈತರೇ ಪ್ರತಿವರ್ಷ ನೀರು ಸಂಗ್ರಹಿಸುವ ಬೃಹತ್ ಮೋಟಾರ್ ವಿದ್ಯುತ್ ಬಿಲ್ ಮತ್ತು ಇನ್ನಿತರ ಖರ್ಚಿಗಾಗಿ ಕೋಟ್ಯಂತರ ರೂಪಾಯಿ ವಂತಿಗೆ ಸಂಗ್ರಹಿಸಿ ಪಾರದರ್ಶಕವಾಗಿ ವಿನಿಯೋಗಿಸುತ್ತಿರುವುದು ವಿಶೇಷ.
ದೇಶದಾದ್ಯಂತ ನದಿಗಳಿಗೆ ನೂರಾರು ಬ್ಯಾರೇಜ್‍ಗಳು ನಿರ್ಮಾಣವಾಗಿವೆ. ಬಹುತೇಕ ಬ್ಯಾರೇಜ್‍ಗಳು ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸುತ್ತಿವೆ. ಆದರೆ, ಶ್ರಮಬಿಂದು ಸಾಗರ ಇದಕ್ಕೆ ಅಪವಾದ.ದೇಶ -ವಿದೇಶಗಳಲ್ಲಿರುವ ರೈತರು ಮತ್ತು ತಂತ್ರಜ್ಞರು ಈ ಶ್ರಮಬಿಂದು ಸಾಗರದ ಚರಿತ್ರೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಸಿದ್ದು ನ್ಯಾಮಗೌಡರು ‘ಶ್ರಮಬಿಂದು ಸಾಗರ’ದ ರೂವಾರಿ. ‘ಬ್ಯಾರೇಜ್ ಹೀರೊ’ ಎಂದೇ ದೇಶದಾದ್ಯಂತ ಚಿರಪರಿಚಿತರಾಗಿದ್ದಾರೆ. ಹಾಗಾಗಿಯೇ, ಈ ಬ್ಯಾರೇಜ್‍ಗೆ ‘ಸಿದ್ದು ನ್ಯಾಮಗೌಡ ಶ್ರಮಬಿಂದು ಸಾಗರ’ ಎಂದು ಸರ್ಕಾರ ಹೆಸರಿಟ್ಟಿದೆ. ಆ ಮೂಲಕ ಈ ಭಾಗದ ರೈತರ ಬೆವರ ಹನಿಯ ಶಕ್ತಿಯನ್ನು ಹೆಚ್ಚಿಸಿದೆ. ರೈತರ ಹಿತಾಸಕ್ತಿಗಾಗಿ ನಿರ್ಮಾಣವಾಗಿರುವ ದೂರದೃಷ್ಟಿಯ ಶಾಶ್ವತ ಯೋಜನೆ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.