ADVERTISEMENT

ಕಬ್ಬು ಎಲೆ ಬಿಳಿಚುವಿಕೆಗೆ ಪರಿಹಾರ ಏನು?

ಡಾ.ಅಶೋಕ ಪಿ
Published 22 ಏಪ್ರಿಲ್ 2019, 19:30 IST
Last Updated 22 ಏಪ್ರಿಲ್ 2019, 19:30 IST
ಬಿಳಿಚಿದ ಕಬ್ಬಿನ ಎಲೆಯ ಪರಿಶೀಲನೆ
ಬಿಳಿಚಿದ ಕಬ್ಬಿನ ಎಲೆಯ ಪರಿಶೀಲನೆ   

ಐದು ವರ್ಷಗಳ ಹಿಂದೆ ತೀವ್ರ ಬರಗಾಲ ವ್ಯಾಪಿಸಿದ್ದಾಗ ಕಬ್ಬಿನ ಬೆಳೆಗೆ ಬಿಳಿ ಉಣ್ಣೆ, ಹೇನು ಕಾಣಿಸಿಕೊಂಡಿತ್ತು. ನದಿ, ಕೆರೆ ದಂಡೆಯಲ್ಲಿ ಬೆಳೆದ ಕಬ್ಬಿಗೆ ಗೊಣ್ಣೆ ಹುಳುವಿನ ಬಾಧೆ ಕಾಣಿಸಿಕೊಂಡಿತು. ಈ ಬಾರಿ ಕಬ್ಬಿನ ಎಲೆಗಳಿಗೆ ಬಿಳಿಚಿಕೊಳ್ಳುವ ರೋಗ ಕಾಣಿಸುತ್ತಿದೆ.

ಹಾವೇರಿ, ರಾಣೆಬೆನ್ನೂರು ಭಾಗದ ಕಬ್ಬಿನ ಬೆಳೆಗಾರರಾದ ಹೊಸಮನಿ, ನಾಗಪ್ಪ ಹಡಪದ ಅವರ ಕಬ್ಬಿನ ಗದ್ದೆಗೆ ಭೇಟಿ ನೀಡಿದ್ದಾಗ, ಕಬ್ಬಿನ ಎಲೆಗಳು ಬಿಳಿಚಿಕೊಂಡಿರುವುದನ್ನು ತೋರಿಸಿದರು. ’ಕಬ್ಬು ನಾಟಿ ಮಾಡಿ 90 ದಿನಗಳ ನಂತರ, ಎಲೆಗಳು ಬಿಳಿಚಿ ಕೊಂಡಿವೆ’ ಎಂದು ವಿವರಣೆ ನೀಡಿದರು. ನಿಯಂತ್ರಣದ ವಿಧಾನಗಳ ಬಗ್ಗೆಯೂ ಮಾಹಿತಿ ಕೇಳಿದರು.

ಕಬ್ಬಿಗೆ ತಗಲುವ ಈ ರೋಗಕ್ಕೆ ಕೇದಿಗೆ ರೋಗ ಅಥವಾ ಬಿಳುಚು/ಹಳದಿ ರೋಗ ಎಂದೂ ಕರೆಯುತ್ತಾರೆ. ಕಬ್ಬು ನಾಟಿ ಮಾಡಿದ ಎಂಟು ತಿಂಗಳಿನ ನಂತರ ಅಥವಾ ಮೊದಲ ಬಾರಿಗೆ ಕೂಳೆ ಕಬ್ಬಿನ ಫಸಲಿನಲ್ಲಿ ಒಂದರಿಂದ 8 ತಿಂಗಳ ಅವಧಿಯ ಕಬ್ಬಿನಲ್ಲಿ ಈ ರೋಗ ಕಂಡು ಬರುತ್ತದೆ. ಮೊದಲು ಕೆಲವು ಸೀಮಿತ ಕ್ಷೇತ್ರಗಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿತ್ತು. ಈಗ ಎಲ್ಲ ಕ್ಷೇತ್ರಕ್ಕೂ ವಿಸ್ತರಿಸಿಕೊಳ್ಳುತ್ತಿದೆ.

ADVERTISEMENT

ಎರಡು ಮೂರು ವರ್ಷಗಳ ಹಿಂದೆ ಮೊದಲ ಬಾರಿಗೆ ಬಿಳಿಚು ರೋಗದ ಲಕ್ಷಣ ಕಾಣಿಸಿಕೊಂಡಾಗ, ರೈತರು ನಿರ್ಲಕ್ಷ್ಯಿಸಿದ್ದರು. ಏಕೆಂದರೆ, ಬಿಳಿಚಾದ ಎಲೆಗಳು ಕ್ರಮೇಣ ಹಸಿರು ಬಣ್ಣಕ್ಕೆ ತಿರುಗುತ್ತಿದ್ದವು. ಆದರೆ, ಇತ್ತೀಚಿಗೆ ಬೆಳೆಗಳಿಗೆ ಲಘು ಪೋಷಕಾಂಶಗಳ ಕೊರತೆ ಹೆಚ್ಚಾಗಿ ಕಬ್ಬು ಬಿಳುಚಿಕೊಳ್ಳುವ ಪ್ರಮಾಣವೂ ವೃದ್ಧಿಸಿದೆ.

ಲಘು ಪೋಷಕಾಂಶಗಳ ಕೊರತೆಗೆ ಈ ಅಂಶಗಳೇ ಕಾರಣ;

* ಕೊಟ್ಟಿಗೆ ಗೊಬ್ಬರ ಬಳಕೆಯ ಪ್ರಮಾಣ ಕಡಿಮೆಯಾಗಿರುವುದು.

* ಲಘು ಪೋಷಕಾಂಶಗಳ ಪೂರೈಕೆ ನಿಲ್ಲಿಸಿರುವುದು.

* ಬೆಳೆದ ಜಮೀನಿನಲ್ಲಿ ನಿರಂತರವಾಗಿ ಕಬ್ಬನ್ನೇ ಬೆಳೆಯುತ್ತಿರುವುದು (ಬೆಳೆ ಪರಿವರ್ತನೆ ಇಲ್ಲದ್ದು).

* ಭೂಮಿಯಲ್ಲಿ ಲವಣಾಂಶ/ಸವಳು ಹೆಚ್ಚಾಗಿರುವುದು.

* ಸವಳು ಮತ್ತು ಕ್ಷಾರ ಭೂಮಿಯಲ್ಲಿ ಬೆಳೆದ ಬೆಳೆಗೆ ಕಬ್ಬಿಣದ ಅಂಶ ಲಭ್ಯವಾಗದಿರುವುದು.

* ಕ್ಯಾಲ್ಸಿಯಂ ಹೆಚ್ಚಾಗಿರುವ ಎರೆ ಭೂಮಿಯಲ್ಲೂ ಕಬ್ಬಿಣಾಂಶದ ಕೊರತೆ.

* ಉಸುಕು ಜಮೀನಿನಲ್ಲಿ ಲಘು ಪೋಷಕಾಂಶಗಳ ಕೊರತೆ, ಭೂ ಫಲವತ್ತತೆ ಇಲ್ಲದ್ದು.

* ಕಬ್ಬಿಣದ ಅಂಶ ಕೊರತೆಯ ಲಕ್ಷಣಗಳು

ಪ್ರಾರಂಭದಲ್ಲಿ ಸಸ್ಯ ಬೆಳವಣಿಗೆ ಸಹಜವಾಗಿದ್ದು ಎಲೆಗಳ ನರಗಳ ಮಧ್ಯಭಾಗ ಪತ್ರ ಹರಿತ್ತನ್ನು ಕಳೆದುಕೊಂಡು ಹಸಿರು ಮತ್ತು ಬಿಳಿ ಪಟ್ಟಿಗಳು ಕಾಣಿಸಿಕೊಳ್ಳುತ್ತವೆ. ಕೊರತೆ ತೀವ್ರವಾದಾಗ ಎಲೆ ಸಂಪೂರ್ಣ ಹಳದಿ ವರ್ಣಕ್ಕೆ ತಿರುಗಿ, ಕ್ರಮೇಣ ಬಿಳಿಯಾಗುತ್ತದೆ. ನಂತರ ಟಿಸಿಲುಗಳು ಒಣಗಿ ಸಾಯುತ್ತವೆ. ಈ ಲಕ್ಷಣವನ್ನು ಐರನ್ ಕ್ಲೋರಾಸಿಸ್ ಎಂದು ಕರೆಯುಲಾಗುತ್ತದೆ.

ಕಬ್ಬಿನ ಅಂಶ; ನಿರ್ವಹಣೆ ಹೇಗೆ?

ಕಬ್ಬನ್ನು ನಾಟಿ ಮಾಡುವಾಗ ಎಕರೆಗೆ 10 ಟನ್ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟನ್ನು ಭೂಮಿಗೆ ಸೇರಿಸಬೇಕು.

ಕಬ್ಬು ನಾಟಿ ವೇಳೆ ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರದ ಜತೆಗೆ 10 ಕೆ.ಜಿ ಕಬ್ಬಿಣದ ಸಲ್ಪೇಟ್‌ ಮತ್ತು ಅಂದಾಜು 50 ಕೆ.ಜಿ ಎರೆಹುಳು ಗೊಬ್ಬರ ಬೆರೆಸಿ, ನೀರು ಚಿಮುಕಿಸಿ ಒಂದು ರಾತ್ರಿ ಇಡಬೇಕು. ಮಾರನೇ ದಿನ ಕಬ್ಬು ನಾಟಿ ಮಾಡುವ ಸಾಲುಗಳಲ್ಲಿ ಭೂಮಿಗೆ ಸೇರಿಸಬೇಕು.

ಕೂಳೆ ಕಬ್ಬು ಬೆಳೆಯುವವರು, ಕಬ್ಬು ಕಟಾವಾದ ನಂತರ ಬೋದುಗಳನ್ನು (ಕಬ್ಬು ಬೆಳೆದ ಜಾಗ) ರಂಟೆಯಿಂದ ಹರಿಯಬೇಕು. ಬೋದು ಹರಿದ ಸಾಲಿನಲ್ಲಿ ಶಿಫಾರಸ್ಸು ಮಾಡಿದ 10 ಕೆ.ಜಿ ಕಬ್ಬಿಣದ ಸಲ್ಪೇಟ್ ಭೂಮಿಗೆ ಸೇರಿಸಬೇಕು.

ಕೆಲವು ಭೂಮಿಯಲ್ಲಿ ಲಘು ಪೋಷಕಾಂಶಗಳನ್ನು ಬೆರೆಸಿದ್ದರೂ ಅವು ಬೆಳೆಗೆ ಲಭ್ಯವಾಗುವುದಿಲ್ಲ. ಅಂಥ ಸಂಧರ್ಭಗಳಲ್ಲಿ ಬೆಳೆ ಮೊಳಕೆಯೊಡೆದ ಒಂದು ತಿಂಗಳಲ್ಲಿ ಪೋಷಕಾಂಶದ ಕೊರತೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಲಕ್ಷಣಗಳು ಕಂಡು ಬಂದ ತಕ್ಷಣ ಪ್ರತಿ ಲೀಟರ್‌ ನೀರಿಗೆ 5 ಗ್ರಾಂ ಕಬ್ಬಿಣದ ಸಲ್ಫೇಟ ಬೆರೆಸಿ, ಬೆಳೆಯ ಎಲೆ ಮೇಲೆ ಹಸಿರು ಭಾಗ ತೊಯ್ಯುಂತೆ ಸಿಂಪಡಿಸಬೇಕು. ಒಂದು ತಿಂಗಳ ನಂತರ ಎರಡನೇ ಬಾರಿ ಹಾಗೂ 3 ನೇ ತಿಂಗಳ ನಂತರ 3 ನೇ ಬಾರಿ ಸಿಂಪಡಿಸಬೇಕು. ಇದರಿಂದ ಸಂಪೂರ್ಣ ಕಬ್ಬಿಣದ ಕೊರತೆಯನ್ನು ಹೋಗಲಾಡಿಸಬಹುದು.

(ಲೇಖಕರು ಹನುಮನಹಟ್ಟಿ ಕೃಷಿ ವಿಜ್ಞಾನಕೇಂದ್ರದ ಹಿರಿಯ ವಿಜ್ಞಾನಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.