ವಿಜಯಪುರ: ಸುತ್ತಲೂ ಎತ್ತ ನೋಡಿದರೂ ಬಯಲು, ಬರಡು ಭೂಮಿ, ಗುಬ್ಬಚ್ಚಿ ಬಾಯಾರಿದರೂ ಹನಿ ನೀರು ಸಿಗದಂತ ಪ್ರದೇಶದಲ್ಲಿ ತೋಟ ಮಾಡಬೇಕೆಂದು ವಿಜಯಪುರದಿಂದ ಬಂದ ಸುರೇಶ ಭೀಮಶಿ ಕಲಾದಗಿ ಅವರನ್ನು ನೋಡಿ ಸುತ್ತಮುತ್ತಲಿನವರು ಇದೊಂದು ವ್ಯರ್ಥ ಪ್ರಯತ್ನ, ನಗರದಲ್ಲೇ ಬೇರೇನಾದರೂ ಮಾಡಬಹುದಿತ್ತು’ ಎಂದು ನಕ್ಕಿದ್ದರು.
ಆದರೆ, ಇದನ್ನೇ ಸವಾಲಾಗಿ ಸ್ವೀಕರಿಸಿದ ಸುರೇಶ ಕಲಾದಗಿ ಅವರು ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದಲ್ಲಿರುವ ತಮ್ಮ 13 ಎಕರೆ ಜಮೀನನ್ನು ಸಮತಟ್ಟು ಮಾಡಿ, ಗರಸು, ಕಲ್ಲುಗಳನ್ನು ತೆರವುಗೊಳಿಸಿ ಕೃಷಿಗೆ ಅಣಿಗೊಳಿಸಿದರು. ನೀರಿಗಾಗಿ ಕೊಳವೆ ಬಾವಿಯನ್ನು ಕೊರೆಯಿಸಿದರು. ಅವುಗಳ ಸಂಖ್ಯೆ ಒಂದಲ್ಲ ,ಎರಡಲ್ಲ, ಮೂರಲ್ಲ, ಬರೋಬ್ಬರಿ 60. ಆದರೆ, ಎಲ್ಲವೂ ನೀರಿಲ್ಲದೇ ವಿಫಲವಾದವು.
ಹೌದು, ಇದು ಅಚ್ಚರಿ ಎನಿಸಿದರೂ ಸತ್ಯ. ಕೊಳವೆಬಾವಿಗೆ ಮಾಡಿದ ವೆಚ್ಚವೇ ಲಕ್ಷೋಪಲಕ್ಷ. ಹೊಲದ ಯಾವ ಜಾಗದಲ್ಲಿ ಕೊರೆದರೂ ಒಂದಿಚ್ಚು ನೀರು ಬರಲಿಲ್ಲ. ಹಳ್ಳಿ ಜನರ ಎದುರು ಅಪಹಾಸ್ಯಕ್ಕೀಡಾದೆನೋ ಎಂಬ ಅಭಿಪ್ರಾಯ ಕಲಾದಗಿ ಅವರಲ್ಲಿ ಮೂಡಿದರೂ ನಿಂಬೆ, ದಾಳಿಂಬೆ ತೋಟ ಮಾಡಬೇಕು ಎಂಬ ಹುಚ್ಚು ಪ್ರಯತ್ನ ಮಾತ್ರ ಬಿಡಲಿಲ್ಲ.
ನೀರಿಗಾಗಿ ಹಂಜಗಿ ಗ್ರಾಮದ ಕೆರೆಯ ಬಳಿ ಐದು ಗುಂಟೆ ಜಮೀನನ್ನು ಖರೀದಿಸಿ, ಕೊಳವೆಬಾವಿಯನ್ನು ಕೊರೆಯಿಸಿದರು. ಅಲ್ಲಿಂದ ಮೂರು ಕಿ.ಮೀ.ದೂರದಲ್ಲಿರುವ ಹೊಲಕ್ಕೆ ಪೈಪ್‌ಲೈನ್ ಮಾಡಿ ನೀರನ್ನು ತಂದರು. ಹೊಲದಲ್ಲಿ ಬೃಹತ್ ಗಾತ್ರದ ಎರಡು ಕೃಷಿ ಹೊಂಡಗಳನ್ನು ನಿರ್ಮಿಸಿ, ಅವುಗಳಿಗೆ ಕೊಳವೆಬಾವಿ ನೀರು ತಂದು ತುಂಬಿಸಿದರು. ಪರಿಣಾಮ ಇದೀಗ ಹೊಲದಲ್ಲಿ ಆರು ಎಕರೆ ಲಿಂಬೆ, ಒಂದು ಎಕರೆ ದಾಳಿಂಬೆ, ಆರು ಎಕರೆ ಕಬ್ಬು, ಉಳಿದಂತೆಬಾಳೆ, ಪೇರು, ನುಗ್ಗೆ, ಕರಿಬೇವು, ಶೇಂಗಾ, ಮಾವು, ಸಾಗುವಾನಿ, ರಕ್ತ ಚಂದನ, ಹೆಬ್ಬೇವು ಬೆಳೆದು, ಕೈತುಂಬ ಆದಾಯ ಗಳಿಸುತ್ತಿದ್ದಾರೆ.
ಇಡೀ ಹೊಲಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಒಂದು ಹನಿ ನೀರು ವ್ಯರ್ಥವಾಗದಂತೆ ಕೃಷಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅಕ್ಕಪಕ್ಕದ ರೈತರ ಹೊಲಕ್ಕೂ ನೀರು ನೀಡಿ, ಅವರೂ ಕೃಷಿ ಮಾಡಲು ಪ್ರೋತ್ಸಾಹ ನೀಡಿದ್ದಾರೆ.
ಇಷ್ಟೇ ಅಲ್ಲ, ಕೋಳಿ, ಕುರಿ, ಮೊಲಗಳನ್ನು ಸಾಕಿದ್ದಾರೆ. ಭವಿಷ್ಯದಲ್ಲಿ ಮೀನು ಸಾಕಾಣಿಕೆ, ಎರೆಹುಳು ಗೊಬ್ಬರ ತಯಾರಿಕೆ ಮಾಡಬೇಕು ಎಂಬ ಯೋಜನೆ ರೂಪಿಸಿದ್ದಾರೆ.
ತೋಟದ ನಡುವೆ ಸುಂದರ ಮನೆಯನ್ನು ನಿರ್ಮಿಸಿದ್ದಾರೆ. ಕೋವಿಡ್ ಲಾಕ್‌ಡೌನ್ ಕಾರಣದಿಂದ ವಿಜಯಪುರದಲ್ಲಿರುವ ತಂದೆ, ತಾಯಿ, ಪತ್ನಿ, ಮಕ್ಕಳು ಸೇರಿದಂತೆ ಸಹೋದರರ ಮಕ್ಕಳನ್ನು ಕರೆತಂದು ವಾಸಿಸತೊಡಗಿದ್ದಾರೆ.
‘ಕೃಷಿ ಆದಾಯಕ್ಕಿಂತ ಹೆಚ್ಚು ಖುಷಿ ನೀಡಿದೆ. ಪ್ರತಿ ವರ್ಷ ಎಲ್ಲ ಖರ್ಚು ಕಳೆದು ರೂ 15 ಲಕ್ಷ ಆದಾಯ ಬರುತ್ತಿದೆ’ ಎಂದು ಸುರೇಶ ಕಲಾದಗಿ ಹೇಳಿದರು.
ವಿಶೇಷವೆಂದರೆ ಸುರೇಶ ಕಲಾದಗಿ ಅವರು ವಿಜಯಪುರದ ರೈತ ಮುಖಂಡ, ಪ್ರಗತಿಪರ ಹೋರಾಟಗಾರ ಭೀಮಶಿ ಕಲಾದಗಿ ಅವರ ಪುತ್ರ. ವಿಜಯಪುರ ನಗರದಲ್ಲಿ 30 ವರ್ಷಗಳಿಂದ ‘ಪ್ರಜಾವಾಣಿ’ ಸೇರಿದಂತೆ ಇತರೆ ದಿನಪತ್ರಿಕೆ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳ್ಳಿಯಲ್ಲಿ ಆದರ್ಶ, ಪ್ರಗತಿಪರ ರೈತ, ನಗರದಲ್ಲಿ ಪತ್ರಿಕಾ ವಿತರಕ ಎಂಬ ಪ್ರಸಿದ್ಧಿಗೆ ಪಾತ್ರರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.