ಇದು ಚಳ್ಳಕೆರೆ ಸಮೀಪದ ಕಾಟಪ್ಪನಹಟ್ಟಿಯ ಯುವ ರೈತ ತಿಪ್ಪೇಶ್ ಅವರ ತೋಟ. ಬರಗಾಲದಲ್ಲೂ ತುಂಬಾ ಪರಿಶ್ರಮದೊಂದಿಗೆ ಈ ಪಪ್ಪಾಯ ತೋಟ ಮಾಡಿದ್ದಾರೆ. ತೋಟದೊಳಗೆ ಒಂದು ಸುತ್ತು ಹಾಕಿ ಬಂದರೆ, ಅವರು ಕೈಗೊಂಡಿರುವ ಕ್ರಮಗಳು ಒಂದೊಂದಾಗಿ ಪರಿಚಯವಾಗುತ್ತವೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದುಗ್ಗಾವರ ರಸ್ತೆಯಲ್ಲಿ ಹೋಗುತ್ತಿದ್ದರೆ, ರಸ್ತೆ ಪಕ್ಕದಲ್ಲೇ ಹಸಿರಾಗಿರುವ ತೋಟವೊಂದು ನಮ್ಮನ್ನು ಸೆಳೆಯುತ್ತದೆ. ‘ಬರಗಾಲದಲ್ಲೂ ಎಷ್ಟು ಹಸಿರಾಗಿದೆಯಲ್ಲಾ’ ಎಂದು ತೋಟದ ಬಳಿ ನೋಡಲು ಹೋದರೆ, ಹಣ್ಣು ತುಂಬಿಕೊಂಡಿರುವ ಸಾಲು ಸಾಲು ಪಪ್ಪಾಯ ಗಿಡಗಳು ಕಾಣಿಸುತ್ತವೆ.
ಇದು ಚಳ್ಳಕೆರೆ ಸಮೀಪದ ಕಾಟಪ್ಪನಹಟ್ಟಿಯ ಯುವ ರೈತ ತಿಪ್ಪೇಶ್ ಅವರ ತೋಟ. ಬರಗಾಲದಲ್ಲೂ ತುಂಬಾ ಪರಿಶ್ರಮದೊಂದಿಗೆ ಈ ಪಪ್ಪಾಯ ತೋಟ ಮಾಡಿದ್ದಾರೆ. ತೋಟದೊಳಗೆ ಒಂದು ಸುತ್ತು ಹಾಕಿ ಬಂದರೆ, ಅವರು ಕೈಗೊಂಡಿರುವ ಕ್ರಮಗಳು ಒಂದೊಂದಾಗಿ ಪರಿಚಯವಾಗುತ್ತವೆ.
ತಿಪ್ಪೇಶ್ ಪಿಯುಸಿವರೆಗೆ ಓದಿದ್ದಾರೆ. ಓದಿಗಿಂತ ಹೆಚ್ಚಾಗಿ ಕೃಷಿಯ ಬಗ್ಗೆ ಅವರಿಗೆ ಹೆಚ್ಚು ಆಸಕ್ತಿ ಇತ್ತು. ಓದು ಮೊಟಕಾದ ನಂತರ, ತಂದೆಯಿಂದ ಬಂದಿದ್ದ ಸುಮಾರು 8 ಎಕರೆ ಜಾಗದಲ್ಲಿ ಏಳೆಂಟು ವರ್ಷಗಳ ಹಿಂದೆ ಕೃಷಿ ಮಾಡಲು ತೀರ್ಮಾನಿಸಿದರು. ಮೊದಲು ಕೊಳವೆಬಾವಿ ಕೊರೆಸಿದರು. ಆದರೆ ಸಿಕ್ಕಿದ್ದು ಒಂದು ಇಂಚು ನೀರು. ಸಿಕ್ಕಷ್ಟೇ ನೀರಲ್ಲಿ ಬಾಳೆ, ಮೆಕ್ಕೆಜೋಳ, ಈರುಳ್ಳಿ ಜತೆಗೆ ವಿವಿಧ ಹೂಗಳನ್ನು ಬೆಳೆದು ನೋಡಿದರು. ಯಾವ ಬೆಳೆಗೂ ಸರಿಯಾದ ಮಾರುಕಟ್ಟೆ ಸಿಗಲಿಲ್ಲ. ಕೆಲವು ಬೆಳೆಗಳಂತೂ ಹೂಡಿದ ಬಂಡವಾಳವನ್ನು ಹಿಂದಿರುಗಿಸಲಿಲ್ಲ. ಇವರಿಗೂ ‘ಕೃಷಿ ಎಂದರೆ ಸೋಲು’ ಎನ್ನುವಂತಾಯಿತು. ಕೃಷಿ ಸಹವಾಸ ಸಾಕು ಎನ್ನುವಾಗ, ಸಂಬಂಧಿ ಗೋಪಾಲನಾಯಕ ಅವರು ‘ಪಪ್ಪಾಯ ಕೃಷಿ ಮಾಡಿ’ ಎಂದು ಸಲಹೆ ನೀಡಿದರು. ಈ ಘಟನೆ ನಡೆದಿದ್ದು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ.
ಪಪ್ಪಾಯ ನಾಟಿ
ಸಂಬಂಧಿಕರ ಮಾತನ್ನು ಗಂಭೀರವಾಗಿ ಪರಿಗಣಿಸಿದ ತಿಪ್ಪೇಶ್, ಹೊಸಯಳನಾಡಿ
ನಿಂದ ₹13ಕ್ಕೆ ಒಂದು ಸಸಿಯಂತೆ ಮೂರು ಸಾವಿರ ರೆಡ್‌ಲೇಡಿ ಪಪ್ಪಾಯ ಸಸಿಗಳನ್ನು ತಂದರು. ಇದಕ್ಕೂ ಮೊದಲು ಭೂಮಿ ಸಿದ್ಧತೆ ಆರಂಭಿಸಿದರು. ಐದು ಎಕರೆ ಜಮೀನಿಗೆ ಸಗಣಿ, ಕೊಟ್ಟಿಗೆ ಗೊಬ್ಬರ, ಸೀಮೆಗೊಬ್ಬರ ನೀಡಿ ಸಾಲು ಸಾಲು ಬದುಗಳನ್ನು ನಿರ್ಮಾಣ ಮಾಡಿದರು. ಅದರೊಳಗೆ ಡ್ರಿಪ್‍ಗಳನ್ನು ಜೋಡಿಸಿದರು. ತೇವಾಂಶ ಕಾಪಾಡಿಕೊಳ್ಳಲು ಅದರ ಮೇಲೆ ಮಲ್ಚಿಂಗ್ ಪೇಪರ್ ಹೊದಿಸಿದರು. ಭೂಮಿ ಫಲವತ್ತತೆ ಹೆಚ್ಚಿಸುವ ದೃಷ್ಟಿಯಿಂದ ಒಂದು ತಿಂಗಳು ಕಳೆಯುವವರೆಗೂ ನಾಟಿಗಾಗಿ ಸಿದ್ಧಗೊಳಿಸಿದ್ದ ಬದುಗಳ ಮೇಲೆ ದಿನಕ್ಕೆ ಮೂರ್ನಾಲ್ಕು ಬಾರಿ ನೀರು ಹಾಯಿಸಿದರು. ನಂತರ ಡ್ರಿಪ್ ಮೂಲಕ ಪ್ರತಿ ದಿನಕ್ಕೊಂದು ಬಾರಿ ನೀರು ಹಾಯಿಸಿದರು.
ಭೂಮಿ ಹದಗೊಂಡ ಮೇಲೆ, ಆಗಸ್ಟ್ ತಿಂಗಳ ಕೊನೆ ವಾರದಲ್ಲಿ ಸಸಿಗಳನ್ನು ನಾಟಿ ಮಾಡಿದರು. ಗಿಡದಿಂದ ಗಿಡಕ್ಕೆ 6 ಅಡಿ, ಸಾಲಿನಿಂದ ಸಾಲಿಗೆ 8 ಅಡಿಗಳಷ್ಟು ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿದರು. ಸಾಲುಗಳ ನಡುವೆ 800 ಮೋಸಂಬಿ ಗಿಡಗಳನ್ನು ನಾಟಿ ಮಾಡಿದರು. ಒಂದೆರಡು ವಾರಗಳು ಕಳೆದ ನಂತರ, ಗಿಡಗಳ ಬೆಳವಣಿಗೆ ಗಮನಿಸಿ ಗೊಬ್ಬರವನ್ನು ಪೂರೈಸಿದರು. ‘ಒಂದು ತಿಂಗಳ ನಂತರ ಇದೇ ಗೊಬ್ಬರ ವನ್ನು ತಿಂಗಳಿಗೊಮ್ಮೆಯಂತೆ ನೀಡಿದರೆ ಸಾಕು’ ಎನ್ನುತ್ತಾರೆ ತಿಪ್ಪೇಶ್.
ಡಿಪ್‌ನಲ್ಲಿ ನೀರು+ಗೊಬ್ಬರ
ಡ್ರಿಪ್ ಮೂಲಕ ನೀರಿನ ಜತೆಗೆ, ಗೊಬ್ಬರವನ್ನೂ ಹಾಯಿಸುವ ವಿಧಾನವನ್ನು ತಿಪ್ಪೇಶ್ ಅನುಷ್ಠಾನಗೊಳಿಸಿದ್ದಾರೆ. ವಿವಿಧ ರೀತಿಯ ಗೊಬ್ಬರಗಳನ್ನು ನೀರಿನಲ್ಲಿ ಕಲಸಿ ಒಂದು ಡ್ರಮ್‌ನಲ್ಲಿ ತುಂಬಿಸಿ, ಮೂರು ಸಾವಿರ ಗಿಡಗಳಿಗೂ ಏಕಕಾಲಕ್ಕೆ ಪೂರೈಸಿದ್ದಾರೆ. ಹೀಗಾಗಿ ಎಲ್ಲ ಗಿಡಗಳಿಗೂ ಸಮ ಪ್ರಮಾಣದಲ್ಲಿ ನೀರು ಮತ್ತು ಗೊಬ್ಬರ ಸಿಕ್ಕಂತಾಗಿದೆ. ಇದರ ಜತೆಗೆ, ತಜ್ಞರ ಸಲಹೆಯಂತೆ ರೋಗ ನಿಯಂತ್ರಣಕ್ಕೆ ಔಷಧಗಳನ್ನು ಸಿಂಪಡಿಸಿದ್ದಾರೆ.
ನಾಟಿ ಮಾಡಿದ 11 ತಿಂಗಳಿಗೆ ಎಲ್ಲ ಗಿಡಗಳಲ್ಲೂ ಪಪ್ಪಾಯ ಕೊಯ್ಲಿಗೆ ಬರಲು ಆರಂಭವಾಯಿತು. ಒಂದು ಗಿಡದಲ್ಲಿ ಒಮ್ಮೆಗೆ ಸುಮಾರು 10 ರಿಂದ 15 ಕೆ.ಜಿ ಕಾಯಿಗಳು ಸಿಗುತ್ತಿದ್ದವು. ಮುಂದಿನ ದಿನಗಳ ಬೆಳೆ ಇನ್ನಷ್ಟು ಹೆಚ್ಚಲಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ತಿಪ್ಪೇಶ್.
ತೋಟಕ್ಕೆ ಬಂತು ಮಾರುಕಟ್ಟೆ
ಈಗಾಗಲೇ ನಾಲ್ಕು ಬಿಡ್ ಮಾರುಕಟ್ಟೆಗೆ ಕಳುಹಿಸಿದ್ದಾರೆ. ₹2.50 ಲಕ್ಷ ಹಣ ಕೈಸೇರಿದೆ. ‘ಇನ್ನೂ ಐದರಿಂದ ಆರು ಬಿಡ್ ಫಸಲನ್ನು ಮಾರುಕಟ್ಟೆಗೆ ಕಳುಹಿಸಬೇಕಿದೆ. ಇನ್ನೂ ₹ 2 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ’ ಎಂದು ಲೆಕ್ಕಾಚಾರ ನೀಡುತ್ತಾರೆ ಅವರು. ಲಾಭದ ಲೆಕ್ಕದಂತೆ ಆಗಿರುವ ಖರ್ಚನ್ನು ತೆರೆದಿಡುವ ಅವರು, ‘ಈ ಹನ್ನೊಂದು ತಿಂಗಳಲ್ಲಿ ಪಪ್ಪಾಯ ಕೃಷಿಗಾಗಿ, (ಸಸಿಗಳು, ಗೊಬ್ಬರ, ಔಷಧ, ಕೂಲಿ ಕಾರ್ಮಿಕರ ವೆಚ್ಚ ಸೇರಿ) ₹2 ಲಕ್ಷ ಖರ್ಚಾಗಿದೆ’ ಎಂದು ಹೇಳುತ್ತಾರೆ.
ಪಪ್ಪಾಯ ಫಸಲು ಬೆಳೆದ ಮೇಲೆ ಮುಂಬೈ ದಲ್ಲಾಳಿಗಳು ಇವರ ತೋಟಕ್ಕೆ ಬಂದು ಬೆಳೆ ಖರೀದಿಸಿದ್ದಾರೆ. ಪ್ರತಿ ಬಾರಿಯೂ ಇದೇ ಮಾರುಕಟ್ಟೆ ಪ್ರಕ್ರಿಯೆ ಮುಂದುವರಿಯುತ್ತಿದೆ. ವ್ಯಾಪಾರಸ್ಥರು ಗಿಡದಲ್ಲಿರುವ ಹಣ್ಣಿನ ಗಾತ್ರದ ಆಧಾರದ ಮೇಲೆ ಬೆಲೆ ನಿಗದಿ ಮಾಡುತ್ತಾರೆ. ಒಮ್ಮೊಮ್ಮೆ ಒಂದು ಕೆ.ಜಿಗೆ ₹6 ರಿಂದ ₹14ರವರೆಗೂ ಖರೀದಿಸುತ್ತಿದ್ದಾರೆ. ‘ಪಪ್ಪಾಯಕ್ಕೆ ಮುಂಬೈ ಅಷ್ಟೇ ಅಲ್ಲ, ಬೆಂಗಳೂರು, ಕೊಯಮತ್ತೂರುಗಳಲ್ಲೂ ಉತ್ತಮ ಬೇಡಿಕೆ ಇದೆ’ ಎಂಬುವುದು ತಿಪ್ಪೇಶರ ಸ್ನೇಹಿತ ಮಹಲಿಂಗಪ್ಪ.
ಭೂಮಿ ಹದವಾಗಿಸುವ ಪರಿ
ಪಪ್ಪಾಯ ನಡುವೆ ಮೋಸಂಬಿ ಗಿಡಗಳನ್ನು ನಾಟಿ ಮಾಡಿದ್ದಾರೆ. ಇನ್ನೊಂದು ತಿಂಗಳಲ್ಲಿ ಅವು ಫಲ ಕೊಡಲಿವೆ. ಒಂದು ಬೆಳೆ ಬೆಳೆದ ಹಿಂದೆಯೇ, ತಕ್ಷಣ ಇನ್ನೊಂದು ಬೆಳೆಯನ್ನು ಬೆಳೆಯುವುದಿಲ್ಲ. ಬೆಳೆ ಕೊಯ್ಲಾದ ನಂತರ ಒಂದೆರಡು ತಿಂಗಳು ಭೂಮಿಗೆ ವಿಶ್ರಾಂತಿ ನೀಡುತ್ತಾರೆ. ನಂತರ ಆ ಭೂಮಿಗೆ ಗೊಬ್ಬರ, ನೀರು ಕೊಟ್ಟು, ಫಲವತ್ತಾಗಲು ಬಿಡುತ್ತಾರೆ. ‘ಭೂಮಿ ಫಲವತ್ತತೆ ಹೆಚ್ಚಿದರೆ, ಮುಂದೆ ಹಾಕುವ ಬೆಳೆ ಉತ್ತಮವಾಗಿ ಬರುತ್ತದೆ’ ಎಂಬುವುದು ಇವರ ನಂಬಿಕೆ.
ಪಪ್ಪಾಯ ಕೃಷಿ ಕುರಿತ ಹೆಚ್ಚಿನ ಮಾಹಿತಿಗಾಗಿ ತಿಪ್ಪೇಶ್ 9731230822ಗೆ ಸಂಪರ್ಕಿಸಬಹುದು.
ಚಿತ್ರಗಳು: ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.