ಹನುಮಸಾಗರ: ಇಲ್ಲಿನ ಪ್ರಗತಿಪರ ರೈತ ಚಂದ್ರಶೇಖರ ಹಿರೇಮನಿ ಅವರಿಗೆ ಈ ಬಾರಿ ಪಪ್ಪಾಯ ಬೆಳೆ ಕೈಹಿಡಿದಿದ್ದು, ಅವರಿಗೆ ಸಾಕಷ್ಟು ಲಾಭ ತಂದುಕೊಟ್ಟಿದೆ.
ಮೂರು ಎಕರೆಯಲ್ಲಿ ಪಪ್ಪಾಯಿ ಬೆಳೆ ಇದ್ದು, ಪ್ರತಿ ಎಕರೆಗೆ 900 ಸಸಿಗಳಂತೆ ನರ್ಸರಿಯಿಂದ ಸುಮಾರು 2,700 ಸಸಿಗಳನ್ನು ತಂದು ಹೊಲದಲ್ಲಿ ನೆಟ್ಟಿದ್ದಾರೆ. ನಾಟಿಗೆ ಮುಂಚೆ ಭೂಮಿಗೆ ಸಾಕಷ್ಟು ಕೊಟ್ಟಿಗೆ ಗೊಬ್ಬರ ನೀಡಿ, ಮಣ್ಣು ಹದಗೊಳಿಸಿ ನಾಟಿಗೆ ಸಿದ್ಧಪಡಿಸಿಕೊಂಡು, 5-6 ಅಡಿ ಅಂತರದಲ್ಲಿ ಸಸಿ ನಾಟಿ ಮಾಡಿದ್ದಾರೆ.
ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರ ಬಳಕೆಯ ಬದಲು, ಸಾವಯವ ಗೊಬ್ಬರ ಉಪಯೋಗ ಮಾಡಿದ್ದರಿಂದ ಖರ್ಚಿನ ಪ್ರಮಾಣವೂ ಕಡಿಮೆಯಾಯಿತು ಹಾಗೂ ಗುಣಮಟ್ಟದ ಇಳುವರಿ ಬರಲು ಕಾರಣವಾಯಿತು ಎಂದು ಹೇಳುತ್ತಾರೆ.
ಸಸಿಗಳನ್ನು ನೆಟ್ಟ ಮೂರು ತಿಂಗಳಿಗೆ ಫಲ ಆರಂಭವಾಗಿದ್ದು, ಪ್ರತಿ ಗಿಡಗಳು 250-300 ಕಾಯಿಗಳನ್ನು ಹೊಂದಿವೆ. ಅಲ್ಲದೆ ಸಾಮಾನ್ಯವಾಗಿ ಪ್ರತಿ ಕಾಯಿಗಳು 5ರಿಂದ 12 ಕೆ.ಜಿ ತೂಕ ಹೊಂದಿವೆ. ಲಾಕಡೌನ್ ಸಮಯದಲ್ಲಿ ಕೆ.ಜಿಗೆ ₹18 ರಂತೆ 15 ಟನ್ ಹಣ್ಣುಗಳನ್ನು ಮಾರಾಟ ಮಾಡಿದ ಇವರು ಅನ್‍ಲಾಕ್ ಬಳಿಕ ₹15ಯಂತೆ ಮಾರಾಟ ಮಾಡಿದ್ದಾರೆ.
ಪ್ರಾರಂಭಿಕ ಹಂತದಿಂದ ಇಲ್ಲಿಯವರೆಗೆ ಪಪ್ಪಾಯ ಬೆಳೆಗೆ ₹1 ಲಕ್ಷ ಖರ್ಚು ವೆಚ್ಚ ಮಾಡಲಾಗಿದೆ. ಪ್ರತಿ ಎಕರೆಗೆ 40 ಟನ್‍ಗಿಂತಲೂ ಹೆಚ್ಚು ಇಳುವರಿ ಬರುವ ಸಾಧ್ಯತೆ ಇದೆ. ಈಗಾಗಲೇ 20 ಟನ್ ಫಸಲು ಮಾರಾಟ ಮಾಡಲಾಗಿದೆ. ಇನ್ನೂ 100 ಟನ್ ಇಳುವರಿ ಬರುವ ನಿರೀಕ್ಷೆ ಇದೆ ಎಂದು ಚಂದ್ರಶೇಖರ ಹೇಳಿದರು.
ಲಾಕಡೌನ್ ಸಮಯದಲ್ಲಿ ಪಪ್ಪಾಯ ಕೊಯ್ಲಿಗೆ ಬಂದಿತ್ತು. ಇದರಿಂದ ಎದೆಗುಂದದೆ ಸಾಕಷ್ಟು ವ್ಯಾಪಾರಿಗಳನ್ನು ಸಂಪರ್ಕಿಸಿದರು. ಸಾಮಾಜಿಕ ಜಾಲಾತಾಣದಲ್ಲಿ ತಾವು ಬೆಳೆದ ಬೆಳೆಯ ಮಾಹಿತಿ ಹಾಗೂ ಚಿತ್ರಗಳನ್ನು ಹಂಚಿಕೊಂಡಿದ್ದರಿಂದ ಹಲವು ಖರೀದಿದಾರರು ಇವರನ್ನು ಸಂಪರ್ಕಿಸಿದರು.
ಜಮೀನಿನಲ್ಲಿ ಗುಣಮಟ್ಟದ ಹಾಗೂ ಆಕರ್ಷಕ ಬೆಳೆ ಇದ್ದ ಕಾರಣವಾಗಿ ದೆಹಲಿ ಮಾರುಕಟ್ಟೆಯ ಖರೀದಿದಾರರು ಪ್ರತಿ ಕೆ.ಜಿಗೆ ₹18ರಂತೆ ಒಪ್ಪಂದ ಮಾಡಿಕೊಂಡು ತಾವೇ ಕೊಯ್ಲು ಮಾಡಿಕೊಂಡು ಹೋದರು. ಬಳಿಕ ಮುಂಬೈ ಮಾರುಕಟ್ಟೆಗೆ ಸಾಗಿಸುವ ವ್ಯಾಪಾರಸ್ಥರು ₹15ರಂತೆ ಖರೀದಿಸಿದ್ದಾರೆ. ಸದ್ಯ ಕೊಯ್ಲು ನಡೆಯುವ ಸಮಯವಾಗಿದ್ದು ಸ್ಥಳೀಯ ವ್ಯಾಪಾರಸ್ಥರೇ ಬೆಲೆ ನಿಗದಿ ಮಾಡಿಕೊಂಡಿದ್ದಾರೆ. ಹೀಗಾಗಿ ಯಾವ ಹಂತದಲ್ಲೂ ಇವರಿಗೆ ಮಾರುಕಟ್ಟೆಯ ಏರಿಳಿತದ ಬಿಸಿ ತಟ್ಟಲಿಲ್ಲ.
‘ಕೇವಲ ಆರು ತಿಂಗಳಲ್ಲೇ ಕೊಯ್ಲಿಗೆ ಸಿದ್ಧವಾಗುವ ತೈವಾನ್ ಪ್ರಬೇಧ ‘ರೆಡ್ ಲೇಡಿ’ ಪಪ್ಪಾಯ ತಳಿ ಈ ಭಾಗಕ್ಕೆ ಸೂಕ್ಷವಾದ ಬೆಳೆಯಾಗಿದೆ. ಇತರ ಸಾಮಾನ್ಯ ತಳಿಗಳಿಗಿಂತ ಇದಕ್ಕೆ ರೋಗ ಬಾಧೆ ಕಡಿಮೆ. ನೀರಾವರಿ ಸೌಕರ್ಯ ಇರುವ ಒಣಭೂಮಿಗೆ ಇದು ಲಾಭದಾಯಕ ಬೆಳೆ. ಕಾಯಿಗಳ ಸಂಖ್ಯೆ ಹೆಚ್ಚು. ತೂಕವೂ ಅಧಿಕ. ಹಣ್ಣಿನ ಒಳಭಾಗ ಕೆಂಪಾಗಿರುವುದರಿಂದ ರುಚಿಯೂ ಹೆಚ್ಚು’ ಎಂದು ಇಲ್ಲಿನ ತೋಟಗಾರಿಕೆ ಸಹಾಯಕ ನಿರ್ದೇಶಕ ಕಳಕನಗೌಡ ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.