ಹಣ್ಣಿನ ಲೋಕದ ಹಿರಿಯಣ್ಣ ಮೂಡುಬಿದಿರೆಯ ಡಾ.ಎಲ್.ಸಿ.ಸೋನ್ಸ್ ಕಳೆದ ಏ.5 ರಂದು ನಿಧನರಾದರು. ಈ ಕೃಷಿ ಋಷಿಯ ಕುರಿತು ಕೃಷಿ ಲೇಖಕ ಡಾ. ನರೇಂದ್ರ ರೈ ದೇರ್ಲ ಅವರು ರಚಿಸಿರುವ ‘ಸೋನ್ಸ್ ಫಾರ್ಮ್ – ಎಲ್.ಸಿ. ಸೋನ್ಸ್ ಬಿತ್ತಿದ ಫಲಪ್ರಪಂಚ‘ ಕೃತಿ ಇದೇ 16ರ ಭಾನುವಾರದಂದು ಮೂಡುಬಿದರೆಯ ಕನ್ನಡಭವನದ ರತ್ನಾಕರವರ್ಣಿ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ.
***
‘ನಮ್ಮ ನಾಡಿನಲ್ಲಿ ಹಣ್ಣಿನ ಕೃಷಿಗೆ ಎಷ್ಟು ಅದ್ಭುತ ವಾತಾವರಣವಿದೆ. ಇಲ್ಲಿ ಎಲ್ಲ ರೀತಿಯ ಹಣ್ಣುಗಳನ್ನು ಬೆಳೆಯಬಹುದು'
ಡಾ. ಎಲ್.ಸಿ.ಸೋನ್ಸ್, ಮೂಡುಬಿದಿರೆಯ ಬೆಳವಾಯಿಯಲ್ಲಿನ ತೋಟದ ಮನೆಯ ಅಂಗಳದಲ್ಲಿ ಕುಳಿತು ರಾಜ್ಯದ ಹವಾಗುಣದ ಬಗ್ಗೆ ವಿಶ್ಲೇಷಿಸುತ್ತಿದ್ದರು. ಹೊರಗಡೆ ತೋಟದಲ್ಲಿದ್ದ ರಂಬುಟಾನ್, ದುರಿಯಂ, ಮ್ಯಾಂಗಸ್ಟಿನ್‌ನಂತಹ ವಿದೇಶಿ ಹಣ್ಣುಗಳು ‘ಹೌದು‘ ಎನ್ನುವಂತೆ ತಲೆ ತೂಗುತ್ತಿದ್ದವು.
ಡಾ. ಸೋನ್ಸ್, ಸಸ್ಯಶಾಸ್ತ್ರದಲ್ಲಿ ಉನ್ನತಪದವಿ ಪಡೆದವರು. ಅವರಿಗೆ ಕೃಷಿ ಬಗ್ಗೆ ಅದಮ್ಯ ಪ್ರೀತಿ. ಇಂಥ ಕೃಷಿ ಪ್ರೀತಿಯ ಸೋನ್ಸ್ ಅವರಿಗೆ, ಹಣ್ಣುಗಳ ಬಗ್ಗೆ ಎಲ್ಲಿಲ್ಲದ ಕಕ್ಕುಲಾತಿ. ಆ ಫಲ ಪ್ರೀತಿಯಿಂದಾಗಿಯೇ ಸೋನ್ಸ್ ಫಾರ್ಮ್ ಎಂಬ ‘ಫಲಪ್ರಪಂಚ‘ ದಲ್ಲಿ ನೂರಾರು ಬಗೆಯ ವಿದೇಶಿ ಹಣ್ಣುಗಳನ್ನು ಬೆಳೆಸಿದ್ದರು. ಮಾತ್ರವಲ್ಲ, ಇತರರನ್ನೂ ಬೆಳೆಸುವಂತೆ ಉತ್ತೇಜಿಸುತ್ತಿದ್ದರು.
ಹಣ್ಣುಗಳನ್ನು ಪ್ರೀತಿಸುತ್ತಾ, ಅವುಗಳ ಮಹತ್ವವನ್ನು ಸುತ್ತಮುತ್ತಲಿನವರಿಗೆ ಹಂಚುತ್ತಾ, ಅವುಗಳ ಸಂತತಿ ಹೆಚ್ಚಲು ಕಾರಣರಾದ ಹಣ್ಣುಗಳ ಲೋಕದ ಹಿರಿಯಣ್ಣ ಡಾ. ಎಲ್.ಸಿ.ಸೋನ್ಸ್ ಕಳೆದ ಬುಧವಾರ (ಏಪ್ರಿಲ್ 5)ದಂದು ನಿಧನರಾದರು. ಅವರ ನಿಧನದ ಮೂಲಕ ಕೃಷಿ ಲೋಕದ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದ್ದ ಹಿರಿಯ ಜೀವವೊಂದು ಕಣ್ಮರೆಯಾದಂತಾಗಿದೆ.
***
ಡಾ.ಸೋನ್ಸ್ ಅವರು 1966ರಲ್ಲಿ ಅಮೆರಿಕದ ಮೊಂಟಾನಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪಡೆದವರು. ಸೋನ್ಸ್ ಅವರ ತಂದೆ, ಡಾ ಆಲ್ಫ್ರೆಡ್ ಜಿ. ಸೋನ್ಸ್, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರವರ್ತಕ ತೋಟಗಾರಿಕಾ ತಜ್ಞರು.
ಪಿಎಚ್.ಡಿ ಪದವಿ ಪಡೆದ ನಂತರ, ಕೃಷಿ ವಿಶ್ವವಿದ್ಯಾಲಯವೊಂದರಲ್ಲಿ ಕೆಲಸಕ್ಕಾಗಿ ಹೋದಾಗ, ಅಲ್ಲಿ ಅವರು ನಿರೀಕ್ಷಿಸಿದ ಕೃಷಿಕ ಪರ ವಾತಾವರಣ ಕಾಣಲಿಲ್ಲ. ಹಾಗಾಗಿಯೇ ಅವರು ಅಲ್ಲಿ ಕೆಲಸಕ್ಕೆ ಸೇರದೇ, ತಮ್ಮೂರಿನಲ್ಲಿರುವ ತಮ್ಮದೇ ಜಮೀನನ್ನೇ ‘ಕೃಷಿ ವಿಶ್ವವಿದ್ಯಾಲಯದಂತೆಯೇ‘ ಸಿದ್ಧ ಮಾಡಿದರು. ’ಇದರಿಂದ, ಕೃಷಿ ವಿವಿಗೆ ಎಷ್ಟು ನಷ್ಟವಾಯಿತೋ ಗೊತ್ತಿಲ್ಲ, ಆದರೆ, ನಮ್ಮ ಕೃಷಿ ಕ್ಷೇತ್ರಕ್ಕಂತೂ ಬಹುದೊಡ್ಡ ಲಾಭವಾದದ್ದಂತು ನಿಜ‘ ಎಂದು ನೆನಪಿಸಿಕೊಳ್ಳುತ್ತಾರೆ ಹಿರಿಯ ಪತ್ರಕರ್ತ ಶ್ರೀಪಡ್ರೆಯವರು.
ಅಮೆರಿಕದಲ್ಲಿ ಓದಿ ಭಾರತಕ್ಕೆ ಮರಳಿದ ನಂತರ, ಜನ್ಮ ನೀಡಿದ ನೆಲದಲ್ಲೇ ಬಲವಾಗಿ ಬೇರು ಬಿಟ್ಟು, ನುಜ್ಜುಗಲ್ಲಿನ ಜಂಬಿಟ್ಟಿಗೆ ಮಣ್ಣಿನ ಭೂಮಿಯಲ್ಲಿ ಹಣ್ಣುಗಳ ಲೋಕವನ್ನೇ ಸೃಷ್ಟಿಸಿದರು. ಮಾತ್ರವಲ್ಲ, ನೆಲಜಲ ಸಂರಕ್ಷಣೆ ಹಣ್ಣುಗಳ ಮೌಲ್ಯವರ್ಧನೆ, ಅಗ್ರಿ ಟೂರಿಸಂ ನಂತಹ ಹೊಸ ಕೃಷಿ ಸಾಧ್ಯತೆಗಳು ಮತ್ತು ಅದಕ್ಕೆ ಪೂರಕವಾದ ಮಾದರಿಗಳನ್ನು ತೆರೆದಿಟ್ಟರು.
ಜಲ ಸಂರಕ್ಷಣೆಯತ್ತ..
ವಿದೇಶದಿಂದ ಬಂದು ಇಲ್ಲಿ ಕೃಷಿ ಆರಂಭಿಸಿದಾಗ, ಸೋನ್ಸ್ ಅವರು ನೀರಿಗಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಭೂಗರ್ಭ ಶಾಸ್ತ್ರಜ್ಞರನ್ನು ಕರೆಸಿ, ಜಲಶೋಧನೆ ಮಾಡಿಸಿದರು. ಆದರೆ ಅದು ಫಲ ಕಾಣಲಿಲ್ಲ. ಕೊನೆಗೆ ತಾವೇ ‘ಜಲ ಶೋಧನೆ (ವಾಟರ್ ಡಿವೈನಿಂಗ್)’ ಕಲಿತರು. ತಂತಿ ಹಿಡಿದು ನೆಲದಾಳದ ಜಲಮೂಲ ಪತ್ತೆ ಮಾಡುವ ಈ ಊಹಾ ಶೋಧದಲ್ಲಿ ಪರಿಣತಿ ಸಾಧಿಸಿದರು. ಇದರ ಫಲವಾಗಿ, ಅವರ ಜಮೀನಿನಲ್ಲಿ ನೀರಿನ ಸಮಸ್ಯೆ ಬಗೆಹರಿದಿತ್ತು. ಈ ಭಾಗದ ಅನೇಕರಿಗೆ ನೀರಿನ ಸೆಲೆ ಗುರುತಿಸಿಕೊಟ್ಟಿದ್ದಾರೆ. ಊಹಾ ಶೋಧದ ಬಗ್ಗೆ ತರಬೇತಿಗಳನ್ನು ನಡೆಸುತ್ತಿದ್ದರು.
ಸೋನ್ಸ್ ಅವರ ಜಲಸಂರಕ್ಷಣೆಯ ಪ್ರೀತಿ, ಅವರ ಜಮೀನಿಗಷ್ಟೇ ಸೀಮಿತವಾಗಿರಲಿಲ್ಲ. ಆ ಪ್ರೀತಿಯನ್ನು ಸಾರ್ವಜನಿಕವಾಗಿಯೂ ಹಂಚಿದ್ದರು. ಮೂಡುಬಿದಿರೆ ಸಮೀಪ ಮದಕದ ಕಡಲಕೆರೆ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿ, ಜನರಿಗೆ ನೀರಿನ ಬಗ್ಗೆ ಪ್ರೀತಿ ಹುಟ್ಟುವ ಹಾಗೆ ಮಾಡಿದವರು. ಕಡಲಕೆರೆ ಇಂದು ಅವರು ಪ್ರೀತಿಯ ಕುರುಹಾಗಿ, ಸುಂದರವಾಗಿ ಪುನರುಜ್ಜೀವನಗೊಂಡಿದೆ.
ಸೋನ್ಸ್ ಅವರಿಗೆ ನೀರಿನ ಜೊತೆ, ಕಾಡಿನ ಬಗ್ಗೆಯೂ ಎಲ್ಲಿಲ್ಲದ ಪ್ರೀತಿ. ಜಮೀನಿನ ಒಂದು ಭಾಗದಲ್ಲಿ ಖಾಸಗಿ ಕಾಡೊಂದು ಇರಬೇಕೆಂಬ ಹಂಬಲ. ಹೀಗಾಗಿ ಜಮೀನಿನ ಒಂದು ಭಾಗದಲ್ಲಿ ಕಾಡನ್ನು ಉಳಿಸಿಕೊಂಡಿದ್ದರು.
ಹಣ್ಣಿನ ಮಾದರಿಯ ಲೋಕ
’ಉಷ್ಣವಲಯದ ಹಣ್ಣುಗಳು ನಮ್ಮಲ್ಲೂ ಬೆಳೆಯುತ್ತವೆ’ ಎನ್ನುತ್ತಾ ಮಲೇಷ್ಯಾದಿಂದ ರಂಬೂಟಾನ್ ತರಿಸಿ ತೋಟದಲ್ಲಿ ಬೆಳೆಸಿ ಯಶಸ್ವಿಯಾದರು. ಜೊತೆಗೆ, ಮ್ಯಾಂಗೊಸ್ಟೀನ್, ಡುರಿಯನ್, ಬಾರ್ಬಡೋಸ್ ಚೆರಿ, ಸುರಿನಾಮ್ ಚೆರಿ, ರಂಗೂನ್ ಚೆರಿ, ಫ್ಯಾಷನ್ ಫ್ರೂಟ್, ಡ್ರಾಗನ್ ಹಣ್ಣಿನಂತಹ ಅನೇಕ ಹಣ್ಣಿನ ಗಿಡಗಳನ್ನು ಬೆಳೆಸಿ, ‘ಇಲ್ಲೂ ಈ ಹಣ್ಣುಗಳನ್ನು ಬೆಳೆಯಬಹುದೆಂದು‘ ತೋರಿಸಿದರು.
ವಿದೇಶಿ ಹಣ್ಣುಗಳ ಜೊತೆಗೆ, ಅವರು ಅನಾನಸ್ ಬೆಳೆಸಿದ್ದೇ ಒಂದು ವಿಶಿಷ್ಟ ಕಥನ. ಸೋನ್ಸ್ ಫಾರಂನಲ್ಲಿ ಬೆಳೆಸುತ್ತಿದ್ದದ ಅನಾನಸ್ ರುಚಿಯೇ ಅದ್ಭುತ. ಇದರಲ್ಲಿ ಕೆಲವು ತಳಿಗಳ ಅನಾನಸ್ ಅನ್ನು ಸೋನ್ಸ್ ಅವರ ತಂದೆಯವರು ಪರಿಚಯಿಸಿದ್ದಾರೆ. ಅವರು ಒಂದು ಕಾಲದಲ್ಲಿ ‘ಪೈನಾಪಲ್ ಸೋನ್ಸ್‘ ಎಂದೇ ಪ್ರಸಿದ್ದಿಯಾಗಿದ್ದರು ಎನ್ನುತ್ತಾರೆ ಶ್ರೀ ಪಡ್ರೆ.
ಮೌಲ್ಯವರ್ಧನೆಗೆ ಆದ್ಯತೆ
ಕೃಷಿಕನೇ ಮೌಲ್ಯವರ್ಧಕನಾಗ ಬೇಕು. ಸಣ್ಣ ಸಣ್ಣದಾಗಿ ಮಾರುಕಟ್ಟೆ ಕಂಡುಕೊಳ್ಳಬೇಕು ಎಂಬುದು ಸೋನ್ಸ್ ಅವರ ಆಶಯ.
ಒಮ್ಮೆ ಪೈನಾಪಲ್ ಬೆಳೆದ ರೈತರು ಅದನ್ನು ಮಾರಾಟ ಮಾಡಲು ಕಷ್ಟಪಡುತ್ತಿ ದ್ದನ್ನು ಗಮನಿಸಿದ ಸೋನ್ಸ್, ಆ ಹಣ್ಣನ್ನು ಮೌಲ್ಯವರ್ಧಿಸಿ ಕ್ಯಾನ್‌ಗಳಲ್ಲಿ ತುಂಬಿಸಿ ಮಾರಾಟ ಮಾಡುವಂತಹ ವಿಧಾನ ಪರಿಚಯಿಸಿದರು. ಅನಾನಸ್ ಬಿಲ್ಲೆಗಳನ್ನಾಗಿಸಿ (ಸ್ಲೈಸ್), ಅದನ್ನು ಸಕ್ಕರೆ ಪಾಕ(ಶುಗರ್ ಸಿರಪ್‌ನಲ್ಲಿ)ದಲ್ಲಿ ಮುಳುಗಿಸಿ, ಕ್ಯಾನ್‌ನಲ್ಲಿಟ್ಟು ಮಾರಾಟ ಮಾಡಲು ಆರಂಭಿಸಿದರು. ಸ್ವಲ್ಪ ವರ್ಷಗಳ ಕಾಲ ಈ ಉದ್ದಿಮೆ ಸಾಗಿತು. ಆದರೆ, ಪೈನಾಪಲ್ ಸೀಸನಲ್ ಹಣ್ಣು ಆದ ಕಾರಣ, ದೀರ್ಘಕಾಲದಲ್ಲಿ ಈ ವಿಧಾನ ಯಶಸ್ವಿಯಾಗದೇ, ನಿಲ್ಲಿಸಿಬಿಟ್ಟರು.
ಆದರೆ, ಈಗಲೂ ಅವರ ಫಾರ್ಮ್‌ನಲ್ಲಿ ಹಣ್ಣುಗಳ ಮೌಲ್ಯವರ್ಧನೆ ಕೆಲಸ ನಡೆಯತ್ತಿದೆ. ಸೋನ್ಸ್ ಫಾರಂ ನೋಡಲು ಬರುವವರಿಗೆ ‘ವೆಲ್‌ಕಮ್‘ ಡ್ರಿಂಕ್ ಆಗಿ ಅನಾನಸ್ ಜ್ಯೂಸ್ ಕೊಡ್ತಾರೆ. ಡುರಿಯಾನ್, ಹಲಸು ಫ್ರೋಜನ್, ಗೇರುಹಣ್ಣಿನ ಜ್ಯೂಸ್ ಮಾಡುತ್ತಾರೆ.
ರಂಬೂಟಾನ್ ಬೆಳೆಸಿದ್ದು ಒಂದು ಸಾಹಸದ ಕಥೆ. ಸೋನ್ಸ್ ಅವರು, ಮಲೇಷ್ಯಾದ ರಂಬೂಟಾನ್ ಹಣ್ಣು ಈ ಪರಿಸರಕ್ಕೆ ಅಷ್ಟಾಗಿ ಒಗ್ಗುವುದಿಲ್ಲ ಎಂಬುದನ್ನು ಪುಸ್ತಕವೊಂದರಲ್ಲಿ ಓದಿ ತಿಳಿದಿದ್ದರು. ಶ್ರೀ ಆದರೆ, ಎರಡೂ ದೇಶಗಳ ಹವಾಮಾನ ವಿಶ್ಲೇಷಿಸಿ ನೋಡಿ, ‘ಇಲ್ಲಿಯ ವಾತಾವರಣವೂ ಆ ಹಣ್ಣನ್ನು ಬೆಳೆಯಲು ಸೂಕ್ತವಾಗಿದೆ‘ ಎಂದು ಅರಿತರು. ನಂತರ ಮಲೇಷ್ಯಾದಿಂದ ರಂಬೂಟಾನ್ ಹಣ್ಣಿನ ಸಸಿ ತಂದು ನೆಟ್ಟು ಬೆಳೆಸಿದರು. ಆರಂಭದಲ್ಲಿ ಒಂದಷ್ಟು ಹಿನ್ನಡೆಯಾಯಿತು. ನಂತರ ಮಲೇಷ್ಯಾ ವಿದ್ಯಾರ್ಥಿಗಳಿಂದ ಆ ಹಣ್ಣಿನ ಬೀಜಗಳನ್ನು ತರಿಸಿ, ಗಿಡ ಬೆಳೆಸುವ ಪ್ರಯತ್ನ ಮಾಡಿದರು. ಮುಂದೆ ರಂಬೂಟಾನ್‌ನ ಬೇರೆ ಬೇರೆ ತಳಿ ಗಿಡಗಳನ್ನು ಕಸಿ ವಿಧಾನದಲ್ಲಿ ಬೆಳೆಸಿ, ರೈತರಿಗೆ ಹಂಚಿದರು. ಇವತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಮಂದಿ ರಂಬೂಟಾನ್ ಹಣ್ಣು ಬೆಳೆಯುತ್ತಿದ್ದಾರೆಂದರೆ, ಅದಕ್ಕೆ ಸೋನ್ಸ್ ಅವರ ಪ್ರೋತ್ಸಾಹ, ಕೊಡುಗೆ, ಪ್ರಚಾರವೇ ಕಾರಣ. ಆ ಕಾರಣಕ್ಕೆ ಅನೇಕ ರೈತರು ಹಣ್ಣಿನ ಗಿಡಗಳ ಹರಿಕಾರ ಸೋನ್ಸ್ ಅವರನ್ನು ‘ಹಣ್ಣಿನ ಅಣ್ಣ‘ನೆಂದೇ ಗೌರವಿಸುತ್ತಾರೆ.
ಹಣ್ಣಿನ ಲೋಕದ ಜ್ಞಾನಿ
ಸೋನ್ಸ್‌ರಲ್ಲಿದ್ದ ಹಣ್ಣಿನ ಲೋಕದ ಜ್ಞಾನ ಮತ್ತು ಹಣ್ಣಿನ ತಳಿಗಳ ಸಂಗ್ರಹದ ಹಿಂದಿನ ನೈಜ ಶಕ್ತಿ ಎಂದರೆ ಅವರ ಪ್ರವಾಸ. ಸೋನ್ಸ್ ಅವರು ತುಂಬಾ ಅಧ್ಯಯನ ಪ್ರವಾಸ ಮಾಡುತ್ತಿದ್ದರು. ಹೋಗುವ ಸ್ಥಳದಿಂದ ವಿಶೇಷ ಹಣ್ಣಿನ ಗಿಡಗಳು ಸಿಕ್ಕರೆ, ತಗೊಂಡು ಬಂದು ತಮ್ಮ ತೋಟದಲ್ಲಿ ಬೆಳೆಸಿ ನೋಡುತ್ತಿದ್ದರು. ಬೇರೆಯವರಲ್ಲೂ ಈ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಇದು ಸೋನ್ಸ್ ಅವರಲ್ಲಿದ್ದ ವಿಶೇಷ ಗುಣ.
ಅವರು ತುಂಬಾ ಡೌನ್‌ಟು ಅರ್ಥ. ಯಾರೇ ಹೊಸ ಮಾಹಿತಿ ಹೇಳಿದರೂ, ಅದನ್ನು ನಮ್ರತೆಯಿಂದ, ಗಂಭೀರವಾಗಿ ಕೇಳುತ್ತಿದ್ದರು. ಯಾವುದಾದರೂ ಹೊಸ ಮಾಹಿತಿ ಹೇಳಿದರೆ, ‘ಅವರ ವಿಳಾಸ ಕಳಿಸಕೊಡ್ತೀರಾ. ಒಮ್ಮೆ ಹೋಗ್ಬೇಕು ಅಲ್ಲಿಗೆ‘ ಎಂದು ಹೇಳುತ್ತಿದ್ದರು.
ಅವರಿಗೆ ಇತ್ತೀಚೆಗಿನವರೆಗೂ ತುಂಬಾ ಪ್ರವಾಸ ಮಾಡುತ್ತಿದ್ದರು. ಪ್ರವಾಸ ಎಂದರೆ, ಸ್ಥಳ ನೋಡಿ ಖುಷಿಪಟ್ಟು ಬರುವುದಲ್ಲ. ಹೋದ ಸ್ಥಳದಲ್ಲಿ ಏನಾದರೂ ಹೊಸ ವಿಷಯ ಕಂಡರೆ ಅದನ್ನು ಕಲಿತುಕೊಂಡು ಬರಬೇಕು‘ ಎಂದು ಹೇಳುತ್ತಿದ್ದರು. ಪ್ರವಾಸ ಹೋದ ಕಡೆ ಹೊಸ ಗಿಡಗಳನ್ನು ಹುಡುಕುತ್ತಿದ್ದರು. ಹೊಸ ಮಾಹಿತಿ ಎಲ್ಲಿಂದ ಸಿಕ್ಕರೂ ಸ್ವೀಕರಿಸುತ್ತಿದ್ದ ಅವರು, ‘ನನ್ನ ಉಸಿರುವವರೆಗೂ ವಿದ್ಯಾರ್ಥಿಯೇ‘ ಎಂದು ಹೇಳುತ್ತಿದ್ದರಂತೆ. ಹಾಗೆಂದು ಅವರೊಂದಿಗೆ ಒಡನಾಟವಿದ್ದ ಶ್ರೀ ಪಡ್ರೆಯವರು ನೆನಪಿಸಿಕೊಳ್ಳುತ್ತಾರೆ.
ಫಾರಂನಲ್ಲೇ ಕೃಷಿ ಪ್ರವಾಸೋದ್ಯಮ
ಪ್ರವಾಸ, ಅಧ್ಯಯನ, ಹಣ್ಣಿನ ಗಿಡಗಳ ಸಂಗ್ರಹದಂತೆ, ತಮ್ಮ ತೋಟವನ್ನೇ ಕೃಷಿ ಪ್ರವಾಸೋದ್ಯಮದ ತಾಣವಾಗಿ ಪರಿವರ್ತಿಸಿದ್ದಾರೆ. ಈ ಫಾರಂನಲ್ಲಿ ಹಣ್ಣುಗಳ ಕಾಲದಲ್ಲಿ ಫಾರಂಗೆ ಭೇಟಿ ನೀಡಿದವರಿಗೆ, ಮಿತವಾದ ದರದಲ್ಲಿ ತಾಜಾ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ.
‘ತೋಟದ ಬೆಳೆ ತಾಜಾವಾಗಿ, ನೇರವಾಗಿ ಗ್ರಾಹಕರಿಗೆ ತಲುಪಬೇಕು. ಅಪರೂಪದ ಹಣ್ಣುಗಳನ್ನು ಅವರಿಗೆ ಪರಿಚಯಿಸಬೇಕು‘ ಎಂಬುದು ಅವರ ಈ ಕೃಷಿ ಪ್ರವಾಸದ ಉದ್ದೇಶ.
ಸಸ್ಯಶಾಸ್ತ್ರದ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಇವರ ತೋಟಕ್ಕೆ ಭೇಟಿ ನೀಡುತ್ತಾರೆ. ಒಂದೆರಡು ದಿವಸ ಇದ್ದು ಹೋಗುವ ಅಥವಾ ಕಡಿಮೆ ಸಮಯದಲ್ಲಿ ಇಡೀ ತೋಟವನ್ನು ತೆರೆದ ಜೀಪಿನಲ್ಲಿ ಕೂರಿಸಿ ತೋರಿಸುವ ವ್ಯವಸ್ಥೆಯೂ ಇಲ್ಲಿದೆ. ಬಹುಶಃ ಕರ್ನಾಟಕದಲ್ಲಿ ಈ ಪ್ರಮಾಣದಲ್ಲಿ ಖಾಸಗಿ ತೋಟವೊಂದು ಪ್ರವಾಸಿಗಳಿಗೆ ತೆರೆದುಕೊಂಡ ದೃಷ್ಟಾಂತ ಬೇರೆ ಇಲ್ಲ ಎನ್ನುತ್ತಾರೆ ಸೋನ್ಸ್ ಅವರನ್ನು ಹತ್ತಿರದಿಂದ ಬಲ್ಲ ಕೃಷಿ ಲೇಖಕ ನರೇಂದ್ರ ರೈ ದೇರ್ಲ.
ಕೃಷಿ ಮ್ಯೂಸಿಯಂ ಆಕರ್ಷಣೆ
ಸೋನ್ಸ್ ಅವರು ಕೃಷಿ ಮ್ಯೂಸಿಯಂವೊಂದನ್ನು ಕಟ್ಟಿ, ತಮ್ಮ ತಂದೆಯ ಕಾಲದಿಂದ ಬಳಕೆ ಯಲ್ಲಿದ್ದ ಕೃಷಿ ಉಪಕರಣಗಳನ್ನು ಸಂಗ್ರಹಿಸಿಟ್ಟಿದ್ದಾರೆ. ‘ಬಳಸಿದ ಮೇಲೆ ಬಿಸಾಡುವುದಲ್ಲ, ಅದನ್ನು ಸಂಗ್ರಹಿಸಿಟ್ಟು ಮುಂದಿನ ತಲೆಮಾರಿಗೆ ತೋರಿಸಬೇಕು‘ ಎಂಬುದು ಅವರ ತಂದೆಯವರ ಆಶಯ. ಅವರ ಆಶಯ ಈಡೇರಿಸುವುದಕ್ಕಾಗಿ ‘ಕೃಷಿ ಪರಿಕರಗಳ ಮ್ಯೂಸಿಯಂ’ ಮಾಡಿದ್ದಾರೆ. ಹಿರಿಯರಿಗೆ ಅನ್ನದ ದಾರಿ ತೋರಿದ ಕೃಷಿ ಪರಿಕರಗಳನ್ನು, ತೋಟ ನೋಡಿ ಬರುವವರಿಗೆ ತೋರಿಸಬೇಕೆಂಬುದು ಅವರ ಉದ್ದೇಶ.
ಆರಂಭದಲ್ಲಿ, ಇವರ ಮನೆಯ ಕೃಷಿ ಪರಿಕರಗಳನ್ನೇ ಜೋಡಿಸಿ, ಮ್ಯೂಸಿಯಂ ಮಾಡಿದರು. ನಂತರ, ಸುತ್ತಮುತ್ತಲಿನ ಜನರೂ ತಮ್ಮಲ್ಲಿದ್ದ ಹಳೆಯ ಕೃಷಿ ಉಪಕರಣ ಗಳನ್ನು ಕೊಡುಗೆಯಾಗಿ ನೀಡಿದರು. ಸದ್ಯ ಮ್ಯೂಸಿಯಂನಲ್ಲಿ ಭತ್ತದ ಬೇಸಾಯದ ಉಪಕರಣಗಳು, ಮೀನು ಹಿಡಿಯುವಂತಹ ಅನೇಕ ಉಪಕರಣಗಳಿವೆ. ಈ ಮ್ಯೂಸಿಯಂ ಕೃಷಿಯಲ್ಲಿ ಸೋನ್ಸರ ಪಾರಂಪರಿಕ ಮತ್ತು ಯಂತ್ರ ಪ್ರೀತಿಯ ದ್ಯೋತಕವಾಗಿದೆ ಎನ್ನುತ್ತಾರೆ ನರೇಂದ್ರ ರೈ ದೇರ್ಲ.
ಕೃಷಿ, ತೋಟಗಾರಿಕೆ, ನೆಲ–ಜಲ ಸಂರಕ್ಷಣೆ ಜೊತೆಗೆ, ಸಮಾಜದ ಕ್ಷೇಮಾಭಿವೃದ್ಧಿಯ ಬಗ್ಗೆ ಚಿಂತಿಸುತ್ತಿದ್ದ ಕೃಷಿಕರ ಪಾಲಿನ ಚರಿತ್ರಾರ್ಹ ಮಾದರಿಯೇ ಆಗಿದ್ದ ಸೋನ್ಸ್ ಅಗಲಿಕೆ, ಸಮಾಜಕ್ಕೆ ಒಂದು ಬಹುದೊಡ್ಡ ನಷ್ಟವೇ ಸರಿ.
ಏ.16ರಂದು ಸೋನ್ಸ್ ಕುರಿತ ಕೃತಿ ಬಿಡುಗಡೆ
ಕರ್ನಾಟಕ ಕಂಡ ಅದ್ಭುತ ಪ್ರಯೋಗಶೀಲ ಕೃಷಿಕ ಡಾ. ಎಲ್.ಸಿ. ಸೋನ್ಸ್ ಅವರನ್ನು ಮುಂದಿನ ಪೀಳಿಗೆಗೂ ಪರಿಚಯಿಸುವುದಕ್ಕಾಗಿ ಕೃಷಿ ಲೇಖಕ ಡಾ. ನರೇಂದ್ರ ರೈ ದೇರ್ಲ ಅವರು ‘ಸೋನ್ಸ್ ಫಾರ್ಮ್ – ಎಲ್.ಸಿ. ಸೋನ್ಸ್ ಬಿತ್ತಿದ ಫಲಪ್ರಪಂಚ‘ ಎಂಬ ಕೃತಿಯನ್ನು ರಚಿಸಿದ್ದಾರೆ.
ಸೋನ್ಸ್‌ರಿಂದಲೇ ಈ ಕೃತಿ ಬಿಡುಗಡೆ ಮಾಡಿಸಬೇಕೆಂಬುದು, ಅವರ ಅಭಿಮಾನಿ ಬಳಗದ ಆಸೆಯಾಗಿತ್ತು. ಇದೇ ಕಾರಣಕ್ಕೆ ಏಪ್ರಿಲ್ 16ರಂದು ಪುಸ್ತಕ ಬಿಡುಗಡೆಯ ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಈ ಮಧ್ಯೆಯೇ ಸೋನ್ಸ್ ಅವರ ನಿಧನರಾದರು.
ಈಗ ಅದೇ ದಿನಾಂಕದಂದು ಸೋನ್ಸ್ ಅಭಿಮಾನಿ ಬಳಗದವರು ಅಗಲಿದ ಹಿರಿಯ ಜೀವಕ್ಕೆ ‘ಶ್ರದ್ಧಾಂಜಲಿ‘ ಸಲ್ಲಿಸುವ ಜೊತೆಗೆ, ದೇರ್ಲ ಅವರ ಕೃತಿಯನ್ನು ಲೋಕಾರ್ಪಣೆಗೊಳಿಸು ಕಾರ್ಯಕ್ರಮ ಆಯೋಜಿಸಿದ್ದಾರೆ. ಮೂಡುಬಿದರೆಯ ಸ್ಕೌಟ್ಸ್ ಅಂಡ್ ಗೈಡ್ಸ್ ಕನ್ನಡ ಭವನದ ರತ್ನಾಕರವರ್ಣಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಪಿ. ಗನಪತಿ ಭಟ್ ನುಡಿನಮನ ಸಲ್ಲಿಸಲಿದ್ದಾರೆ. ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಕೃತಿ ಕುರಿತು ಮಾತನಾಡಲಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ ಅವರ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.