ಕನ್ನಡ ನಾಡಿನ ಮೂಲೆಮೂಲೆಯಿಂದ ಬಂದಿದ್ದ ನೂರಾರು ರೈತರು ದೇಸಿ ತಳಿ ಭತ್ತದ ತಾಕುಗಳಿಗೆ ಲಗ್ಗೆ ಇಟ್ಟಿದ್ದರು. ಒಬ್ಬೊಬ್ಬರ ಪ್ರಶ್ನೆಗೂ ಸಹ ಸಂಶೋಧಕ ಉಲ್ಲಾಸ್ ಸಮಾಧಾನದಿಂದ ಉತ್ತರಿಸುತ್ತಿದ್ದರು. ಅವರ ಸಹಾಯಕ್ಕೆ ಆಗಾಗ್ಗೆ ಡಾ. ಎಸ್. ಪ್ರದೀಪ್ ಮುಂದಾಗುತ್ತಿದ್ದರು! ಪ್ರತಿ ತಳಿಗೂ ಒಂದೊಂದು ಪ್ರಶ್ನೆ ಕೇಳಿದರೆ ಒಟ್ಟು ನೂರತೊಂಬತ್ತು ಪ್ರಶ್ನೆಗಳು ಆಗುತ್ತಿದ್ದವೇನೋ!!
ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿನ ತಾಕುಗಳಲ್ಲಿ ದೇಸಿ ಭತ್ತದ ತಳಿಗಳ ಸಂಭ್ರಮ ಮನೆಮಾಡಿತ್ತು. ಹರಿಹರದಿಂದ ಬಂದಿದ್ದ ಸರೋಜಮ್ಮ ‘ನನ್ನ ಬಳಿ ಬರಿ ಮೂವತ್ತು ಜಾತಿ ದೇಸಿ ಭತ್ತದ ತಳಿಗಳಿವೆ. ಇಲ್ಲಿ ನೋಡಿದರೆ...’ ಎಂದು ಆಶ್ಚರ್ಯಪಟ್ಟರು. ‘ಇದೂ ನಿಮ್ಮ ಏರಿಯಾಕ್ಕೆ ಚೆನ್ನಾಗಿ ಬರುತ್ತೆ. ಬೆಳೆದು ನೋಡಿ’ ಎಂದು ಉಲ್ಲಾಸ್ ಇನ್ನೊಂದು ತಳಿ ಶಿಫಾರಸು ಮಾಡುತ್ತಿದ್ದಂತೆ, ಹಾನಗಲ್ಲಿನ ಶಿವಾಜಿಗೌಡ ಪಾಟೀಲ ‘ನಮ್ಮ ಏರಿಯಾಕ್ಕೆ ಯಾವುದು ಸೂಟ್ ಆಗತ್ತೆ’ ಎಂದು ಪ್ರಶ್ನೆ ಹಾಕಿದರು. ಅವರಿಗೆ ಉತ್ತರಿಸುವಲ್ಲಿ ಇನ್ನೊಬ್ಬ, ಮತ್ತೊಬ್ಬ ರೈತರು ಪ್ರಶ್ನೆಯೊಂದಿಗೆ ಸಿದ್ಧವಾಗುತ್ತಿದ್ದರು.
ಅರವತ್ತರ ದಶಕದ ‘ಹಸಿರುಕ್ರಾಂತಿ’ಯಿಂದಾಗಿ ಅಧಿಕ ಇಳುವರಿಯ ಹೆಸರಲ್ಲಿ ಹೈಬ್ರಿಡ್ ತಳಿಗಳು ಗದ್ದೆಗೆ ಇಳಿದವು. ರಸವಿಷಗಳನ್ನು ಬಳಸಿ, ಅಧಿಕ ಆಹಾರ ಉತ್ಪಾದನೆ ಜತೆಗೆ ನೆಲದ ಫಲವತ್ತತೆ ಹಾಳಾಯಿತು. ಜತೆಗೆ ಈ ನೆಲದ ತಳಿ ವೈವಿಧ್ಯ ಕಣ್ಮರೆಯಾಯಿತು. ಪರಿಣಾಮ ಅರಿತವರು ವಿಷಮುಕ್ತ (ಸಾವಯವ ಕೃಷಿ) ಕೃಷಿಯತ್ತ ಹೆಜ್ಜೆ ಇಟ್ಟರು. ಎರಡು ದಶಕಗಳಿಂದ ಸಾವಯವ ಕೃಷಿ ಜನಪ್ರಿಯವಾಗುವ ಜತೆಗೆ ಅಳಿವಿನಂಚಿಗೆ ತಲುಪಿದ್ದ ದೇಸಿ ತಳಿಗಳನ್ನು ಸಂರಕ್ಷಿಸಲು ರೈತರು ಕಂಕಣಬದ್ಧರಾದರು. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕೃಷಿಕರ ತಂಡಗಳು ನಾಟಿ ತಳಿ ಸಂಗ್ರಹಿಸಿ, ತಮ್ಮ ಹೊಲದತ್ತ ರೈತರನ್ನು ಆಕರ್ಷಿಸಿದರು. ಈ ಕಾರ್ಯಕ್ಕೆ ಆಂದೋಲನ ರೂಪ ಕೊಟ್ಟಿದ್ದು, ‘ಭತ್ತ ಉಳಿಸಿ ಆಂದೋಲನ’. ಇದರ ನೆರವಿನಿಂದ ಹಳೆಯ ತಳಿಗಳಿಗೆ ಪುನಶ್ಚೇತನ ಕೊಡಲು ‘ಸಹಜ ಸಮೃದ್ಧ’ ಸಂಸ್ಥೆ ನಿರ್ಧರಿಸಿತು. ಪ್ರವಾಸ, ತರಬೇತಿ- ಕಾರ್ಯಾಗಾರಗಳ ಮೂಲಕ ರೈತರಲ್ಲಿ ದೇಸಿ ತಳಿಯ ಆಸಕ್ತಿ ಬೆಳೆಸಿತು. ಪರಿಣಾಮವಾಗಿ ಕನ್ನಡ ನಾಡಿನಲ್ಲಿ ನೂರಾರು ದೇಸಿ ಭತ್ತದ ತಳಿಗಳು ಮತ್ತೆ ರೈತರ ಗದ್ದೆಗಳಿಗೆ ಬರುವಂತಾಯಿತು.
ಈಗ ಸದ್ದಿಲ್ಲದೇ ದೇಸಿ ತಳಿ ಸಂರಕ್ಷಣೆ ನಡೆಯುತ್ತಿದೆ. ಈ ಕಾಯಕಕ್ಕೆ ಕೃಷಿ ವಿಜ್ಞಾನ ಕೇಂದ್ರಗಳು ಜತೆಯಾಗಿವೆ. ಬ್ರಹ್ಮಾವರದ ಕೃಷಿ ಸಂಶೋಧನಾ ಕೇಂದ್ರ, ಮೈಸೂರು ಬಳಿಯ ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ದೇಸಿ ತಳಿ ಪ್ರಾತ್ಯಕ್ಷಿತೆ ತಾಕುಗಳು ರೈತರಿಗೆ ಮಾಹಿತಿ ನೀಡುತ್ತಿವೆ. ಅದರಲ್ಲೂ ಶಿವಮೊಗ್ಗದ ಸಾವಯವ ಕೃಷಿ ಸಂಶೋಧನಾ ಕೇಂದ್ರವು ಈ ಬಾರಿ ಅತಿ ಹೆಚ್ಚು ದೇಸಿ ತಳಿ ಸಂರಕ್ಷಣೆ ಮಾಡುವ ಮೂಲಕ ಗಮನ ಸೆಳೆದಿದೆ. ಈ ಕೇಂದ್ರದಲ್ಲಿ ಎಂಟು ವರ್ಷಗಳ ಹಿಂದೆಯೇ ಸಂಯೋಜಕ ಡಾ. ಎನ್. ದೇವಕುಮಾರ್ ಅವರು 70 ದೇಸಿ ಭತ್ತದ ತಳಿಗಳ ಪ್ರಾತ್ಯಕ್ಷಿಕೆ ತಾಕು ಸ್ಥಾಪಿಸಿ, ರೈತರ ಗಮನ ಸೆಳೆದಿದ್ದರು. ಬರುಬರುತ್ತ ಸಂರಕ್ಷಿತ ತಳಿಗಳ ಸಂಖ್ಯೆ ಹೆಚ್ಚಾಗುತ್ತ ಹೋಯಿತು. ಈ ಬಾರಿ 192 ದೇಸಿ ಭತ್ತ ಸಂರಕ್ಷಣೆ ಯೋಜನೆಯೊಂದಿಗೆ, ಅವುಗಳ ವೈಶಿಷ್ಟ್ಯವನ್ನು ರೈತರಿಗೆ ತಲುಪಿಸಲು ಮುಂದಾಗಿದೆ.
‘ಹಸಿರುಕ್ರಾಂತಿಯಿಂದ ಆಹಾರದ ಸ್ವಾವಲಂಬನೆ ಸಾಧಿಸಿದ್ದೇವೆ. ಆದರೆ ಈ ಹಂತದಲ್ಲಿ ನಾವು ಗುಣಮಟ್ಟದ ಆಹಾರದ ಕಡೆಗೆ ಗಮನ ಕೊಡಬೇಕಿದೆ’ ಎನ್ನುವ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಕೆ. ನಾಯ್ಕ, ಈ ಹಂತದಲ್ಲಿ ತಮ್ಮ ವಿಶ್ವವಿದ್ಯಾಲಯವು ದೇಸಿ ತಳಿಗಳ ಸಂರಕ್ಷಣೆಯನ್ನ ಮಾಡಲು ಉತ್ಸುಕವಾಗಿದೆ ಎಂದು ಹೇಳುತ್ತಾರೆ. ದೇಸಿ ತಳಿಗಳನ್ನು ಶುದ್ಧಗೊಳಿಸಿ, ಅವುಗಳ ಬಿತ್ತನೆ ಬೀಜಗಳನ್ನು ಸಬ್ಸಿಡಿ ದರದಲ್ಲಿ ರೈತರಿಗೆ ವಿತರಿಸಲು ತಮ್ಮ ವಿವಿ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆಯನ್ನು ಅವರು ಕೊಡುತ್ತಾರೆ.
ವಾತಾವರಣದ ವೈಪರೀತ್ಯಕ್ಕೆ ಹೊಂದಿಕೊಳ್ಳುವ ದೇಸಿ ತಳಿಗಳನ್ನು ಬೆಳೆಯುವುದಷ್ಟೇ ಅಲ್ಲ; ಅವುಗಳ ಶುದ್ಧ ಬೀಜಗಳನ್ನು ರೈತರಿಗೆ ಕೊಡುವ ಕೆಲಸ ಈ ಕೇಂದ್ರದಿಂದ ನಡೆಯುತ್ತಿದೆ. ‘ಮಾಹಿತಿಯ ಜತೆಗೆ ಆ ತಳಿಗಳ ಬಿತ್ತನೆ ಬೀಜಗಳನ್ನು ಆಸಕ್ತರಿಗೆ ನಾವು ಕೊಡುತ್ತಿದ್ದೇವೆ. ಒಳಸುರಿ ವೆಚ್ಚ ಕಡಿಮೆ, ರೋಗ- ಕೀಟ ಬಾಧೆ ಕಡಿಮೆ. ಇದರಿಂದಾಗಿ ದೇಸಿ ತಳಿ ರೈತರಿಗೆ ವರದಾನವಾಗಬಲ್ಲವು’ ಎನ್ನುತ್ತಾರೆ ಕೇಂದ್ರದ ಸಂಯೋಜಕ ಡಾ. ಎಸ್. ಪ್ರದೀಪ್. ಮಲೆನಾಡು ಭತ್ತದ ತವರು. ಈಗಲೂ ಹತ್ತಾರು ದೇಸಿ ತಳಿಗಳು ಅಲ್ಲಲ್ಲಿ ರೈತರ ಹೊಲಗದ್ದೆಗಳಲ್ಲಿ ನೆಲೆಸಿವೆ. ‘ನಮ್ಮ ದೇಶದಲ್ಲೇ ಹುಟ್ಟಿದ ಭತ್ತ ಎಲ್ಲಾ ಬಗೆಯ ಹವಾಗುಣ ಹಾಗೂ ಮಣ್ಣಿಗೆ ಹೊಂದಿಕೊಂಡು ಬೆಳೆಯುತ್ತದೆ. ಬರನಿರೋಧಕ, ಚೌಳು ನೆಲ, ಸಮುದ್ರ ತೀರ ಹೀಗೆ ಭತ್ತದ ತಳಿಗಳಲ್ಲೇ ಸಾವಿರಾರು ತಳಿಗಳಿವೆ. ಈ ಅಗಾಧ ಸಂಪತ್ತಿನ ಒಂದು ಸಣ್ಣ ಭಾಗವನ್ನು ನಮ್ಮ ಕೃಷಿ ಸಂಶೋಧನಾ ಕೇಂದ್ರದಲ್ಲಿ ಸಂರಕ್ಷಿಸುತ್ತಿರುವುದು ಖುಷಿಯ ಸಂಗತಿ’ ಎನ್ನುತ್ತಾರೆ, ಯುವ ವಿಜ್ಞಾನಿ ಎಂ.ವೈ. ಉಲ್ಲಾಸ.
ರೈತರ ಗದ್ದೆಗಳಿಂದ ಕಾಣೆಯಾಗಿದ್ದ ದೇಸಿ ಭತ್ತ ಈಗ ಮತ್ತೆ ಬರುತ್ತಿವೆ. ಆದರೆ ತಳಿ ಸಂರಕ್ಷಣೆಗಷ್ಟೇ ಈ ಕೆಲಸ ಸೀಮಿತವಾಗುವಂತಿಲ್ಲ. ಪೌಷ್ಟಿಕ, ಬಗೆಬಗೆಯ ರುಚಿಯ ದೇಸಿ ಅಕ್ಕಿಗಳನ್ನು ಗ್ರಾಹಕರಿಗೆ ತಲುಪಿಸಲು ಗಟ್ಟಿಯಾದ ಮಾರುಕಟ್ಟೆ ರೂಪಿಸಬೇಕಿದೆ. ‘ಈಗಾಗಲೇ ರಾಜ್ಯದಲ್ಲಿ ಭತ್ತ ಬೆಳೆಗಾರ ಸಂಘಗಳು ತಮ್ಮ ಸಾಮರ್ಥ್ಯದ ಮಿತಿಯಲ್ಲಿ ರೈತ ಮಾರುಕಟ್ಟೆ ಸ್ಥಾಪಿಸಿಕೊಂಡು ಗ್ರಾಹಕರಿಗೆ ವೈವಿಧ್ಯಮಯ ಅಕ್ಕಿಗಳನ್ನು ಪೂರೈಸುತ್ತಿವೆ. ಇದರ ಮುಂದಿನ ಹೆಜ್ಜೆಯಾಗಿ ಸರ್ಕಾರ ಸಂಶೋಧನೆ ಜತೆಗೆ ರೈತ ಮಾರುಕಟ್ಟೆ ರೂಪಿಸಲು ಮುಂದಾಗಬೇಕು’ ಎಂದು ಸಲಹೆ ಮಾಡುತ್ತಾರೆ ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಜಿ. ಕೃಷ್ಣಪ್ರಸಾದ್.
ಪ್ರಾಯಶಃ ರಾಜ್ಯದಲ್ಲಿ ಮೊದಲ ಬಾರಿಗೆ ಕೃಷಿ ವಿಶ್ವವಿದ್ಯಾಲಯದಿಂದ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ದೇಸಿ ತಳಿ ಸಂರಕ್ಷಣೆ ನಡೆದಿದೆ. ಗುಣಮಟ್ಟದ ಬೀಜಗಳನ್ನು ಉತ್ಪಾದಿಸಲು ಯೋಜನೆ ನಡೆಯುತ್ತಿದೆ. ಪ್ರತಿ ತಳಿಯ ಗುಣ ವಿಶೇಷ ದಾಖಲಾತಿ, ಪೌಷ್ಟಿಕಾಂಶ ವಿಶ್ಲೇಷಣೆ ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುತ್ತಿದೆ. ಸಾವಯವ ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಬಲ ಕೊಟ್ಟಂತಾಗಿದೆ.
ವಿವರಗಳಿಗೆ: ಉಲ್ಲಾಸ್- 6361596337
ಚಿತ್ರಗಳು: ಲೇಖಕರವು
ವಿವಿ ಅಂಗಳದಲ್ಲಿನ ದೇಸಿ ತಳಿಗಳು
ಗಂಧಸಾಲೆ, ರಾಜಮುಡಿ, ರಾಜಭೋಗ, ಚಿನ್ನಪೊನ್ನಿ, ಎಚ್‍ಎಂಟಿ, ಅಂಬೆಮೊಹರ್, ಹುಗ್ಗಿ ಭತ್ತ, ಮಾಲ್ಗುಡಿ ಸಣ್ಣ, ಜೀರಿಗೆ ಸಣ್ಣ, ಬರ್ಮಾ ಬ್ಲಾಕ್, ರತ್ನಚೂಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.