ADVERTISEMENT

ರಾಷ್ಟ್ರೀಯ ಮಾವು ದಿನ: ಹಣ್ಣುಗಳ ರಾಜನ ಬಗ್ಗೆ ತಿಳಿಯೋಣ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2021, 7:25 IST
Last Updated 22 ಜುಲೈ 2021, 7:25 IST
ಮಾವಿನ ಹಣ್ಣುಗಳು.. ಪ್ರಾತಿನಿಧಿಕ ಚಿತ್ರ
ಮಾವಿನ ಹಣ್ಣುಗಳು.. ಪ್ರಾತಿನಿಧಿಕ ಚಿತ್ರ   

ಭಾರತೀಯರಿಗೆ ಬಹಳ ಇಷ್ಟವಾದ ಹಣ್ಣು ಎಂದರೆ ಮಾವಿನ ಹಣ್ಣು. ಆದ್ದರಿಂದ ದೇಶದಲ್ಲಿ ಮಾವನ್ನು ‘ಹಣ್ಣುಗಳ ರಾಜ'ಎಂದು ಕರೆಯುತ್ತಾರೆ. ಭಾರತೀಯರಿಗೆ ಮಾವು ಜೀವನದ ಒಂದು ಭಾಗವಾಗಿದೆ ಎಂದರೆ ಅತಿಶಯೋಕ್ತಿಯಲ್ಲ! ಯಾಕೆಂದರೆ ದಿನದಲ್ಲಿ ಒಂದು ಸಲವಾದರೂ ಊಟದ ಜೊತೆಗೆ ಮಾವಿನ ಉಪ್ಪಿನಕಾಯಿ ಸವಿಯುತ್ತಾರೆ ಎಂಬುದು!

ಮಾವುಗಳಿಗೆ ಜಾಗತಿಕವಾಗಿ 5000 ವರ್ಷಗಳ ಇತಿಹಾಸವಿದೆ. ಮಾವುಗಳ ಮೂಲ ಇರುವುದು ಪೂರ್ವ ಏಷ್ಯಾದಲ್ಲಿ ಎನ್ನಲಾಗಿದೆ. ಇಲ್ಲಿಯೂ ಕೂಡ ಮಾವುಗಳನ್ನು ಸಾವಿರಾರು ವರ್ಷಗಳ ಹಿಂದೆ ಬೆಳೆಯುತ್ತಿದ್ದರು ಎಂಬುದಕ್ಕೆ ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ಉಲ್ಲೇಖವಿದೆ. ವೇದ, ಪುರಾಣಗಳಲ್ಲೂ ಮಾವುಗಳ ಕುರಿತು ಹೇಳಲಾಗಿದೆ ಎಂದು ವಿದ್ವಾಂಸರು ಹೇಳುತ್ತಾರೆ.1400ರಲ್ಲಿ ಪೋರ್ಚುಗೀಸರುಕೇರಳದಿಂದ ಆಫ್ರಿಕಾ, ಅಮೆರಿಕ, ಯುರೋಪ್‌ಗೆ ಮಾವುಗಳನ್ನು ಒಯ್ದರು ಎಂದು ಇತಿಹಾಸ ಹೇಳುತ್ತದೆ.

ಭಾರತ ವಿಶ್ವದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ದೇಶವಾಗಿದೆ. ವಿಶ್ವದಲ್ಲಿ ಬೆಳೆಯಲಾಗುವ ಮಾವಿನ ಹಣ್ಣಿನ ಪ್ರಮಾಣದಲ್ಲಿ ಭಾರತದ ಪಾಲು ಶೇಕಡ 59 ರಷ್ಟು. ಇಲ್ಲಿ ಸಮಶೀತೋಷ್ಣ ವಾತಾವರಣ ಇರುವುದರಿಂದ ಮಾವುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

ADVERTISEMENT

ತಮಿಳಿನ ‘ಮಂಗಾಯ್’ ಎನ್ನುವ ಪದದಿಂದ ಮಾವು ಎನ್ನುವ ಹೆಸರು ಬಂದಿದೆ. ಉತ್ತರ ಭಾರತದಲ್ಲಿ ಮಾವನ್ನು ‘ಆಮ್’ ಎಂದು ಕರೆಯುತ್ತಾರೆ. ‘ಆಮ್’ ಪದದ ಮೂಲ ಇರುವುದು ಸಂಸ್ಕೃತದಲ್ಲಿ.

ಭಾರತದಲ್ಲಿ ಅಂದಾಜು ಒಂದು ಸಾವಿರ ಮಾವಿನ ವಿಧಗಳು ಇವೆ. ಪ್ರತೀ ವಿಧದ ಮಾವು ಕೂಡ ತನ್ನದೇ ಆದ ರುಚಿ ಹೊಂದಿದೆ. ಲಂಗ್ರಾ, ಕೇಸರ್, ಆಲ್ಫನ್ಸೊ, ರಸಪುರಿ, ಹಿಮಸಾಗರ್, ಬಾದಾಮಿ, ಮಲ್ಲಿಕಾ, ಆಪೂಸ್‌, ಮಲ್‌ಗೋವಾ, ಬಂಗನಪಲ್ಲಿ ಮತ್ತು ತೋತಾಪುರಿ ದೇಶದಲ್ಲಿ ಜನಪ್ರಿಯವಾಗಿರುವ ಕೆಲವು ವಿಧಗಳು.

ಸದಾ ಹಸಿರೆಲೆಗಳಿಂದ ಕೂಡಿರುವ ಮಾವಿನ ಮರ ಅಂದಾಜು 15 ಮೀಟರ್‌ಗಳಷ್ಟು ಎತ್ತರ ಬೆಳೆಯುತ್ತದೆ. ಮಾವಿನ ಹಣ್ಣಿನಲ್ಲಿಪೊಟ್ಯಾಸಿಯಂ, ಕ್ಯಾಲ್ಷಿಯಂ, ಫಾಸ್ಪರಸ್ ಮತ್ತು ಕಾರ್ಬೊಹೈಡ್ರೇಟ್‌ಗಳು ಸೇರಿದಂತೆ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೌಷ್ಟಿಕಾಂಶಗಳು ಸಿಗುತ್ತವೆ.

ಭಾರತದಲ್ಲಿ ಪ್ರತಿ ವರ್ಷ ಜುಲೈ 22ರಂದು ರಾಷ್ಟ್ರೀಯ ಮಾವು ದಿನ ಎಂದು ಆಚರಿಸಲಾಗುತ್ತದೆ. ಭಾರತೀಯ ಮಾವುಗಳ ತಳಿಗಳನ್ನು ಜಗತ್ತಿಗೆ ಪರಿಚಯಿಸುವುದು ಮತ್ತು ಮಾವಿನ ಬೆಳೆಯನ್ನು ಲಾಭದಾಯಕವಾಗಿಸುವುದು ಮಾವು ದಿನದ ಉದ್ದೇಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.