ADVERTISEMENT

ಮಳೆ ನೀರಿನಲ್ಲರಳಿದ ಬಣ್ಣ ಬಣ್ಣದ ಗುಲಾಬಿ

ಸ್ವರೂಪಾನಂದ ಎಂ.ಕೊಟ್ಟೂರು
Published 27 ಜನವರಿ 2020, 19:30 IST
Last Updated 27 ಜನವರಿ 2020, 19:30 IST
ಮಾರುಕಟ್ಟೆಗೆ ಸಿದ್ಧವಾಗಿರುವ ಗುಲಾಬಿ ಬಂಚ್‌ಗಳು (ಚಿತ್ರಗಳು: ಲೇಖಕರವು)
ಮಾರುಕಟ್ಟೆಗೆ ಸಿದ್ಧವಾಗಿರುವ ಗುಲಾಬಿ ಬಂಚ್‌ಗಳು (ಚಿತ್ರಗಳು: ಲೇಖಕರವು)   
""

‘ಗ್ರೀನ್‌ ಹೌಸ್‌ ಮೇಲೆ ಸುರಿಯವ ಮಳೆ ನೀರಿನಿಂದಲೇ ಈ ಗುಲಾಬಿ ಬೆಳೆಯೋದು. ವರ್ಷದಲ್ಲಿ ನಾಲ್ಕೈದು ತಿಂಗಳು ಮಾತ್ರ ಅನಿವಾರ್ಯವಾಗಿ ಕೊಳವೆಬಾವಿ ನೀರು ಬಳಸುತ್ತೇನೆ..’

ಪಾಲಿಹೌಸ್‌ನಲ್ಲಿ ಕಿಲ ಕಿಲ ಎಂದು ನಗುತ್ತಿದ್ದ ಗುಲಾಬಿಗಳನ್ನು ತೋರಿಸುತ್ತಾ ಮಾತಿಗಿಳಿದರು ಯುವ ಕೃಷಿಕ ಗಿರೀಶ್. ಅವರು ನಿಂತಿದ್ದ ಮನೆಯ ಹಿಂಭಾಗದಲ್ಲೇ ಸಣ್ಣ ಕೆರೆ ಗಾತ್ರದ ಕೃಷಿ ಹೊಂಡವಿತ್ತು. ಹಸಿರು ಮನೆ ಮೇಲೆ ಬೀಳುವ ಮಳೆ ನೀರು ಹೊಂಡದಲ್ಲಿ ಸಂಗ್ರಹವಾಗುವಂತೆ ಪೈಪುಗಳನ್ನು ಜೋಡಿಸಿದ್ದರು. ‘ಸೂರಿನ ಮೇಲೆ ಬಿದ್ದ ಮಳೆ ನೀರು ತೊಟ್ಟಿಗೆ ಸೇರುತ್ತದೆ. ಅಲ್ಲಿಂದ ಮೋಟಾರ್‌ ಮೂಲಕ ನೀರು ಎತ್ತಿ,ಡ್ರಿಪ್‌ / ಸ್ಪ್ರಿಂಕ್ಲರ್ ಮೂಲಕ ಗುಲಾಬಿ ಗಿಡಗಳಿಗೆ ಹನಿಸುತ್ತೇನೆ. ಬೇಸಿಗೆ ಹೊರತುಪಡಿಸಿ,ಉಳಿದ ದಿನಗಳಲ್ಲಿ ಈ ಮಳೆ ನೀರಿನಿಂದಲೇ ಗುಲಾಬಿ ಅರಳುತ್ತವೆ’ಎಂದರು ಗಿರೀಶ್.

ಗ್ರೀನ್‌ಹೌಸ್‌ನಲ್ಲಿ ಗುಲಾಬಿ ಕೃಷಿ ಮಾಡುವವರು ಸಾಮಾನ್ಯವಾಗಿ ಎಲ್ಲ ಕಾಲದಲ್ಲೂ ಕೊಳವೆಬಾವಿ ನೀರನ್ನೇ ಅವಲಂಬಿಸುತ್ತಾರೆ. ಆದರೆ, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿ ತಾಂಡದ ಎಂ.ಆರ್‌.ಗಿರೀಶ್ ಅವರು ತಮ್ಮ ಮುಕ್ಕಾಲು ಭಾಗದ ಗುಲಾಬಿ ಕೃಷಿಗೆ ಮಳೆ ನೀರನ್ನೇ ಆಶ್ರಯಿಸಿದ್ದಾರೆ. ಇವರದ್ದು ಒಟ್ಟು ಆರು ಗ್ರೀನ್‌ಹೌಸ್‍ಗಳಿವೆ. ಪ್ರತಿ ‘ಹೌಸ್‌’ ಮೇಲೆ ಬೀಳುವ ಮಳೆ ನೀರು ಹೊಂಡಕ್ಕೆ ಬಂದು ಸೇರುವಂತೆ ವ್ಯವಸ್ಥೆ ಮಾಡಿದ್ದಾರೆ.

ADVERTISEMENT

ಗ್ರೀನ್‌ಹೌಸ್‌ಗಳಲ್ಲಿ ಒಟ್ಟು ಎರಡು ಲಕ್ಷ ಗುಲಾಬಿ ಗಿಡಗಳಿವೆ. ಎಲ್ಲವಕ್ಕೂ ಹನಿ ನಿರಾವರಿ ಪದ್ಧತಿ ಅಳವಡಿಸಿದ್ದಾರೆ. ಗಿಡಗಳ ಬೇರುಗಳು ಇಳಿದಿರುವ ಆಳಕ್ಕೆ ನೀರು ಇಳಿಯುವಂತೆ (ಬೆಳೆಗಳಿಗೆ ಅಗತ್ಯವಿದ್ದಷ್ಟು,ಗಿಡಗಳ ಬೇರಿಗೆ ನೇರವಾಗಿ ನೀರು ಪೂರೈಸುವುದು) ವ್ಯವಸ್ಥೆ ಮಾಡಿದ್ದಾರೆ.‘ಇದರಿಂದ ನೀರಿನ ಮಿತ ಬಳಕೆಯಾಗುತ್ತಿದೆ. ಖರ್ಚು,ಸಮಯವೂ ಉಳಿತಾಯವಾಗಿದೆ. ಫಸಲಿನ ಇಳುವರಿ ಹೆಚ್ಚಳಕ್ಕೂ ಸಹಕಾರವಾಗಿದೆ’ಎನ್ನುತ್ತಾರೆ ಅವರು.

ಮಳೆ ನೀರಿಗೆ ಆದ್ಯತೆ..

ಕೂಡ್ಲಿಗಿ ಭಾಗದಲ್ಲಿ ವಾರ್ಷಿಕ ಸರಾಸರಿ600ಮಿ.ಮೀ ಮಳೆ ಬೀಳುತ್ತದೆ.ತಮ್ಮ ಜಮೀನಿನ ಮೇಲೆ ಸುರಿಯುವ ಅಷ್ಟೂ ಮಳೆ ನೀರನ್ನೂ ಸದ್ಭಳಕೆ ಮಾಡಿಕೊಳ್ಳುವುದಕ್ಕಾಗಿ ಸಣ್ಣ ಕೆರೆಯಂತಹ ಕೃಷಿ ಹೊಂಡ ತೆಗೆಸಿದರು. ಆರು ಗ್ರೀನ್‌ಹೌಸ್‌ಗಳ ಮೇಲೆ ಸುರಿಯುವ ಹನಿ ಹನಿ ಮಳೆ ನೀರು ಈ ಹೊಂಡ ಸೇರುವಂತೆ ಪೈಪುಗಳನ್ನು ಅಳವಡಿಸಿದರು. ಒಂದು ಗಂಟೆ ಭರ್ಜರಿ ಮಳೆ ಸುರಿದರೆ ಸಾಕು ಹೊಂಡ ತುಂಬುತ್ತದೆ. ಈ ಹೊಂಡ ಒಂದು ಬಾರಿ ತುಂಬಿದರೆ ಒಂದು ಕೋಟಿ ಲೀಟರ್‌ಗೂ ಹೆಚ್ಚು ನೀರು ಸಂಗ್ರಹವಾಗುತ್ತದೆ.‘ಅರ್ಧ ಗಂಟೆ ಸುರಿದ ಉತ್ತಮ ಮಳೆಗೆಒಂದು ಗ್ರೀನ್‌ಹೌಸ್‌ನಿಂದ ಮೂರು ಲಕ್ಷ ಲೀಟರ್‌ ನೀರು ಸಂಗ್ರಹವಾಗುತ್ತದೆ. ಒಮ್ಮೆ ಹೊಂಡ ತುಂಬಿದರೆ,ಕನಿಷ್ಠ ಆರರಿಂದ ಎಂಟು ತಿಂಗಳು ಗುಲಾಬಿ ಕೃಷಿಗೆ ನೀರು ಸಾಕಾಗುತ್ತದೆ’ ಎನ್ನುತ್ತಾರೆ ಗಿರೀಶ್.

ಗಿರೀಶ್ ಮಳೆ ನೀರು ಸಂಗ್ರಹದ ಬೆನ್ನುಹತ್ತಲು ಒಂದು ಕಾರಣವೂ ಇತ್ತು.ಈ ಹಿಂದೆ ಇವರ ತಂದೆ ನೀರಿನ ಅಭಾವದಿಂದಾಗಿ ಹಣ್ಣಿನ ಬೆಳೆ ಉಳಿಸಿಕೊಳ್ಳಲು ಲಕ್ಷಾಂತರ ಹಣ ಖರ್ಚು ಮಾಡಿ40ಕೊಳವೆಬಾವಿ ಕೊರೆಸಿ ನಷ್ಟ ಅನುಭವಿಸಿದ್ದರು.

ನೀರಿನ ಸಮಸ್ಯೆಯಿಂದಾಗಿ ಸಪೋಟ,ಮೋಸಂಬಿ ನಾಶವಾಗಿತ್ತು. ಇದನ್ನು ಅರಿತಿದ್ದ ಗಿರೀಶ್,ಅಂತರ್ಜಲದ ಮೇಲಿನ ಅವಲಂಬನೆ ಬಿಟ್ಟು,ಮಳೆ ನೀರ ಮೇಲೆ ನಂಬಿಕೆ ಇಟ್ಟರು. ಆ ನ‌ಂಬಿಕೆ ಹುಸಿಯಾಗಲಿಲ್ಲ.

ಒಮ್ಮೊಮ್ಮೆ ಬೇಸಿಗೆಯಲ್ಲಿ ಹಾಗೂ ಮಳೆ ವ್ಯತ್ಯಾಸವಾದರೆ ನೆರವಿಗಿರಲಿ ಎಂಬ ಮುಂಜಾಗ್ರತೆಯಾಗಿ ಊರಿನ ಪಕ್ಕದಲ್ಲಿರುವ ಜಮೀನಿನಲ್ಲಿ ಎರಡು ಕೊಳವೆಬಾವಿಗಳನ್ನು ಕೊರೆಸಿದ್ದಾರೆ. ಅದರಲ್ಲಿ ಒಂದನ್ನು ತಮ್ಮ ಹೂವಿನ ತೋಟಕ್ಕೆ ಬಳಸುತ್ತಾರೆ. ಇನ್ನೊಂದು ಕೊಳವೆಬಾವಿಯನ್ನು ಊರಿನ ಉಪಯೋಗಕ್ಕೆ ಬಳಸುತ್ತಾರೆ. ಆದರೆ,ಕಳೆದ ಮೂರು ವರ್ಷಗಳಲ್ಲಿ ಗಿರೀಶ್ ಆರೇಳು ತಿಂಗಳಷ್ಟೇ ಕೊಳವೆಬಾವಿ ನೀರನ್ನು ಗುಲಾಬಿ ಕೃಷಿಗೆ ಬಳಸಿದ್ದಾರಂತೆ!.

ಹನಿ ಹನಿ ನೀರ ಹಮ್ಮೀರ..

ಮಳೆ ನೀರಾಗಲಿ,ಕೊಳವೆಬಾವಿಗಳ ನೀರಾಗಲಿ,ಬೆಳೆಗಳಿಗೆ ನೀರು ಕೊಡುವುದರಲ್ಲಿ ಗಿರೀಶ್ ತುಂಬಾ ಶಿಸ್ತನ್ನು ಅನುಸರಿಸುತ್ತಾರೆ.ಮಳೆಗಾಲದಲ್ಲಂತೂ ಗಿಡವೊಂದಕ್ಕೆ ಪ್ರತಿ ದಿನ300ಮಿಲೀ ಲೀಟರ್‌ ಮತ್ತು ಬೇಸಿಗೆಯಲ್ಲಿ ಮಾತ್ರ700ರಿಂದ750ಮಿಲೀ ಲೀಟರ್‌ ನೀರು ಉಣಿಸುತ್ತಾರೆ. ಗಿಡಗಳಿಗೆ ಮುಂಜಾನೆಯೇ ನೀರು ಕೊಡುವ ಪದ್ಧತಿ ರೂಢಿಸಿಕೊಂಡಿದ್ದಾರೆ.‘ವಾತಾವರಣ ತಂಪಿದ್ದಾಗನೀರು ಕೊಡುವುದರಿಂದ ಗಿಡಗಳು ಭೂಮಿಯಿಂದ ಪೋಷಕಾಂಶಗಳನ್ನು ಪಡೆದುಕೊಂಡು ಸೂರ್ಯನ ಬೆಳಕಿನಲ್ಲಿ ಅತಿ ಹೆಚ್ಚು ಆಹಾರ ಉತ್ಪಾದನೆ ಮಾಡಿಕೊಳ್ಳುತ್ತವೆ. ಇದರಿಂದ ಇಳುವರಿ ಹೆಚ್ಚಾಗಿ ಬರುತ್ತದೆ’ಎನ್ನುತ್ತಾರೆ ಗಿರೀಶ್. ಈ ತರಹದ ಮಿತ ನೀರಾವರಿ ವಿಧಾನ ಅನುಸರಿಸುತ್ತಿರುವುದರಿಂದ ನೀರಿನ ಜತೆಗೆ ವಿದ್ಯುತ್,ಗೊಬ್ಬರ,ಸಮಯವೂ ಉಳಿತಾಯವಾಗುತ್ತಿದೆಯಂತೆ.

ತೇವಾಂಶ ರಕ್ಷಣೆಗೆ ಆದ್ಯತೆ

ಬೆಳೆಗಳಿಗೆ ಮಿತ ನೀರು ಬಳಸುವುದು ಮಾತ್ರವಲ್ಲ,ಪೂರೈಸಿದ ನೀರುಗ್ರೀನ್‍ಹೌಸ್‍ ನೆಲದಲ್ಲೇ ದೀರ್ಘಕಾಲ ತೇವಾಂಶವಾಗಿ ಉಳಿಯಬೇಕು. ಈ ಉದ್ದೇಶದಿಂದ ವಾತಾವರಣದಲ್ಲಿ ತಾಪಮಾನ ಹೆಚ್ಚಿದ್ದಾಗ ಗ್ರೀನ್‌ಹೌಸ್ ಒಳಗೆಐದು ನಿಮಿಷಗಳ ಕಾಲ ಫಾಗರ್ಸ್ ಮತ್ತು ಮಿಸ್ಟ್‌‌ (ವಾತಾವರಣವನ್ನು ತಂಪಾಗಿಸುವ ಯಂತ್ರಗಳು) ಸ್ವಯಂ-ಚಾಲಿತವಾಗಿ ಆನ್‌ ಆಗುವಂತಹ ಆಟೊಮೇಟೆಡ್ ವ್ಯವಸ್ಥೆ ಮಾಡಿದ್ದಾರೆ. ಫಾಗಿಂಗ್ ಮೂಲಕ ಗ್ರೀನ್‌ಹೌಸ್ ವಾತಾವರಣದಲ್ಲಿ ಅಗತ್ಯ ತೇವಾಂಶವನ್ನು ಕಾಪಿಡುತ್ತಾರೆ. ಮಿಸ್ಟಿಂಗ್ ಮೂಲಕ ಭೂಮಿಯ ಮೇಲ್ಭಾಗದ ಮಣ್ಣಿನ ತೇವವನ್ನು ರಕ್ಷಿಸುತ್ತಾರೆ. ‘ಇದರಿಂದ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ವೃದ್ಧಿಯಾಗಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ’ ಎಂಬುದು ಗಿರೀಶ್ ಅವರ ಅಭಿಪ್ರಾಯ.

ಅಂತರ್ಜಲ ಕೊರತೆಯಿಂದ ಸಂಕಟ ಎದುರಿಸುವ ಮೂಲಕ ಪಾಠ ಕಲಿತಿದ್ದ ಗಿರೀಶ್ಮಳೆ ನೀರು ಸಂಗ್ರಹ ಹಾಗೂಸದ್ಭಳಕೆಗೆ ಆದ್ಯತೆ ನೀಡಿದ್ದಾರೆ. ಜತೆಗೆ ಗ್ರೀನ್‌ ಹೌಸ್‌ಗಳಲ್ಲಿ ತೇವಾಂಶ ರಕ್ಷಣೆ ಮಾಡುತ್ತಾ,ಮಿತ ನೀರಿನಲ್ಲೇ ಉತ್ತಮ ಗುಲಾಬಿ ಫಸಲು ಪಡೆಯುತ್ತಿದ್ದಾರೆ.

ಪಾಲಿಹೌಸ್‌ನ ಗುಲಾಬಿ ತೋಟದಲ್ಲಿ ಗಿರೀಶ್

ಕಂಪನಿಯಿಂದ ಕೃಷಿಯತ್ತ..

ವಿದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಗುಲಾಬಿ ಬಳಸುತ್ತಿದ್ದರು. ಆ ಟ್ರೆಂಡ್ ಭಾರತದಲ್ಲೂ ಮುಂದುವರಿದಿತ್ತು. ಈ ವಿದ್ಯಮಾನಗಳೇ ಗಿರೀಶ್ ಅವರನ್ನು ಗುಲಾಬಿ ಕೃಷಿ ಮಾಡಲು ಪ್ರೇರೇಪಿಸಿತು. ಅವರು ಲಕ್ಷ ಲಕ್ಷ ಸಂಬಳ ನೀಡುತ್ತಿದ್ದ ಆಟೊಮೊಬೈಲ್ ಉದ್ದಿಮೆಯನ್ನು ಬಿಟ್ಟು,ಗುಲಾಬಿ ಕೃಷಿಗೆ ಮುಂದಾದರು. ಸದ್ಯ ಅವರ ಗ್ರೀನ್‌ಹೌಸ್‌ಗಳಲ್ಲಿಕೆಂಪು ಬಣ್ಣದ ತಾಜ್‌ಮಹಲ್,ಹಳದಿ ಬಣ್ಣದ ಗೋಲ್ಡ್ ಸ್ಟ್ರೈಕ್,ಗುಲಾಬಿ ಬಣ್ಣದ ಹಾಟ್ ಶ್ಯಾಟ್,ಲೈಟ್ ಪಿಂಕ್ ರಿವೈವಲ್‌ನಂತಹ ಆರೇಳು ವಿಧದ ಗುಲಾಬಿ ತಳಿಗಳಿವೆ. ನಿತ್ಯ ಅಂದಾಜು8ಸಾವಿರ ಹೂವು ಬೆಳೆಯುತ್ತಾರೆ. ವರ್ಷಕ್ಕೆ ಗರಿಷ್ಠ₹40ಲಕ್ಷದವರೆಗೆ ವಹಿವಾಟು ನಡೆಸುತ್ತಾರೆ ಗಿರೀಶ್ .

‘ಗುಲಾಬಿ ಕೃಷಿ ಸುಲಭವಲ್ಲ.ಕೆಲವೊಮ್ಮೆ ಹೂವಿನ ದರ ಕುಸಿದಾಗ,ರೋಗ,ಕೀಟ ಬಾಧೆಗೆ ಕೊಂಚ ನಷ್ಟ ಆಗುತ್ತೆ. ಕಳೆದ ಮೂರು ವರ್ಷಗಳಲ್ಲಿ ಕೃತಕ ಹೂವುಗಳು,ಅಲಂಕಾರಿಕ ವಸ್ತುಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿವೆ. ಪರಿಣಾಮ ಗುಲಾಬಿಗೆ ಬೇಡಿಕೆ ಕಡಿಮೆಯಾಗಿದೆ. ವರ್ಷ ವರ್ಷಕ್ಕೂ ಬೆಲೆ ಕ್ಷೀಣಿಸುತ್ತಿದೆ.2022ರ ವೇಳೆಗೆ ರೈತರ ಆದಾಯ ಹೆಚ್ಚು ಮಾಡುತ್ತೇವೆ ಎನ್ನುವ ಕೇಂದ್ರ ಸರ್ಕಾರ,ಈ ಪ್ಲಾಸ್ಟಿಕ್ ಹೂವುಗಳ ಮೇಲೆ ನಿಷೇಧ ಹೇರಿದರೆ ಅನುಕೂಲ ಆಗುತ್ತೆ’ಎನ್ನುತ್ತಾರೆ ಗಿರೀಶ್.

ಗುಲಾಬಿ ಕೃಷಿ – ಮಳೆ ನೀರು ಬಳಕೆ ಕುರಿತಮಾಹಿತಿಗಾಗಿ ಗಿರೀಶ್ ಅವರ ಸಂಪರ್ಕಕ್ಕೆ:8618901776

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.