ಬೆಂಗಳೂರು: ಉಳುವ ಮಣ್ಣು, ಬಿತ್ತುವ ಬೀಜದಿಂದ ಹಿಡಿದು ಮಾರುಕಟ್ಟೆಗೆ ತಲುಪಿಸುವವರೆಗೂ ನಡೆಯುವ ಕೃಷಿಯ ಸಮಗ್ರ ಆಲೋಚನೆಗಳು ‘ಕೃಷಿ ಮೇಳ’ದಲ್ಲಿ ಸುಳಿದಾಡುತ್ತಿದ್ದವು.
–ಕೃಷಿವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವಕೃಷಿಮೇಳದ ಎರಡನೇಯ ದಿನವೂ ಸಂಭ್ರಮದ ವಾತಾವರಣ ಆವರಿಸಿತ್ತು.ಶಾಲಾ ಮಕ್ಕಳು, ವಿದ್ಯಾರ್ಥಿಗಳು, ರೈತರು, ಕೃಷಿ ಆಸಕ್ತಿ ಹೊಂದಿರುವವರು... ಹೀಗೆ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಜನರ ಸಾಗರವೇ ಕಂಡುಬಂದಿತು.
ಈ ಬಾರಿಯ ಮೇಳದಲ್ಲಿ ಪಶುಸಂಗೋಪನೆ ಹಾಗೂ ಕೃಷಿ ಯಂತ್ರೋಪಕರಣಗಳ ಬಗ್ಗೆ ಹೆಚ್ಚು ಮಳಿಗೆಗಳು ಕಂಡುಬಂದವು.ಕೃಷಿಯಲ್ಲಿನ ಹೊಸ ವಿಷಯಗಳನ್ನು ತಿಳಿಯುವ ತವಕದಲ್ಲಿ ವಿದ್ಯಾರ್ಥಿಗಳಿದ್ದರೆ, ಹೊಸ ತಳಿಗಳು ಹಾಗೂ ಬಹುಪಯೋಗಿ ಯಂತ್ರೋಪಕರಣಗಳನ್ನು ನೋಡುವ ಉತ್ಸಾಹದಲ್ಲಿ ರೈತರಿದ್ದರು.
ಆಳೆತ್ತರದ ದೇವಣಿ ಹಸು, ಕಾಂಕ್ರೇಜ್ ದನ, ಭಯ ಹುಟ್ಟಿಸುವ ಗಿರ್ ಹಸು, ಡಾರ್ಪರ್ ತಳಿಯ ಕುರಿಗಳು, ಮುದ್ದಾದ ಮೊಲಗಳು, ಕುಳ್ಳಗಿನ ಬಂಡೂರು ತಳಿಯ ಕುರಿಗಳು, ಭಾರಿ ಗಾತ್ರದ ಹಂದಿಗಳು, ತರಹೇವಾರಿ ಮೀನುಗಳು, ದಷ್ಟಪುಷ್ಟವಾದ ಕೋಳಿಗಳು.. ಇವಿಷ್ಟು ಪಶುಸಂಗೋಪನೆಯ ವಿಭಾಗದ ಆಕರ್ಷಣೆಗಳು.
ಕುಕುಟೋದ್ಯಮ ಹೆಚ್ಚು ಜನಪ್ರಿಯತೆ ಮತ್ತು ಆದಾಯಕ್ಕೆ ದಾರಿಯಾಗುತ್ತಿರುವುದರಿಂದ ಕೋಳಿ ಸಾಕಾಣಿಕೆ ಕುರಿತೂ ಅನೇಕರು ಮಾಹಿತಿ ಪಡೆದರು. ಗಿರಿರಾಜ, ಸ್ವರ್ಣಧಾರ, ಖಡಕ್‌ನಾಥ್, ಬಾತುಕೋಳಿ... ಹೀಗೆ ಎಲ್ಲಾ ತಳಿಗಳ ಬಗ್ಗೆಯೂ ತಿಳಿದುಕೊಳ್ಳುವುದರ ಜೊತೆಗೆ ಮರಿಗಳನ್ನು ಖರೀದಿಸುವ ಭರಾಟೆಯೂ ಜೋರಾಗಿತ್ತು.
ಮೀನು ಸಾಕಾಣಿಕೆ ಕುರಿತು ಮಾಹಿತಿ ಪಡೆಯುವವರಿಗಿಂತ ಮನೆಯಲ್ಲಿ ಅಕ್ವೇರಿಯಂ ಇಡಲು ಯಾವ ಮೀನು ಸೂಕ್ತ, ಎಷ್ಟು ದಿನ ಬದುಕುತ್ತವೆ ಎಂಬುದನ್ನೇ ಅನೇಕರು ಕೇಳಿ ತಿಳಿದುಕೊಳ್ಳುತ್ತಿದ್ದರು. ಶಾಲಾ ಮಕ್ಕಳಂತು ₹30ಕ್ಕೆ ಜೋಡಿ ಮೀನುಗಳನ್ನು ಖರೀದಿಸಿ ಸಂಭ್ರಮಿಸುತ್ತಿದ್ದರು. ಯಂತ್ರೋಪಕರಣ ಮಳಿಗೆಗಳಿಗಿಂತ ಹೆಚ್ಚು ಜನಜಂಗುಳಿ ಪಶುಸಂಗೋಪನೆ ಮಳಿಗೆಗಳಲ್ಲಿ ಕಂಡುಬಂದಿತು.
₹8 ಲಕ್ಷ ಮೌಲ್ಯದ ಡ್ರೋನ್
ಕೃಷಿಯಂತ್ರೋಪಕರಣ ಮಳಿಗೆಗಳಲ್ಲಿ ಎಣ್ಣೆ ತಯಾರಿಸುವ ಗಾಣ, ಸುಧಾರಿತ ಟ್ರ್ಯಾಕ್ಟರ್‌ಗಳು, ಅಡಿಕೆ ಮರ ಏರುವ ಯಂತ್ರ, ಸೈಕಲ್ ಹಿಟ್ಟಿನ ಗಿರಿಣಿಯು ಜನರ ಗಮನ ಸೆಳೆದವು. ಬರೋಬ್ಬರಿ ₹8 ಲಕ್ಷ ಮೌಲ್ಯದ ಬೆಳೆಗಳಿಗೆ ಔಷಧಿ ಸಿಂಪಡಿಸುವ ಡ್ರೋನ್ ರೈತರನ್ನು ಹುಬ್ಬೇರಿಸುವಂತೆ ಮಾಡಿತು. ಒಂದು ಎಕರೆಗೆ ₹500 ಬಾಡಿಗೆಗೂ ಈ ಡ್ರೋನ್ ದೊರೆಯುತ್ತದೆ ಎಂದಾಗ ಕೃಷಿಕರ ಆಸಕ್ತಿ ಹೆಚ್ಚಾಗಿ, ತುಸು ಮಾಹಿತಿಯನ್ನು ಕಲೆಹಾಕಿ ಅಲ್ಲಿಂದ ಮುನ್ನೆಡೆದರು.
ಕೃಷಿಕಾರ್ಮಿಕರ ಕೊರತೆಯಿರುವುದರಿಂದ ಮೇಳದಲ್ಲಿ ಬಹುಪಯೋಗಿ ಯಂತ್ರಗಳ ಬಳಿಯೇ ಹೆಚ್ಚಿನ ರೈತರ ಚಿತ್ತ ನೆಟ್ಟಿತ್ತು.ಸುಲಭವಾಗಿ ಔಷಧಿ ಸಿಂಪಡಿಸುವುದು, ಬದು ಮಾಡುವುದಕ್ಕೆ, ಗುಂಡಿ ತೋಡುವುದಕ್ಕೆ, ಕಳೆ ಕೀಳುವುದಕ್ಕೆ ರೂಪಿಸಿದ್ದ ಸಣ್ಣ ಪುಟ್ಟ ಯಂತ್ರಗಳು ಅಧಿಕ ಸಂಖ್ಯೆಯಲ್ಲಿ ಮಾರಾಟವಾದವು.
ಕೃಷಿಯ ಮಾಹಿತಿಗಳನ್ನು ಸಂಗ್ರಹಿಸುತ್ತಾ ಮಳಿಗೆಗಳಿಂದ ಮಳಿಗೆಗಳಿಗೆ ಸುತ್ತುತ್ತಿದ್ದ ಜನರಿಗೆ ಅಲ್ಲಲ್ಲಿ ಮಾರಾಟ ಮಾಡುತ್ತಿದ್ದ ಮಂಡಕ್ಕಿ, ಗುಲ್ಕನ್ ಬನ್ ಶಕ್ತಿ ವರ್ದಕಗಳಾಗಿದ್ದವು ಎಂದರೆ ತಪ್ಪಾಗಲಾರದು. ಆಕರ್ಷಕ ಕೊಂಬುಗಳ ದನಗಳಾದರೂ ಸರಿ, ಉಳುವ ಯಂತ್ರವಾದರೂ ಸರಿ ಸೆಲ್ಫಿ ಕ್ಲಿಕ್ಕಿಸಿಕೊಂಡೆ ಮುನ್ನಡೆಯಬೇಕು ಎಂಬಂತ್ತಿತ್ತು ಮೇಳಕ್ಕೆ ಬಂದಿದ್ದ ಜನರ ಮನಸ್ಥಿತಿ.
ನಗರ ಹಾಗೂ ಸುತ್ತಮುತ್ತಲ ಶಾಲೆಗಳಿಂದ ವಿದ್ಯಾರ್ಥಿಗಳನ್ನು ಮೇಳಕ್ಕೆ ಕರೆತಂದಿದ್ದರು.ಪ್ರಾಯೋಗಿಕವಾಗಿ ಬೆಳೆದಿರುವ ಭತ್ತ, ರಾಗಿ, ಮೆಕ್ಕೆಜೋಳ, ಸೂರ್ಯಕಾಂತಿ, ದ್ವಿದಳ ಧಾನ್ಯ ಹಾಗೂ ತರಕಾರಿ ಬೆಳೆಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಮಾಹಿತಿ ಪಡೆದರು.ಮಿತವ್ಯಯದ ನೀರು ಬಳಕೆಗಾಗಿ ಹನಿ ನೀರಾವರಿ, ತುಂತುರು ನೀರಾವರಿಯಲ್ಲಿನ ಇತ್ತೀಚಿನ ಆವಿಷ್ಕಾರಗಳು, ಡ್ರೋನ್ ಸ್ಪ್ರೇಯರ್ ರೈತರ ಗಮನ ಸೆಳೆದವು. ತಾರಸಿ ತೋಟ ಹಾಗೂ ಕೈ ತೋಟದ ಕುರಿತು ಸಾರಿ ಹೇಳುತ್ತಿದ್ದ ಊರುಕೇರಿ ವಿಭಾಗವೂ ಮೇಳದ ಆಕರ್ಷಣೆಯಲ್ಲಿ ಒಂದಾಗಿತ್ತು.
ಆಹಾರ ಮಳಿಗೆಗಳಲ್ಲಿ ತುಂಬಿದ್ದ ಜನ:ವಿವಿಧ ಸ್ವಸಹಾಯ ಸಂಘಗಳು, ಹೋಟೆಲ್‌ಗಳ ಮಳಿಗೆಗಳ ಬಳಿ ಜನ ಮುಗಿಬಿದ್ದು ಆಹಾರ ಸೇವಿಸುತ್ತಿದ್ದರು.ರಾಜ್ಯದ ವಿವಿಧ ಭಾಗಗಳ ತಿನಿಸುಗಳು, ಖಾರ ಪದಾರ್ಥಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿದ್ದವು. ಗುಡಿ ಕೈಗಾರಿಕೆ ವಸ್ತುಗಳು, ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳು, ಗೃಹ ಬಳಕೆ ವಸ್ತುಗಳೂ ಮೇಳದಲ್ಲಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.