ADVERTISEMENT

ಇದು ಹೂ, ಹಣ್ಣಿನಾ ಲೋಕ..

ಸ್ವರೂಪಾನಂದ ಎಂ.ಕೊಟ್ಟೂರು
Published 26 ಆಗಸ್ಟ್ 2019, 19:30 IST
Last Updated 26 ಆಗಸ್ಟ್ 2019, 19:30 IST
ಹಿ.ಮ. ಹಾಲಯ್ಯ
ಹಿ.ಮ. ಹಾಲಯ್ಯ   

ಫಾರ್ಮ್‌ಹೌಸ್‌ಗಳೆಂದರೆ, ಸಾಮಾನ್ಯವಾಗಿ ವಾಣಿಜ್ಯ ಉದ್ದೇಶಕ್ಕೋ ವಿಹಾರಕ್ಕಾಗಿಯೋ ರೂಪಿಸಿರುವ ಜಾಗವಾಗಿರುತ್ತದೆ. ಆದರೆ, ಹಾಲಯ್ಯ ಅವರ ಫಾರ್ಮ್‌ಹೌಸ್‌ನಲ್ಲಿ ಜೀವ ವೈವಿಧ್ಯಗಳ ಲೋಕವೇ ಮೇಳೈಸಿದೆ. ಮಾತ್ರವಲ್ಲ, ಇಲ್ಲಿ ಕೃಷಿ ಜತೆಗೆ, ಸಾಂಸ್ಕೃತಿಕ ಚಟುವಟಿಕೆಗಳೂ ನಡೆಯುತ್ತವೆ.

ಸಾಮಾನ್ಯವಾಗಿ ತೋಟದ ಮನೆಯ ಗೇಟ್‌ಗಳಲ್ಲಿ ‘ನಾಯಿಗಳಿವೆ ಎಚ್ಚರಿಕೆ’ ಎಂಬ ಬೋರ್ಡ್‌ ನೋಡಿದ್ದೆ. ಆದರೆ, ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಹುಣಸೆಕಟ್ಟೆ ಕ್ರಾಸ್‌ ಸಮೀಪದ ಆಯುಷ್‌ ಫಾರ್ಮ್‌ಹೌಸ್‌ ತೋಟದ ಗೇಟ್‌ ಮೇಲೆ ‘ನಿಮಗೆ ಇಷ್ಟವಾದರೆ ಹೂವು ಹರಿಯಬಹುದು, ಪ್ರೀತಿಸುವುದಾದರೆ ನೀರೆರೆಯಬಹುದು’ ಎಂಬ ಬರಹದ ಫಲಕ ಕಂಡು ಅಚ್ಚರಿಯಾಯಿತು!

ಫಲಕ ತೂಗು ಹಾಕಿದ್ದ ಗೇಟ್‌ ತಳ್ಳಿಕೊಂಡು ಒಳ ಹೊಕ್ಕಾಗ ಬಣ್ಣ ಬಣ್ಣದ ಹೂವಿನ ಲೋಕದ ಸ್ವಾಗತ. ಹೂದೋಟದ ಹಿಂಬದಿಯಲ್ಲಿದ್ದ ಬಗೆ ಬಗೆಯ ಹಣ್ಣುಗಳು, ತೋಟದ ಒಳಗೆ ಹೋಗಲು ಉತ್ತೇಜಿಸಿದವು.

ADVERTISEMENT

ತೋಟಗಾರಿಕಾ ಸಂಪತ್ತು ಕಂಡ ಮೇಲೆ ತೋಟದ ಮಾಲೀಕ 78ರ ಹರೆಯದ ಹಿ.ಮ. ಹಾಲಯ್ಯ ಅವರನ್ನು ‘ಹಣ್ಣಿನ ತೋಟದ ಇಳುವರಿ ಎಷ್ಟು, ವಾರ್ಷಿಕ ಲಾಭ ಎಷ್ಟು’ – ಎಂದು ಕೇಳಿದೆ. ಅದಕ್ಕೆ ಅವರು ಹಣ್ಣು ತುಂಬಿದ ಕವರ್‌ವೊಂದನ್ನು ನನ್ನ ಕೈಯಲ್ಲಿಟ್ಟು, ‘ನೀವು ಇದನ್ನು ಸ್ವೀಕರಿಸಿದಾಗ ಸಿಗುವ ಸಂತೋಷಕ್ಕಿಂತ ಇನ್ಯಾವ ಲಾಭ ಬೇಕು ಹೇಳಿ’ ಎಂದು ಮುಗುಳ್ನಕ್ಕರು. ಅವರ ನಗುವಿನಲ್ಲಿ, ‘ತೋಟವನ್ನು ಆದಾಯಕ್ಕಾಗಿ ಮಾಡುತ್ತಿಲ್ಲ, ಆನಂದಕ್ಕಾಗಿ ಮಾಡುತ್ತಿದ್ದೇವೆ’ ಎಂಬ ಸಂದೇಶವಿದ್ದಂತೆ ಕಾಣುತ್ತಿತ್ತು.

ಹೂವು–ಹಣ್ಣಿನ ಲೋಕದೊಳಗೆ..

ಹಾಲಯ್ಯ ಅವರು ಹಾಗೆ ಹೇಳಿದ ಮೇಲೆ, ಅವರೊಂದಿಗೆ ತೋಟ ಸುತ್ತಾಡಲು ಹೊರಟೆ. ದಾರಿಯುದ್ದಕ್ಕೂ ಅವರು ತೋಟದ ಕುರಿತು ವ್ಯಕ್ತಪಡಿಸುತ್ತಿದ್ದ ಅನಿಸಿಕೆಗಳಿಂದ ಹಾಲಯ್ಯ ಅವರು ಖುಷಿಗಾಗಿ ತೋಟ ಮಾಡುತ್ತಿದ್ದಾರೆ, ಮರ–ಗಿಡಗಳ ಸಾಂಗತ್ಯಕ್ಕಾಗಿ, ಲಾಭ–ನಷ್ಟವನ್ನು ಪಕ್ಕಕ್ಕಿಟ್ಟು ಕೃಷಿ ಮಾಡುತ್ತಿದ್ದಾರೆ ಎಂಬುದು ಖಾತರಿಯಾಯಿತು. ಹೈಸ್ಕೂಲ್‌ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಸಹಾಯಕ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನಿವೃತ್ತಿಯಾದ ಹಾಲಯ್ಯ ಅವರು, ನಿವೃತ್ತಿ ನಂತರ ಮಗ ಸುರೇಶ ಒತ್ತಾಸೆಯಿಂದ 2010ರಲ್ಲಿ ಈ ಎರಡು ಎಕರೆ ಜಮೀನು ಖರೀದಿಸಿದರು. ರೈತ ಕುಟುಂಬದ ಹಿನ್ನೆಲೆ, ಕೃಷಿ ಅನುಭವವೂ ಜತೆಗಿದ್ದಿದ್ದರಿಂದ ಅವರಿಗೆ ನಿವೃತ್ತಿ ನಂತರವೂ ಕೃಷಿ ಸುಲಭವಾಯಿತು.

ಖರೀದಿ ಮಾಡಿದ ಹೊಲ ಆರಂಭದಲ್ಲಿ ನುಜ್ಜುಗಲ್ಲುಗಳಿಂದ ಕೂಡಿತ್ತು. ಅದನ್ನು ಹಸನು ಮಾಡಿಸಿ, ಮಳೆಯಾಶ್ರಿತ ಬೇಸಾಯದೊಂದಿಗೆ ಕೃಷಿ ಆರಂಭಿಸಿದರು. ತೋಟಗಾರಿಕೆ, ಕೃಷಿ ಇಲಾಖೆಗಳ ತಜ್ಞರ ಸಲಹೆ, ಸೂಚನೆ ಪಾಲಿಸುತ್ತಾ, ಹೊಲದಲ್ಲಿ ಕೃಷಿ ಮುಂದುವರಿಸಿದರು. ತಂತಿಯೊಂದಿಗೆ ಜಮೀನು ಭದ್ರ ಮಾಡಿಸಿ, ನೀರಿನ ಸಮಸ್ಯೆ ಎದುರಾದಾಗ, ಕೊಳವೆಬಾವಿ ಕೊರೆಸಿದರು. ಆಗ ಸಿಕ್ಕಿದ್ದು ಒಂದೂವರೆ ಇಂಚು ನೀರು. ‘ಇಷ್ಟು ನೀರಲ್ಲಿ ಸಾಂಪ್ರದಾಯಿಕ ಬೆಳೆ ಕಷ್ಟ’ ಎಂದು ಅರಿತ ಅವರು, ಹೊರಳಿದ್ದು ತೋಟಗಾರಿಕಾ ಬೆಳೆಯತ್ತ.

ಹಣ್ಣಿನ ಗಿಡಗಳ ಪ್ರವೇಶ

ಮುಂದೆ ಹಂತ ಹಂತವಾಗಿ ಹಣ್ಣಿನ ಗಿಡಗಳು ಹೊಲವನ್ನು ಪ್ರವೇಶಿಸಿದವು. ಜಮೀನಿನ ಗಡಿ ಭಾಗಕ್ಕೆ ತಂತಿ ಬೇಲಿ ಜತೆಗೆ, ಕಾಡು ಮರ, ಲಂಟಾನಗಳನ್ನು ಬೆಳೆಸುತ್ತಾ ಹಸಿರು ಬೇಲಿ ಬೆಳೆಸಲಾರಂಭಿಸಿದರು. ಎಲ್ಲ ಬೆಳೆಗಳಿಗೂ ಡ್ರಿಪ್‌ ಮಾಡಿಸಿ. ಮಿತ ನೀರಿನಲ್ಲಿ ಗಿಡಗಳನ್ನು ಬೆಳೆಸಲು ಶುರು ಮಾಡಿದರು. ಬೆಳೆ ನಿರ್ವಹಣೆಗಾಗಿ ತೋಟದಲ್ಲೇ ಮನೆ ನಿರ್ಮಾಣವಾಯಿತು. ವರ್ಷಗಳು ಉರುಳುವುದರೊಳಗೆ ನುಜ್ಜುಗಲ್ಲಿನ ಜಮೀನಿನಲ್ಲಿ ಹಸಿರು ಕಾಣಿಸಿತು. ಹೊಲವಾಗಿದ್ದ ಜಮೀನು ತೋಟವಾಯಿತು.

ನಾಲ್ಕೈದು ವರ್ಷಗಳಲ್ಲಿ ಮಲಗೋವ, ತೋತಾಪುರಿ, ಖಾದರ್ ಸೇರಿದಂತೆ 48 ವೆರೈಟಿಯ ಮಾವಿನ ತೋಪು ಎದ್ದು ನಿಂತಿತು. ಜತೆಗೆ ನಿಂಬೆ, ಸೇಬು, ಸಪೋಟದಂತಹ ಹಣ್ಣಿನ ಗಿಡಗಳೂ ಸೇರಿಕೊಂಡವು. ಬೆರಳೆಣಿಕೆಯಷ್ಟು ಕಿತ್ತಳೆ, ಹಲಸು, ಗೋಡಂಬಿ, ನೇರಳೆ, ಬೆಳವಲ, ಫ್ಯಾಷನ್ ಪ್ರೂಟ್, ಹುಣಸೆ, ಕರಿಬೇವು.. ಉಫ್‌ ಒಂದಲ್ಲ, ಎರಡಲ್ಲ, ಹಲವು ಜಾತಿಯ ಹಣ್ಣಿನ ಗಿಡಗಳ ಬಳಗವೇ ತೋಟದಲ್ಲಿ ಮೇಳೈಸಿದವು. ತೇಗ, ತೆಂಗು, ಸಿಲ್ವರ್ ಗಿಡಗಳೂ ತಲೆ ಎತ್ತಿದ್ದವು.

ಈಗ ಎಲ್ಲ ಗಿಡಗಳು ಮರಗಳಾಗಿ, ಫಲ ನೀಡಲಾರಂಭಿಸಿವೆ. ಹಣ್ಣು ತಿನ್ನಲು ಬರುವ ಪ್ರಾಣಿ ಪಕ್ಷಿಗಳು ಬೀಜ ಪ್ರಸಾರ ಶುರು ಮಾಡಿವೆ. ಹೀಗಾಗಿ ಸ್ವಾಭಾವಿಕವಾಗಿ ಐವತ್ತಕ್ಕೂ ಹೆಚ್ಚಿನ ಬೇವಿನ ಗಿಡಗಳು ತೋಟದ ಜೀವಂತ ಬೇಲಿಯಲ್ಲಿ, ಹಣ್ಣಿನ ಗಿಡಗಳ ನಡುವೆ ಬೆಳೆಯುತ್ತಿವೆ. ತೋಟದಲ್ಲಿ ಬೆಳೆದಿರುವ ಯಾವ ಗಿಡಕ್ಕೂ ಕೊಡಲಿ ಹಾಕಿಲ್ಲ. ಒಂದು ಕೊಂಬೆಯನ್ನೂ ಮುರಿದಿಲ್ಲ. ಹೀಗಾಗಿ ಇಡೀ ತೋಟ ಕಿರು ಅರಣ್ಯದಂತೆ ಕಾಣುತ್ತಿದೆ. ‘ತೋಟದಲ್ಲಿ ವರ್ಷಪೂರ್ತಿ ಒಂದಲ್ಲ ಒಂದು ವೆರೈಟಿ ಹಣ್ಣು ಇದ್ದೇ ಇರುತ್ತದೆ’ ಎನ್ನುತ್ತಾರೆ ಹಾಲಯ್ಯ. ಹೀಗಾಗಿ ಇವರ ತೋಟವನ್ನು ಸರ್ವಋತು ಹಣ್ಣಿನ ತೋಟ ಎನ್ನಬಹುದು.

ನೈಸರ್ಗಿಕ ತೋಟ, ಆರೈಕೆ ಕಡಿಮೆ

ತೋಟದಲ್ಲಿ ಗಿಡಗಳನ್ನು ನಾಟಿ ಮಾಡುವಾಗ ಗೊಬ್ಬರ ಕೊಟ್ಟಿದ್ದಾರೆ. ನಿತ್ಯ ಗಿಡಗಳಿಗೆ ಡ್ರಿಪ್‌ ಮೂಲಕ ನೀರು ಪೂರೈಸುತ್ತಿದ್ದಾರೆ. ಇಷ್ಟುಬಿಟ್ಟರೆ, ಬೇರೆ ಯಾವ ಆರೈಕೆಯೂ ಇಲ್ಲ. ಗಿಡಗಳು ಉದುರಿಸುವ ಎಲೆ, ಮಣ್ಣಲ್ಲೇ ಬೆರೆತು ಗೊಬ್ಬರವಾಗುತ್ತದೆ. ಸುರಿಯವ ಮಳೆ ನೀರು ಬಿದ್ದಲ್ಲೇ ಇಂಗುತ್ತದೆ. ಹೀಗೆ ನೈಸರ್ಗಿಕವಾಗಿಯೇ ತೋಟ ನಿರ್ಮಾಣವಾಗುತ್ತಿದೆ.

‘ಇಷ್ಟೆಲ್ಲ ಬೆಳೆದರೂ, ಏಕೆ ಬೆಳೆ ಮಾರಾಟ ಮಾಡುವುದಿಲ್ಲ’ ಎಂದು ಹಾಲಯ್ಯ ಅವರನ್ನು ಕೇಳಿದೆ. ಅದಕ್ಕವರು ಸುದೀರ್ಘವಾದ ಉತ್ತರ ನೀಡಿದರು; ‘ತೋಟದಲ್ಲಿ ಮೂರು ವರ್ಷಗಳಿಂದ ಫಲ ಸಿಗುತ್ತಿದೆ. ಮೊದಲ ವರ್ಷದ ಮೊದಲ ಬೆಳೆ ಪೇರಲ ಮಾರಾಟ ಮಾಡಿದೆ. ಆಗ ಐದಾರು ಸಾವಿರ ರೂಪಾಯಿ ಸಿಕ್ಕಿತು. ಆದರೆ ಮಧ್ಯವರ್ತಿಗಳು, ಮಾರಾಟಗಾರರು ಒಳ್ಳೆ ದುಡ್ಡು ಮಾಡಿಕೊಂಡರು. ನಂತರ ಮಾವು ಕೈಗೆ ಬಂತು. ಆಗ ಮಾರ್ಕೆಟ್‌ನಲ್ಲಿ ರೇಟ್ ಬಿತ್ತು. ಕೊನೆಗೆ ನಮ್ಮ ಸಂಪರ್ಕದಲ್ಲಿದ್ದ ಗೆಳೆಯರಿಗೆ ಉಚಿತವಾಗಿ ಹಂಚಿದೆ. ಆಗ ಏನೋ ಖುಷಿ, ಸಂತೃಪ್ತಿ ಸಿಕ್ಕಿತು. ಅಂದೇ ಮಾರಾಟದ ಯೋಚನೆ ಕೈಬಿಟ್ಟೆ’ ಎಂದು ಕಾರಣಕೊಟ್ಟರು ಹಾಲಯ್ಯ.

‘ಜೀವನ ನಡೆಸುವುದಕ್ಕೆ ಹಣದ ಕೊರತೆ ಇಲ್ಲ. ತೋಟ ನಿರ್ವಹಣೆ, ಕೂಲಿಗಾರರಿಗೆ ಹಣ ಖರ್ಚಿಗೂ ತೊಂದರೆ ಇಲ್ಲ. ಉತ್ಪನ್ನಗಳನ್ನು ಮಾರಾಟ ಮಾಡಿ ಹಣ ಮಾಡುವ ಆಸೆ ನಮಗಿಲ್ಲ’ ಎನ್ನುತ್ತಾರೆ ಪತ್ನಿ ಅಮೃತ.

ಈಗಲೂ ತೋಟದಲ್ಲಿ ಬಿಡುವ ಹಣ್ಣುಗಳನ್ನು ಸ್ನೇಹಿತರು, ಸಂಬಂಧಿಕರಿಗೆ ಹಂಚುತ್ತಾರೆ. ತೋಟಕ್ಕೆ ಭೇಟಿ ನೀಡುವ ಅತಿಥಿಗಳಿಗೆ ಕೊಡುತ್ತಾರೆ. ಪಕ್ಕದಲ್ಲೇ ತರಳಬಾಳು ಶಾಲೆಯ ಮಕ್ಕಳಿದ್ದಾರೆ. ಅವರಿಗಾಗಿ ಒಂದಷ್ಟು ಹಣ್ಣಿನ ಗಿಡಗಳನ್ನು ಮೀಸಲಾಗಿಟ್ಟಿದ್ದಾರೆ. ‘ಎಲ್ಲವೂ ನಮಗೆ ಸಿಗಬೇಕೆಂಬ ಆಸೆಯಿಲ್ಲ. ಮರಗಿಡಗಳು, ಪ್ರಾಣಿ-ಪಕ್ಷಿಗಳೊಂದಿಗೆ ಕಾಲ ಕಳೆದಾಗ ಸಿಗುವ ಆರೋಗ್ಯ, ಆನಂದವೇ ನಮಗೆ ಆದಾಯ, ಲಾಭ ಎಲ್ಲ. ಅದಕ್ಕೆ ಬೆಲೆ ಕಟ್ಟಲಾಗುತ್ತದೆಯೇ’ ಎಂದು ಪ್ರಶ್ನಿಸುತ್ತಾರೆ ಅಮೃತ.

ಪ್ರಾಣಿ, ಪಕ್ಷಿಗಳ ತಂಗುದಾಣ

ಸಾಮಾನ್ಯವಾಗಿ ತೋಟ ಮಾಡಿದಾಗ, ಪ್ರಾಣಿ, ಪಕ್ಷಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ರೈತರು ನಾನಾ ತಂತ್ರಗಳನ್ನು ರೂಪಿಸುತ್ತಾರೆ. ಕೆಲವೊಮ್ಮೆ ಇಂಥ ಬೆಳೆ ರಕ್ಷಕ ತಂತ್ರಗಳು ಜೀವಿಗಳಿಗೆ ಅಪಾಯ ತಂದಿದ್ದೂ ಇದೆ. ಇದೇ ಕಾರಣಕ್ಕಾಗಿ, ಇಡೀ ತೋಟದಲ್ಲಿ ಎಲ್ಲೂ ಪ್ರಾಣಿ, ಪಕ್ಷಿಗಳ ರಕ್ಷಣೆಗಾಗಿ ಯಾವುದೇ ಉಪಕರಣಗಳನ್ನು ಇಟ್ಟಿಲ್ಲ.‘ಪಕ್ಷಿಗಳು, ಪ್ರಾಣಿಗಳೇ ನಮ್ಮ ತೋಟದ ಹಣ್ಣುಗಳ ಮೊದಲ ಹಕ್ಕುದಾರರು’ ಎನ್ನುತ್ತಾರೆ ಅಮೃತ. ‌ಅವರ ಮಾತಿಗೆ ಸಾಕ್ಷಿಯಾಗಿ, ತೋಟದಲ್ಲಿ ಗಿಳಿ, ಅಳಿಲು, ಕೋಗಿಲೆ, ರತ್ನಪಕ್ಷಿ, ಗುಬ್ಬಿಗಳು ಕಂಡವು.

‘ಇಂಥ ಹಲವು ನಮೂನೆಯ ಪಕ್ಷಿಗಳು ವರ್ಷವಿಡಿ ಇಲ್ಲಿ ಕಾಣಿಸುತ್ತವೆ. ಹಣ್ಣು ತಿಂದು, ನೀರು ಕುಡಿದು ದಾಹ ತಣಿಸಿಕೊಳ್ಳುತ್ತವೆ. ಹೀಗಾಗಿ ಇದು ಪ್ರಾಣಿ-ಪಕ್ಷಿಗಳ ತಂಗುದಾಣವಾಗಿದೆ. ‘ಹಕ್ಕಿಗಳ ಚಿಲಿಪಿಲಿ ಕಲರವ, ಜೇನುನೊಣಗಳ ಝೇಂಕಾರ, ಪಾತರಗಿತ್ತಿ, ದುಂಬಿಗಳಿಂದ ಮನಸ್ಸಿಗೆ ಮಹಾನಂದ ಆಗುತ್ತೆ’ ಎನ್ನುತ್ತಾರೆ ಹಾಲಯ್ಯ.

‘ಅಮೃತ’ ಹಸ್ತದ ಪುಷ್ಪಕಾಶಿ..

ಹಣ್ಣಿನ ತೋಟದ ಪರಿಕಲ್ಪನೆ ಹಾಲಯ್ಯ ಅವರದ್ದು. ಹೂದೋಟ ಪತ್ನಿ ಅಮೃತ ಅವರ ಪರಿಶ್ರಮದ ಫಲ. ತೋಟದಲ್ಲಿ ಒಂದು ಭಾಗವನ್ನು ಹೂದೋಟಕ್ಕೆ ಮೀಸಲಿಟ್ಟಿದ್ದಾರೆ. ಸುಮಾರು 22 ನಮೂನೆಯ ದಾಸವಾಳ ಗಿಡಗಳಿವೆ. ಬಳ್ಳಿ ದಾಸವಾಳ, ಹಡಗಲಿ, ಸೂಜಿ, ನೀಲಿ, ಬಳ್ಳಾರಿ, ಜಾಜಿ ಮಲ್ಲಿಗೆಗಳು, ಬಿಲ್ವಪತ್ರೆ, ಪಾರಿಜಾತ, ನಂದಿ ಬಟ್ಟಲು, ದೇವಕಣಗಲೆ, ಸಂಪಿಗೆ, ಎಡಜೂರ, ಗುಲಾಬಿ, ಕಾಗದ, ಕಮಲ, ಶೋ ಗಿಡಗಳು.. ಹೀಗೆ ನೂರಾರು ವೆರೈಟಿಯ ಹೂವಿನ ಗಿಡಗಳಿವೆ. ಪೂಜೆಗೆ ನಾನಾ ಬಗೆಯ ಹೂವುಗಳು ಬೇಕೆಂದರೆ ಬಹುತೇಕರಿಗೆ ಥಟ್ಟನೆ ನೆನಪಾಗೋದು ಅಮೃತ ಅವರ ಹೂದೋಟವಂತೆ. ‘ಹೂವು ಕೇಳಿ ಬಂದವರಿಗೆ ಹೂವಿನ ಜತೆಗೆ ಗಿಡದ ಕಟಿಂಗ್ಸ್ ಕೊಡುತ್ತೇನೆ. ಇದರಿಂದ ಅವರಲ್ಲೂ ಪರಿಸರ ಪ್ರೀತಿ ಬೆಳೆಯುತ್ತೆ..’ ಎನ್ನುತ್ತಾರೆ ಅಮೃತ.

ಸಾಂಸ್ಕೃತಿಕ ಚಟುವಟಿಕೆ

ಆಯುಷ್ ಫಾರ್ಮ್‌ಹೌಸ್, ತೋಟವಷ್ಟೇ ಅಲ್ಲ, ಅದು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವೂ ಹೌದು. ಈ ಹೂವಿನ ತೋಟದಲ್ಲಿ ಸುಮಾರು 70 ವಚನ ಮತ್ತು ಖ್ಯಾತನಾಮ ಸಾಹಿತಿಗಳ ಕವಿತೆಗಳ ಬೋರ್ಡ್‌ಗಳಿವೆ. ಹಾಲಯ್ಯ ಅವರು ಚುಕ್ಕಿ ಚಿತ್ರಕಲಾವಿದರು. ಇವರ ಕೈಯಲ್ಲಿ ಅರಳಿರುವ ಜಗತ್ ಪ್ರಸಿದ್ಧರ ಚುಕ್ಕಿ ಚಿತ್ರಗಳೂ ಮನೆಯ ಗೋಡೆ ಅಲಂಕರಿಸಿವೆ. ಇನ್ನು ಹಾಲಯ್ಯನವರು ವಚನಗಳು, ಕವನಗಳು, ಚಿತ್ರ, ಭಕ್ತಿ, ಭಾವಗೀತೆಗಳು ಮುಖ್ಯವಾಗಿ ಘಂಟಸಾಲ ಹಾಡುಗಳನ್ನು ಅದ್ಭುತವಾಗಿ ಹಾಡುತ್ತಾರೆ. ಸಂಗೀತ ಸಂಯೋಜನೆಯನ್ನೂ ಮಾಡುತ್ತಾರೆ. ಆಗಾಗ್ಗೆ ಈ ತೋಟದಲ್ಲಿ ಸಮಾನ ಮನಸ್ಕರು ಸೇರಿ ಸಂಗೀತ ಕಛೇರಿ ಏರ್ಪಡಿಸುತ್ತಾರೆ.

ತೋಟ ನೋಡುವವರಿಗೆ ಸಂಪರ್ಕ ಸಂಖ್ಯೆ 8660193468

ಚಿತ್ರಗಳು: ಲೇಖಕರವು‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.