ADVERTISEMENT

ಬೆಳೆಗಳ ನಾರಿನಿಂದ ಉತ್ಪಾದನೆ ನೂರು

ಕೃಷಿ ತ್ಯಾಜ್ಯ ಸಮರ್ಪಕ ನಿರ್ವಹಣೆ ಹಾಗೂ ತ್ಯಾಜ್ಯ ಬಳಸಿ ಉಪಯುಕ್ತ ವಸ್ತು ತಯಾರಿಕೆ

ಇ.ಎಸ್.ಸುಧೀಂದ್ರ ಪ್ರಸಾದ್
Published 19 ಸೆಪ್ಟೆಂಬರ್ 2022, 5:22 IST
Last Updated 19 ಸೆಪ್ಟೆಂಬರ್ 2022, 5:22 IST
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದಲ್ಲಿ ಸಮುದಾಯ ವಿಜ್ಞಾನ ಕಾಲೇಜಿನ ಜವಳಿ ವಿಭಾಗ ಅಭಿವೃದ್ಧಿಪಡಿಸಿದ ಬಾಳೆ ನಾರು ಬಳಸಿದ ಆಕರ್ಷಕ ಚೀಲ ತೋರಿಸುತ್ತಿರುವ ಡಾ. ಸಣ್ಣಪಾಪಮ್ಮ
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದಲ್ಲಿ ಸಮುದಾಯ ವಿಜ್ಞಾನ ಕಾಲೇಜಿನ ಜವಳಿ ವಿಭಾಗ ಅಭಿವೃದ್ಧಿಪಡಿಸಿದ ಬಾಳೆ ನಾರು ಬಳಸಿದ ಆಕರ್ಷಕ ಚೀಲ ತೋರಿಸುತ್ತಿರುವ ಡಾ. ಸಣ್ಣಪಾಪಮ್ಮ   

ಧಾರವಾಡ: ಕೃಷಿ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಹಾಗೂ ತ್ಯಾಜ್ಯಗಳನ್ನು ಬಳಸಿ ಉಪಯುಕ್ತ ವಸ್ತುಗಳ ತಯಾರಿಕೆ ಮೂಲಕ ಸ್ವಾವಲಂಬಿ ಬದುಕು ಕಂಡುಕೊಳ್ಳುವ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯದ ಸಮುದಾಯ ವಿಜ್ಞಾನ ಕಾಲೇಜಿನ ಜವಳಿ ವಿಭಾಗ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ.

ಬಾಳೆ ನಾರಿನ ಬುಟ್ಟಿಗಳು, ಜೋಳದ ನಾರಿನ ತಟ್ಟೆಗಳು, ಕಬ್ಬಿನ ಜಲ್ಲೆಯ ಕೈಚೀಲ, ಕಾಗದ ತಟ್ಟೆ, ಅಡಿಕೆ ಸಿಪ್ಪೆಯಿಂದ ಅಭಿವೃದ್ಧಿಪಡಿಸಲಾದ ಪ್ಲಾಂಕ್ಸ್‌ ಸೇರಿದಂತೆ ವಿವಿಧ ರೀತಿಯ ತಂತ್ರಜ್ಞಾನಗಳ ಪರಿಚಯ ಇಲ್ಲಿನ ಸಮುದಾಯ ವಿಜ್ಞಾನ ಕಾಲೇಜಿನ ಮಳಿಗೆಗಳಲ್ಲಿ ನೋಡಬಹುದಾಗಿದೆ.

‘ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಬಾಳೆ ಮತ್ತು ಅಡಿಗೆ ಸಿಪ್ಪೆಯ ಮೌಲ್ಯವರ್ಧನೆ ಕೃಷಿ ಮೇಳದಲ್ಲಿ ಗಮನ ಸೆಳೆಯುತ್ತಿದೆ. ರೈತ ಮತ್ತು ರೈತ ಕುಟುಂಬಗಳ ಆರ್ಥಿಕ ಸಬಲೀಕರಣ ಎಂಬ ಯೋಜನೆಯಡಿ ಕೃಷಿ ತ್ಯಾಜ್ಯಗಳ ಸಂಸ್ಕರಿಸಿ ಅವುಗಳಿಂದ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಲಾಗಿದೆ’ ಎಂದು ವಿಭಾಗದ ಮುಖ್ಯಸ್ಥೆ ಡಾ. ಸಣ್ಣಪಾಪಮ್ಮ ತಿಳಿಸಿದರು.

ADVERTISEMENT

ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಅಡಿಕೆ, ಬಾಳೆ ಹಾಗೂ ಕಬ್ಬು ಬೆಳೆಯುತ್ತಾರೆ. ಇವುಗಳ ತ್ಯಾಜ್ಯಗಳು ಹೆಚ್ಚಾಗಿ ನಿರುಪಯುಕ್ತವಾಗುತ್ತವೆ. ಇಲ್ಲವೇ ಕೆಲವೆಡೆ ಬೆಂಕಿ ಹಚ್ಚಿ ಸುಡಲಾಗುತ್ತದೆ. ಇದು ವ್ಯರ್ಥದ ಜತೆಗೆ ಪರಿಸರ ಮಾಲಿನ್ಯಕ್ಕೂ ಕಾರಣ. ಇದನ್ನು ತಪ್ಪಿಸಲು ಮಾಡಿದ ಸಂಶೋಧನೆಯ ಫಲವಾಗಿ ಹಲವು ಉತ್ಪನ್ನಗಳನ್ನು ಅಭಿವೃದ್ಧಿ ಸಾಧ್ಯವಾಗಿದೆ’ ಎಂದು ವಿವರಿಸಿದರು.

‘ಹಲವು ತ್ಯಾಜ್ಯಗಳು ಗೊಬ್ಬರವಾಗಿ ಬಳಕೆಯಾಗುತ್ತಿದೆ. ಕೃಷಿ ಜೈವಿಕ ಕಚ್ಚಾ ವಸ್ತುಗಳು ಯಥೇಚ್ಛವಾಗಿ ನಾರಿನ ಅಂಶ ಹೊಂದಿವೆ. ಅಡಿಕೆ ಸಿಪ್ಪೆ ಹಾಗೂ ಬಾಳೆದಿಂಡಿನ ನಾರನ್ನು ಸಂಗ್ರಹಿಸಿ, ಸಮರ್ಪಕವಾಗಿ ಸಂಸ್ಕರಿಸಿದಲ್ಲಿ, ಅದರಿಂದ ನೂಲು ತಯಾರಿಸಬಹುದು. ನೂಲಿನಿಂದ ಕರಕುಶಲ ವಸ್ತುಗಳನ್ನು ಮಾಡಬಹುದು. ಬಟ್ಟೆ ಹಾಗೂ ಇನ್ನಿತರ ವಸ್ತುಗಳ ತಯಾರಿಕೆಯೂ ಸಾಧ್ಯವಿದೆ ಎಂಬುದನ್ನು ಪ್ರಾಯೋಗಿಕವಾಗಿ ಕಂಡುಕೊಳ್ಳಲಾಗಿದೆ. ಇವುಗಳ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಲಭ್ಯವಿದೆ. ರೈತರು ಹಾಗೂ ಮಹಿಳೆಯರು ಇವುಗಳ ಮಾಹಿತಿ ಹಾಗೂ ಪ್ರಯೋಜನ ಪಡೆಯಬಹುದು’ ಎಂದು ಡಾ.ಸಣ್ಣಪಾಪಮ್ಮ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.