1982ರಲ್ಲಿ ಆಗಷ್ಟೇ ಉತ್ತರ ಕನ್ನಡದಲ್ಲಿ ‘ಪಶ್ಚಿಮ ಘಟ್ಟ ಉಳಿಸಿ’ ಎಂಬ ಕೂಗು ಪ್ರಾರಂಭವಾಗಿತ್ತು. ‘ವೃಕ್ಷಲಕ್ಷ್ಯ ಆಂದೋಲನ’ದ ಬಿಸಿ ಹುಟ್ಟಿಸಿದ ದಿನಗಳವು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿಗೂ ಬಿಸಿ ತಟ್ಟಿತ್ತು. ಬಸ್ ತಂಗುದಾಣದ ಸಮೀಪವಿರುವ ಬಯಲನ್ನು ಯಾರಾದರೂ ಅತಿಕ್ರಮಿಸಿ ಮನೆಕಟ್ಟಿಸಿ ಬಿಡಬಹುದು ಎಂಬ ಆತಂಕ ಹೊಸಹಳ್ಳಿ ಗ್ರಾಮಸ್ಥರಲ್ಲಿತ್ತು. ಎಲ್ಲರೂ ಸೇರಿ ಬಯಲಿನ ಸುತ್ತ ಗಿಡಗಳನ್ನು ನೆಡಲು ತೀರ್ಮಾನಿಸಿ 60 ಸಸಿಗಳನ್ನು ನೆಟ್ಟರು. ನೆಡುವುದೇನೋ ಸುಲಭದ ಕೆಲಸ, ಬೆಳೆಸುವುದು? ದಿನ ಕಳೆದಂತೆ ಹತ್ತಾರು ತಾಪತ್ರಯಗಳಿಂದ ಊರಿನವರಲ್ಲಿ ಸಾಲುಮರಗಳ ಉತ್ಸಾಹ ಕುಗ್ಗಿತು. ಆದರೆ, ಶೇಡಿ ಲಕ್ಷ್ಮೀನಾರಾಯಣ (ಶೇಡಿ ಲಚ್ಚಣ್ಣ) ಮಾತ್ರ ವಿಶ್ವಾಸ ಕಳೆದುಕೊಳ್ಳದೇ ಸಸಿಗಳನ್ನು ಪೋಷಿಸುವ ಸಂರಕ್ಷಿಸುವ ಸಂವರ್ಧಿಸುವ ಕೆಲಸವನ್ನು ತಪಸ್ಸಿನಂತೆ ಮಾಡಿದರು.
ಶೇಡಿ ಲಚ್ಚಣ್ಣ ಅವರದು ಒಂದೇ ತತ್ವ. ಒಂದು ಸಸಿ ನೆಟ್ಟ ಗುಂಡಿಯಲ್ಲಿ ಮತ್ತೊಮ್ಮೆ ಸಸಿಯನ್ನು ನೆಡುವಂತಹ ಸಂದರ್ಭ ಬರಲೇಬಾರದು. ಅದು ಮರವಾಗಿಯೇ ಬೆಳೆಯಬೇಕು. ಆಗ ನೆಟ್ಟ ಸಸಿಗಳಿಗೆ ಜಾನುವಾರುಗಳ ಕಾಟವಿತ್ತು. ಊರಿಗೆ ನಾಲ್ಕೈದು ಕಿಲೊಮೀಟರ್ ದೂರದಲ್ಲಿದ್ದ ಮುಳುಗಡೆ ಭಾಗಕ್ಕೆ ಹೋಗಿ ಬಿದಿರನ್ನು ತಂದು ಸಸಿಗಳ ಸುತ್ತ ಬೇಲಿಕಟ್ಟಿ ಮರವಾಗುವ ತನಕ ಸಂರಕ್ಷಿಸಿದರು. ಹೊಸ ಸಸಿಗಳನ್ನು ನೆಡುತ್ತಾ ಸಾಗಿದರು. ಮರ ಬೆಳೆಸಲು ಗುಂಡಿ ತೋಡಿ ಸಸಿ ನೆಡುವುದೊಂದೇ ದಾರಿಯಲ್ಲ ಎಂಬುದನ್ನು ತಿಳಿದ ಲಚ್ಚಣ್ಣ, ಮರದ ಟೊಂಗೆ, ಟಿಸಿಲು ಕತ್ತರಿಸಿದರೂ ಚಿಗುರಿ ಬೆಳೆಯುತ್ತದೆ. 3–4 ಅಡಿ ಉದ್ದದ ಗೂಟವನ್ನು ಮಣ್ಣಿಗೆ ಮಳೆಗಾಲಕ್ಕಿಂತ 15- 20 ದಿನ ಮುಂಚೆ ನೆಟ್ಟರೆ, ಮಳೆಗೆ ಬೇರು ಕೊಟ್ಟು ಚಿಗುರುತ್ತದೆ ಎಂದು ಅರಿತರು. ಪ್ರತಿದಿನ ರಸ್ತೆಯಲ್ಲಿ ಬಿದ್ದ ಸಗಣಿ, ತರಗೆಲೆಯನ್ನು ಸಸಿಗಳಿಗೆ ಉಣಿಸಿದರು. 60 ರಿಂದ ಪ್ರಾರಂಭವಾದ ಸಸಿಗಳ ಸಂಖ್ಯೆ ಈಗ ಸಾವಿರದ ಕಡೆಗೆ ಸಾಗಿದೆ. ಲಚ್ಚಣ್ಣರಿಗೆ ಊರಿನವರ ಪೂರ್ಣ ಬೆಂಬಲವಿದೆ. ಊರಿನ ಜನರು ಬೆಟ್ಟದಲ್ಲಿ ಸೊಪ್ಪು, ಕಟ್ಟಿಗೆ ಕಡಿಯುವುದಿಲ್ಲ. ವರ್ಷಕ್ಕೊಮ್ಮೆ ದರಕು ಗುಡಿಸುತ್ತಾರೆ. ಉರುವಲಿಗೆ ಅಕೇಶಿಯ ತೋಪು ಇದೆ.
ಪಕ್ಕದೂರಿನ ಹಿಂಡೂಮನೆ ತಿಮ್ಮಪ್ಪನವರು ಕೂಡ ಪರಿಸರ ಪ್ರೇಮಿ, ಪ್ರಯೋಗಶೀಲ ಕೃಷಿಕ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರು. ಇವರು ಖಾಲಿ ಜಾಗ ಕಂಡಲ್ಲಿ ಸಸಿಗಳನ್ನು ನೆಟ್ಟಿದ್ದು, ಶೇಡಿ ಲಚ್ಚಣ್ಣರಿಗೆ ಸಾಥ್ ನೀಡುತ್ತಲೇ ಬಂದಿದ್ದಾರೆ. ‘ಅಂದು ಸಸಿಗಳನ್ನು ಜಾನುವಾರುಗಳಿಂದ ರಕ್ಷಿಸಿದ್ದೆವು. ಈಗ ಮಾವಿನಸೊಪ್ಪಿಗಾಗಿ ಮತ್ತು ಮಾವಿನಮಿಡಿಗಾಗಿ ಕೊಂಬೆಯನ್ನೇ ಕಡಿದು ಹಾಕುವ ಜನರಿಂದ ರಕ್ಷಿಸಬೇಕಾಗಿದೆ. ಇದಕ್ಕಾಗಿ ರಾತ್ರಿ ಹಗಲು ಕಾದಿದ್ದೂ ಇದೆ’ ಎಂದು ದನಿಗೂಡಿಸುತ್ತಾರೆ ಹಿಂಡೂಮನೆ ತಿಮ್ಮಪ್ಪ.
ಧನ್ವಂತರಿ ವನ
ಊರಿನವರೇ ಬೆಳೆಸಿರುವ ಭೂತೇಶ್ವರ ಧನ್ವಂತರಿ ವನವಿದೆ. ಸುಮಾರು 200 ಔಷಧಿ ಸಸ್ಯಗಳಿವೆ. ಸಾಲುಮರಗಳಲ್ಲಿ ಮಾವು, ಹಲಸು, ಪೆಲ್ಟೋಫಾರ್ಮ್, ಮಹಾಗನಿ, ಧೂಪ, ಹೊಂಗೆ, ಸಂಪಿಗೆ, ಹುಣಸೆ, ಮತ್ತಿ ಇತ್ಯಾದಿ ಮರಗಳಿವೆ. ಹಿಂದೆ 8 ಅಡಿ ಎತ್ತರದ ಬೇಲಿ ಮಾಡಿ 80 ರಿಂದ 100 ಹಲಸಿನಗಿಡಗಳನ್ನು ನೆಟ್ಟಿದ್ದು, ಈಗ ಇವೆಲ್ಲವೂ ಫಲ ಕೊಡಲು ಪ್ರಾರಂಭಿಸಿವೆ. ಮಾವಿನಗಿಡಗಳಿಗೆ ಕಸಿ ಮಾಡಿದ್ದು, ಒಂದೇ ಮರದಲ್ಲಿ ಮೂರ್ನಾಲ್ಕು ಜಾತಿಯ ಮಾವಿನ ಫಸಲು ನಿರೀಕ್ಷಿಸಲಾಗುತ್ತಿದೆ. ಅಂದು ನೆಟ್ಟಿದ್ದ ಸಸಿಗಳೆಲ್ಲ ಮರಗಳಾಗಿವೆ.
ಶೇಡಿ ಲಚ್ಚಣ್ಣ ಅವರಿಗೀಗ 71 ವರ್ಷ. 2018ರಲ್ಲಿ ಅನ್ನನಾಳದ ಕ್ಯಾನ್ಸರ್‌ನಿಂದ ಬಳಲಿ ಶಸ್ತ್ರಕ್ರಿಯೆಗೆ ಒಳಗಾಗಿದ್ದರು. ಎರಡು ವರ್ಷಗಳಲ್ಲಿ ಕ್ಯಾನ್ಸರ್ ಗೆದ್ದು ಸುಧಾರಿಸಿಕೊಂಡ ನಂತರ ತಾವು ನೆಟ್ಟು ಬೆಳೆಸಿದ ಸಸಿಗಳ ಆರೈಕೆ ಮುಂದುವರಿಸಿದ್ದಾರೆ. ಈಗಲೂ ಗಿಡಗಳನ್ನು ನೆಡುತ್ತಲೇ, ಬೇಸಿಗೆಯಲ್ಲಿ ಬಾಟಲಿ ಮೂಲಕ ನೀರುಣಿಸುತ್ತಲೇ ಸಸಿಗಳ ಸುತ್ತ ದರಕು ಹಾಕುತ್ತಿದ್ದಾರೆ. ಈಗೀಗ ಗಿಡ ನೆಡಲು ಕೆಲಸಗಾರರ ಸಹಾಯ ಪಡೆಯುತ್ತಾರೆ. ಅಂದಿನಿಂದಲೂ ಗಿಡಗಳಿಗಾಗಿ ತಾವೇ ಖರ್ಚು ಮಾಡುತ್ತಿದ್ದಾರೆ. ಇದರೊಂದಿಗೆ ಗ್ರಾಮಸ್ಥರ ಸಹಾಯವು ಸಿಕ್ಕಿದೆ.
‘ಸಸಿ ನೆಡುವುದು ಅರಣ್ಯ ಇಲಾಖೆಯ ಕೆಲಸ ಮಾತ್ರವಲ್ಲ, ಪ್ರತಿಯೊಬ್ಬರೂ ಈ ಕಾರ್ಯದಲ್ಲಿ ಸಾಧ್ಯವಾದ ರೀತಿಯಲ್ಲಿ ಕೈಜೋಡಿಸಬೇಕು. ಪಕ್ಷಿ ಸಂಕುಲಕ್ಕೆ ನೆರವಾಗಿ ಹಸಿರೀಕರಣಕ್ಕೆ ನೆರವಾ ಗಬಹುದು’ ಎನ್ನುವ ಲಚ್ಚಣ್ಣ ಅವರಿಗೆ, ಕೆಲಸ ನೋಡಿ ಭೇಷ್ ಎಂದು ಹೋದವರು ಸಸಿ ಬೆಳೆಸುತ್ತಿಲ್ಲ ಎಂಬ ಕೊರಗಿದೆ.
ರಸ್ತೆಬದಿಯಲ್ಲಿ ನೆಟ್ಟಿದ್ದ ಸಸಿಗಳು ಮರಗಳಾಗಿ ತಂಗಾಳಿ ಬೀಸುತ್ತಿವೆ. ಫಲ ಕೊಡುತ್ತಿವೆ. ನೆತ್ತಿ ಮೇಲೆ ಚಪ್ಪರದಂತೆ ಹಾಸಿವೆ. ಇದರ ಹಿಂದೆ ಶೇಡಿ ಲಚ್ಚಣ್ಣನವರ ಅಪಾರ ಪರಿಸರ ಪ್ರೀತಿ ಕೆಲಸ ಮಾಡಿದೆ.
150 ಕ್ಕೂ ಹೆಚ್ಚು ಅಪ್ಪೆಮಿಡಿಗಳು!
ಶೇಡಿ ಲಚ್ಚಣ್ಣ ಅವರ ಧನ್ವಂತರಿ ವನದಲ್ಲಿ ಹಲವು ಬಗೆಯ ಮಾವಿನಗಿಡ ಮರಗಳಿವೆ. ಮಾವಿನಲ್ಲಿ ಕುಚ್ಚುಗಾಯಿ ಅಪ್ಪೆಮಿಡಿಗಳ ಹಲವು ಬಗೆಯವು ಇವೆ. ‘ಇದು ಅಡ್ಡೇರಿ ಅಪ್ಪೆ ಇದು ದೊಂಬೆಸರದ್ದು ಇದರ ಪರಿಮಳ ನೋಡಿ ಇದು ಕಣಸೇ ಅಪ್ಪೆ ಇದು ಸಿದ್ದನಕೈ ಅಪ್ಪೆ ಇದರ ಮಾವಿನಮಿಡಿ 8 ಇಂಚು ಉದ್ದವಿರುತ್ತದೆ. ಇದು ಬಟಾಣಿ ಜೀರಿಗೆ ತೀರ್ಥಹಳ್ಳಿಯದ್ದು...’ ಹೀಗೆ ಮಲೆನಾಡಿನ ಬೇರೆ ಬೇರೆ ಭಾಗಗಳಿಂದ ತಂದ 150ಕ್ಕೂ ಹೆಚ್ಚು ಅಪ್ಪೆಮಿಡಿಗಳ ಗಿಡದ ಎಲೆಯ ತೊಟ್ಟು ಮೂಸಿ ನೋಡಿ ಪರಿಚಯಿಸುತ್ತಲೇ ಕಾಡಿನ ರಸ್ತೆಯಲ್ಲಿ ಪಕ್ಕದೂರು ತಲುಪಿದರು ಲಚ್ಚಣ್ಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.