ಹುಬ್ಬಳ್ಳಿ: ಕಣ್ಣು ಹಾಯಿಸಿದಷ್ಟು ದೂರ ಬಣ್ಣ ಬಣ್ಣದ ಹೂಗಳು, ಹೆಜ್ಜೆ ಇಡುತ್ತಿದ್ದಂತೆ ಸ್ವಾಗತಿಸುವ ವಿವಿಧ ಹೂಗಳ ಪಕಳೆಗಳಿಂದ ಕೂಡಿದ ಮಧ್ಯದಲ್ಲಿ ನೇಗಿಲು ಹಿಡಿದ ರೈತ ಇರುವ ರಂಗೋಲಿ, ವಧು–ವರರಂತೆ ಸಿಂಗಾರಗೊಂಡ ರೈತ ಹಾಗೂ ರೈತ ಮಹಿಳೆಯ ಉದ್ಘಾಟಕ ದೀಪಗಳು. ಇದನ್ನೆಲ್ಲಾ ಕಣ್ತುಂಬಿಕೊಂಡಾಗ ಇದು ಹೂವಿನ ಲೋಕವೇ...ಎಂದೆನಿಸದೇ ಇರದು.
ಈ ದೃಶ್ಯ ಕಂಡು ಬಂದಿದ್ದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರದಿಂದ ಆರಂಭಗೊಂಡಿರುವ ಕೃಷಿ ಮೇಳದ ಫಲಪುಷ್ಪ ಪ್ರದರ್ಶನದಲ್ಲಿ.
ಗುಲಾಬಿ, ಚೆಂಡು ಹೂ, ಆರ್ಕಿಡ್, ಜರ್ಬರಾ, ಸೇವಂತಿಗೆ, ಆಲಸ್ಟ್ರೊಮೆರಿಯಾ, ಹೈಪರಿಕಮ್, ಲಿಮೋನಿಯಂ, ಗ್ಲಾಡಿಯೋಲಸ್, ಹೈಬ್ರಿಡ್ ಜಿಪ್ಸೊಫಿಲಾ, ನೀಲಿ ಡೈಸಿ ಸೇರಿದಂತೆ ನೂರಾರು ಬಗೆಯ ಹೂಗಳು ನೋಡುಗರ ಮನಸೂರೆಗೊಂಡವು. ಸಾರ್ವಜನಿಕರು, ವಿದ್ಯಾರ್ಥಿಗಳು ಹೂವಿನ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಉತ್ತರ ಕರ್ನಾಟಕದ ಜಿಲ್ಲೆಗಳಾದ ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಹಾಗೂ ಕೃಷಿ ವಿವಿ ತೋಟಗಾರಿಕೆ ವಿಭಾಗದಿಂದ ಬೆಳೆದ ಹೂಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಈ ಬಾರಿ ವಿಶೇಷವಾಗಿ ತೋಟಗಾರಿಕೆ ವಿಭಾಗದಿಂದ ಸಂಶೋಧಿಸಿದ 37 ವಿಧದ ಗುಲಾಬಿ ಹೂಗಳನ್ನು ಪ್ರದರ್ಶನಕ್ಕಿಡಲಾಗಿದೆ ಎಂದು ಫಲಪುಷ್ಪ ಪ್ರದರ್ಶನ ಕಮಿಟಿ ಚೇರ್ಮನ್ ಡಾ.ಎಸ್.ಜಿ.ಅಂಗಡಿ ಮಾಹಿತಿ ನೀಡಿದರು.
ಗಮನಸೆಳೆದ ಫ್ರೂಟ್‌ಆರ್ಟ್:
ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತಿದ ಸ್ವಾತಂತ್ರ್ಯ ಹೋರಾಟಗಾರರು, ವಚನಕಾರರು, ಯಕ್ಷಗಾನ, ಮಹಾತ್ಮರು, ಕವಿಗಳು ಹಾಗೂ ಶಿವಲಿಂಗ, ಗಣೇಶನ ಹಾಗೂ ನಟ ಪುನೀತ್ ರಾಜ್‌ಕುಮಾರ್ ಅವರ ಕಲಾಕೃತಿಗಳು ಗಮನ ಸೆಳೆದವು. ಕುಂಬಳಕಾಯಿಯಿಂದ ತಯಾರಿಸಿದ ಮೀನುಗಳು, ಬದನೆಕಾಯಿ, ಕ್ಯಾರೆಟ್ ಹಾಗೂ ಹೂಕೋಸಿನಿಂದ ತಯಾರಿಸಿದ ಹೂಗಳು, ನವಿಲು ವಿವಿಧ ಕಲಾಕೃತಿಗಳು ಜನರನ್ನು ಆಕರ್ಷಿಸಿದವು.
ಔಷಧ ಮತ್ತು ಸುಗಂಧ ಸಸ್ಯಗಳು: ಹಿಪ್ಪಲಿ, ಮಧುನಾಶಿನಿ, ನೆಲನೆಲ್ಲಿ, ಇನ್ಸುಲಿನ್ ಗಿಡಿ, ನೆಲಬೇವು, ಜಪಾನೀ ಪುದೀನ, ಕಚೂರ, ಬಿಳಿ ಚಿತ್ರಮೂಲ, ಜಲಬ್ರಾಹ್ಮಿ, ಶಂಕಪುಷ್ಟಿ ಸೇರಿದಂತೆ ವಿವಿಧ ಸಸಿಗಳು ಸಹ ಪ್ರದರ್ಶನದಲ್ಲಿದ್ದವು. ಇನ್ನು ಗೋವಿನ ಜೋಳದ ರವದಿಯಿಂದ ತಯಾರಿಸಿದ ವಿವಿಧ ಕಲಾಕೃತಿಗಳು ಹಾಗೂ ಪಿಸ್ತಾ ಬೀಜದಿಂದ ತಯಾರಿಸಿದ ವಿವಿಧ ಚಿತ್ರಗಳು ನೋಡುಗರ ಗಮನ ಸೆಳೆದವು.
ಫಲಪುಷ್ಪ ಪ್ರದರ್ಶನದ ಜೊತೆಗೆ ವಿವಿಧ ರೀತಿಯ ಗೆಡ್ಡೆ ಗೆಣಸುಗಳನ್ನು ಹಾಗೂ ಟೆಂಗಿನಕಾಯಿ ಚಿಪ್ಪಿನಿಂದ ತಯಾರಿಸಿದ ಕಲಾಕೃತಿಗಳನ್ನು ಸಹ ಪ್ರದರ್ಶನದಲ್ಲಿ ಕಾಣಬಹುದು. ಟೆಂಗಿನಕಾಯಿ ಕಲಾಕೃತಿಗಳು ಮಾರಾಟಕ್ಕೂ ಲಭ್ಯವಿದ್ದು ಆಸಕ್ತರು ಖರೀದಿಯಲ್ಲಿ ತೊಡಗಿದ್ದರು. ಆಸಕ್ತರು ಒಮ್ಮೆ ಬಿಡುವು ಮಾಡಿಕೊಂಡು ಈ ಹೂವಿನ ಲೋಕವನ್ನು ಕಣ್ತುಂಬಿಕೊಳ್ಳಬಹುದು.
ಕಾಶ್ಮೀರದಿಂದ ಟುಲಿಪ್ ತರಿಸಿರುವುದು ಈ ಬಾರಿಯ ವಿಶೇಷ. ಹಣ್ಣಿನಲ್ಲಿ ಆ್ಯಪಲ್ ಬಾರಿ ಪರಿಚಯಿಸುತ್ತಿದ್ದೇವೆ.
ಡಾ.ಎಸ್.ಜಿ.ಅಂಗಡಿ, ಚೇರ್ಮನ್
ಫಲಪುಷ್ಪ ಪ್ರದರ್ಶನ ಕಮಿಟಿ, ಕೃಷಿ ವಿ ವಿ, ಧಾರವಾಡ
12 ವರ್ಷದಿಂದ 20 ವರ್ಷದ ಬೊನ್ಸಾಯಿ ಗಿಡಗಳನ್ನು ಪ್ರದರ್ಶನಕ್ಕಿಡಲಾಗಿದೆ. ಮಿನಿ ಚೇರ್ ಪ್ಲಾಂಟ್ ವಿಶೇಷವಾಗಿದೆ.
ವಿಶ್ವನಾಥ ಯಲಬುರ್ಗಿ, ಸರ್ಕಾರಿ ಐಟಿಐ ಕಾಲೇಜು, ಹುಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.