ತುಮಕೂರು ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿಸಲುನಿರ್ಧರಿಸಿದ್ದರೂ ಈವರೆಗೂ ಖರೀದಿ ಕೇಂದ್ರಗಳು ಕಾರ್ಯಾರಂಭ ಮಾಡಿಲ್ಲ. ಪ್ರತಿ ದಿನವೂ ರೈತರು ಇಂದು, ನಾಳೆ ಆರಂಭವಾಗಬಹುದು ಎಂದು ಕಾಯುತ್ತಾ ಕುಳಿತಿದ್ದಾರೆ.
ಇಲಾಖೆಗಳ ನಡುವೆ ಸಮನ್ವಯದ ಕೊರತೆ ಹಾಗೂ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬವಾಗಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಖರೀದಿ ಕೇಂದ್ರಗಳಲ್ಲಿ ಖರೀದಿಸಿದ ರಾಗಿಯನ್ನು ದಾಸ್ತಾನು ಮಳಿಗೆಗಳಿಗೆ ಸಾಗಣೆ ಮಾಡಲು ಈವರೆಗೂ ಗುತ್ತಿಗೆದಾರರನ್ನು ನೇಮಕ ಮಾಡಿಲ್ಲ. ರಾಗಿ ಖರೀದಿಸಿದರೆ ಎಲ್ಲಿ ದಾಸ್ತಾನು ಮಾಡುವುದು ಎಂಬ ಚಿಂತೆ ಆಹಾರ ಇಲಾಖೆ ಅಧಿಕಾರಿಗಳನ್ನು ಕಾಡುತ್ತಿದೆ. ಹಾಗಾಗಿ ಖರೀದಿಯನ್ನೇ ಆರಂಭಿಸಿಲ್ಲ. ಮತ್ತೊಂದೆಡೆ ದಾಸ್ತಾನು ಮಾಡಿಟ್ಟುಕೊಳ್ಳಲು ಸಾಧ್ಯವಾಗದ ರೈತರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ನಿರ್ಧರಿಸಿದ ತಕ್ಷಣವೇ ಸಾಗಣೆಗೂ ಗುತ್ತಿಗೆದಾರರನ್ನು ನಿಗದಿಪಡಿಸಲು ಟೆಂಡರ್ ಕರೆಯಬೇಕಿತ್ತು. ಸಾಗಣೆಗೆ ಗುತ್ತಿಗೆ ನೀಡುವ ನಿರ್ಧಾರವನ್ನು ಜಿಲ್ಲಾ ಮಟ್ಟದಲ್ಲಿ ತೆಗೆದುಕೊಳ್ಳುವುದಿಲ್ಲ. ರಾಜ್ಯ ಮಟ್ಟದಲ್ಲಿ ಕೆಎಫ್‌ಸಿಎಸ್‌ಸಿ ವ್ಯವಸ್ಥಾಪಕ ನಿರ್ದೇಶಕರ ಹಂತದಲ್ಲಿ ಕ್ರಮ ಕೈಗೊಳ್ಳಬೇಕಿದೆ. ಆದರೆ ಈವರೆಗೂ ಸಾಗಣೆ ಗುತ್ತಿಗೆದಾರರನ್ನು ನಿಗದಿಪಡಿಸಲು ಸಾಧ್ಯವಾಗಿಲ್ಲ.
ಈಗಾಗಲೇ ನೋಂದಣಿ ಮಾಡಿಸಲು ರೈತರಿಗೆ ಅವಕಾಶ ನೀಡಲಾಗಿದ್ದು, ಮಾರ್ಚ್ 14ರ ಒಳಗೆ ರಾಗಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಇನ್ನೂ ಒಂದು ತಿಂಗಳಷ್ಟೇ ಬಾಕಿ ಉಳಿದಿದೆ. ಈ ಅವಧಿಯಲ್ಲಿ ಸರ್ಕಾರಿ ರಜಾ ದಿನಗಳನ್ನು ಕಳೆದರೆ ಸುಮಾರು 25 ದಿನಗಳೂ ಸಿಗುವುದಿಲ್ಲ. ಇಷ್ಟು ಕಡಿಮೆ ಸಮಯದಲ್ಲಿ ನೋಂದಣಿ ಮಾಡಿಸಿದ ಎಲ್ಲಾ ರೈತರಿಂದ ರಾಗಿ ಖರೀದಿಸುವುದು ಕಷ್ಟಕರ ಎಂದು ಅಧಿಕಾರಿಗಳು ಹೇಳುತ್ತಾರೆ.
ಜಿಲ್ಲಾಧಿಕಾರಿ ಪತ್ರ: ತುರ್ತಾಗಿ ರಾಗಿ ಖರೀದಿ ಆರಂಭಿಸಬೇಕು. ತಕ್ಷಣವೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಸಾಗಾಣಿಕೆ ಮಾಡುವ ಗುತ್ತಿಗೆದಾರರನ್ನು ನಿಗದಿಪಡಿಸಬೇಕು. ಖರೀದಿ ಸಮಯವನ್ನು ಮಾರ್ಚ್ 31ರ ವರೆಗೂ ವಿಸ್ತರಿಸುವಂತೆ ಕೋರಿ ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್ ಅವರು ಕೆಎಫ್‌ಸಿಎಸ್‌ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಫೆ. 6ರಂದು ಪತ್ರ ಬರೆದಿದ್ದಾರೆ.
ಹಿಂದಿನ ಸಲ ಗುತ್ತಿಗೆ ಪಡೆದವರಿಗೆ ಮಾರ್ಚ್ 4ರ ವರೆಗೆ ಸಾಗಣೆ ಮಾಡಲು ಕಾಲಾವಕಾಶ ಇದೆ. ತಾತ್ಕಾಲಿಕವಾಗಿ ಅವರನ್ನೇ ಮುಂದುವರಿಸಬಹುದಿತ್ತು. ಇಲ್ಲವೇ ಪೂರ್ಣ ಪ್ರಮಾಣದಲ್ಲಿ ಅವರಿಗೆ ಗುತ್ತಿಗೆ ನೀಡಬಹುದಿತ್ತು. ಹೊಸದಾಗಿ ನೇಮಕ ಆಗುವವರೆಗೂ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರೆ ರಾಗಿ ಖರೀದಿ ಆರಂಭಿಸಬಹುದಿತ್ತು. ನಿರ್ಧಾರ ವಿಳಂಬದಿಂದ ಖರೀದಿ ತಡವಾಗಿದೆ ಎಂದು ಮೂಲಗಳು ತಿಳಿಸಿವೆ.
ತಕ್ಷಣ ಖರೀದಿಸಲಿ: ತಕ್ಷಣ ರಾಗಿ ಖರೀದಿ ಆರಂಭಿಸಬೇಕು. ಮತ್ತಷ್ಟು ವಿಳಂಬ ಮಾಡಿದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಹೆಬ್ಬೂರಿನ ರೈತ ಮಹದೇವಸ್ವಾಮಿ ಒತ್ತಾಯಿಸಿದರು.
₹3,295 ನಿಗದಿ
ರಾಗಿ ಪ್ರತಿ ಕ್ವಿಂಟಲ್‌ಗೆ ₹3,285 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಬೆಂಬಲ ಬೆಲೆಯಲ್ಲಿ ಖರೀದಿಸಿದ ನಂತರ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಖರೀದಿ ಕೇಂದ್ರದಲ್ಲಿ ಹಣ ನೀಡುವುದಿಲ್ಲ.
30 ಸಾವಿರ ರೈತರ ನೋಂದಣಿ
ತಾಲ್ಲೂಕು ಮಟ್ಟದ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಲು ಅವಕಾಶ ನೀಡಿದ್ದು, ಕೃಷಿ ಇಲಾಖೆ ನೀಡಿರುವ ಐಡಿಯನ್ನು ಖರೀದಿ ಕೇಂದ್ರದಲ್ಲಿ ಹಾಜರುಪಡಿಸಿ ನೋಂದಾಯಿಸಿಕೊಳ್ಳಬೇಕು.
ಈವರೆಗೆ ಜಿಲ್ಲೆಯಲ್ಲಿ 30 ಸಾವಿರ ರೈತರು ನೋಂದಣಿ ಮಾಡಿಸಿದ್ದು, 6.92 ಲಕ್ಷ ಕ್ವಿಂಟಲ್ ರಾಗಿ ಖರೀದಿಸಬೇಕಿದೆ. ಇನ್ನೂ ನೋಂದಣಿಗೆ ಕಾಲಾವಕಾಶ ಇರುವುದರಿಂದ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು.
ಖರೀದಿ ಕೇಂದ್ರಗಳು
ಪಾವಗಡ ತಾಲ್ಲೂಕು ಹೊರತುಪಡಿಸಿ ಉಳಿದ ತಾಲ್ಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಈ ವರ್ಷ ಹೆಚ್ಚುವರಿಯಾಗಿ ಹುಳಿಯಾರು, ಚೇಳೂರಿನಲ್ಲಿ ಕೇಂದ್ರ ಆರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.