ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಮೇಣೆಧಾಳ ಗ್ರಾಮ. ತಾವರಗೇರದಿಂದ ಗಂಗಾವತಿ ಕಡೆಗೆ ಐದು ಕಿಮೀ ಸಾಗಿದರೆ ಈ ಗ್ರಾಮ ಸಿಗುತ್ತದೆ. ಅಲ್ಲಿಂದ ಎರಡು ಕಿಮೀ ಕ್ರಮಿಸಿದರೆ ನಲವತ್ತು ಎಕರೆಗಳಷ್ಟು ಹಸಿರಿನ ಹಾಸು. ಅದೇ ‘ಮಹಾಮನೆ ಪ್ರಾಕೃತಿಕ ಧಾಮ’. ಸಂತೋಷ್ ಎಸ್. ನಾಡಗೌಡರ್ ಎಂಬ ವಿದ್ಯಾವಂತ ಯುವ ಕೃಷಿಕನ ಕಠಿಣ ಪರಿಶ್ರಮದಿಂದ ನಿರ್ಮಾಣವಾದ ಕೃಷಿ ಲೋಕ ಇದು.
ಒಟ್ಟು 40 ಎಕರೆಯ ಜಮೀನು. ಅದರಲ್ಲಿ 25 ಎಕರೆಯಲ್ಲಿ ವಿವಿಧ ಹಣ್ಣಿನ ಗಿಡಗಳಿವೆ. ಪ್ರಮುಖವಾಗಿ ದಾಳಿಂಬೆ, ಕಿನೋ ಹಣ್ಣಿನ ಗಿಡಗಳಿವೆ. ತೋಟದ ಮುಖ್ಯದ್ವಾರದಲ್ಲಿ ನಾಲ್ಕು ಎಕರೆಯಲ್ಲಿ ದಾಳಿಂಬೆ ಬೆಳೆ ಇದೆ. ಇನ್ನೊಂದು ಬದಿಯಲ್ಲಿ ಪೇರಲ, ಮಾವಿನ ಗಿಡಗಳ ಮಿಶ್ರ ಬೆಳೆ ಕಾಣುತ್ತದೆ. ನಡುನಡುವೆ ಅಲ್ಲಲ್ಲಿ ತೇಗದ ಮರಗಳು ಹಸಿರುಟ್ಟು ನಳನಳಿಸುತ್ತಿವೆ. ಮತ್ತೊಂದು ಬದಿಯಲ್ಲಿ ನಿಂಬೆ, ಜಂಬುನೇರಳೆ, ಚಿಕ್ಕು ಹಣ್ಣಿನ ಗಿಡಗಳ ಜೊತೆಜೊತೆಗೆ ಹೆಬ್ಬೇವಿನ ಗಿಡಗಳಿವೆ. ಪೇರಲ ಗಿಡಗಳೊಂದಿಗೆ ತೇಗದ ಗಿಡಗಳು ಹಸಿರನ್ನು ಹೊದ್ದು ಆಕರ್ಷಕವಾಗಿ ಕಾಣುತ್ತಿವೆ. ಕಿನೋ, ಹಬ್ಬೇವು ಮತ್ತು ಶ್ರೀಗಂಧದ ಗಿಡಗಳೂ ಸೊಂಪಾಗಿ ಬೆಳೆದಿವೆ. ತೋಟದಲ್ಲಿ ಹಕ್ಕಿಗಳ ಚಿಲಿಪಿಲಿಗಾನ, ಕಲರವ, ಜೇನ್ನೊಣಗಳ ಝೇಂಕಾರ, ನವಿಲುಗಳ ಕೂಗು. ಬೇಸಿಗೆಯಲ್ಲಿ ಜಮೀನಿನಲ್ಲಿ ಸುತ್ತಾಡುತ್ತಿದ್ದರೂ, ತಂಪನೆಯ ವಾತಾವರಣದ ಅನುಭವ.
ಓದಿನಿಂದ ಕೃಷಿಯತ್ತ...
ಕುಷ್ಟಗಿ ತಾಲ್ಲೂಕಿನ ತಾವರಗೇರದ ಸಂತೋಷ್ ನಾಡಗೌಡರ್ ಓದಿದ್ದು ಬಿಸಿಎ, ಎಂಬಿಎ. ಹದಿನಾಲ್ಕು ವರ್ಷಗಳ ಹಿಂದೆ ಕೃಷಿ ಭೂಮಿ ಹೆಜ್ಜೆ ಇಟ್ಟರು. ಆದರೆ, ಆ ಜಮೀನು ಮುಳ್ಳು ಕಂಟಿಗಳು, ಕಲ್ಲು ಮಿಶ್ರಿತ ಕೆಂಪು ಮಣ್ಣಿನ ಭೂಮಿಯಾಗಿತ್ತು. ಮಣ್ಣೇನೊ ಹಣ್ಣಿನ ಗಿಡ ಬೆಳೆಯಲು ಸೂಕ್ತವಾಗಿತ್ತು. ಆದರೆ, ಮುಳ್ಳು ಕಂಟಿ ತೆಗೆದು ಭೂಮಿ ಸಮತಟ್ಟು ಮಾಡುವುದು ಸಾಹಸ ಕೆಲಸವಾಗಿತ್ತು. ಭೂಮಿ ಹಸನು ಮಾಡಿಸಲು ಆರಂಭಿಸಿದಾಗ, ‘ಈ ಹುಡುಗ ಇನ್ನೂ ಸುಟ್ಟಿಲ್ಲ, ಬೆಂದಿಲ್ಲ. ಒಕ್ಕಲುತನದಾಗ ಹೊಟ್ಟೆ ತುಂಬಂಗಿಲ್ಲ ಅನ್ನೋದು ಗೊತ್ತಿಲ್ಲ. ತಾತ, ಅಪ್ಪ ಉಗುಳಚ್ಚಿ ಉಗುಳಚ್ಚಿ ಉಳಿಸಿದ್ದನ್ನು ಮಣ್ಣಿಗೆ ಸುರುವಿ ಅಳಿಸಿ ಹಾಕೋಕೆ ಬಂದಾನ’ ಎಂದು ಜನ ಮಾತನಾಡಿಕೊಂಡರು. ಆದರೂ ಛಲಬಿಡದ ಈ ಯುವಕ ತಜ್ಞರ ಸಲಹೆ ಪಡೆದು, ಮೊದಲು ಎಂಟು ಎಕರೆಯಲ್ಲಿ ದಾಳಿಂಬೆ ಮತ್ತು ಕಿನೋ ಹಣ್ಣಿನ ಗಿಡಗಳನ್ನು ಮಿಶ್ರಬೆಳೆಯಾಗಿ ನಾಟಿ ಮಾಡಿದರು. ದಾಳಿಂಬೆಗೆ ಉತ್ತಮ ಮಾರ್ಕೆಟ್ ಇತ್ತು. ಆದರೆ, ದಂಡಾಣು ರೋಗದಿಂದ ನೆಲ ಕಚ್ಚಿತು. ಅದನ್ನು ಬೇರು ಸಹಿತ ಕಿತ್ತೆಸೆದರು. ಪುಣ್ಯಕ್ಕೆ ಆ ವರ್ಷ ಕಿನೋ ಬೆಳೆ ಕೈ ಹಿಡಿಯಿತು. ಆದರೆ, ಮಿಶ್ರಬೆಳೆಯಾಗಿ ಬೆಳೆದ ಪಪ್ಪಾಯ, ಬಾಳೆಯಂತಹ ಹಣ್ಣಿನ ಬೆಳೆಗಳ ಪ್ರಯೋಗವೂ ಕೈಕೊಟ್ಟಿತು. ಆಡಿಕೊಳ್ಳುವವರಿಗೆ ಸುಗ್ರಾಸ ಭೋಜನ ಸಿಕ್ಕಂತಾಗಿತ್ತು. ಆದರೆ, ಸಂತೋಷ್ ಮಾತ್ರ ಧೈರ್ಯಗೆಡಲಿಲ್ಲ.
ನೀರಿಲ್ಲದ ಊರಿನಲ್ಲಿ..
ಹಣ್ಣಿನ ಕೃಷಿಗೆ ಎದುರಾಗಿದ್ದು ನೀರಿನ ಕೊರತೆ. ಎಷ್ಟು ಕೊಳವೆಬಾವಿಗಳನ್ನು ಕೊರೆಸಿದರೂ, ನೀರು ಸಿಗಲಿಲ್ಲ. ಅಂತಿಮವಾಗಿ ಆರೇಳು ಕೊಳವೆಬಾವಿಗಳಲ್ಲಿ ಸ್ವಲ್ಪ ಸ್ವಲ್ಪ ನೀರು ಬರುತ್ತಿದೆ. ಅದರಲ್ಲೇ ತೋಟವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಇದರ ಜತೆಗೆ, ಜಮೀನಿನಲ್ಲಿ ಎರಡು ಚೆಕ್ ಡ್ಯಾಮ್‍ಗಳು, ನಾಲ್ಕು ಕೃಷಿ ಹೊಂಡಗಳನ್ನು ತೆಗೆಸಿದರು. ಒಂದು ಕೃಷಿ ಹೊಂಡ ಅರ್ಧ ಎಕರೆಯಷ್ಟು ದೊಡ್ಡದಾಗಿದೆ. ಅದರಲ್ಲಿ ತುಂಬಿದ ನೀರು ಇಂಗದಂತೆ ಹೊಂಡಕ್ಕೆ ತಾಡಪಾಲನ್ನು ಹೊದಿಸಿದರು. ಜಮೀನಿನಲ್ಲಿ ಬೀಳುವ ಹನಿ ಮಳೆ ನೀರು ಹೊರ ಹೋಗದಂತೆ ಬದುಗಳನ್ನು ನಿರ್ಮಿಸಿದರು. ಕೊಳವೆಬಾವಿಗಳಿಗೆ ಇಂಗುಗುಂಡಿಗಳನ್ನು ಮಾಡಿಸಿದರು. ಜಮೀನಿನಲ್ಲಿ ಸುರಿಯುವ ಹನಿ ಮಳೆ ನೀರು ಭೂಮಿಯಲ್ಲಿ ಇಂಗಿ, ಕೃಷಿ ಹೊಂಡದಲ್ಲಿ ಸಂಗ್ರಹವಾಗಿ, ಕೊಳವೆಬಾವಿಗೂ ಜಲ ಮರುಪೂರಣವಾಗುವಂತಾಯಿತು. ಹೀಗಾಗಿ ನೀರಿನ ಕೊರತೆ ಇವರನ್ನು ಅಷ್ಟಾಗಿ ಬಾಧಿಸಲಿಲ್ಲ.
ಎರಡು ವರ್ಷಗಳ ಹಿಂದೆ ನಾಲ್ಕು ಎಕರೆಯಲ್ಲಿ ದಾಳಿಂಬೆ ನಾಟಿ ಮಾಡಿದ್ದರು. ಈಗ ಮೊದಲ ಬೆಳೆ ಕಟಾವು ಮಾಡಿದ್ದಾರೆ. ‘16 ಟನ್ ಫಸಲು ಬಂದಿದೆ’ ಎನ್ನುತ್ತಾರೆ ಸಂತೋಷ್. ದಾಳಿಂಬೆ ತಾಕಿನ ಪಕ್ಕದಲ್ಲಿ 600 ಪೇರಲ, 200 ಮಾವಿನ ಗಿಡಗಳ ಮಿಶ್ರ ಬೆಳೆ ತೋಟವಿದೆ. ಹಣ್ಣಿನ ಬೆಳೆ ನಡುವೆ 600 ತೇಗದ ಮರಗಳನ್ನು ನೆಟ್ಟಿದ್ದಾರೆ. 200 ನಿಂಬೆ, 100 ಜಂಬೂ ನೇರಳೆ, 50 ಚಿಕ್ಕೂ ಗಿಡಗಳಿವೆ. 1500 ಹೆಬ್ಬೇವಿನ ಮರಗಳನ್ನು ನಾಟಿ ಮಾಡಿದ್ದಾರೆ. ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಬೆಳೆಯಾದರೂ ಕೈ ಹಿಡಿಯಲಿ ಎಂಬುದು ಸಂತೋಷ್ ಅವರ ಅಂಬೋಣ. ಕಳೆದ ವರ್ಷ ಪುನಃ 500 ಪೇರಲ ಗಿಡಗಳು, ಜೊತೆಗೆ 1400 ತೇಗದ ಗಿಡಗಳು ನಾಟಿ ಮಾಡಿದ್ದಾರೆ. ಈಗಾಗೇ ಪೇರಲ ಗಿಡಗಳು ಹಣ್ಣು ಬಿಡಲು ಆರಂಭಿಸಿವೆ. ಜತೆಗೆ 300 ಕಿನೋ, 200 ಹಬ್ಬೇವು, 500 ಶ್ರೀಗಂಧದ ಗಿಡಗಳಿವೆ.
ಅಗತ್ಯಕ್ಕೆ ತಕ್ಕ ಗೊಬ್ಬರ
ಎಲ್ಲ ಹಣ್ಣಿನ ಗಿಡಗಳಿಗೆ ಪ್ರಮುಖವಾಗಿ ಕೊಟ್ಟಿಗೆ ಗೊಬ್ಬರವನ್ನೇ ಕೊಡುತ್ತಾರೆ. ಇದರ ಜತೆಗೆ ತಾವೇ ತಯಾರಿಸಿದ ಜೀವಾಮೃತ, ಎರೆಹುಳದ ಗೊಬ್ಬರ, ಸೂಕ್ಷ್ಮಾಣು ಜೀವಿಗಳ ಮಿಶ್ರಣಗಳ ಜೊತೆಗೆ ಹಿತಮಿತ ವಾಗಿ ರಾಸಾಯನಿಕ ಗೊಬ್ಬರವನ್ನೂ ಕೊಡುತ್ತಿದ್ದಾರೆ. ಅವಶ್ಯಕತೆ ಬಿದ್ದಾಗ ಮಾತ್ರ ಕೀಟನಾಶಕಗಳನ್ನು ಸಿಂಪಡಿಸುತ್ತಾರೆ. ಕೊಟ್ಟಿಗೆ ಗೊಬ್ಬರಕ್ಕೆ ಸಹಾಯವಾಗಲೆಂದೇ ಹತ್ತು ದೇಸಿ ಆಕಗಳುಗಳನ್ನು ಸಾಕಿದ್ದಾರೆ. ಅವುಗಳ ಸಗಣಿ ಮತ್ತು ಗಂಜಲದಿಂದಲೇ ಜೀವಾಮೃತ ತಯಾರಿಸುತ್ತಾರೆ. ‘ಜೀವಾಮೃತ ಪೂರೈಕೆ ಮಾಡಿದ ಕಾರಣ ಬೆಳೆಯಲ್ಲಿ ಇಳುವರಿ ಹೆಚ್ಚಲು ಕಾರಣವಾಗಿದೆ’ ಎನ್ನುತ್ತಾರೆ ಸಂತೋಷ್.
ಎರಡು ವರ್ಷಗಳಿಂದ ಸಂತೋಷ್ ಕಲ್ಲಂಗಡಿ ಕೇಸರ ಮಾವಿನ ಹಣ್ಣು ಬೆಳೆಯುತ್ತಿದ್ದು, ಅವೆರಡೂ ವಿದೇಶಕ್ಕೂ ರಫ್ತಾಗುತ್ತಿವೆ.
ತೋಟಗಾರಿಕೆ ಕೃಷಿಯಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಸಂತೋಷ್ ಅವರಿಗೆ ‘ಕೃಷಿ ಕಾಯಕ ಯೋಗಿ ಪ್ರಶಸ್ತಿ’, ಕೃಷಿ ಸಾಧಕ ಪ್ರಶಸ್ತಿಗಳು ಅರಸಿಬಂದಿವೆ.
‘ಈ ಹದಿನಾಲ್ಕು ವರ್ಷಗಳ ಪರಿಶ್ರಮದಲ್ಲಿ ನನ್ನೊಂದಿಗೆ, ನನ್ನ ಅಣ್ಣ ಕಿರಣನದೂ ಸಮಪಾಲಿದೆ. ತಂದೆಯವರಾದ ಶೇಖರಗೌಡ ಬ್ಯಾಂಕ್ ಉದ್ಯೋಗ ದಿಂದ ನಿವೃತ್ತಿಯಾದ ನಂತರ, ನನ್ನ ಕೃಷಿ ಕೆಲಸಕ್ಕೆ ಹೆಗಲು ನೀಡಿದ್ದಾರೆ. ಇವರಿಬ್ಬರ ಆರ್ಥಿಕ ನೆರವು, ಮಾರ್ಗದರ್ಶನ ನಿರಂತರವಾಗಿದೆ’ ಎಂದು ಸಂತೋಷ್ ನೆನಪಿಸಿಕೊಳ್ಳುತ್ತಾರೆ. ಸಂತೋಷ್ ಸಂಪರ್ಕ ಸಂಖ್ಯೆ : 9900444733, ಶೇಖರಗೌಡ: 948989332.
ಚಿತ್ರಗಳು: ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.