ADVERTISEMENT

ವರ್ಷಾವಧಿಯ ಮೀನಿನ ಹಬ್ಬ

ಟಿ.ಶಿವಕುಮಾರ
Published 15 ಜುಲೈ 2019, 19:30 IST
Last Updated 15 ಜುಲೈ 2019, 19:30 IST
ಮೀನಿನ ಹಬ್ಬ. ಚಿತ್ರಗಳು: ಲೇಖಕರವು
ಮೀನಿನ ಹಬ್ಬ. ಚಿತ್ರಗಳು: ಲೇಖಕರವು   

ಬಿದಿರಿನ ಕುಳಿ ಹಿಡಿದ ನೂರಾರು ಮಂದಿ ಕೆರೆಯಂಗಳದಲ್ಲಿ ಜಮಾಯಿಸಿದ್ದರು. ಕೆಲವರು ಕುಳಿ ಹಾಕಿ ಮೀನಿಗಾಗಿ ತಲಾಷ್ ಮಾಡುತ್ತಿದ್ದರೆ, ಇನ್ನಷ್ಟು ಮಂದಿ ಅರ್ಧ ಕುಳಿಯಲ್ಲಿ ಒಂದಷ್ಟು ಮೀನು ತುಂಬಿಕೊಂಡು ಸಂಭ್ರಮಿಸುತ್ತಿದ್ದರು. ಕುಳಿಯಲ್ಲಿ ಬಿದ್ದ ಮೀನು, ಬಿದಿರಿನ ಸಂದುಗಳಿಂದ ಜಾರಿ ಹೋಗುತ್ತಿತ್ತು. ಮುಷ್ಟಿಯಲ್ಲಿ ಹಿಡಿದರೆ ಬೆರಳು ಸಂದುಗಳಿಂದ ತಪ್ಪಿಸಿಕೊಂಡು ಹೋಗುತ್ತಿತ್ತು. ಇಡೀ ಕೆರೆ ಅಂಗಳದಲ್ಲಿ ಒಂದು ರೀತಿ ಹಬ್ಬದ ವಾತಾವರಣವಿತ್ತು..

ಇತ್ತೀಚೆಗೆ ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ಕ್ಯಾಸನೂರಿಗೆ ಹೋಗಿದ್ದಾಗ, ಅಲ್ಲಿನ ಕೆರೆಯ ಅಂಗಳದಲ್ಲಿ ಕಂಡು ಬಂದ ಸಂಭ್ರಮದ ದೃಶ್ಯವಿದು. ಕುಳಿಯಲ್ಲಿ ಮೀನು ತುಂಬಿಕೊಂಡು ಕೆರೆಯಿಂದ ಎದ್ದು ಬರುತ್ತಿದ್ದ ಯುವಕರನ್ನು‘ಏನ್‌ ವಿಶೇಷ ಇದು’ ಎಂದು ಪ್ರಶ್ನಿಸಿದಾಗ, ‘ಇದು ಮೀನು ಹಬ್ಬ. ಇಲ್ಲಿ ವರ್ಷಕ್ಕೊಮ್ಮೆ ನಡೆಯುತ್ತದೆ. ಇದಕ್ಕೆ ಮೀನಿನ ಬೇಟೆ ಎಂದೂ ಕರೆಯುತ್ತಾರೆ’ ಎಂದು ವಿವರಿಸಿದರು. ‘ಈ ಹಬ್ಬವನ್ನು ಯಾಕೆ ಮಾಡುತ್ತಾರೆ’ – ಈ ಪ್ರಶ್ನೆಯನ್ನು ಅಲ್ಲೇ ಇದ್ದ ಊರಿನವರಿಗೆ ಕೇಳಿದೆ. ‘ಕಾರಣ ಗೊತ್ತಿಲ್ಲ. ಹಿಂದಿನಿಂದ ಪೂರ್ವಜರು ನಡೆಸಿಕೊಂಡು ಬರುತ್ತಿದ್ದರು. ನಾವು ಆ ಪರಂಪರೆಯನ್ನು ಮುನ್ನಡೆಸುತ್ತಿದ್ದೇವೆ’ ಎಂದರು. ಅಷ್ಟೇ ಅಲ್ಲ, ಮೀನಿನ ಹಬ್ಬ ನಡೆಯುವ ಇಡೀ ಪ್ರಕ್ರಿಯೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ಯುಗಾದಿ ಹಬ್ಬ ಮುಗಿದ ನಂತರ ಮಳೆಗಾಲ ಆರಂಭವಾಗುವವರೆಗೂ ಹಾನಗಲ್ ತಾಲ್ಲೂಕಿನ ಸುತ್ತಲ ಹಳ್ಳಿಗಳಲ್ಲಿರುವ ಕೆರೆಗಳಲ್ಲಿ ಮೀನು ಹಿಡಿಯುವ ಪ್ರಕ್ರಿಯೆ ನಡೆಯುತ್ತದೆ. ಇದಕ್ಕೆ ಹಬ್ಬ ಅಥವಾ ಬೇಟೆ ಎನ್ನುತ್ತಾರೆ. ಅರೆಮಲೆನಾಡು –ಮಲೆನಾಡಿನ ಸೆರಗಿನಲ್ಲಿರುವ ಕ್ಯಾಸನೂರು, ಹನುಮನಕೊಪ್ಪ, ಬಾಳೆಹಳ್ಳಿ, ಬಾಳೂರು, ಚಿಕ್ಕಾಂಶಿ ಹೂಸೂರು ಮತ್ತು ಸುತ್ತಲಿನ ಊರುಗಳ ಕೆರೆಗಳಲ್ಲಿ ಅಲ್ಪಸ್ವಲ್ಪ ನೀರು ಉಳಿದಿದ್ದು, ಆ ಕೆರೆಗಳಲ್ಲಿ ಇದನ್ನು ವರ್ಷಾವಧಿ ಹಬ್ಬದ ರೀತಿ ಆಚರಿಸುತ್ತಾರೆ. ಈ ವರ್ಷ ಮಳೆಗಾಲ ತಡವಾಗಿದ್ದರಿಂದ, ಜುಲೈ ಮೊದಲ ವಾರದವರೆಗೂ ಮೀನಿನ ಹಬ್ಬ ಮುಂದುವರಿದಿತ್ತು!‌‌

ADVERTISEMENT

ಉದ್ಯೋಗ ಅರಸಿ ಬೇರೆ ಬೇರೆ ಊರುಳಿಗೆ ಹೋದ ಗ್ರಾಮಸ್ಥರು, ಯುಗಾದಿ ಹಬ್ಬ ಕಳೆಯುತ್ತಿದ್ದಂತೆ ಊರಿಗೆ ಮರಳುತ್ತಾರೆ. ಹೊಸ ವರ್ಷದ ನಂತರ ಹೊಸ ಮಳೆಗಾಲ ಆರಂಭವಾಗುತ್ತಿದ್ದಂತೆ ಕೆರೆಗಳ ಅಂಗಳದಲ್ಲಿ ಮೀನಿನ ಬೇಟೆ ಶುರುವಾಗುತ್ತದೆ. ಈ ಹಬ್ಬ ಒಂದು ಕಿರು ಜಾತ್ರೆಯ ರೂಪದಲ್ಲಿ ನಡೆಯುತ್ತದೆ.

ಮೀನು ಹಬ್ಬದ ಪ್ರಚಾರ

ಮೀನು ಹಬ್ಬ ನಡೆಯುವ ಪ್ರತಿ ಗ್ರಾಮದಲ್ಲೂ ಒಂದೊಂದು ಸಮಿತಿ ಇರುತ್ತದೆ. ಈ ಸಮಿತಿ ಸದಸ್ಯರು ಮೀನು ಬೇಟೆಗೆ ದಿನಾಂಕ ಗೊತ್ತು ಮಾಡುತ್ತಾರೆ. ಆ ವಿಚಾರವನ್ನು ಹಳ್ಳಿ ಹಳ್ಳಿಗೆ ತಲುಪಿಸಲು ಬಸ್‌ಗಳ ಮೂಲಕ ಕರಪತ್ರ ಕಳುಹಿಸುತ್ತಾರೆ. ಸಂತೆಗಳಲ್ಲಿ ಬಂದವರಿಗೂ ಕರಪತ್ರ ನೀಡಿ, ಪ್ರಚಾರ ಮಾಡುತ್ತಾರೆ. ಮೀನಿನ ಬೇಟೆಯಲ್ಲಿ ಭಾಗವಹಿಸುವವರು ಆಯಾ ಊರಿನ ಸಮಿತಿಯವರಿಗೆ ಒಂದು ಕುಳಿಗೆ ಅಂದಾಜು ₹250ರವರೆಗೂ ಹಣ ಪಾವತಿಸಿ ಚೀಟಿ ಮಾಡಿಕೊಳ್ಳಬೇಕು.

ಕಮಿಟಿಯವರು ಈ ಹಣವನ್ನು ಊರಿನ ಅಭಿವೃದ್ಧಿಗೆ ಬಳಕೆ ಮಾಡುತ್ತಾರೆ. ಹಣ ಪಾವತಿಸಿದವರು ಬಿದಿರಿನ ಕುಳಿ ಹಿಡಿದ ಮಂದಿ ಸಾಲು ಸಾಲಾಗಿ ಕೆರೆ ಅಂಗಳಕ್ಕೆ ಇಳಿಯುತ್ತಾರೆ. ಈ ಮೀನಿನ ಹಬ್ಬದ ದಿನ ಮನತಣಿಯುವಷ್ಟು ಮೀನುಗಳನ್ನು ಹಿಡಿಯಬಹುದು. ಹಿಡಿದು ಮೀನು ಹೆಚ್ಚಾದರೆ ಅಲ್ಲೇ ಮಾರಾಟ ಮಾಡಬಹುದು. ಅದನ್ನು ಕೊಳ್ಳುವವರೂ ಇರುತ್ತಾರೆ.

ವರ್ಷಕ್ಕೊಮ್ಮೆ ಬೇಟೆ

ಹಾನಗಲ್‌ ತಾಲ್ಲೂಕಿನ ಸುತ್ತಮುತ್ತಲಿನ ಕೆರೆಗಳಲ್ಲಿ ವರ್ಷ ಪೂರ್ತಿ ಮೀನುಗಾರಿಕೆ ನಡೆಯುತ್ತಿರುತ್ತದೆ. ಆದರೆ, ಕೆಲವು ನಿಗದಿತ ಕೆರೆಗಳಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಮೀನಿನ ಹಬ್ಬದಂದು ಮೀನು ಶಿಕಾರಿ ನಡೆಯುತ್ತದೆ. ಹೀಗಾಗಿ ಈ ಕೆರೆಗಳಲ್ಲಿ ಮುರಗೋಡು, ಗೌರಿ, ಕಾಟ್ಲಾ, ಬಾಳೆ, ರೂ, ಕುಚ್ಚು, ಗಾಸ್ಕರ್‌ನಂತಹ ತರಾವರಿ ಜಾತಿಯ ಮೀನುಗಳು ವಿವಿಧ ಗಾತ್ರಗಳಲ್ಲಿ ಸಿಗುತ್ತವೆ. ಕೆಲವು ಕಾರಣಗಳಿಂದ ಒಮ್ಮೊಮ್ಮೆ ಮೀನುಗಳು ಸಿಗದೇ ಹಣ ಕಟ್ಟಿದವರು, ಸಮಿತಿಯವರಿಂದ ಹಣ ವಾಪಸು ಪಡೆದ ಊದಾಹರಣೆಗಳೂ ಇವೆ.

ವರ್ಷಕ್ಕೊಮ್ಮೆ ಮೀನಿನ ಹಬ್ಬ ನಡೆದ ಮೇಲೆ, ಆ ಕೆರೆಗಳಿಗೆ ಮೀನಿನ ಮರಿಗಳನ್ನು ತಂದು ಬಿಡುವ ಸಂಪ್ರದಾಯವಿದೆ. ಆಗ ಬಿಟ್ಟ ಮೀನಿನ ಮರಿಗಳು ಮುಂದಿನ ಹಬ್ಬದ ಹೊತ್ತಿಗೆ ದೊಡ್ಡವಾಗಿರುತ್ತವೆ. ಒಂದು ಪಕ್ಷ ವರ್ಷದೊಳಗೆ ಯಾರಾದರೂ ಈ ಕೆರೆಗಳಲ್ಲಿ ಮೀನು ಹಿಡಿದರೆ ಅಂಥವರಿಗೆ ಗ್ರಾಮದ ಸಮಿತಿಯವರು ದಂಡ ವಿಧಿಸುತ್ತಾರೆ. ನೀರಿನಲ್ಲಿ ಮೀನುಗಳು ಹೆಚ್ಚಾಗಿ, ಕೆಲವೊಮ್ಮೆ ಇಂತಿಷ್ಟು ಹಣಕ್ಕೆ ಗುತ್ತಿಗೆ ನೀಡುತ್ತಾರೆ. ಇದರ ಉಸ್ತುವಾರಿ ಕೂಡ ಸಮಿತಿಯವರದ್ದೇ ಆಗಿರುತ್ತದೆ.

ಸಾಮೂಹಿಕ ಮೀನು ಶಿಕಾರಿ ಎಂಬುದು ಒಂದು ಹವ್ಯಾಸ. ಮಾತ್ರವಲ್ಲ, ಹಳ್ಳಿಗಳ ನಡುವೆ ಸೌಹಾರ್ದ ಮತ್ತು ಸಂಪರ್ಕದ ಕೊಂಡಿ. ಮೀನಿನ ಬೇಟೆಯಲ್ಲಿ ವರ್ಷಕ್ಕೊಮ್ಮೆ ಪಾಲ್ಗೊಳ್ಳುವ ಮೂಲಕ ಅಕ್ಕಪಕ್ಕದ ಹಳ್ಳಿಗರು ಪರಸ್ಪರ ಪ್ರೀತಿ ವಿಶ್ವಾಸ ಹಂಚಿಕೊಳ್ಳುತ್ತಾರೆ.

ಈ ಹಬ್ಬದಲ್ಲಿ ಪಾಲ್ಗೊಳ್ಳಲು ಜಾತಿ–ಪಂಥಗಳ ಬೇಧವಿಲ್ಲ. ಎಲ್ಲ ಜಾತಿಗಳ ಜನ ಒಟ್ಟಾಗಿ ಪಾಲ್ಗೊಂಡು ಸಂಭ್ರಮದಿಂದ ಮೀನು ಹಿಡಿಯುವುದೇ ಈ ಹಬ್ಬದ ವೈಶಿಷ್ಟ್ಯ. ಮಲೆನಾಡು ಮತ್ತು ಅರೆಮಲೆನಾಡಿನ ಗಡಿಯಲ್ಲಿರುವ ಹಾನಗಲ್‌ ನಂತಹ ತಾಲ್ಲೂಕಿನಲ್ಲಿ ಇದೊಂದು ವಿಶಿಷ್ಟ ಗ್ರಾಮೀಣ ಕ್ರೀಡೆಯಾಗಿ ಉಳಿದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.