ಹಳೆ ಸೈಕಲ್, ಅದರ ಬಿಡಿಭಾಗಗಳು ಇವರ ಜಮೀನಿನಲ್ಲಿ ಕಳೆ ಕೀಳುವ ಪರಿಕರಗಳಾಗಿವೆ. ವ್ಯರ್ಥವಾಗಿರುವ ಎಲೆಕ್ಟ್ರಾನಿಕ್ ಬಿಡಿ ಭಾಗಗಳು ಧಾನ್ಯ ಒಕ್ಕುವ ರಾಶಿಯಂತ್ರವಾಗಿದೆ. ಫ್ಯಾನ್, ಗಿರಿಣಿಯ ಮಿನಿಮಾದರಿಗಳನ್ನು ಇವರೇ ತಯಾರಿಸಿ ಕೊಳ್ಳುತ್ತಾರೆ. ಇಂಥ ‘ನೆಲಮೂಲ ತಂತ್ರಜ್ಞಾನ’ದ ಜ್ಞಾನದ ಗಣಿ ಗುರುಲಿಂಗಯ್ಯ ಮಾಂತಯ್ಯ ಹುಕ್ಕೇರಿಮಠ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹಲಕಿ ಗ್ರಾಮದ ಗುರುಲಿಂಗಯ್ಯ ವೃತ್ತಿಯಲ್ಲಿ ಕೃಷಿಕ. ಹೂವು, ತರಕಾರಿ ಬೆಳೆಗಾರರು. ವಯಸ್ಸು 23. ಓದಿರುವುದು ಐದನೇ ಕ್ಲಾಸು. ಆದರೆ, ಹುಬ್ಬೇರಿಸುವಂತಹ ತಾಂತ್ರಿಕ ಜ್ಞಾನ ಇವರದ್ದು.
ಇತ್ತೀಚೆಗೆ ಕೃಷಿ ಮೇಳವೊಂದಕ್ಕೆ ಭೇಟಿ ನೀಡಿದ್ದಾಗ, ಅಲ್ಲಿ ಸೈಕಲ್‌ನಿಂದ ಕಳೆ ತೆಗೆಯುವ ಯಂತ್ರವನ್ನು ಗಮನಿಸಿದ್ದರು. ಊರಿಗೆ ಹಿಂದುರಿಗಿದವರೇ, ಆ ಯಂತ್ರವನ್ನು ತಯಾರಿಸಿದರು. ಅದರಿಂದಲೇ ಕಳೆ ತೆಗೆಯಲು ಶುರು ಮಾಡಿದರು.
ಗುರುಲಿಂಗಯ್ಯ, ಹಳೆಯ ಮೊಬೈಲ್ ಬ್ಯಾಟರಿ ಬಳಸಿ ಟಾರ್ಚ್ ಮಾಡುತ್ತಾರೆ. ಕೆಟ್ಟು ಹೋದ ರೇಡಿಯೊಕ್ಕೆ ಜೀವ ಕೊಡುತ್ತಾರೆ. ಪಂಪ್‌ಸೆಟ್ ರಿಪೇರಿ, ಗಿರಿಣಿ ಯಂತ್ರದ ದುರಸ್ತಿಯಂತಹ ತಾಂತ್ರಿಕ ಕೆಲಸಗಳಲ್ಲಿ ನಿಪುಣರು. ನಾಲ್ಕೂವರೆ ಎಕರೆ ಜಮೀನಿನಲ್ಲಿ ತಂದೆ–ತಾಯಿ ಸಹೋದರರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡೇ, ಕೃಷಿಗೆ ಅಗತ್ಯವಾದ ಪರಿಕರಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ.
‘ಇದೆಲ್ಲ ಹೇಗೆ ಕಲಿತಿರಿ’ ಎಂದು ಕೇಳಿದರೆ, ‘ಯಂತ್ರಗಳನ್ನು ರಿಪೇರಿ ಮಾಡುವಾಗ ನೋಡಿದ್ದಷ್ಟೇ. ಅದೇ ನೆನಪಲ್ಲೇ ಕಲಿತೆ’ ಎಂದು ಮುಗುಳ್ನಗುತ್ತಾರೆ. ಪ್ರತಿ ಕೆಲಸಗಳಲ್ಲಿ ಉಂಟಾಗುವ ಸರಿ ತಪ್ಪುಗಳ (ಟ್ರಯಲ್ ಅಂಡ್ ಎರರ್ ಮೆಥೆಡ್) ಮೂಲಕವೇ ತಾಂತ್ರಿಕ ಜ್ಞಾನ ಬೆಳೆಸಿಕೊಂಡಿದ್ದಾರೆ.
ಕೃಷಿಯಲ್ಲಿ ಬಳಕೆ ಮಾಡುವ ರಾಶಿಯಂತ್ರ, ಸೈಕಲ್ ವೀಡರ್, ನೀರೆತ್ತುವ ಪಂಪಸೆಟ್, ಹನಿ ನೀರಾವರಿಗೆ ಬಳಸುವ ಪೈಪ್ ಸುತ್ತುವ ಯಂತ್ರ, ಬ್ಯಾಟರಿ ಚಾಲಿತ ಪಂಖಾ (ಕಮ್ಮಾರ ಕೆಲಸಕ್ಕೆ ಬಳಸಲು), ಕಟ್ಟಿಗೆ ಎಡೆಕುಂಟೆ, ಕಬ್ಬಿಣ ಉಪಕರಣ ಹರಿತಗೊಳಿಸುವ ಯಂತ್ರ, ಗಿರಣಿ ಹೀಗೆ ವಿವಿಧ ಉಪಕರಣಗಳ ಪುಟ್ಟ ಮಾದರಿಗಳನ್ನು ತಯಾರಿಸಿದ್ದಾರೆ.
ಮನೆ ಬಳಕೆಗೆ ಮಿಕ್ಸರ್ ಗ್ರೈಂಡರ್, ವಿದ್ಯುತ್ ಚಾಲಿತ ಫ್ಯಾನ್, ಬ್ಯಾಟರಿ ಸೆಲ್ ರಿಚಾರ್ಜ ಮಾಡುವ ಯಂತ್ರ ಇವುಗಳ ಮಾದರಿ (ಮಿನಿಯೇಚರ್) ಮಾಡಿದ್ದಾರೆ. ಈ ಮಾದರಿ ತಯಾರಿಕೆಗೆ ಬೇಕಾದ ಕೆಲವು ಕಚ್ಚಾ ಸಾಮಗ್ರಿಗಳನ್ನು ಗುಜರಿ ಅಂಗಡಿಗಳಿಂದ ಕಡಿಮೆ ಮೊತ್ತಕ್ಕೆ ಖರೀದಿಸುತ್ತಾರೆ. ತಮ್ಮ ಮನೆಯಲ್ಲಿ ಲಭ್ಯ ವಸ್ತುಗಳನ್ನೂ ಬಳಕೆ ಮಾಡಿದ್ದಾರೆ.
ಸಾಮಾನ್ಯ ಕುಟುಂಬಕ್ಕೆ ಸೇರಿದ ಗುರುಲಿಂಗಯ್ಯ ಇವರ ಆರ್ಥಿಕ ಪರಿಸ್ಥಿತಿ ಅಷ್ಟಕಷ್ಟೆ. ಹೆಚ್ಚಿನ ಬಂಡವಾಳ ತೊಡಗಿಸುವ ಸಾಮರ್ಥ್ಯವಿಲ್ಲ. ಇವರ ಸಾಮರ್ಥ್ಯದ ಸದ್ಬಳಕೆ ಮಾಡಲು ಉದ್ದಿಮೆದಾರರು ಮುಂದೆ ಬಂದರೆ, ಖಂಡಿತ ಇವರ ಪ್ರತಿಭೆಗೆ ಉತ್ತಮ ಅವಕಾಶ ದೊರೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.