ADVERTISEMENT

ವಿಶ್ವಾಸ ತುಂಬಿದ ಅಂಜೂರ

ಚಳ್ಳಕೆರೆ ವೀರೇಶ್
Published 16 ಜುಲೈ 2018, 19:30 IST
Last Updated 16 ಜುಲೈ 2018, 19:30 IST
ಒಂದು ಎಕರೆ ಅಂಜೂರದ ಹೊಲದಲ್ಲಿ ಕೃಷಿಕ ವೀರಣ್ಣ
ಒಂದು ಎಕರೆ ಅಂಜೂರದ ಹೊಲದಲ್ಲಿ ಕೃಷಿಕ ವೀರಣ್ಣ   

ಮೊದಲು ಈರುಳ್ಳಿ ಬೆಳೆದು ಸೋತರು. ಆಮೇಲೆ ಟೊಮೆಟೊ, ಸುಗಂಧರಾಜ ಹೂವು, ಮೆಣಸಿನಕಾಯಿ ಬೆಳೆದು ನೋಡಿದರು... ಉಹೂಂ, ಯಾವುದೂ ಕೈಹಿಡಿಯಲಿಲ್ಲ. ಅಂತಿಮವಾಗಿ ವೀರಣ್ಣರಿಗೆ ಕೃಷಿಯಲ್ಲಿ ನೆಲೆ ನಿಲ್ಲುವಂತೆ ಮಾಡಿದ್ದು ಅಂಜೂರ..!

ಚಿತ್ರದುರ್ಗ ಜಿಲ್ಲೆಗೆ ಅಂಜೂರ ಹೊಸ ಬೆಳೆಯಲ್ಲ. ಹಿರಿಯೂರು, ಚಳ್ಳಕೆರೆ ತಾಲ್ಲೂಕಿನಲ್ಲಿ ಹಿಂದಿನಿಂದಲೂ ಬೆಳೆಯುತ್ತಿದ್ದಾರೆ. ಈಗ ಬೆಳೆಯುವರ ಸಂಖ್ಯೆ ತೀರಾ ಕ್ಷೀಣಿಸಿದೆ. ಆದರೆ, ತಾಲ್ಲೂಕಿನ ಯಾಲಗಟ್ಟೆ ಗೊಲ್ಲರಹಟ್ಟಿಯ ವೀರಣ್ಣಗೆ, ಅಂಜೂರ ಒಂದು ರೀತಿ ಹೊಸ ಬೆಳೆಯಂತೆ ಕೈಹಿಡಿದಿದೆ. ಕೃಷಿಯಲ್ಲಿ ಮುಂದುವರಿಯುವ ವಿಶ್ವಾಸ ತುಂಬಿದೆ.

ಬಿಎ ಪದವೀಧರ ವೀರಣ್ಣ, ಉದ್ಯೋಗಕ್ಕಾಗಿ ಬೆಂಗಳೂರಿನ ಕಂಪೆನಿಗಳಲ್ಲಿ ಸುತ್ತಾಡಿದರು. ‘ಎಷ್ಟು ದಿನ ಹೀಗೆ ಬೇರೆಯವರ ಕೈಕೆಳಗೆ ದುಡಿಯೋದು’ ಎಂದು ನಿರ್ಧರಿಸಿದರು. ಯಾಲಕಟ್ಟೆ ಗೊಲ್ಲರಹಟ್ಟಿಯಲ್ಲಿದ್ದ ಅಪ್ಪನ ಭಾಗದ ಒಂದು ಎಕರೆ ಜಮೀನಿನಲ್ಲಿ ಕೃಷಿ ಮಾಡಲು ತೀರ್ಮಾನಿಸಿದರು. ಸಾಲ ಮಾಡಿ ಭೂಮಿ ಹಸನು ಮಾಡಿಸಿದರು. ಮೂರು ವರ್ಷ ಬೇರೆ ಏನೇನೊ ಬೆಳೆದರು. ಆದರೆ, ಯಾವ ಬೆಳೆಯೂ ಕೈ ಹಿಡಿಯಲಿಲ್ಲ. ಈ ವೇಳೆ ಗೆಳೆಯರೊಬ್ಬರು ಅಂಜೂರ ಬೆಳೆಯುವ ಸಲಹೆ ನೀಡಿದರು. ಚಳ್ಳಕೆರೆಯಂತಹ ಒಣಭೂಮಿ ಪ್ರದೇಶಕ್ಕೆ ಹೊಂದಿಕೊಳ್ಳುವ ಬೆಳೆ ಅದು. ಖರ್ಚು ಕಡಿಮೆ. ಉತ್ತಮ ಮಾರುಕಟ್ಟೆ ಇದೆ. ಒಂದು ಎಕರೆಗೆ ಅಂಜೂರ ಸಸಿ ನಾಟಿ ಮಾಡಿ ಎಂದು ಒತ್ತಾಯಿಸಿದರು.

ADVERTISEMENT

ಅಂಜೂರ ಸಸಿ ನಾಟಿ: ಗೆಳೆಯರ ಸಲಹೆ ಮೇರೆಗೆ ವೀರಣ್ಣ ನಾಲ್ಕು ವರ್ಷಗಳ ಹಿಂದೆ ಒಂದು ಎಕರೆಯಲ್ಲಿ ಅಂಜೂರ ಕೃಷಿ ಆರಂಭಿಸಿದರು. ಆರಂಭದಲ್ಲಿ ಒಂದು ಅಂಜೂರ ಗಿಡದ ಗೂಟಿಗೆ ₹ 20ರಂತೆ 1100 ಗೂಟಿಗಳನ್ನು ಖರೀದಿಸಿದರು. ಗೂಟಿ ನಾಟಿಗೆ ಮುನ್ನ ಹೊಲದಲ್ಲಿ 10 ಅಡಿಗೊಂದರಂತೆ ಸಾಲಾಗಿ ಏರುಮಡಿಯ ಬದುಗಳ ಹಾಕಲು ಗುರುತು ಮಾಡಿದರು. ಗುರುತು ಹಾಕಿದ ಜಾಗದಲ್ಲಿ ಮೊದಲು ಕೊಟ್ಟಿಗೆ ಗೊಬ್ಬರ ಹರಡಿ, ಅದರ ಮೇಲೆ ಬದು ಹಾಕಿದರು. ಬದುವಿನ ಮೇಲೆ ಗಿಡದಿಂದ ಗಿಡಕ್ಕೆ 10 ಅಡಿ, ಸಾಲಿನಿಂದ ಸಾಲಿಗೆ 12 ಅಡಿ ಅಂತರದಲ್ಲಿ ಅಂಜೂರದ ಗೂಟಿಗಳನ್ನು ನಾಟಿ ಮಾಡಿದರು. ನಾಟಿ ಮಾಡಿದ ಒಂದು ತಿಂಗಳಿಗೆ ಗೂಟಿಗಳಲ್ಲಿ ಎಲೆ ಚಿಗುರಲಾರಂಭಿಸಿದವು. ಆಗ ಪುನಃ ಮೇಲುಗೊಬ್ಬರವಾಗಿ ರಾಸಾಯನಿಕ ಗೊಬ್ಬರ ಕೊಟ್ಟರು.

ನೀರಿನ ಆಸರೆಗಾಗಿ ಹೊಲದಲ್ಲಿ ಕೊರೆಸಿದ ಕೊಳವೆಬಾವಿಯಲ್ಲಿ ಒಂದು ಇಂಚು ನೀರು ಸಿಕ್ಕಿತ್ತು. ಅದರಿಂದ ಪ್ರತಿ ಗಿಡಕ್ಕೆ ಡ್ರಿಪ್ ಮಾಡಿಸಿದ್ದರು. ಎರಡು ದಿನಕ್ಕೊಮ್ಮೆ ಬೆಳಿಗ್ಗೆ ಸಂಜೆ ಗಿಡಗಳಿಗೆ ಡ್ರಿಪ್ ಮೂಲಕ ನೀರು ಕೊಟ್ಟರು. ಇಷ್ಟುಬಿಟ್ಟರೆ, ಬೇರೆ ಯಾವ ಆರೈಕೆಯೂ ಇಲ್ಲ. ನಾಟಿ ಮಾಡಿದ 7 ರಿಂದ 8 ತಿಂಗಳಿಗೆ ಅಂಜೂರ ಹಣ್ಣು ಬಿಡಲು ಆರಂಭವಾಯಿತು. ಚಳ್ಳಕೆರೆ, ಹಿರಿಯೂರು ಭಾಗದಿಂದ ಕೆಲವು ಸ್ಥಳೀಯ ಅಂಗಡಿಯವರು, ಜಮೀನಿಗೆ ಬಂದು ಅಂಜೂರ ಖರೀದಿಸಲಾರಂಭಿಸಿದರು.

ಎರಡು ಎಕರೆಗೆ ವಿಸ್ತರಣೆ: ಒಂದು ಎಕರೆಯಲ್ಲಿ ಅಂಜೂರ ಉತ್ತಮ ಫಸಲು ಕೊಡುವ ಸೂಚನೆ ಸಿಕ್ಕಿತು. ಹಾಗಾಗಿ, ಆ ಜಮೀನಿನ ಸಮೀಪದಲ್ಲೇ ಇನ್ನೂ ಎರಡು ಎಕರೆಗೆ 5ಸಾವಿರ ಅಂಜೂರ ಗೂಟಿಗಳನ್ನು ನಾಟಿ ಮಾಡಿಸಿದರು. ಕಳೆದ ವರ್ಷದಿಂದ ಆ ಹೊಲದಲ್ಲೂ ಹಣ್ಣು ಬಿಡಲಾರಂಭಿಸಿದೆ. ವರ್ಷದಲ್ಲಿ ಎಂಟು ತಿಂಗಳು ಹಣ್ಣು ಸಿಗುವ ಖಾತರಿ ಇದೆ. ಈಗ ನಿತ್ಯ ಒಂದು ಎಕರೆಗೆ 45 ಕೆಜಿವರೆಗೂ ಹಣ್ಣು ಕೊಯ್ಯುತ್ತಿದ್ದಾರೆ. ‘ಪ್ರತಿ ದಿನ ಸ್ಥಳೀಯವಾಗಿಯೇ ಮಾರುಕಟ್ಟೆ ಮಾಡುತ್ತಾರೆ. ಕೆ.ಜಿ ಅಂಜೂರಕ್ಕೆ ₹40ರವರೆಗೂ ಬೆಲೆ ಸಿಕ್ಕಿದೆ’ ಎನ್ನುತ್ತಾ ಆರ್ಥಿಕ ಲೆಕ್ಕಾಚಾರವನ್ನು ವೀರಣ್ಣ ವಿವರಿಸುತ್ತಾರೆ.

ಆರೈಕೆ, ಖರ್ಚು ಕಡಿಮೆ: ಒಮ್ಮೆ ಅಂಜೂರ ನಾಟಿಯಲ್ಲಿ ‌ಎರಡು ಬಾರಿ ₹15 ಸಾವಿರ ನಾಟಿ ಹಸುವಿನ ಗೊಬ್ಬರಕ್ಕಾಗಿ ಖರ್ಚಾಗಿದೆ. ಗೂಟಿಗಾಗಿ ₹5 ಸಾವಿರ ಖರ್ಚಾಗಿದೆ ವೀರಣ್ಣರಿಗೆ. ಇಷ್ಟು ಬಿಟ್ಟರೆ ಮನೆಯ ಮಂದಿಯೇ ನೀರು ನಿರ್ವಹಣೆ, ಹಣ್ಣು ಕೊಯ್ಯುವಂತಹ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಖರ್ಚು ಕಡಿಮೆ. ಆರೈಕೆಯಲ್ಲೂ ಹೇಳಿಕೊಳ್ಳುವಂಥ ಶ್ರಮವಿಲ್ಲ. ಒಮ್ಮೆ ಈ ಗೂಟಿ ನೆಟ್ಟರೆ ಎಂಟರಿಂದ ಹತ್ತು ವರ್ಷ ಬೆಳೆ ಇರುತ್ತದೆ. ಈಗಾಗಲೇ 4 ವರ್ಷಗಳಿಂದ ಕೃಷಿ ಮಾಡುತ್ತಿದ್ದೇನೆ. ಇನ್ನೂ ಆರೇಳು ವರ್ಷ ಫಲ ಸಿಗಬಹುದು’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ವೀರಣ್ಣ.

ಅಂಜೂರ ಕೃಷಿ ಕುರಿತ ಹೆಚ್ಚಿನ ಮಾಹಿತಿಗೆ ವೀರಣ್ಣ ಅವರ ಸಂಪರ್ಕ ಸಂಖ್ಯೆ: 97432 47734 .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.