ADVERTISEMENT

National Horticulture Fair 2023: ಬಹೂಪಯೋಗಿ 'ಫಾರ್ಮ್ ರೋವರ್'

ಖಲೀಲಅಹ್ಮದ ಶೇಖ
Published 23 ಫೆಬ್ರುವರಿ 2023, 22:15 IST
Last Updated 23 ಫೆಬ್ರುವರಿ 2023, 22:15 IST
ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಪ್ರದರ್ಶಿಸಲಾದ ಕೃಷಿ ಬಳಕೆಗೆ ನೂತನವಾಗಿ ಆವಿಷ್ಕರಿಸಿರುವ ಫಾರ್ಮ್‌ ರೋವರ್‌
ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಪ್ರದರ್ಶಿಸಲಾದ ಕೃಷಿ ಬಳಕೆಗೆ ನೂತನವಾಗಿ ಆವಿಷ್ಕರಿಸಿರುವ ಫಾರ್ಮ್‌ ರೋವರ್‌   

ಬೆಂಗಳೂರು: ಕೃಷಿ ಜಮೀನು ಹದ ಮಾಡಲು, ಬೀಜ ಬಿತ್ತಲು, ಕಳೆ ತೆಗೆಯಲು, ಗೊಬ್ಬರ ಸಾಗಿಸಲು ಟ್ರ್ಯಾಕ್ಟರ್‌ ಹಾಗೂ ಎತ್ತುಗಳನ್ನು ಬಳಸುವುದು ಸಾಮಾನ್ಯ. ಆದರೆ, ಇದಕ್ಕೆ ಪರ್ಯಾಯವಾಗಿ ವಿದ್ಯುತ್‌ ಚಾಲಿತ ‘ಫಾರ್ಮ್‌ ರೋವರ್‌’
ಆವಿಷ್ಕರಿಸಲಾಗಿದೆ.

ಎಂಜಿನಿಯರಿಂಗ್ ಪದವೀಧರರಾದ ವಿ. ಕೇಶವ ಪ್ರಕಾಶ್ ಮತ್ತು ವಿನೋದ್‌ ಅರ್ವಾ ಅವರು ‘ಪ್ಲಾಂಟೆಕ್‌‘ ನವೋದ್ಯಮ ಹುಟ್ಟುಹಾಕಿದ್ದು, ಫಾರ್ಮ್ ರೋವರ್ ಸಿದ್ಧಪಡಿಸಿದ್ದಾರೆ. ಮೈಸೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಈ ನವೋದ್ಯಮ, ಕೃಷಿ ಬಳಕೆಗೆ ಅನುಕೂಲವಾಗುವ ರೀತಿಯಲ್ಲಿ ರೋವರ್‌ ಪ್ರಾಯೋಗಿಕ ಪರೀಕ್ಷೆ ಮಾಡುತ್ತಿದ್ದಾರೆ. ಕೆಲ ತಿಂಗಳಿನಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾರೆ.

ಹೆಸರಘಟ್ಟದಲ್ಲಿ ನಡೆಯುತ್ತಿರುವ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ದಲ್ಲಿ ‘ಫಾರ್ಮ್‌ ರೋವರ್’ ರೈತರಿಗೆ ಹೊಸದೊಂದು ಕಲ್ಪನೆಯ ಪರಿಚಯ ಮಾಡಿಸುತ್ತಿದೆ.

ADVERTISEMENT

‘ಸಣ್ಣ ಮತ್ತು ಅತಿ ಸಣ್ಣ ರೈತರು ಟ್ರ್ಯಾಕ್ಟರ್‌ ಖರೀದಿ ಮಾಡುವುದು ಕಷ್ಟ. ಅದಕ್ಕೆ ಅವರು ಸಣ್ಣ ಕೃಷಿ ಯಂತ್ರಗಳಾದ ರೋಟಾವೇಟರ್‌, ಟಿಲ್ಲರ್‌ಗಳನ್ನು ಅವಲಂಬಿಸುತ್ತಾರೆ. ಆದರೆ, ಅವುಗಳ ಬಾಳಿಕೆ ಬಹಳ ಕಡಿಮೆ. ನಮ್ಮ ‘ಫಾರ್ಮ್‌ ರೋವರ್‌’ ಚಿಕ್ಕ ಟ್ರ್ಯಾಕ್ಟರ್ ರೀತಿಯಲ್ಲೇ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ’ ಎಂದು ವಿ. ಕೇಶವ ಪ್ರಕಾಶ್ ‘ಪ್ರಜಾವಾಣಿ‘ಗೆ ಹೇಳಿದರು.

‘ಬೀಜ ಬಿತ್ತನೆ, ಔಷಧ ಸಿಂಪಡಣೆ, ಹೊಲ ಊಳುವುದಷ್ಟೇ ಅಲ್ಲದೆ ಎಲ್ಲ ಪ್ರಕಾರದ ಕಳೆ ತೆಗೆಯಲು ಇದು ಸಹಕಾರಿ. ಜೊತೆಗೆ ಮಣ್ಣು
ಮತ್ತು ಅದರ ಸೂಕ್ಷ್ಮ ರಚನೆಯ ಸಂರಕ್ಷಣೆ, ರಸಗೊಬ್ಬರ ಮತ್ತು ಧಾನ್ಯಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಎಳೆದೊಯ್ಯುತ್ತದೆ. 250 ಕೆ.ಜಿ. ಭಾರವನ್ನು ಎಳೆಯುವ ಸಾಮರ್ಥ್ಯ ಇದಕ್ಕಿದೆ. ಕಾರ್ಮಿಕರ ಕೊರತೆಗೂ ಇದು ಪರಿಹಾರವಾಗಲಿದೆ’ ಎಂದು ಅವರು ತಿಳಿಸಿದರು.

ವಿನೋದ್‌ ಅರ್ವಾ ಮಾತನಾಡಿ, ‘ರಿಮೋಟ್ ಮೂಲಕ ಕಾರ್ಯನಿರ್ವಹಿಸುವ ಈ ಯಂತ್ರ, ಟ್ರ್ಯಾಕ್ಟರ್‌ ಮಾಡುವ ಎಲ್ಲ ಪ್ರಾಥಮಿಕ ಕೆಲಸಗಳನ್ನು ಮಾಡುತ್ತದೆ. ಟ್ರಾಲಿ, ರಂಟೆ, ಕುಂಟೆ, ಸ್ಪಿಂಕ್ಲರ್ಸ್‌ಗಳನ್ನು ಫಾರ್ಮ್‌ ರೋವರ್‌ಗೆ ಅಳವಡಿಸಬಹುದು’ ಎಂದರು.

‘ಇದು ಸಂಪೂರ್ಣ ವಿದ್ಯುತ್ ಚಾಲಿತವಾಗಿದ್ದು, ಒಮ್ಮೆ ಚಾರ್ಜ್‌ ಮಾಡಿದರೆ ನಾಲ್ಕು ಗಂಟೆ ಕಾರ್ಯಾಚರಣೆ ಮಾಡುತ್ತದೆ. ಇದರ ವೇಗದ ಮಿತಿ 10 ಕಿ.ಮೀ. ಮುಂದಿನ ದಿನಗಳಲ್ಲಿ ಸೋಲಾರ್ ಮೂಲಕ ಬ್ಯಾಟರಿ ಚಾರ್ಜ್‌ ಮಾಡುವ ವ್ಯವಸ್ಥೆ ಅಳವಡಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.