ಚಿಕ್ಕನಾಯಕನಹಳ್ಳಿ: ಮಲೆನಾಡಿನ ಬೆಳೆ ಕಾಳುಮೆಣಸನ್ನು ತಾಲ್ಲೂಕಿನ ಸಾಧಾರಣ ಮಳೆ ಬೀಳುವ ಬಯಲು ಸೀಮೆ ಪ್ರದೇಶದಲ್ಲಿ ಬೆಳೆದು ರೈತರೊಬ್ಬರು ಅಚ್ಚರಿ ಮೂಡಿಸಿದ್ದಾರೆ.
ಕೆಲ ದಶಕಗಳಲ್ಲಿ ಬರ ಆವರಿಸಿ, ಅಂತರ್ಜಲ ಕುಸಿದು ಕಲ್ಪತರು ನಾಡೆಂದೇ ಪ್ರಸಿದ್ಧವಾದ ಈ ನೆಲದಲ್ಲಿ ತೆಂಗು ಉಳಿದಿದ್ದೇ ಹೆಚ್ಚು. ಬೆಂಕಿರೋಗದಿಂದ ಮರಗಳ ಮಾರಣ ಹೋಮ ಒಂದೆಡೆಯಾದರೆ, ಬೆಲೆ ಕುಸಿತದಿಂದ ತೆಂಗು ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದರು.
ಇಂತಹ ಸಂಕಷ್ಟಗಳನ್ನೆದುರಿಸಿದ್ದ ನೆಲದಲ್ಲೀಗ ಅಡಿಕೆ ಜೊತೆಗೆ ಕಾಳು ಮೆಣಸಿನಂತಹ ವಾಣಿಜ್ಯ ಬೆಳೆಗಳು ಸದ್ದು ಮಾಡುತ್ತಿವೆ. ರೈತರು ನೀರಿನ ಲಭ್ಯತೆಗೆ ಅನುಗುಣವಾಗಿ ವಾಣಿಜ್ಯ ಬೆಳೆಗಳ ಕಡೆ ಮಗ್ಗಲು ಬದಲಿಸುತ್ತಿರುವುದರ ಸಂಕೇತವಾಗಿ ಇದು
ಕಾಣುತ್ತಿದೆ.
ತೋಟಗಾರಿಕೆಯಲ್ಲಿ ಸದಾ ಪ್ರಯೋಗಶೀಲರಾಗಿರುವ ತಾಲ್ಲೂಕಿನ ಶೆಟ್ಟಿಕೆರೆ ಗ್ರಾಮದ ಅರುಣ್‌ಕುಮಾರ್ ತಮ್ಮ ತೋಟದಲ್ಲಿ ಮಲೆನಾಡಿನ ಹಲವು ಬೆಳೆಗಳನ್ನು ಬೆಳೆದಿದ್ದಾರೆ. ಮಲೆನಾಡಿನ ಜತೆ ನಿಕಟ ಸಂಪರ್ಕದಲ್ಲಿರುವ ಅವರು, ತಮ್ಮ ಮೂರೂವರೆ ಎಕರೆ ತೆಂಗು ಹಾಗೂ ಅಡಕೆ ತೋಟದಲ್ಲಿ ಮರಗಳಿಗೆ ಗಿಡ ಹಬ್ಬಿಸಿ ಪ್ರಾಯೋಗಿಕವಾಗಿ ಕೃಷಿ ಆರಂಭಿಸಿದ್ದಾರೆ.
10 ವರ್ಷದ ಹಿಂದೆ 700 ಸಸಿ ನೆಟ್ಟಿದ್ದರು. ಈ ಪೈಕಿ 300ರಲ್ಲಿ ಏಳು ವರ್ಷಗಳಿಂದ ಫಸಲು ಕಾಣಲಾರಂಭಿಸಿದ್ದಾರೆ. ಗಿಡಕ್ಕೆ 2.5 ಕೆ.ಜಿಯಷ್ಟು ಒಟ್ಟು 6 ಕ್ವಿಂಟಲ್ ಫಸಲು ಸಿಗುತ್ತಿದೆ. ಕಳೆದ ವರ್ಷ ಬೆಳೆಯಿಂದ ₹3.5 ಲಕ್ಷ ಆದಾಯ ಗಳಿಸಿದ್ದಾರೆ. ಕೊಯ್ಲು ಮಾಡಿ ಒಣಗಿಸಿ ಸ್ಥಳೀಯವಾಗಿ ಮಾರಾಟ ಮಾಡುತ್ತಾರೆ. ತಿಪಟೂರು, ಶೃಂಗೇರಿ ಕಡೆಗೂ ಒಯ್ದು ಕೆ.ಜಿ ₹600ರಂತೆ ಮಾರಾಟ
ಮಾಡುತ್ತಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮಳೆ ಹೆಚ್ಚಾಗಿ ಹಾಗೂ ಸಮರ್ಪಕ ನಿರ್ವಹಣೆ ಮಾಡಲು ಬರದೆ 70 ಗಿಡ
ಹಾಳಾದವು. ಬಯಲು ಸೀಮೆಯಲ್ಲಿ ಬೆಳೆ ನಿರ್ವಹಣೆ ಕಷ್ಟ. ಬೇವಿನ ಹಿಂಡಿ, ಜೀವಾಮೃತ ಮತ್ತಿತರ ಉಪಕ್ರಮಗಳಿಂದ ಗಿಡ ಕಾಪಾಡುತ್ತಿದ್ದೇವೆ. ನಮ್ಮ ತೋಟ ನೋಡಿದ ಮೇಲೆ ತಾಲ್ಲೂಕಿನ ನಾಲ್ಕೈದು ರೈತರೂ ಕಾಳುಮೆಣಸು ಬೆಳೆಯಲಾರಂಭಿಸಿದ್ದಾರೆ ಎನ್ನುತ್ತಾರೆ ಅರುಣ್‌ಕುಮಾರ್.
ಬಿಳಿ ಮೆಣಸು: ಗುಣಮಟ್ಟದ ಮೆಣಸನ್ನು ಬಿಡಿಸಿ ಅದರಿಂದ ಸಣ್ಣ ಕಾಳು ಪ್ರತ್ಯೇಕಿಸಿ ನೀರಿನಲ್ಲಿ ಇಪ್ಪತ್ತು ದಿನ ನೆನೆಸಿಡುತ್ತಾರೆ. ಕಾಳಿನ ಮೇಲ್ಪದರ ತೆಗೆದು ಬಿಳಿ ಮೆಣಸು ಸಿದ್ಧಪಡಿಸುತ್ತಾರೆ. ಇದನ್ನು ಹತ್ತು ವರ್ಷ ಕೆಡದಂತೆ ಇಡಬಹುದು
ಎನ್ನುತ್ತಾರೆ ರೈತ.
ಕೊಯ್ಲಿಗೆ ಸರಳ ವಿಧಾನ: ಕಾಳುಮೆಣಸನ್ನು 10ರಿಂದ 20 ಅಡಿ ಮೇಲಿನ ಬಳ್ಳಿಗಳಿಂದ ಕೊಯ್ಲು ಮಾಡಿ ಕೆಳಗೆ ಎಸೆದರೆ ಪೋಲಾಗುತ್ತದೆ. ಕೊಯ್ಲು ಮಾಡಿದ ಫಸಲನ್ನು ಹೊತ್ತುಕೊಂಡು ಕೆಲಸ ಮುಂದುವರಿಸುವುದು ಕಷ್ಟ. ಅದಕ್ಕೆ ಪರಿಹಾರವಾಗಿ ನಾಲ್ಕು ಇಂಚಿನ ಪಿವಿಸಿ ಪೈಪ್ ಮೇಲ್ತುದಿಯನ್ನು ಮರಕ್ಕೆ ತಂತಿಯಿಂದ ಕಟ್ಟಲಾಗುತ್ತದೆ. ಪೈಪ್‌ನ ಕೆಳ ತುದಿಗೆ ಮೂವತ್ತು ಅಡಿ ಉದ್ದದ ಸೀರೆ ಕಟ್ಟಲಾಗಿದೆ. ಕೊಯ್ದ ಕಾಳುಮೆಣಸನ್ನು ಪೈಪ್ ಮೇಲ್ಭಾಗದಲ್ಲಿ ಹಾಕಿದರೆ ಸರಾಗವಾಗಿ ಜಾರಿ ನೆಲದ ಮೇಲೆ ಬೀಳುತ್ತದೆ. ಅಲ್ಲಿಂದ ನೇರವಾಗಿ ಚೀಲಕ್ಕೆ ಹಾಕಲಾಗುತ್ತದೆ. ಈ ವಿಧಾನ ಪ್ರಯೋಗಿಸಿ ಒಂದು ಕಾಳು ಪೋಲಾಗದಂತೆ
ನೋಡಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.