ADVERTISEMENT

ದೇಸಿ ಬಿತ್ತನೆ ಬೀಜ ಉತ್ಸವ

ಪ್ರಜಾವಾಣಿ ವಿಶೇಷ
Published 24 ಜನವರಿ 2024, 23:30 IST
Last Updated 24 ಜನವರಿ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಆ್ಯಕ್ಷನ್‌ ಏಡ್‌ ಎನ್ನುವ ಸರ್ಕಾರೇತರ ಸಂಸ್ಥೆಯು ಈಚೆಗೆ ಪಶ್ಚಿಮ ಬಂಗಾಳದಲ್ಲಿ ದೇಸಿ ಬಿತ್ತನೆ ಬೀಜ ಉತ್ಸವವನ್ನು ಹಮ್ಮಿಕೊಂಡಿತ್ತು. ಗ್ರಾಮಮಟ್ಟದ ಬಿತ್ತನೆ ಬೀಜ ಬ್ಯಾಂಕ್‌ಗಳನ್ನು ಸ್ಥಾಪನೆ ಮಾಡುವ ಉದ್ದೇಶದಿಂದ ಮತ್ತು ಇತ್ತೀಚಿನ ಹವಾಮಾನ ಬದಲಾವಣೆ ಮತ್ತು ಅದಕ್ಕೆ ಅನುಗುಣವಾದ ಸಾವಯವ ಕೃಷಿ ಕ್ರಮಗಳ ಬಗ್ಗೆ ಅರಿವನ್ನು ಮೂಡಿಸಲು ಈ ಉತ್ಸವವನ್ನು ಆಯೋಜಿಸಲಾಗಿತ್ತು. ದೇಸಿ ತಳಿಗಳ ಸಂರಕ್ಷಣೆ, ಸಾಂಪ್ರದಾಯಿಕ ಜ್ಞಾನದ ವಿನಿಮಯ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಲಾಯಿತು. 

ಸುಸ್ಥಿರ ಕೃಷಿ

ADVERTISEMENT

* ಸುಸ್ಥಿರ ಕೃಷಿ ಎಂದರೆ ಕೃಷಿ ಮತ್ತು ಆಹಾರ ಉತ್ಪಾದನೆಯ ಗುರಿಗಳನ್ನು ಸಮಗ್ರತೆಯ ದೃಷ್ಟಿಕೋನದಲ್ಲಿ ಸಾಧಿಸುವುದು.  ಯಾವುದೇ ನೈಸರ್ಗಿಕ ಸಂಪನ್ಮೂಲಗಳಿಗೆ ಹಾನಿಯಾಗದ ರೀತಿಯಲ್ಲಿ ಕೃಷಿ ಮಾಡುವುದು.

* ಪರಿಸರ ಸಂರಕ್ಷಣೆ, ಆರ್ಥಿಕ ಲಾಭ, ಸಾಮಾಜಿಕ ಸಮಾನತೆ, ಮಿಶ್ರ ಬೆಳೆಗಳಿಗೆ ಆದ್ಯತೆ ನೀಡುವುದು, ಸಾವಯವ ಕೃಷಿ ಮತ್ತು ಸಮುದಾಯ ಕೇಂದ್ರಿತ ಕೃಷಿ ಚಟುವಟಿಕೆಗಳನ್ನು ಮತ್ತು ಆಚರಣೆಗಳನ್ನು ಪರಿಪಾಲಿಸುವ ಉದ್ದೇಶವನ್ನು ಹೊಂದಿರುತ್ತದೆ.

ಸುಸ್ಥಿರ ಕೃಷಿಯ ಉಪಯುಕ್ತತೆಗಳು

* ಪರಿಸರ ಸಂರಕ್ಷಣೆ:ಸುಸ್ಥಿರ ಕೃಷಿಯನ್ನು ಅಳವಡಿಸಿಕೊಂಡರೆ ಮಣ್ಣಿನ ಸಂರಕ್ಷಣೆ, ಜಲ ಸಂರಕ್ಷಣೆ ಮತ್ತು ಜೈವಿಕ ವೈವಿಧ್ಯಗಳನ್ನು ಕಾಪಾಡಲು ಉಪಯುಕ್ತವಾಗುತ್ತದೆ. ರಾಸಾಯನಿಕಗಳ ಮತ್ತು ಕೀಟನಾಶಕಗಳ ಬಳಕೆ ಸೀಮಿತ ಪ್ರಮಾಣದಲ್ಲಿರುವುದರಿಂದ ಪರಸರಕ್ಕೆ ಆಗುವ ಹಾನಿಯನ್ನು ತಪ್ಪಿಸಬಹುದು. 

* ಆರ್ಥಿಕ ಉಪಯುಕ್ತತೆ: ಸುಸ್ಥಿರ ಕೃಷಿಯನ್ನು ಅಳವಡಿಸಿಕೊಂಡರೆ ರೈತರ ಆದಾಯ ದೀರ್ಘಾವಧಿಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿರುತ್ತದೆ.  ವೆಚ್ಚ ಕಡಿಮೆಯಾದ ಕಾರಣದಿಂದ  ಜೀವನಮಟ್ಟ ವೃದ್ಧಿಸುತ್ತದೆ.

* ಹವಾಮಾನದ ಮೇಲಿನ ಪರಿಣಾಮ: ಸುಸ್ಥಿರ ಕೃಷಿಯನ್ನು ಅಳವಡಿಸಿಕೊಂಡರೆ ಹಸಿರು ಮನೆ ಅನಿಲ ಹೊರಸೂಸುವಿಕೆ ಕಡಿಮೆಯಾಗಿ ಇತ್ತೀಚೆಗೆ ಎದುರಿಸುತ್ತಿರುವ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಂತಹ ಸಮಸ್ಯೆಗಳಿಂದ ಮುಕ್ತವಾಗಬಹುದು.

* ಜೈವಿಕ ವೈವಿಧ್ಯದ ಸಂರಕ್ಷಣೆ: ಸುಸ್ಥಿರ ಕೃಷಿ ಅಳವಡಿಸಿಕೊಂಡರೆ ಬೆಳೆಗಳ ವೈವಿಧ್ಯ, ಪರಿಸರ ವೈವಿಧ್ಯ ಮತ್ತು ಜಾನುವಾರು  ವೈವಿಧ್ಯಗಳನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ.  ಕೀಟಗಳ ಮತ್ತು ರೋಗಗಳ ಸಮಸ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ.

ಇತಿಮಿತಿಗಳು

* ಸುಸ್ಥಿರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮಾನವ ಸಂಪನ್ಮೂಲಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಇದರಿಂದ ಕೀಟನಾಶಕಗಳ ಮತ್ತು ರಾಸಾಯನಿಕಗಳ ವೆಚ್ಚ ಕಡಿಮೆಯಾದರೂ ಮಾನವ ಸಂಪನ್ಮೂಲಗಳ ಮೇಲೆ ತಗಲುವ ವೆಚ್ಚದಿಂದ ಉತ್ಪಾದನೆಯ ವೆಚ್ಚ ಹೆಚ್ಚಳವಾಗಬಹುದು.

* ಸುಸ್ಥಿರ ಕೃಷಿ ಪದ್ಧತಿಯಲ್ಲಿ ಫಲಿತಾಂಶ ದೊರಕಬೇಕಾದರೆ ಹೆಚ್ಚಿನ ಸಮಯ ಬೇಕಾಗುತ್ತದೆ ಇದರಿಂದ ರೈತ ಸಮುದಾಯಕ್ಕೆ ತ್ವರಿತ ಗತಿಯಲ್ಲಿ ಲಾಭವಾಗದೆ ಅಥವಾ ಹವಾಮಾನ, ಮಾರುಕಟ್ಟೆಯಲ್ಲಿ ಉಂಟಾಗುವ ಬದಲಾವಣೆಗಳು ಮತ್ತು ಸರ್ಕಾರದ ನೀತಿಗಳಲ್ಲಿ ಉಂಟಾಗುವ ಬದಲಾವಣೆಗಳ ಕಾರಣದಿಂದ ರೈತರು  ಹಿಂದೇಟು ಹಾಕುವ ಸಾಧ್ಯತೆ ಇರುತ್ತದೆ.

* ಭಾರತದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು  ಅಪೌಷ್ಟಿಕತೆ ಹಾಗೂ ಆಹಾರ ಭದ್ರತೆಯ ಸಮಸ್ಯೆಗಳಿದ್ದು,  ಸುಸ್ಥಿರ ಕೃಷಿ ಪದ್ಧತಿಯಿಂದ ಬೇಡಿಕೆಗೆ ಅನುಸಾರ ಆಹಾರ ಧಾನ್ಯ ಪೂರೈಸಲು ಸಾಧ್ಯವಾಗದೇ ಇರಬಹುದು. 

* ಉದಾಹರಣೆ- ಶ್ರೀಲಂಕಾದಲ್ಲಿ ಸಾವಯವ ಕೃಷಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಮುಂದಾದಾಗ ಶೇ 30ರಷ್ಟು ಉತ್ಪಾದನೆಯಲ್ಲಿ ಇಳಿಮುಖವಾಯಿತು. ಇದರಿಂದ ಶ್ರೀಲಂಕಾದ ಆರ್ಥಿಕ ವ್ಯವಸ್ಥೆ ಬಿಕ್ಕಟ್ಟು ಎದುರಿಸಿತು.

* ಪ್ರಾಥಮಿಕ ಹಂತದಲ್ಲಿ ಮೂಲಸೌಕರ್ಯಗಳು, ಸಲಕರಣೆಗಳು, ನೀರಾವರಿ ವ್ಯವಸ್ಥೆಗಳು, ಸೂಕ್ಷ್ಮ ನೀರಾವರಿ ವ್ಯವಸ್ಥೆಯಲ್ಲಿ ಬಳಸುವ ಸಲಕರಣೆಗಳು, ಸಾವಯವ ಗೊಬ್ಬರ ಮತ್ತು ದೇಸಿ ತಳಿಗಳ ಮೇಲಿನ ಹೂಡಿಕೆ ಹೆಚ್ಚಿಸಬೇಕಾಗುತ್ತದೆ. 

* ಸುಸ್ಥಿರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಸಮರ್ಪಕ ದಾಸ್ತಾನು ನಿರ್ವಹಣೆ ಮತ್ತು ಮಾರುಕಟ್ಟೆಯ ಲಭ್ಯತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ.   

ಸರ್ಕಾರದ ಯೋಜನೆಗಳು

* ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ : ಹವಾಮಾನ ಬದಲಾವಣೆಗೆ ಅನುಗುಣವಾಗಿ ಕೃಷಿ ವಲಯದಲ್ಲಿ ಬದಲಾವಣೆಗಳನ್ನು ತರಲು ಯೋಜನೆಯು ಕಾರ್ಯನಿರ್ವಹಿಸುತ್ತದೆ. ಸುಸ್ಥಿರ ಕೃಷಿಯನ್ನು ಅಳವಡಿಸಿಕೊಳ್ಳಲು ಪಾಲಿಸಬೇಕಾದ ತಂತ್ರಗಳನ್ನು ರೈತ ಸಮುದಾಯಕ್ಕೆ ತಿಳಿಸಲಾಗುತ್ತದೆ.

* ಪರಂಪರಾಗತ್ ಕೃಷಿ ವಿಕಾಸ್ ಯೋಜನೆ : ಪರಂಪರಾಗತ್ ಕೃಷಿ ವಿಕಾಸ್ ಯೋಜನೆಯನ್ನು 2015ರಲ್ಲಿ ಜಾರಿಗೆ ತರಲಾಯಿತು.

ಸರ್ಕಾರ ತೆಗೆದುಕೊಳ್ಳಬಹುದಾದ ಕ್ರಮಗಳು

* ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಣಕಾಸಿನ ಭತ್ಯೆಗಳನ್ನು ಮತ್ತು ಸಹಾಯಧನವನ್ನು ಕಲ್ಪಿಸುವ ಮೂಲಕ ಸುಸ್ಥಿರ ಕೃಷಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಉತ್ತೇಜಿಸ್ತಕ್ಕದ್ದು.


* ಸುಸ್ಥಿರ ಕೃಷಿ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಸಂಶೋಧನೆ ಮತ್ತು ಅಭಿವೃದ್ಧಿಗೆ ಸರ್ಕಾರ ಹೂಡಿಕೆಯನ್ನು ಹೆಚ್ಚಿಸತಕ್ಕದ್ದು.


* ರೈತರಿಗೆ ಅವಶ್ಯಕ ತರಬೇತಿ ಮತ್ತು ಅರಿವನ್ನು ಮೂಡಿಸುವ ಮೂಲಕ ಸುಸ್ಥಿರ ಕೃಷಿಯನ್ನು ಕೈಗೊಳ್ಳಲು ರೈತ ಸಮುದಾಯದ ಸಾಮರ್ಥ್ಯವನ್ನು ಹೆಚ್ಚಿಸುವುದು.


* ಅವಶ್ಯಕ ಮೂಲಭೂತ ಸೌಕರ್ಯಗಳು ಮತ್ತು ಮಾರುಕಟ್ಟೆಯ ಬೆಂಬಲವನ್ನು ನೀಡುವುದಲ್ಲದೆ ಗ್ರಾಹಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.


* ಕೃಷಿ ವಲಯದಲ್ಲಿ ಮಹಿಳೆಯರನ್ನು ಮತ್ತಷ್ಟು ಸಬಲೀಕರಣಗೊಳಿಸುವ ಮೂಲಕ ಸುಸ್ಥಿರ ಕೃಷಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮಹಿಳೆಯರಿಗೆ ಉತ್ತೇಜನ ನೀಡುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.