ಅಡ್ಕತ್ತಿಮಾರ್ ಗೋಪಾಲಕೃಷ್ಣ ಭಟ್ಟರಿಗೆ ಪಪ್ಪಾಯಿ ಕೃಷಿಯಲ್ಲಿ ಎರಡೂವರೆ ದಶಕದ ಅನುಭವ. ಇವರು ಕೇರಳದ ಕಾಸರಗೋಡು ಜಿಲ್ಲೆಯ ಪೈವಳಿಕೆ ಸನಿಹದವರು. ಸ್ಥಳೀಯ ತಳಿಗಳನ್ನು ಬೆಳೆಯುತ್ತಿದ್ದ ಅವರನ್ನು ಮಾರುಕಟ್ಟೆಯಲ್ಲಿ ಸೆಳೆದುದು ‘ಥೈವಾನ್ ರೆಡ್ ಲೇಡಿ’ ತಳಿ. ಆ ತಳಿಯ ರುಚಿ ಅವರ ನಾಲಗೆಯನ್ನು ಗೆದ್ದಿತು. ಹೀಗಾಗಿ ಅದೇ ತಳಿಯ ಬೀಜದಿಂದ ಸಸಿಗಳನ್ನು ಅಭಿವೃದ್ಧಿಪಡಿಸಿದ್ದರು. ಕಾಯಿಯೇನೋ ಬಿಟ್ಟಿತು. ಆದರೆ ಆಕರ್ಷಕವಾಗಿರಲಿಲ್ಲ. ಪ್ರತಿವರ್ಷವೂ ಕಂಪನಿಯ ಬೀಜಗಳನ್ನೇ ಬಳಸಬೇಕೆಂಬ ವಿಚಾರ ತಿಳಿಯಿತು. ಬೆಂಗಳೂರಲ್ಲಿ ಓಡಾಡಿ ಬೀಜ ಪತ್ತೆ ಮಾಡಿದರು.
ಹತ್ತು ಗ್ರಾಂ ಪ್ಯಾಕೆಟ್‌ಗೆ ಸುಮಾರು ನಾಲ್ಕು ಸಾವಿರ ರೂಪಾಯಿ. ಅದರಲ್ಲಿರುವ 600-700 ಬೀಜಗಳಲ್ಲಿ ಮೊಳಕೆ ಯೊಡೆಯುವುದು ಅರ್ಧದಷ್ಟು ಮಾತ್ರ. ಜುಲೈ ಕೊನೆಗೆ ಸಸಿಗ ಳನ್ನು ಸಿದ್ಧ ಮಾಡಿಟ್ಟುಕೊಳ್ಳುತ್ತಾರೆ. ನೆಟ್ಟು 150ರಿಂದ 160 ದಿವಸಗಳಲ್ಲಿ ಫಸಲು ಶುರು. ತೀರಾ ನೆರಳಿನಲ್ಲಿ ಗಿಡವಿದ್ದರೆ ಫಂಗಸ್ ಬಂದುಬಿಡುತ್ತದೆ. ಬಿಸಿಲಿನಲ್ಲಿ ಬಾಡುತ್ತದೆ. ಎಚ್ಚರ ಅಗತ್ಯ.
ಏರು ಮಡಿಯ ಆರಡಿ ಉದ್ದದ ಒಂದೂವರೆ ಅಡಿ ಆಳದ ಸಾಲು. ಸಾಲಿನ ಕೆಳಭಾಗದಲ್ಲಿ ಮಣ್ಣು, ಅದರ ಮೇಲೆ ಐದು ಕೆ.ಜಿಯಷ್ಟು ಕೋಳಿಹಿಕ್ಕೆ, ನಂತರ ಮಣ್ಣಿನ ಪದರ, ಅದರ ಮೇಲೆ ಸಸಿಗಳನ್ನು ನೆಡುತ್ತಾರೆ. ತಿಂಗಳಿಗೊಮ್ಮೆ ಕೋಳಿಗೊಬ್ಬರ ಉಣಿಕೆ. ಬುಡದಿಂದ ಒಂದು ಗೇಣು ಅಂತರದಲ್ಲಿ ಸುತ್ತ ಗೊಬ್ಬರ ಹಾಕುತ್ತಾರೆ. ಬುಡಕ್ಕೆ ಹಾಕಿದರೆ ಗಿಡ ಬಾಡುತ್ತದೆ.
ನವೆಂಬರ್, ಡಿಸೆಂಬರ್‌ನಲ್ಲಿ ವಾರಕ್ಕೆ ಎರಡು ಬಾರಿ ನೀರು ಪೂರೈಕೆ. ಪ್ರತಿ ಗಿಡಕ್ಕೆ ಸುಮಾರು 20 ಲೀಟರ್ ನೀರು. ತುಂತುರು ನೀರಾವರಿಯಾದರೆ ನೀರಿನ ವೇಸ್ಟೇಜ್ ಕಡಿಮೆ. ಆಗಸ್ಟ್‌ನಲ್ಲಿ ಮಳೆ ಕಡಿಮೆಯಾದಷ್ಟೂ ಉತ್ತಮ ಫಸಲು. ಚಳಿಗಾಲದಲ್ಲಿ ರೋಗ ಜಾಸ್ತಿ. ಸೆಕೆ ಹವೆ ಒಳ್ಳೆಯದು. ಪಪ್ಪಾಯಿ ಬೆಳೆಯುತ್ತಾ ಬರುವಾಗ ಕಾಯಿಗೆ ನೀರು ಸೋಕಬಾರದು. ನೀರು ಸೋಕಿದ ಜಾಗದಲ್ಲಿ ಕಾಯಿಯ ಬಣ್ಣ ಬದಲಾಗುತ್ತದೆ.
ಒಂದು ಗಿಡದಲ್ಲಿ 50 ಕೆ.ಜಿಯಿಂದ ಒಂದೂಕಾಲು ಕ್ವಿಂಟಲ್ ತನಕ ಕಾಯಿಗಳು! ಪಪ್ಪಾಯಿ ಕೊಯ್ಯುವಲ್ಲೂ ಎಚ್ಚರವಾಗಿರಬೇಕು. ಬಲಿತ ಕಾಯಿಯ ಕೆಳಭಾಗವು ಕೆಂಪು-ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯ್ಯುತ್ತಾರೆ. ಕೈಯಲ್ಲೇ ತಿರುಗಿಸಿ ಕೊಯ್ದಾಗ ತೊಟ್ಟಿನಿಂದ ಜಿನುಗುವ ಹಾಲು (ಸೊನೆ) ಕಾಯಿಯ ಮೇಲೆ ಬೀಳಕೂಡದು. ಬಿದ್ದಷ್ಟು ಜಾಗ ಕಪ್ಪಾಗಿ ಬಿಡುತ್ತದೆ. ನೋಟ ಕಳೆದುಕೊಳ್ಳುತ್ತದೆ.
ಪಪ್ಪಾಯಿಯನ್ನು ಕೊಯ್ಯಲು ಸಂಜೆ ಪ್ರಶಸ್ತ. ‘ಬೆಳಿಗ್ಗೆ ತೊಟ್ಟಿನಲ್ಲಿ ಹಾಲಿನ ಪ್ರಮಾಣ ಹೆಚ್ಚು. ಸಂಜೆಯಾದರೆ ಹತ್ತನೇ ಒಂದರಷ್ಟು ಭಾಗ ಮಾತ್ರ ಇರುತ್ತದೆ. ಹಾಗಾಗಿ ಸಂಜೆ ನಾಲ್ಕು ಗಂಟೆಯ ನಂತರ ಕೊಯ್ಲಿಗೆ ಪ್ರಶಸ್ತ’ ಎನ್ನುತ್ತಾರೆ. ಹೀಗೆ ಕೊಯ್ದ ಪಪ್ಪಾಯಿಯನ್ನು ಒಂದು ದಿವಸ ನೆರಳಿನಲ್ಲಿಡುತ್ತಾರೆ. ನಂತರ ಹಳೆಯ ನ್ಯೂಸ್‍ಪೇಪರ್‌ನಲ್ಲಿ ಸುತ್ತಿಟ್ಟರೆ ಮಾರಾಟಕ್ಕೆ ಸಿದ್ಧ. ಕೆ.ಜಿಗೆ ಸರಾಸರಿ 22 ರಿಂದ 30 ರೂಪಾಯಿ ದರ. ತನ್ನೂರಿನಿಂದ ಶುರುವಾಗಿ ತಲಪಾಡಿ, ಉಪ್ಪಳ, ಕುಂಬಳೆ, ಸೀತಾಂಗೋಳಿ ತನಕ ಮಾರಾಟ ಸರಪಳಿ.
‘ಭಟ್ರ ಪಪ್ಪಾಯಿಯ ಸಿಪ್ಪೆಯಲ್ಲಿ ಉಪ್ಪಿನ ರುಚಿ ಇಲ್ಲ. ಬೇರೆಡೆಯಿಂದ ತಂದುದರಲ್ಲಿ ಈ ಅನುಭವ ಆಗುತ್ತಿದೆ’ ಎನ್ನುತ್ತಾರಂತೆ ಅಂಗಡಿಯವರು. ‘ದೂರದೂರಿನಿಂದ ಬರುವ ಹೈಬ್ರಿಡ್ ತಳಿಗಳಿಗೆ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು, ಕೀಟನಾಶಕಗಳನ್ನು ಸಿಂಪಡಿಸುತ್ತಾರೆ. ಅದರ ಪ್ರಭಾವವೇ ಸಿಪ್ಪೆಯಲ್ಲಿ ಉಪ್ಪಿನ ಅಂಶ ಇರಬಹುದು. ನನ್ನ ಪಪ್ಪಾಯಿಗೆ ರಾಸಾಯನಿಕ ಗೊಬ್ಬರಗಳ ಉಣಿಕೆಯಿಲ್ಲ. ಕೀಟನಾಶಕಗಳ ಸಿಂಪಡಣೆಯಿಲ್ಲ’– ಭಟ್ಟರಿಂದ ಅಂಗಡಿಯವರಿಗೆ ಸಾವಯವ ಅರಿವಿನ ಹರಿವು.
ಗೋಪಾಲಕೃಷ್ಣ ಭಟ್ಟರು ಸ್ವ-ರೂಢಿತ ಮಾರುಕಟ್ಟೆ ‘ಕೆಣಿ’(ಉಪಾಯ)ಯಲ್ಲಿ ಸೋತಿಲ್ಲ. ಅಂಗಡಿಯವರು ಹೆಚ್ಚು ಪಪ್ಪಾಯಿಗೆ ಬೇಡಿಕೆ ಸಲ್ಲಿಸಿದರೆ ‘ಇಲ್ಲ’ ಎನ್ನುತ್ತಾರೆ. ಒತ್ತಾಯಿಸಿದರೆ ಮಾರುಕಟ್ಟೆ ದರಕ್ಕಿಂತ ನಾಲ್ಕು-ಐದು ರೂಪಾಯಿ ಹೆಚ್ಚು ಬೇಡಿಕೆ ಇಡುತ್ತಾರೆ. ‘ನಾನಾಗಿ ಕೊಡುವಾಗ ಅವರು ಕೊಟ್ಟ ರೇಟ್. ಅವರಾಗಿ ಕೇಳಿದರೆ ನನ್ನ ರೇಟು’!
ಒಂದು ಕಾಲಘಟ್ಟದಲ್ಲಿ ಮಾರುಕಟ್ಟೆ ತಂತ್ರಗಳು ಗೊತ್ತಿಲ್ಲದೆ ಪಪ್ಪಾಯಿ ಹಾಳಾದುದೇ ಹೆಚ್ಚು. ಪೈವಳಿಕೆಯಿಂದ ಉಪ್ಪಳಕ್ಕೆ 15 ಕಿ.ಮೀ ದೂರ. ಅದು ಹಣ್ಣಿನ ದೊಡ್ಡ ಮಾರುಕಟ್ಟೆ. ಮೊದಲು ‘ನಮಗೆ ಬೇಕಾದಷ್ಟು ಪಪ್ಪಾಯಿ ನಗರದಿಂದ ಬರುತ್ತದೆ. ನಿಮ್ಮದು ಬೇಡ’ ಎಂದು ಮುಖ ತಿರುಗಿಸಿದರಂತೆ. ಯಾರು ಬೇಡ ಅಂದರೋ ಅವರ ಅಂಗಡಿಯ ಮುಂದೆ ಕಾರಿನ ಡಿಕ್ಕಿಯಲ್ಲಿ ಹಣ್ಣನ್ನು ತುಂಬಿ ತಾನೇ ನಿಂತು ವ್ಯಾಪಾರ ಮಾಡಿದರು. ಮೂರ್ನಾಲ್ಕು ದಿವಸಗಳ ಬಳಿಕ ‘ನೀವು ಇಲ್ಲಿ ಮಾರುವುದಾದರೆ ನಮಗ್ಯಾಕೆ ಕೊಡಬಾರದು’ ಎಂದರಂತೆ. ಬೇಡ ಎಂದು ಹೇಳಿದವರು ಈಗ ದೊಡ್ಡ ಗಿರಾಕಿ!
‘ಹೈಬ್ರಿಡ್ ಪಪ್ಪಾಯಿಯನ್ನು ಕೃಷಿಕರು ಬೆಳೆಯಲು ಸಾಧ್ಯವಿಲ್ಲ. ಅದು ದೂರದ ಪಟ್ಟಣದಿಂದಲೇ ಬರಬೇಕು – ಎಂಬ ನಂಬುಗೆ ಬಹುತೇಕ ಅಂಗಡಿಯವರದ್ದು! ಹಾಗೆ ತಂದಾಗಲೇ ಅದಕ್ಕೆ ಮಾನ. ಗೋಪಾಲಕೃಷ್ಣ ಭಟ್ಟರು ಪ್ರತಿ ಅಂಗಡಿಯಲ್ಲಿ ‘ತಾವೇ ಬೆಳೆದುದು’ ಎಂದು ಪ್ರತ್ಯೇಕವಾಗಿ ವಿವರಣೆ ನೀಡಬೇಕಾಯಿತು. ನಂತರವಷ್ಟೇ ಖರೀದಿಗೆ ಒಪ್ಪಿದರು. ಮರುವರ್ಷ ಅಂಗಡಿಯವರೇ ‘ಭಟ್ರ ಪಪ್ಪಾಯಿ ಬೇಕಿತ್ತಲ್ಲಾ, ಅನೇಕ ಮಂದಿ ಕೇಳ್ತಾರೆ’ ಎಂದು ಬೇಡಿಕೆ ಮುಂದಿಟ್ಟರಂತೆ. ಹೀಗೆ ಭಟ್ಟರ ಬದುಕಿಗೆ ಗೆಲುವು ತಂದಿದೆ ಪಪ್ಪಾಯ ಕೃಷಿ.
ಭಟ್ಟರ ಸಂಪರ್ಕಕ್ಕಾಗಿ (04998) 205330
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.