ಇಸ್ರೇಲ್ ಮಾದರಿ ಅಳವಡಿಸಿಕೊಂಡು ಕಡಿಮೆ ನೀರಿನಲ್ಲಿ ಕೃಷಿ ಮಾಡುವುದರ ಬಗ್ಗೆ ಕೇಳಿದ್ದೀರಿ. ಈಗ ಅಂಥದ್ದೇ ಇಸ್ರೇಲ್ ತಂತ್ರಜ್ಞಾನವನ್ನು ಬಳಸಿ ಸಿಗಡಿ ಕೃಷಿ ಮಾಡುತ್ತಿದ್ದಾರೆ. ಮಂಗಳೂರು ಸಮೀಪದ ಪಡುಪಣಂಬೂರಿಗೆ ಬಂದರೆ, ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿಯ ಸಹೋದರರಿಬ್ಬರು ಇಸ್ರೇಲ್‌ನ ಬಯೋ ಫ್ಲಾಕ್ ಟೆಕ್ನಾಲಜಿ(ಬಿಎಫ್‌ಟಿ) ಬಳಸಿಕೊಂಡು ಸಿಗಡಿ ಕೃಷಿ ಮಾಡುವುದನ್ನು ವೀಕ್ಷಿಸಬಹುದು.
ಸನ್ನಿ ಡಿಸೋಜ ಮತ್ತು ಸ್ಟೀವನ್ ಡಿಸೋಜ ಪಡುಪಣಂಬೂರಿನ ಹೊಯ್ಗೆಗುಡ್ಡದಲ್ಲಿ ಸಿಗಡಿ ಕೃಷಿ ಮಾಡುತ್ತಿದ್ದಾರೆ. ಇವರ ಈ ಕೃಷಿ ಮೀನು ಕೃಷಿಕರ ದೃಷ್ಟಿಯನ್ನು ಸೆಳೆಯುವ ಕೇಂದ್ರವೂ ಆಗಿದೆ. ಇಸ್ರೇಲ್‌ನ ವಿಜ್ಞಾನಿಯೊಬ್ಬರು ಅಭಿವೃದ್ಧಿಪಡಿಸಿದ ಈ ತಂತ್ರಜ್ಞಾನದ ಮಾಹಿತಿ ಪಡೆದು ಪ್ರಯೋಗಕ್ಕೆ ಇಳಿದರು. ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡಿದ್ದಾರೆ.
ಹೇಗಿದೆ ಸಿಗಡಿ ಕೃಷಿ
ಮೂರೂವರೆ ಎಕರೆಯಲ್ಲಿ ದೊಡ್ಡ ಕೊಳಗಳನ್ನು ನಿರ್ಮಿಸಿದ್ದಾರೆ. ಅವುಗಳ ತಳಕ್ಕೆ ಜಿಯೋ ಮೆಂಬ್ರೇನ್ ಎಂಬ ದಪ್ಪದ ಪ್ಲಾಸ್ಟಿಕ್ ಹಾಕಿ, ನೀರು ತುಂಬಿಸಿ, ಸಿಗಡಿ ಮರಿಗಳನ್ನು ಬಿಟ್ಟರು. ‘ಮೊದಲು ಚಿಕ್ಕ ಜಾಗದಲ್ಲಿ ಆರಂಭಿಸಿದೆವು. ಆರಂಭಿಕವಾಗಿ ₹28 ಲಕ್ಷ ಬಂಡವಾಳ ಹಾಕಿದೆವು. ಮೊದಲ ಪ್ರಯತ್ನದಲ್ಲಿ ಉತ್ತಮ ಇಳುವರಿ ಬಂತು. ಒಂದೇ ವರ್ಷದಲ್ಲಿ ಬಂಡವಾಳದ ದುಪ್ಪಟ್ಟು ಆದಾಯ ಬಂತು. ಅದೇ ಉತ್ಸಾಹದಲ್ಲಿ ಮೂರೂವರೆ ಪ್ರದೇಶಕ್ಕೆ ಕೃಷಿಯನ್ನು ವಿಸ್ತರಿಸಿದೆವು’ ಎನ್ನುತ್ತಾ ಸಿಗಡಿ ಕೃಷಿಯ ಯಶಸ್ಸನ್ನು ವಿವರಿಸಿದರು ಸನ್ನಿ ಡಿಸೋಜ.
ಈ ಸಹೋದರರು, ಕೊಳಕ್ಕೆ ಮರಿ ಬಿಟ್ಟ ನಂತರ 90ರಿಂದ 110 ದಿನಗಳ ಅವಧಿಯಲ್ಲಿ ಫಸಲು ಪಡೆದಿದ್ದಾರೆ. ಒಂದೊಂದು ಸಿಗಡಿ 30ರಿಂದ 40 ಗ್ರಾಂ ತೂಕವಿತ್ತಂತೆ. ಒಂದು ಎಕರೆಯ ಕೊಳದಲ್ಲಿ ವರ್ಷಕ್ಕೆ ಮೂರು ಬೆಳೆ ತೆಗೆಯಬಹುದು. ಒಂದು ಬಾರಿಗೆ 10 ಟನ್ ಇಳುವರಿ ಪಡೆಯಬಹುದು. ಒಂದು ಕೆಜಿಯನ್ನು ₹300ಕ್ಕೆ ಮಾರಾಟ ಮಾಡಿದರೂ ಎಕರೆಗೆ ವರ್ಷಕ್ಕೆ ₹90 ಲಕ್ಷ ಸಿಗುತ್ತದೆ. ಖರ್ಚು ₹50 ಲಕ್ಷ ಎಂದು ತೆಗೆದರೂ ₹40 ಲಕ್ಷ ಲಾಭ ಎಂಬುದು ಇವರ ಲೆಕ್ಕಾಚಾರ. ಆದರೆ, ‘ಇದಕ್ಕೊಂದು ವ್ಯವಸ್ಥಿತ ಮಾರುಕಟ್ಟೆ ಬೇಕು’ ಎಂಬುದು ಅವರ ಒತ್ತಾಯ.
ರಾಸಾಯನಿಕ ರಹಿತ
ಕೊಳದಲ್ಲಿ ಒಮ್ಮೆ ಸಂಗ್ರಹಿಸಿದ ನೀರನ್ನು ಮರು ಬಳಕೆ ಮಾಡುತ್ತಾರೆ. ಫಸಲನ್ನು ಪಡೆದ ಬಳಿಕ ನೀರನ್ನು ಶೋಧಿಸಿ ಹೊರ ಬಿಡುತ್ತಾರೆ. ಕೊಳದಲ್ಲಿ ಉಳಿಯುವ ತ್ಯಾಜ್ಯವನ್ನು ಕೃಷಿಗೆ ಬಳಕೆ ಮಾಡುತ್ತಾರೆ. ಬ್ಲೋವರ್ ಮತ್ತು ಡಿಫ್ಯೂಸರ್ ಏರೇಶನ್ (ಅಕ್ವೇರಿಯಂನಲ್ಲಿರುವಂತೆ) ಮೂಲಕ ಕೊಳಗಳಿಗೆ ಗಾಳಿ ಹಾಯಿಸಿ ನೀರಿನಲ್ಲಿ ಹೆಚ್ಚು ಆಮ್ಲಜನಕ ಉತ್ಪಾದನೆಯಾಗುವಂತೆ ಮಾಡುತ್ತಾರೆ.
ಈ ಕೃಷಿಗೆ ರಾಸಾಯನಿಕ ಬಳಸುವುದಿಲ್ಲ. ಉತ್ತಮ ಆಹಾರ, ಪರಿಶುದ್ಧ ನೀರು ಪೂರೈಸುವ ಮೂಲಕ ಆರೋಗ್ಯಕರ ಸಿಗಡಿ ಉತ್ಪಾದನೆ ಮಾಡುತ್ತಾರೆ. ಹೀಗಾಗಿ, ಇದಕ್ಕೆ ಉಡುಪಿ, ಮಂಗಳೂರು ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಬೇರೆಡೆಯೂ ಭಾರಿ ಬೇಡಿಕೆಯಿದೆ.
ಹೀಗೆ ಆರಂಭವಾಯಿತು
ಬಿ.ಎಸ್‌ಸಿ. ಪದವೀಧರ ಸನ್ನಿ ಡಿಸೋಜ, ಹತ್ತು ವರ್ಷ ಆಂಧ್ರಪ್ರದೇಶದಲ್ಲಿ ಸಿಗಡಿ ಕೃಷಿಯ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ್ದರು. ಆ ಅನುಭವವನ್ನೇ ಬಂಡವಾಳವಾಗಿಸಿಕೊಂಡು ನಮ್ಮೂರಲ್ಲೇ ಏಕೆ ಕೃಷಿ ಮಾಡಬಾರದು ಎಂದು ಯೋಚನೆ ಮಾಡಿದರು. ‘ಮನದಲ್ಲಿ ಚಿಂತನೆ ಹುಟ್ಟಿದ ಮೇಲೆ ಸಹೋದರ ಸ್ಟೀವನ್ ಜತೆ ಚರ್ಚಿಸಿದೆ. ಊರಲ್ಲೇ ಕೃಷಿ ಮಾಡಲು ಮುಂದಾದೆ. ಅಂತರ್ಜಾಲ ಜಾಲಾಡಿ ಬಿಎಫ್‌ಟಿ ತಂತ್ರಜ್ಞಾನದ ಬಗ್ಗೆ ಮಾಹಿತಿ ಕಲೆ ಹಾಕಿದೆ. ಲಾಭವಾದರೆ ಆದಾಯ, ನಷ್ಟವಾದರೆ ಅನುಭವ ಎಂದುಕೊಂಡು ಪ್ರಯೋಗಕ್ಕೆ ಇಳಿದೆವು’ ಎಂದು ಸನ್ನಿ ಡಿಸೋಜ ವಿವರಿಸಿದರು.
‘ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಸಿಗಡಿ ಲಾಭದಾಯಕ. ಇದಕ್ಕೆ ನಾವೇ ಉದಾಹರಣೆ. ಈತನಕ ಪಡೆದ ಲಾಭವನ್ನು ಅದೇ ಕೃಷಿಗೆ ಹೂಡುತ್ತಿದ್ದೇವೆ. ಇದೀಗ ಕೇರಳದಲ್ಲಿ ಸಮುದ್ರದ ಸಮೀಪ 9 ಎಕರೆ ಜಮೀನು ಖರೀದಿಸಿ, ಅಲ್ಲಿ ಕೃಷಿಗೆ ಸಿದ್ಧತೆ ನಡೆಸಿದ್ದೇವೆ. ಅಲ್ಲಿ ಸಿಗಡಿಯನ್ನು ಕೃಷಿ ವಲಯದಲ್ಲಿ ಪರಿಗಣಿಸಿರುವುದರಿಂದ ಕಡಿಮೆ ದರದಲ್ಲಿ ವಿದ್ಯುತ್ ಸಿಗಲಿದ್ದು, ಹೆಚ್ಚು ಲಾಭ ಪಡೆಯಬಹುದು. ನಮ್ಮ ರಾಜ್ಯದಲ್ಲಿಯೂ ಸಿಗಡಿಯನ್ನು ಕೃಷಿ ವಲಯವೆಂದು ಪರಿಗಣಿಸಿ, ಪ್ರೋತ್ಸಾಹ ನೀಡಿದರೆ ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಡುತ್ತಾರೆ ಈ ಸಹೋದರರು.
ಬಿಎಫ್‌ಟಿ ಎಂದರೇನು?
ಸಾಮಾನ್ಯವಾಗಿ ಸಿಗಡಿ ಕೃಷಿಯ ತ್ಯಾಜ್ಯದಿಂದ ಅಮೋನಿಯಾ ಉತ್ಪಾದನೆಗೊಂಡು ಪರಿಸರಕ್ಕೆ ಹಾನಿಯಾಗುತ್ತದೆ. ಈ ಬಗ್ಗೆ ಮಾಹಿತಿ ಹೊಂದಿದ್ದ ಸನ್ನಿ ಡಿಸೋಜ, ಸಿಗಡಿ ತ್ಯಾಜ್ಯವನ್ನೇ ಅವುಗಳಿಗೆ ಆಹಾರವಾಗಿ ಕೊಡುವ ಬಿಎಫ್‌ಟಿ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಈ ತಂತ್ರಜ್ಞಾನದ ಪ್ರಕಾರ ಇಂಗಾಲ (ಕಾರ್ಬನ್) ಮತ್ತು ಸಾರಜನಕದ (ನೈಟ್ರೋಜನ್) ಪ್ರಮಾಣದ ನಿರ್ವಹಣೆ ವೇಳೆ ಅದರ ತ್ಯಾಜ್ಯ ಕೊಳೆತು, ಜಲವರ್ತನ (ಹೈಡ್ರೋ ಟ್ರೋಫಿಕ್ ) ಬ್ಯಾಕ್ಟೀರಿಯಾ ಉತ್ಪಾದನೆಗೊಂಡು ಸಿಗಡಿಯ ಆಹಾರವಾಗಿ ಪರಿವರ್ತನೆ ಮಾಡಲಾಗುತ್ತದೆ. ಈ ಮೂಲಕ ನೈಸರ್ಗಿಕವಾಗಿ ಸಿಗಡಿ ಬೆಳೆಯುವಂತೆ ಮಾಡುವುದು ಬಿಎಫ್‌ಟಿ ತಂತ್ರಜ್ಞಾನ. ಇದರಿಂದ ನೀರಿನ ಮಿತ ಬಳಕೆ ಸಾಧ್ಯವಿದೆ.
ಅಧ್ಯಯನಕ್ಕೆ ತಂಡ
ಈ ಸಹೋದರರ ಸಿಗಡಿ ಕೃಷಿ ವೀಕ್ಷಿಸಲು ಮತ್ತು ಅಧ್ಯಯನಕ್ಕೆ ರಾಜ್ಯ ಹಾಗೂ ಹೊರರಾಜ್ಯದಿಂದ ಸಂಶೋಧಕರು, ವಿದ್ಯಾರ್ಥಿಗಳು, ಕೃಷಿಕರು ಬರುತ್ತಿದ್ದಾರೆ. ಗುಜರಾತ್‌ನ ಇಬ್ಬರು ಎಂಜಿನಿಯರ್‌ಗಳು ಒಂದು ತಿಂಗಳು ಬಾಡಿಗೆ ಮನೆಯಲ್ಲಿ ವಾಸವಿದ್ದು, ಈ ಕೃಷಿಯ ಬಗ್ಗೆ ಅಧ್ಯಯನ ಮಾಡಿ ತೆರಳಿದ್ದಾರೆ. ವಿದೇಶದಿಂದಲೂ ಹಲವು ಮಂದಿ ಬಂದು ಹೋಗಿದ್ದಾರೆ.
ಬಿಎಫ್‌ಟಿ ತಂತ್ರಜ್ಞಾನದಲ್ಲಿ ಸಿಗಡಿ ಕೃಷಿ ಮಾಡಿ ಯಶಸ್ಸು ಪಡೆದ ಸನ್ನಿ ಡಿಸೋಜ ಅವರನ್ನು ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಸಂಶೋಧನಾ ಮಂಡಳಿ ಸದಸ್ಯರನ್ನಾಗಿ ನೇಮಿಸಿಕೊಂಡಿದೆ.
ಸಿಗಡಿ ಕೃಷಿ ಕುರಿತ ಮಾಹಿತಿಗಾಗಿ ಸಂಪರ್ಕಿಸಲು ಸನ್ನಿ ಡಿಸೋಜ ಅವರ ಮೊಬೈಲ್ ಸಂಖ್ಯೆ– 93417 18808.
(ಚಿತ್ರಗಳು– ಲೇಖಕರದ್ದು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.