ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್) ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ತೋಟಗಾರಿಕಾ ಮೇಳ ಶನಿವಾರ ಮುಕ್ತಾಯಗೊಂಡಿತು. ದೇಶದ ವಿವಿಧ ರಾಜ್ಯಗಳಿಂದ ಭೇಟಿ ನೀಡಿದ ಸಾವಿರಾರು ರೈತರು ಮೇಳ ಕಣ್ತುಂಬಿಕೊಂಡರು.
ಎರಡನೇ ಶನಿವಾರ ರಜಾದಿನ ಆದ ಕಾರಣ ಮೇಳ ವೀಕ್ಷಿಸಲು ನಗರವಾಸಿಗಳು ಹಾಗೂ ವಿವಿಧ ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.
ರೈತರ ಅಗತ್ಯಕ್ಕೆ ತಕ್ಕಂತೆ ಸಿದ್ಧಪಡಿಸಲಾದ ಹತ್ತಾರು ಉಪಯುಕ್ತ ಯಂತ್ರೋಪಕರಣಗಳು ಮೇಳದಲ್ಲಿ ಗಮನ ಸೆಳೆದವು. ಮೈದಾನದಲ್ಲಿ ಎಲ್ಲ ಬಗೆಯ ಉಪಕರಣಗಳನ್ನು ಪ್ರದರ್ಶನಕ್ಕಿಟ್ಟಿರುವ ವಿವಿಧ ಕಂಪನಿಗಳು, ರೈತರಿಗೆ ಪ್ರಾತ್ಯಕ್ಷಿಕೆ ತೋರಿಸುತ್ತಿದ್ದವು. ಒಟ್ಟು 200ಕ್ಕೂ ಹೆಚ್ಚು ಮಳಿಗೆಗಳು ಇಲ್ಲಿದ್ದವು. ವಿವಿಧ ತಳಿಗಳ ಬಗ್ಗೆ ಮತ್ತು ಹೊಸ ಸಂಶೋಧನೆಗಳ ಕುರಿತು ರೈತರು ಮಾಹಿತಿ ಪಡೆದುಕೊಂಡರು.
ರಾಸಾಯನಿಕ ಬಳಸಿ ಕೃಷಿ ಮಾಡದೆ ಸಾವಯವ ಕ್ಷೇತ್ರದ ಕಡೆಗೂ ರೈತರನ್ನು ಆಕರ್ಷಿಸಲಾಗುತ್ತಿದೆ. ಮಿತವ್ಯಯದ ನೀರು ಬಳಕೆಯಿಂದ ನಗರ ತೋಟಗಾರಿಕೆಗಾಗಿ ಮಣ್ಣುರಹಿತ ಕೃಷಿ, ಲಂಬ ಕೃಷಿ, ಹೈಡ್ರೋಫೋನಿಕ್ಸ್ ಕುರಿತು ನಗರವಾಸಿಗಳು ಮತ್ತು ಯುವಕರು ಐಐಎಚ್‌ಆರ್ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಳ್ಳುವಲ್ಲಿ ತಲ್ಲೀನರಾಗಿದ್ದರು.
ತೋಟಗಾರಿಕೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ.ಸುರೇಶ್, ಐಐಎಚ್‌ಆರ್‌ನ ತಂತ್ರಜ್ಞಾನಗಳನ್ನು ಪ್ರತಿಯೊಬ್ಬ ರೈತರು ಬಳಸಿಕೊಂಡು ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚಿನ ಲಾಭ ಪಡೆದುಕೊಳ್ಳಬೇಕು. ಜೊತೆಗೆ ಪ್ರತಿಯೊಬ್ಬ ರೈತರಿಗೆ ಇಲ್ಲಿನ ಮಹತ್ವದ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು.
ಬೀಜ ಖರೀದಿಗೆ ಮುಗಿಬಿದ್ದ ಜನ: ಐಐಎಚ್‍ಆರ್ ಅಭಿವೃದ್ಧಿಪಡಿಸಿರುವ ಹಣ್ಣು, ತರಕಾರಿ, ಹೂವು ಸುಧಾರಿತ ಬೆಳೆಗಳ ಬಿತ್ತನೆ ಬೀಜಗಳನ್ನು ಖರೀದಿಸುವಲ್ಲಿ ರೈತರಿಗಿಂತ ಹೆಚ್ಚಾಗಿ ನಗರದ ಜನರು ಮುಗಿಬಿದ್ದಿದ್ದರು. ಬಿತ್ತನೆ ಬೀಜದ ಪ್ಯಾಕ ಗಳಲ್ಲಿ ವಿಶೇಷವಾಗಿ ಕುಂಬಳಕಾಯಿ, ಪಾಲಕ್ ಸೊಪ್ಪು, ಹೀರೆಕಾಯಿ ಮತ್ತಿತರ ಬೀಜಗಳನ್ನು ಖರೀದಿಸುತ್ತಿದ್ದರು. 1 ಗ್ರಾಂ ನಿಂದ 10 ಗ್ರಾಂವರೆಗೆ ಬಿತ್ತನೆ ಬೀಜಗಳು ಮಾರಾಟವಾಗುತ್ತಿದ್ದವು. ಜತೆಗೆ ಕಿಚನ ಗಾರ್ಡನ್ ಕಿಟಗಳಿಗೂ ಹೆಚ್ಚು ಬೇಡಿಕೆಯಿತ್ತು. 25 ನಾನಾ ತರಕಾರಿಯ ಬೀಜಗಳು, 10 ಬಗೆಯ ಹೂವಿನ ಬೀಜಗಳು ಮಾರಾಟವಾಗುತ್ತಿದ್ದವು. ಇದರ ಕೌಂಟರ್ ಪ್ರತ್ಯೇಕವಾಗಿತ್ತು. ಜತೆಗೆ ನರ್ಸರಿಗಳಲ್ಲಿ ಸಸಿಗಳೂ ಹೆಚ್ಚು ಮಾರಾಟವಾಗುತ್ತಿವೆ’ ಎಂದು ಐಐಎಚ್‍ಆರ್‌ನ ಸಸ್ಯ ಮತ್ತು ಬೀಜೋತ್ಪಾದನೆ ವಿಭಾಗದ ಪ್ರಧಾನ ವಿಜ್ಞಾನಿ ಎಚ್.ಎಸ್. ಯೋಗೀಶ್ ಅವರು ಮಾಹಿತಿ ನೀಡಿದರು.
₹3 ಕೋಟಿಗೂ ಹೆಚ್ಚು ವಹಿವಾಟು
ನಾಲ್ಕು ದಿನ ನಡೆದ ರಾಷ್ಟ್ರೀಯ ತೋಟಗಾರಿಕೆ ಮೇಳದ ಒಟ್ಟು ₹3 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ಶನಿವಾರ ₹5 ಲಕ್ಷಕ್ಕೂ ಹೆಚ್ಚು ವಹಿವಾಟಾಗಿದೆ ಎಂದು ಮೇಳದ ಪ್ರಚಾರ ಸಮಿತಿ ಅಧ್ಯಕ್ಷ ಡಾ. ಪಿ. ನಂದೀಶ್ ಮಾಹಿತಿ ನೀಡಿದರು.
ಸಸ್ಯ ಸಂರಕ್ಷಣೆಗಾಗಿ ಡ್ರೋನ್ ಸಹಾಯದ ಮೂಲಕ ರಾಸಾಯನಿಕಗಳನ್ನು ಸಿಂಪಡಣೆ ಮಾಡುವ ವಿಧಾನದ ಪ್ರಾತ್ಯಕ್ಷಿಕೆ ನೀಡಲಾಯಿತು. ಇದರಿಂದ 4 ಸಾವಿರಕ್ಕೂ ಹೆಚ್ಚು ರೈತರು ಅನುಕೂಲ ಪಡೆದುಕೊಂಡರು. ತೋಟಗಾರಿಕೆ ತಂತ್ರಜ್ಞಾನದ ಕಾರ್ಯಗಾರದಲ್ಲಿ ಶನಿವಾರ 30 ಯುವ ರೈತರು ಪಾಲ್ಗೊಂಡಿದ್ದರು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.