ADVERTISEMENT

ಬಹುಬೆಳೆಯ ‘ಕೃಷಿ ಬದುಕು’!

ಜಿ.ಚಂದ್ರಕಾಂತ
Published 24 ಜೂನ್ 2019, 19:30 IST
Last Updated 24 ಜೂನ್ 2019, 19:30 IST
ಬಹುಬೆಳೆಯ ಕೃಷಿಕ
ಬಹುಬೆಳೆಯ ಕೃಷಿಕ   

ಹನ್ನೆರಡು ಎಕರೆಯಲ್ಲಿ ಏಳೆಂಟು ಬೆಳೆಗಳಿವೆ. ಅಷ್ಟೇ ಪ್ರಮಾಣದ ಪಶು ಸಂಪತ್ತಿದೆ. ಒಂದು ಬೆಳೆಯ ನಂತರ, ಮತ್ತೊಂದು ಬೆಳೆ ಕೊಯ್ಲಿಗೆ ಬರುತ್ತದೆ. ಯಶಸ್ವಿ ಬಹುಬೆಳೆಯ ಕೃಷಿ ಬದುಕಿಗೆ ಇದೊಂದು ಉತ್ತಮ ಉದಾಹರಣೆ.

ಹನ್ನೆರಡು ಎಕರೆ ಜಮೀನಿನಲ್ಲಿ ಬೆಳೆ ವೈವಿಧ್ಯವಿದೆ. ಪಶು ಸಂಪತ್ತಿನ ವೈವಿಧ್ಯವಿದೆ. ಬೆಳೆ ನಿರ್ವಹಣೆಗೆ ಒಂದು ತೆರೆದ ಬಾವಿ, ಮೂರು ಕೊಳವೆ ಬಾವಿಗಳಿವೆ. ಆದರೂ ಮಿತ ನೀರಿನ ಬಳಕೆಗಾಗಿ ಹನಿ ನೀರಾವರಿಯನ್ನೇ ನೆಚ್ಚಿದ್ದಾರೆ. ತೋಟದ ಬಾಗಿಲಿಗೆ ಮಾರುಕಟ್ಟೆ ಆಹ್ವಾನಿಸುವ ಈ ಬಹುಬೆಳೆಯ ಕೃಷಿ ಜಮೀನು ಇರುವುದು ಬೀದರ್‌ ತಾಲ್ಲೂಕಿನ ನಾಗರೋರ ಗ್ರಾಮದಲ್ಲಿ.

ಇದು 33ರ ಹರೆಯದ ರಾಜಕುಮಾರ ರಾಯಗೊಂಡ ಅವರ ಕೃಷಿಕರ ಜಮೀನು. ಈ ಜಮೀನಿನ ಎದುರು ನಿಂತರೆ ಬಹುಬೆಳೆ ವೈವಿಧ್ಯದ ‘ಕೃಷಿ ಬದುಕು’ ಅನಾವರಣಗೊಳ್ಳುತ್ತದೆ.

ADVERTISEMENT

ಹದಿನೈದು ವರ್ಷಗಳ ಹಿಂದೆ ತಂದೆ ಅಡಿವೆಪ್ಪ ರಾಯಗೊಂಡ ತೀರ ಹೋದ ನಂತರ, ಪಿಯುಸಿ ಓದುತ್ತಿದ್ದ ರಾಜಕುಮಾರ, ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿ, ಇಷ್ಟು ದೊಡ್ಡ ಹಿಡುವಳಿ ಕೃಷಿಯ ಜವಾಬ್ದಾರಿ ಹೊತ್ತರು. ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆ ಬೆಳೆಯುತ್ತಿದ್ದ ಅವರು, ಕೃಷಿ ತಜ್ಞರು, ತೋಟಗಾರಿಕೆ ತಜ್ಞರ ಸಲಹೆಯೊಂದಿಗೆ ಆರು ವರ್ಷಗಳಿಂದ ‘ಬಹುಬೆಳೆ ಕೃಷಿ ಮತ್ತು ಸಮಗ್ರ ಕೃಷಿ ಪದ್ಧತಿ’ಯಲ್ಲಿ ಬೆಳೆ ಬೆಳೆಯುತ್ತಿದ್ದಾರೆ.

ಬೆಳೆ ವೈವಿಧ್ಯ

ಆರಂಭದಲ್ಲಿ ಏಳು ಎಕರೆಯಲ್ಲಿ ಬೆಳೆ ಬೆಳೆಯುತ್ತಿದ್ದರು. ಇದಕ್ಕಾಗಿ ಮೂರು ಕೊಳವೆಬಾವಿ ಕೊರೆಸಿದರು. ಜತೆಗೆ ಜಮೀನಿನಲ್ಲಿ ಒಂದು ತೆರೆದಬಾವಿಯೂ ಇತ್ತು. ಉತ್ತಮ ಮಳೆಯಾಗುತ್ತಿದ್ದ ಕಾರಣ, ಕಳೆದ ವರ್ಷದವರೆಗೂ ತೆರೆದ ಬಾವಿಯಲ್ಲಿ ನೀರು ಉತ್ತಮವಾಗಿತ್ತು. ಆದರೆ, ಈ ವರ್ಷ ಮಳೆ ಕೊರತೆಯಾದ ಕಾರಣ, ನೀರು ಕಡಿಮೆಯಾಗಿದೆ. ಆದರೆ ಕೊರತೆಯಾಗುವಷ್ಟಿಲ್ಲ. ಈ ಎರಡೂ ಜಲ ಮೂಲಗಳನ್ನೇ ಆಧರಿಸಿ, ಹನಿನೀರಾವರಿಯೊಂದಿಗೆ ಕೃಷಿ ಆರಂಭಿಸಿದರು. ಮೊದಲಿಗೆ ಎರಡು ಎಕರೆಯಲ್ಲಿ ‘ಪ್ರತಿಭಾ’ ಅರಿಸಿನ ತಳಿ, 2 ಎಕರೆಯಲ್ಲಿ 2200 ರೆಡ್‌ಲೇಡಿ 786 ತಳಿಯ ಪಪ್ಪಾಯ. ನಂತರ ಮೂರು ಎಕರೆಯಲ್ಲಿ 5 ಸಾವಿರ ಜಿ–9 ಬಾಳೆ, ಮೂರು ಎಕರೆಯಲ್ಲಿ ಶುಂಠಿ ನಾಟಿ ಮಾಡಿದರು. ನಂತರ ಎರಡು ಎಕರೆಯಲ್ಲಿ ಅರಿಸಿನ, ಉಳಿದ ಒಂದೂವರೆ ಎಕರೆಯಲ್ಲಿ ಹೈಬ್ರಿಡ್ ಟೊಮೆಟೊ ಮತ್ತು ಗುಂಟೂರು ಮೆಣಸಿನಕಾಯಿ ಬೆಳೆದರು.

ಪಶು ವೈವಿಧ್ಯ

ರಾಜಕುಮಾರರ ಜಮೀನಿನಲ್ಲಿ ಬೆಳೆ ವೈವಿಧ್ಯದಷ್ಟೇ ಪಶು ಸಂಪತ್ತಿನ ವೈವಿಧ್ಯವೂ ಇದೆ. ಬ್ಯಾಂಕ್‌ನಿಂದ ಹೈನುಗಾರಿಕೆಗಾಗಿ ₹8 ಲಕ್ಷ ಸಾಲ ಪಡೆದಿದ್ದಾರೆ. ಇದರಲ್ಲಿ 12 ಎಮ್ಮೆ ಖರೀದಿಸಿದ್ದಾರೆ. ನಿತ್ಯ 25 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಎಮ್ಮೆಗಳ ಜತೆಗೆ ಕೋಳಿ, ಆಡು, ಕುರಿ, ಮೇಕೆ, ಪಾರಿವಾಳ ಸಾಕಿದ್ದಾರೆ. ಸಾವಯವ ಕೃಷಿಗೆ ಗೊಬ್ಬರ ಅವಶ್ಯವಿರುವ ಕಾರಣ, ಪಶು ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ. ಇವುಗಳಿಂದ ತೋಟಕ್ಕೆ ಬೇಕಾಗುವಷ್ಟು ಗೊಬ್ಬರ ಲಭ್ಯವಾಗುತ್ತಿದೆಯಂತೆ.

ಬೆಳೆಗಳಿಗೆ ಎರೆಗೊಬ್ಬರ, ಕೊಟ್ಟಿಗೆ ಗೊಬ್ಬರ ಕೊಡುತ್ತಾರೆ. ನಿಯಮಿತವಾಗಿ ಜೀವಾಮೃತ ನೀಡುತ್ತಾರೆ. ಕೀಟ– ರೋಗ ಬಾಧೆ ತಗುಲಿದಾಗ ಬೆಳ್ಳುಳ್ಳಿ–ಮೆಣಸಿನಕಾಯಿ ಮಿಶ್ರಣದಿಂದ ಮಾಡಿ ಕಷಾಯವನ್ನು, ನಿಯಮಿತವಾಗಿ ಸಿಂಪಡಿಸುತ್ತಾರೆ. ‘ಹೊಲದಲ್ಲೇ ಗೊಬ್ಬರ ಮಾಡಿಕೊಳ್ಳುತ್ತೇವೆ. ಶುಂಠಿ, ಮೆಣಸಿನಕಾಯಿ ನಾವೇ ಬೆಳೆಯುವುದರಿಂದ ಕಷಾಯ ಮಾಡಿಕೊಳ್ಳಲು ಹೊರಗಿನಿಂದ ಏನನ್ನೂ ಖರೀದಿಸುವುದಿಲ್ಲ’ ಎನ್ನುತ್ತಾರೆ ರಾಜಕುಮಾರ. ‘ಬಹುಬೆಳೆ ಪದ್ಧತಿಯಲ್ಲಿ ಜೇನು ಕೃಷಿಗೂ ಸ್ಥಾನ ಕೊಟ್ಟಿದ್ದಾರೆ. ಹೀಗಾಗಿ ಜೇನು ನೊಣಗಳು ಕೃಷಿಗೆ ನೆರವಾಗುತ್ತವೆ. ಬೆಳೆ ಇಳುವರಿ ಹೆಚ್ಚಳಕ್ಕೂ ಕಾರಣವಾಗುತ್ತಿವೆ’ ಎನ್ನುತ್ತಾರೆ ಅವರು.

ಪಶುಗಳಿಗೆ ಒಂದು ಎಕರೆಯಲ್ಲಿ ಹೈಡ್ರೋಫೋನಿಕ್ ವಿಧಾನದಲ್ಲಿ ಮೇವು ಬೆಳೆಸುತ್ತಿದ್ದಾರೆ. ‘ಈ ಪದ್ಧತಿಯಲ್ಲಿ ಹಣ್ಣು, ತರಕಾರಿಯನ್ನೂ ಬೆಳೆಸಬಹುದು. ಇವು ನೆಲದ ಮೇಲೆ ಬೆಳೆದ ಬೆಳೆಯಷ್ಟೇ ಚೆನ್ನಾಗಿರುತ್ತವೆ. ಈ ವಿಧಾನದಲ್ಲಿ ಯಂತ್ರೋಪಕರಣ ಖರೀದಿಸಲು ಹೆಚ್ಚಿನ ಬಂಡವಾಳ ಬೇಕು. ತಜ್ಞರಿಂದ ಸಲಹೆ, ಮಾರ್ಗದರ್ಶನ ಪಡೆದು ಅಳವಡಿಸಿಕೊಳ್ಳುವುದು ಸೂಕ್ತ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಅಶೋಕ ಬಾವಗೆ.

ಯಂತ್ರಗಳ ಬಳಕೆ

ಕಳೆ ತೆಗೆಯುವ ಯಂತ್ರ, ಸೌರವಿದ್ಯುತ್ ಚಾಲಿತ ಪಂಪಸೆಟ್, ಕೀಟ ನಿಯಂತ್ರಣಕ್ಕೆ ಸೋಲಾರ್ ಲೈಟ್ ಟ್ರ್ಯಾಪ್, ಹಂದಿಗಳನ್ನು ಓಡಿಸಲು ಗಾಳಿಯಂತ್ರ.. ಹೀಗೆ ಬಹುತೇಕ ಕೃಷಿ ಚಟುವಟಿಕೆಗಳಿಗೆ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ. ಈ ಮೂಲಕ ಕೂಲಿಕಾರ್ಮಿರ ಕೊರತೆಯನ್ನು ನೀಗಿಸಿಕೊಡಿದ್ದಾರೆ. ‘ನಾನು, ನನ್ನ ಪತ್ನಿ, ತಾಯಿ ಇದ್ದೇವೆ. ಮೂವರು ಸೇರಿ ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತೇವೆ. ಯಂತ್ರಗಳು ಜತೆಗಿರುತ್ತವೆ. ಅವಶ್ಯವಿದ್ದಾಗಷ್ಟೇ ಆಳುಗಳ ಸಹಾಯ ಪಡೆಯುತ್ತೇನೆ’ ಎನ್ನುತ್ತಾರೆ ರಾಜಕುಮಾರ.

ಫಸಲು ಕೊಯ್ಲು ಮಾಡಿದ ನಂತರ, ಅವುಗಳನ್ನು ರಾಶಿ ಹಾಕಿ, ಸಂಸ್ಕರಣೆ ಮಾಡಲು ಪ್ಯಾಕ್‍ಹೌಸ್ ನಿರ್ಮಿಸಿದ್ದಾರೆ. ಇದಕ್ಕಾಗಿ ತೋಟಗಾರಿಕೆ ಇಲಾಖೆ ₹ 2 ಲಕ್ಷ ಸಹಾಯ ಧನ ನೀಡಿದೆ.

ತೋಟಕ್ಕೇ ಬರುವ ಮಾರುಕಟ್ಟೆ

ನಾಗರೋರ ಗ್ರಾಮದಿಂದ ಹೈದರಾಬಾದ್‌ ನೂರು ಕಿ.ಮೀ. ಹಾಗಾಗಿ, ಅಲ್ಲಿನ ದಲ್ಲಾಳಿಗಳು, ಇವರ ಮನೆ ತೋಟಕ್ಕೇ ಬಂದು ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಾರೆ. ‘ಬೆಳೆ ಬೆಳೆಯೋದಷ್ಟೇ ನಮ್ ಕೆಲಸ. ಸ್ವಲ್ಪ ಹೆಚ್ಚಾ ಕಡಿಮೆ ಆದರೂ, ರೊಕ್ಕ ಕೊಟ್ಟು ಖರೀದಿ ಮಾಡ್ತಾರೆ’ ಎನ್ನುವುದು ಅವರ ಅಭಿಪ್ರಾಯ.

ಇವರ ತೋಟದ ಬಾಳೆಗೊನೆ 20 ರಿಂದ 25 ಕೆ.ಜಿ ತೂಗುತ್ತದೆ. ಕೆ.ಜಿಗೆ ₹10 ರಿಂದ ₹12 ಕ್ಕೆ ಖರೀದಿಸುತ್ತಾರೆ. ದೆಹಲಿ ಮಾರುಕಟ್ಟೆಯವರು ಪಪ್ಪಾಯ ಖರೀದಿಗೆ ಬರುತ್ತಾರೆ. ಹೈದರಾಬಾದ್‌ ಮತ್ತು ನಾಂದೇಡ್‌ನವರು ಶುಂಠಿ, ಅರಿಸಿನ ಖರೀದಿಸುತ್ತಾರೆ. ‘ಕೆ.ಜಿ ಪಪ್ಪಾಯ ಬೆಲೆ ₹4 ರಿಂದ ₹10ವರೆಗೂ ಇರುತ್ತದೆ. ಸೀಸನ್‌ ಮೇಲೆ ಬೆಲೆ ನಿಗದಿಯಾಗುತ್ತದೆ’ ಎನ್ನುತ್ತಾರೆ ರಾಜಕುಮಾರ.

ಒಮ್ಮೆ ಪಪ್ಪಾಯ ನಾಟಿ ಮಾಡಿದರೆ ಮೂರು ವರ್ಷ ಫಸಲು ಕೊಡುತ್ತದೆಯಂತೆ. ಈಗ ಮೊದಲ ಹಂತ ಮುಗಿದು, ಎರಡನೇ ಹಂತದಲ್ಲಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಬಾಳೆ ನಿರಂತರವಾಗಿರುತ್ತದೆ.

ಈ 6 ವರ್ಷಗಳಿಂದ ವರ್ಷಕ್ಕೆ ನಿವ್ವಳ ₹10 ಲಕ್ಷ ಆದಾಯ ಕಾಣುತ್ತಿದ್ದೇನೆ. ಈ ವರ್ಷ ಮಳೆ ಕೊರತೆಯಾಗಿದೆ. ಕಳೆದ ವರ್ಷವೂ ಹೀಗೆ ಇತ್ತು. ಅಷ್ಟಾಗಿ ಫಸಲು ಕಾಣುತ್ತಿಲ್ಲ. ‘ಇದೇ ಕೃಷಿ ದುಡಿಯಮೆಯಲ್ಲೇ ನನ್ನ ಮಕ್ಕಳನ್ನು ಉತ್ತಮ ಶಾಲೆಗಳಲ್ಲಿ ಓದಿಸುತ್ತಿದ್ದೇನೆ. ಸಮಗ್ರ ಕೃಷಿ ಪದ್ಧತಿ ಹಾಗೂ ಬಹುಬೆಳೆ ಪದ್ಧತಿಗಳು ನನ್ನ ಆರ್ಥಿಕತೆಯ ಬೆನ್ನೆಲುಬಾಗಿವೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ರಾಜಕುಮಾರ ಅವರ ಕೃಷಿ ಸಾಧನೆ ಗುರುತಿಸಿರುವ ಬಾಗಲಕೋಟೆ ತೋಟಗಾರಿಕಾ ಮಹಾ ವಿದ್ಯಾಲಯದವರು ‘ಶ್ರೇಷ್ಠ ಕೃಷಿಕ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ. ರಾಜಕುಮಾರ ಅವರ ಸಂಪರ್ಕ ಸಂಖ್ಯೆ: 9845113567.

20 ಟನ್ ಎರೆಗೊಬ್ಬರ

ಹೊಲದಲ್ಲಿಯೇ ನಾಲ್ಕು ತೊಟ್ಟಿಗಳಲ್ಲಿ ಎರೆಹುಳು ಗೊಬ್ಬರ ತಯಾರಿಸುತ್ತಾರೆ. ಸಗಣಿ ಜತೆಗೆ, ತೋಟದಲ್ಲಿ ಸಿಗುವ ತಾಜ್ಯ, ಬೆಳೆಯುಳಿಕೆಗಳನ್ನು ತೊಟ್ಟಿಗೆ ಸೇರಿಸುತ್ತಾರೆ. ಒಂದು ತೊಟ್ಟಿಯಿಂದ 5 ಟನ್‌ನಂತೆ, ವರ್ಷಕ್ಕೆ 20 ಟನ್ ಎರೆಹುಳು ಗೊಬ್ಬರ ಉತ್ಪಾದಿಸುತ್ತಾರೆ. ‘ಸಾವಯವ ಗೊಬ್ಬರವನ್ನೇ ಬೆಳೆಗಳಿಗೆ ಬಳಸುತ್ತಿರುವುದರಿಂದ, ಹೊಲ, ತೋಟದ ಮಣ್ಣು ಉತ್ಕೃಷ್ಟವಾಗಿದೆ. ಬೆಳೆಗಳು ಸೊಂಪಾಗಿ ಬೆಳೆದಿವೆ. ಇಳುವರಿಯಲ್ಲೂ ಏರಿಕೆಯಾಗುತ್ತಿದೆ’ ಎಂದು ವಿವರಿಸುತ್ತಾರೆ ರಾಜಕುಮಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.