ಅರಸೀಕೆರೆ: ಅಂತರ್ಜಲವಿಲ್ಲದಿದ್ದರೂ ಅರಸೀಕೆರೆ ಹೋಬಳಿಯ ತವಡೂರು ಗ್ರಾಮದ ಪ್ರಗತಿಪರ ರೈತ ದುರ್ಗದ ಕೆಂಚಪ್ಪ ಸ್ಟ್ರಾಬೆರಿ ಬೆಳೆದು ಯಶಸ್ವಿಯಾಗಿದ್ದಾರೆ.
ದೀರ್ಘಕಾಲದ ಬೆಳೆಯಿಂದ ಕೈ ಸುಟ್ಟುಕೊಂಡಿದ್ದ ರೈತ ದುರ್ಗದ ಕೆಂಚಪ್ಪ ಸ್ನೇಹಿತರೊಬ್ಬರ ಸಲಹೆಯಂತೆ ಸ್ಟ್ರಾಬೆರಿ ಬೆಳೆ ಬೆಳೆದು ಬೆರಗು ಮೂಡಿಸಿದ್ದಾರೆ.
ದುರ್ಗದ ಕೆಂಚಪ್ಪ ತನ್ನ ಒಂದು ಎಕರೆ ಜಮೀನಿನ ಅರ್ಧ ಜಾಗದಲ್ಲಿ ಹಿಮಾಚಲ ಪ್ರದೇಶದಿಂದ ತರಿಸಿದ 300 ಸ್ಟ್ರಾಬೆರಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಮೂರು ಅಡಿ ಅಗಲ 20 ಅಡಿ ಉದ್ದದ ಮಡಿಗಳನ್ನು ಮಾಡಿ ಒಂದು ಅಡಿ ಅಂತರದಲ್ಲಿ ಸಸಿಗಳನ್ನು ಬೆಳೆಸಿದ್ದಾರೆ. ನಾಟಿ ಮಾಡಿದ ಒಂದೇ ತಿಂಗಳಲ್ಲಿ ಬೆಳೆ ಆರಂಭವಾಗಿದ್ದು, ಸತತ ನಾಲ್ಕು ತಿಂಗಳ ಕಾಲ ಫಸಲು ಕೈಗೆ ಸಿಗಲಿದೆ.
ಸಸಿಗಳನ್ನು ತರಿಸಲು ಪ್ರತಿ ಸಸಿ ನಿರ್ವಹಣೆ ವೆಚ್ಚಸೇರಿ ₹30 ತಗುಲಿದೆ. ತುಸು ಹೆಚ್ಚೇ ಅನಿಸಿದರೂ ಕೀಟನಾಶಕ ಹೊರತುಪಡಿಸಿದರೆ ಹಣ್ಣು ಕಟಾವಿಗೆ ಮನೆ ಮಂದಿಯೇ ಸಾಕು ಎನ್ನುತ್ತಾರೆ ದುರ್ಗದ ಕೆಂಚಪ್ಪ.
‘ಒಂದು ಬಾಕ್ಸ್ 200 ಗ್ರಾಂ ತೂಕದ 10 ಪಾಕೇಟ್ ಒಳಗೊಂಡಿದೆ. ಇಂಥ ಬಾಕ್ಸ್‌ಗಳನ್ನು ಆರಂಭದಲ್ಲಿ ಒಂದು ಬಾಕ್ಸ್‌ಗೆ ₹300ರಂತೆ ಮಾರುಕಟ್ಟೆಗೆ ಕಳುಹಿಸಲಾಗುತ್ತಿತ್ತು. ನಂತರದಲ್ಲಿ 500 ರೂಪಾಯಿವರೆಗೆ ಮಾರಾಟ ಆಗಿದೆ. ಮೂರು ತಿಂಗಳ ಕಾಲ ಬೆಳೆ ಕಟಾವು ಸಿಗಲಿದೆ. ₹60 ಸಾವಿರ ಖರ್ಚು ತಗುಲಿದ್ದು, ₹70 ಸಾವಿರದಷ್ಟು ಲಾಭ ನೀಡಿದೆ’ ಎಂದು ಬೆಳೆಯ ಲೆಕ್ಕಾಚಾರವಿವರಿಸಿದರು.
ಕಡಿಮೆ ವೆಚ್ಚದಲ್ಲಿ ದೀರ್ಘಾವಧಿಯಲ್ಲಿ ಹೆಚ್ಚು ಲಾಭ ಸಿಗುವ ಬೆಳೆಯಾಗಿರುವುದರಿಂದ ಬಯಲು ಸೀಮೆಯಲ್ಲಿ ಸ್ಟ್ರಾಬೆರಿ ಬೆಳೆಯುವುದು ರೈತರಿಗೆ ಹೊರೆಯಲ್ಲ. ಹನಿ ನೀರಾವರಿಯ ಮೂಲಕ ಕಡಿಮೆ ನೀರಿನೊಂದಿಗೆ ಬೆಳೆಯುವ ಸ್ಟ್ರಾಬೆರಿ ಉತ್ತಮ ಲಾಭದಾಯಕ ಬೆಳೆಯಾಗಿದೆ.
ಮಾರುಕಟ್ಟೆಗೆ ಸಹಕರಿಸಿದ ಸಾಮಾಜಿಕ ಜಾಲತಾಣ: ಮೊದಲ ಪ್ರಯೋಗದಲ್ಲಿಯೇ ಸ್ಟ್ರಾಬೆರಿ ನಿರೀಕ್ಷೆಗೂ ಅಧಿಕ ಇಳುವರಿ ಲಭಿಸಿದೆ. ಆರಂಭದಲ್ಲಿ ಮಾರುಕಟ್ಟೆ ಸಮಸ್ಯೆ ಇದುರಾಗಿತ್ತು, ನಂತರದಲ್ಲಿ ವಾಟ್ಸಾಪ್ ಗ್ರೂಪ್ ನೆರವಾಯಿತು. ಅಧಿಕಾರಿಗಳ ನೆರವಿನಿಂದ ಹಾಪ್ಸ್ ಕಾಮ್ ನಿಂದ ನಿರಂತರ ಕರೆಗಳು ಬಂದಿದ್ದವು. ಆದರೆ ಹಣ್ಣುಗಳು ಬೇಗ ಕೆಡುವುದರಿಂದ ಮಾರುಕಟ್ಟೆಗೆ ಕಳುಹಿಸಲು ಸಾಧ್ಯವಾಗಲಿಲ್ಲ. ನಂತರದಲ್ಲಿ ಕೆಂಚಪ್ಪ ಅವರಿಗೆ ಹತ್ತಿರದ ಮಾರುಕಟ್ಟೆಯ ವ್ಯವಸ್ಥೆಗೆ ಸಾಮಾಜಿಕ ಜಾಲತಾಣ ಸಹಕಾರಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.