ನೈರುತ್ಯ ಮುಂಗಾರು ಒಂದು ತಿಂಗಳು ವಿಸ್ತರಣೆಯಾಗುವ ಸಾಧ್ಯತೆ ಇರುವುದರಿಂದ ಸೆಪ್ಟೆಂಬರ್ ತಿಂಗಳಲ್ಲಿ ಧಾರವಾಡದಲ್ಲಿ ನಡೆಯಬೇಕಿದ್ದ ಕೃಷಿ ಮೇಳವನ್ನು ಡಿಸೆಂಬರ್ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಸೆ.21ರಿಂದ 24ರವರೆಗೆ ಕೃಷಿ ಮೇಳ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಉತ್ತರ ಕರ್ನಾಟಕ ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಗದಗ ಜಿಲ್ಲೆಯಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಕೃಷಿ ಜಮೀನಿಗೆ ಸಾಕಷ್ಟು ಹಾನಿಯಾಗಿದೆ. ಜತೆಗೆ, ರೈತರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ಹಿಂಗಾರು ಹಂಗಾಮಿಗೆ ಅನುಕೂಲವಾಗುವಂತೆ ಮೇಳವನ್ನು ಆಯೋಜಿಸಲಾಗುವುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಬಿ.ಚೆಟ್ಟಿ ತಿಳಿಸಿದ್ದಾರೆ.
ಇದರ ಜತೆಗೆ ಹವಾಮಾನ ಇಲಾಖೆ ಕೂಡ ಈ ಭಾಗದಲ್ಲಿ ಸೆ.21ರಿಂದ ಭಾರೀ ಮಳೆಯಾಗಬಹುದೆಂಬ ಮುನ್ಸೂಚನೆ ನೀಡಿದೆ. ಅದರಂತೆಯೇ ಈ ಬಾರಿ ನೈರುತ್ಯ ಮುಂಗಾರು ಒಂದು ತಿಂಗಳು ಹೆಚ್ಚುವರಿಯಾಗಿ ಸುರಿಯುತ್ತದೆ. ಅಕ್ಟೋಬರ್‌ನಲ್ಲೂ ಮಳೆಯಾಗುವ ನಿರೀಕ್ಷೆ ಇರುವುದರಿಂದ, ಇಂಥ ಸಂದರ್ಭದಲ್ಲಿ ಕೃಷಿ ಮೇಳ ಆಯೋಜಿಸುವುದು ಸೂಕ್ತವಲ್ಲ ಎಂದು ಕೃಷಿ ಮೇಳದ ಸ್ಟಿಯರಿಂಗ್ ಕಮಿಟಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.