ಮೂಡಲಗಿ: ತಾಲ್ಲೂಕಿನ ಅವರಾದಿಯ ರೈತ ಲಕ್ಷ್ಮಣ ಸಿದ್ದಪ್ಪ ಗಡ್ಡಿ ಅವರು ರೇಷ್ಮೆ ಕೃಷಿ ಮಾಡಿ ಯಶಸ್ಸು ಗಳಿಸುತ್ತಿದ್ದಾರೆ.
ನಾಲ್ಕು ಎಕರೆ ಭೂಮಿ ಹೊಂದಿರುವ ಅವರು ಮೂರು ಎಕರೆ ಭೂಮಿಯಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ಒಂದು ಎಕರೆ ಭೂಮಿಯನ್ನು ಹಿಪ್ಪನೇರಳೆ ಬೆಳೆಗೆ ಮೀಸಲಿಟ್ಟಿದ್ದಾರೆ. ಕಬ್ಬು ಮತ್ತು ರೇಷ್ಮೆಯ ಹಿಪ್ಪನೇರಳೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಅಥವಾ ಕ್ರಿಮಿನಾಶಕವನ್ನಾಗಲಿ ಸ್ವಲ್ಪವೂ ಬಳಸದೆ, ಸಾವಯವ ಪದ್ಧತಿ ಅನುಸರಿಸುತ್ತಿದ್ದಾರೆ. ಇದು ಇತರ ರೈತರ ಗಮನಸೆಳೆದಿದೆ.
ಹಿಪ್ಪನೇರಳೆಗೆ ಹನಿ ನೀರಾವರಿ ಅಳವಡಿಸಿದ್ದಾರೆ. ಹೀಗಾಗಿ ನೀರಿನ ಮಿತವ್ಯಯ ಇದೆ. ‘ಹಿಪ್ಪನೇರಳೆ ಬೆಳೆಯಲ್ಲಿ ಕಳೆ ತೆಗೆಯುವುದು, ಆಗಾಗ ಅಮೃತಪಾನಿ, ಜೀವಾಮೃತ ನೀಡುವುದು ಬಿಟ್ಟರೆ ಬೇರೆ ಯಾವ ಕಷ್ಟದ ನಿರ್ವಹಣೆ ಇರುವುದಿಲ್ಲ’ ಎನ್ನುತ್ತಾರೆ ಲಕ್ಷ್ಮಣ.
‘ಇಪ್ಪತ್ತ ವರ್ಷದಿಂದ ರೇಷ್ಮೆ ಮಾಡಕೋಂತ ಬಂದನ್ರೀ. ಕಬ್ಬ ಕೈಕೊಟ್ಟಾಗ ರೇಷ್ಮೀ ಬೆಳೆ ನನ್ನ ಕೈ ಹಿಡದೈತ್ರೀ...’ ಎಂದು ರೇಷ್ಮೆ ಕೃಷಿಯ ಬಗ್ಗೆ ಅಭಿಮಾನದ ಮಾತು ಹೇಳುತ್ತಾರೆ.
ಸುಸಜ್ಜಿತ ಶೆಡ್
ರೇಷ್ಮೆ ಹುಳುಗಳನ್ನು ಸಾಕಲು, 30 ಮತ್ತು 50 ಉದ್ದಗಲದ ಶೆಡ್ ಮಾಡಿದ್ದಾರೆ. ಗಾಳಿ, ಬೆಳಕಿನ ವ್ಯವಸ್ಥೆ ಇದೆ. ಎಕರೆಯಲ್ಲಿ ಬೆಳೆಯುವ ಹಿಪ್ಪನೇರಳೆಗೆ ಅವಶ್ಯವಿರುವ ಒಂದು ನೂರರಷ್ಟು ಮೊಟ್ಟೆ (ಲಿಂಕ್ಸ್)ಗಳನ್ನು ₹ 1500ಕ್ಕೆ ಖರೀದಿಸಿ ಶೆಡ್‌ನಲ್ಲಿ ಬೆಳೆಸುತ್ತಾರೆ. ನೂರು ಲಿಂಕ್ಸ್‌ನಲ್ಲಿ 50ರಿಂದ 60 ಸಾವಿರದಟ್ಟು ಹುಳುಗಳ ಸಂತತಿಯಾಗಿ ಗೂಡು ಕಟ್ಟಲು ಪ್ರಾರಂಭಿಸುತ್ತವೆ. 21 ದಿನಗಳು ಮುಗಿಯುತ್ತಿದ್ದಂತೆಯೆ ರೇಷ್ಮೆ ಗೂಡು ಕಟ್ಟುವ ಅವಧಿ ಮುಕ್ತಾಯವಾಗುತ್ತದೆ.
‘ಸಾವಯವ ಪದ್ಧತಿಯಲ್ಲಿ ಬೆಳೆಯುವ ಹಿಪ್ಪನೇರಳೆಯಿಂದ ರೇಷ್ಮೆ ಹುಳುಗಳಿಗೆ ರೋಗ ಬಾಧಿಸುವುದಿಲ್ಲ ಹಾಗೂ ರೇಷ್ಮೆ ಉತ್ಪಾದನೆಯ ಗುಣಮಟ್ಟದಾಗಿರುತ್ತದೆ’ ಎನ್ನುತಾರೆ ಲಕ್ಷ್ಮಣ.
‘ಗೂಡು ಸಿದ್ಧವಾದ ನಂತರ ಮಾರುಕಟ್ಟೆಗಾಗಿ ಗೋಕಾಕ ಅಥವಾ ಮುಧೋಳದಲ್ಲಿರುವ ಸರ್ಕಾರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅನುಕೂಲವಿದೆ. ಪ್ರತಿ ಸಾಕಾಣಿಕೆಯಲ್ಲಿ 70ರಿಂದ 80 ಕೆ.ಜಿ.ಯಷ್ಟು ಗೂಡು ಸಿದ್ಧವಾಗುತ್ತಿದ್ದು ವರ್ಷದಲ್ಲಿ 5 ಬಾರಿ ಸಾಕಾಣಿಕೆ ಮಾಡುತ್ತಿದ್ದೇನೆ. ಕೆ.ಜಿ. ಗೂಡಿಗೆ ₹ 400ರಿಂದ ₹ 500ವರೆಗೆ ದರ ದೊರೆಯುತ್ತಿದೆ. ಹೀಗಾಗಿ ಪ್ರತಿ ವರ್ಷ ಸಣ್ಣ, ಪುಟ್ಟ ಖರ್ಚುಗಳನ್ನು ತೆಗೆದು ರೇಷ್ಮೆಯಲ್ಲಿ ಸರಾಸರಿ ₹ 1.20 ಲಕ್ಷದಿಂದ ₹ 1.40ವರೆಗೆ ವರಮಾನವಿದೆ’ ಎಂದು ಅನುಭವ ಹಂಚಿಕೊಂಡರು.
ಕಬ್ಬಿನ ಬೆಳೆ
ಅವರು ಮೂರು ಎಕರೆ ಭೂಮಿಯಲ್ಲಿ ಶುದ್ಧ ಸಾವಯದಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಸದೇ ಎಕರೆಗೆ 50ರಿಂದ 60 ಟನ್ ಕಬ್ಬು ಬೆಳೆಯುತ್ತಿದ್ದಾರೆ. ಕಬ್ಬು ಮತ್ತು ರೇಷ್ಮೆ ಬೆಳೆಗಳೊಂದಿಗೆ ಅಲಸಂದೆ, ಗೋವಿನ ಜೋಳ, ತರಕಾರಿ ಮಿಶ್ರ ಬೆಳೆಗಳನ್ನು ಬೆಳೆದು ಆದಾಯದೊಂದಿಗೆ ಖುಷಿ ಕಾಣುತ್ತಿದ್ದಾರೆ.
ಸಾವಯಕ್ಕಾಗಿ ಜೀವಸಾರ ಘಟಕ ಮತ್ತು 20 ಮತ್ತು 30 ಅಡಿಯ ಎರೆಹುಳ ಘಟಕ ಮಾಡಿಕೊಂಡಿದ್ದಾರೆ. ನಾಲ್ಕು ಎಮ್ಮೆ, 4 ದೇಸಿ ಆಕಳು, 3 ಅಡುಗಳನ್ನು ಸಾಕಿದ್ದು, ಅವುಗಳ ಸಗಣೆ ಮತ್ತು ಗಂಜಲವನ್ನು ಸಾವಯವ ನಿರ್ವಹಣೆಗೆ ಬಳಸಿಕೊಳ್ಳುತ್ತಿದ್ದಾರೆ. ಅವರ ಸಂಪರ್ಕಕ್ಕೆ ಮೊ: 9900460423.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.