ತುಮಕೂರು: ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಹಣ್ಣಿನ ರಾಜ ಮಾವು ಇಳುವರಿ ಹೆಚ್ಚಾಗಲಿದೆ. ಮಾವು ಬೆಳೆಗೆ ಬೇಕಾದ ಪ್ರಶಸ್ತ ವಾತಾವರಣ ನಿರ್ಮಾಣವಾಗಿರುವುದು, ಉತ್ತಮ ಮಳೆ, ರೋಗ ಬಾಧೆ ನಿಯಂತ್ರಣಕ್ಕೆ ಬಂದಿರುವುದು ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಿದೆ.
ಈ ಸಲ ಶೇ 30ರಿಂದ 40ರಷ್ಟು ಅಧಿಕ ಇಳುವರಿ ನಿರೀಕ್ಷಿಸಲಾಗಿದೆ. ಹಿಂದಿನ ವರ್ಷ ಮಳೆ ಕೊರತೆ, ರೋಗ ಬಾಧೆ ಮೊದಲಾದ ಕಾರಣಗಳಿಂದ ಉತ್ಪಾದನೆ ಗಮನಾರ್ಹ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಸುಮಾರು 1.71 ಲಕ್ಷ ಮೆಟ್ರಿಕ್ ಟನ್‌ಗಳಷ್ಟೇ ಉತ್ಪಾದನೆಯಾಗಿತ್ತು. ಮಾವು ಬೆಳೆಯುವಲ್ಲಿ ಮುಂಚೂಣಿಯಲ್ಲಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಹಣ್ಣು ತರಿಸಲಾಗಿತ್ತು. ಆದರೆ ಈ ಸಲ ಜಿಲ್ಲೆಯಲ್ಲಿ ಉತ್ತಮ ಇಳುವರಿ ನಿರೀಕ್ಷಿಸಲಾಗಿದ್ದು, 2 ಲಕ್ಷ ಟನ್‌ವರೆಗೂ ಉತ್ಪಾದನೆ ಆಗಬಹುದು ಎಂದು ಹೇಳಲಾಗುತ್ತಿದೆ.
ಉತ್ತಮ ವಾತಾವರಣ: ಡಿಸೆಂಬರ್ ತಿಂಗಳವರೆಗೂ ಉತ್ತಮ ಮಳೆಯಾಗಿದ್ದು ಮಾವು ಬೆಳೆಗೆ ಸಹಕಾರಿಯಾಗಿದೆ. ಚಂಡಮಾರುತದ ಪರಿಣಾಮ ಜನವರಿಯಲ್ಲಿ ಬಂದ ಮಳೆಯಿಂದ ರೋಗ ಹೆಚ್ಚಾಗಿ, ಇಳುವರಿ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತಿತ್ತು. ಈ ಸಂದರ್ಭದಲ್ಲಿ ಬೂದಿ ರೋಗ, ಹೂ ಕೊಳೆಯುವ ರೋಗ ಕಾಣಿಸಿಕೊಂಡಿತ್ತು. ತಕ್ಷಣಕ್ಕೆ ಮಳೆ ನಿಂತು, ಔಷಧೋಪಚಾರದಿಂದ ರೋಗ ನಿಯಂತ್ರಣಕ್ಕೆ ಬಂದಿದೆ. ನಂತರದ ದಿನಗಳಲ್ಲಿ ಶುಷ್ಕ ವಾತಾವರಣ ನಿರ್ಮಾಣವಾಗಿದ್ದು, ಬೆಳೆಗೆ ಪೂರಕವಾಗಿದೆ. ರೈತರ ಮುಖದಲ್ಲೂ ಮಂದಹಾಸ ಮೂಡಿದೆ.
ಮರದಲ್ಲಿ ಬಿಟ್ಟ ಎಲ್ಲಾ ಹೂವಿನಲ್ಲೂ ಕಾಯಿ ಕಟ್ಟುವುದಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಉದುರಿ ಹೋಗುತ್ತವೆ. ಈ ಸಲ ಹೂವು ಉದುರುವ ಪ್ರಮಾಣ ಕಡಿಮೆ ಇದೆ. ಹಾಗಾಗಿ ಮರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಯಿಗಳು ಕಂಡುಬರುತ್ತಿವೆ. ಈ ಕಾಯಿಗಳಲ್ಲೂ ಕೆಲವು ಉದುರುತ್ತವೆ. ಆದರೂ ಈಗಿನ ವಾತಾವರಣವನ್ನು ಗಮನಿಸಿದರೆ ಇಳುವರಿ ಉತ್ತಮವಾಗಿರುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಮರ ಗುತ್ತಿಗೆ: ಏಪ್ರಿಲ್ ವೇಳೆಗೆ ಜಿಲ್ಲೆಯ ಮಾವು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಮಾವು ಮೇ ತಿಂಗಳ ನಂತರ ಮಾರುಕಟ್ಟೆಗೆ ಬರಲಿದ್ದು, ಅದಕ್ಕೂ ಮುನ್ನ ಜಿಲ್ಲೆಯ ಮಾವಿನ ಹಣ್ಣನ್ನು ಜನರು ಸವಿಯಬಹುದಾಗಿದೆ. ಉತ್ತಮ ಬೆಲೆಯೂ ಸಿಗುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಹಣ್ಣಿನ ವ್ಯಾಪಾರಿಗಳು ಹೊಲದಲ್ಲಿ ಮರಗಳು ಹೂ ಬಿಟ್ಟಿರುವ ಪ್ರಮಾಣವನ್ನು ಗಮನಿಸಿ ಬೆಲೆ ನಿಗದಿಪಡಿಸಿಕೊಂಡು ರೈತರಿಗೆ ಮುಂಗಡ ಹಣ ನೀಡಿ ಗುತ್ತಿಗೆಗೆ ಪಡೆದಿದ್ದಾರೆ. ಕಾಯಿ ಬಲಿತುಕುಯ್ಲಿಗೆ ಬಂದ ಸಮಯದಲ್ಲಿ ಪೂರ್ಣ ಹಣಕೊಟ್ಟು ಕಿತ್ತುಕೊಂಡು ಹೋಗುತ್ತಾರೆ.
‘ಈಗಾಗಲೇ ಮಾವಿನ ತೋಟವನ್ನು ರೈತರು ಉತ್ತಮ ಬೆಲೆಗೆ ಮಾರಾಟ ಮಾಡಿದ್ದಾರೆ. ವ್ಯಾಪಾರಿಗಳು ಮರದಲ್ಲಿ ಬಿಟ್ಟಿರುವ ಹೂವನ್ನು ಗಮನಿಸಿ ಬೆಲೆ ನಿಗದಿಪಡಿಸಿ ಮುಂಗಡ ಹಣ ನೀಡಿದ್ದಾರೆ. ಒಳ್ಳೇ ರೇಟ್ ಸಿಕ್ಕಿದೆ’ ಎಂದು ತಾಲ್ಲೂಕಿನ ಕಣಕುಪ್ಪೆ ಗ್ರಾಮದ ರೈತ ನಾಗೇಶ್ ತಿಳಿಸಿದರು.
ಪ್ರದೇಶ ಹೆಚ್ಚಳ: ಪ್ರಸ್ತುತ ಜಿಲ್ಲೆಯಲ್ಲಿ 20,469 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಮಾವು ಬೆಳೆಯುವ ಪ್ರದೇಶ ವಿಸ್ತಾರವಾಗುತ್ತಿದ್ದು, ಕಳೆದ ಮೂರು–ನಾಲ್ಕು ವರ್ಷಗಳಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ.
***
ಉತ್ತಮ ಇಳುವರಿ
ಈ ಬಾರಿ ಮಾವು ಬೆಳೆಗೆ ಪೂರಕ ವಾತಾವರಣವಿದ್ದು, ಹಿಂದಿನ ವರ್ಷಕ್ಕಿಂತ ಉತ್ಪಾದನೆಯಲ್ಲಿ ಹೆಚ್ಚಳವಾಗಲಿದೆ. ರೋಗ ಬಾಧೆಯೂ ನಿಯಂತ್ರಣದಲ್ಲಿದೆ. ಮಾವು ಉತ್ಪಾದನೆಯಲ್ಲಿ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಬೆಳೆಗೆ ಯಾವುದೇ ಸಮಸ್ಯೆ ಕಾಣಿಸುತ್ತಿಲ್ಲ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.