ಕಾರೈಕಲ್: ನೆರೆ ಪರಿಸ್ಥಿತಿಯನ್ನು ತಾಳಿಕೊಳ್ಳಬಲ್ಲ ಹೊಸ ಭತ್ತದ ತಳಿಯನ್ನು ಪುದುಚೇರಿಯ ಕಾರೈಕಲ್‌ನಲ್ಲಿರುವ ಕೃಷಿ ಅಧ್ಯಯನ ಸಂಸ್ಥೆ ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಹೊಸ ಭತ್ತದ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ.
ಪಂಡಿತ್ ಜವಾಹರಲಾಲ್ ನೆಹರು ಕೃಷಿ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಸ್ಯ ತಳಿ ಮತ್ತು ತಳಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್.ತಿರುಮೇನಿ ಅವರ ನೇತೃತ್ವದ ಸಂಶೋಧಕರ ತಂಡವು ‘ಕೆಕೆಎಲ್ (ಆರ್)2’ ಎಂಬ ಹೆಸರಿನ ಭತ್ತದ ತಳಿಯನ್ನು ಆವಿಷ್ಕರಿಸಿದೆ.
ಸಾಂಬಾ/ತಾಳಡಿ ಹಂಗಾಮಿನಲ್ಲಿ ಭತ್ತದ ಬೆಳೆ ಮಳೆಯಿಂದ ಹಾನಿಗೊಳಗಾಗುತ್ತದೆ. ನೀರಿನಲ್ಲಿ ಮುಳುಗಡೆಯಾಗಿ ಇಡೀ ಬೆಳೆ ನಾಶವಾಗುತ್ತದೆ. ಸದ್ಯ ಅಭಿವೃದ್ಧಿಯಾಗಿರುವ ಹೊಸ ತಳಿ, ನೆರೆ ಪರಿಸ್ಥಿತಿಯನ್ನು ಎದುರಿಸಿಯೂ ಉಳಿದುಕೊಳ್ಳುವ ಶಕ್ತಿ ಹೊಂದಿರಲಿದೆ.
‘ಎಡಿಟಿ 46’ ಮತ್ತು ’ಸ್ವರ್ಣ ಸಬ್ 1’ ತಳಿಯನ್ನು 'ಮಾರ್ಕರ್ ಅಸಿಸ್ಟೆಡ್ ಬ್ಯಾಕ್‌ಕ್ರಾಸ್ ಮೆಥಡ್' ಮೂಲಕ ಸಂಯೋಜಿಸಿ ‘ಕೆಕೆಎಲ್(ಆರ್)2’ ಹೊಸ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ ಡಾ. ಎಸ್. ತಿರುಮೇನಿ ತಿಳಿಸಿದ್ದಾರೆ.
ಅಲ್ಲದೆ ಹೊಸ ಭತ್ತದ ತಳಿಯು 135 ದಿನಗಳಲ್ಲಿ ಕಟಾವಿಗೆ ಬರಲಿದ್ದು, ಸಾಂಬಾ ಹಂಗಾಮಿಗೆ ಸೂಕ್ತವೆನಿಸಿದೆ. ಈ ಭತ್ತದ ತಳಿಯು ಆರಂಭಿಕ ಹಂತದಲ್ಲೇ 14 ದಿನಗಳ ನಿರಂತರ ಪ್ರವಾಹ ಮತ್ತು ಮುಳುಗಡೆಯನ್ನು ತಾಳಿಕೊಳ್ಳಬಲ್ಲದು ಎಂದು ಅವರು ತಿಳಿಸಿದರು.
ಕೆಕೆಎಲ್(ಆರ್)2ನ ಸರಾಸರಿ ಇಳುವರಿಯು ಸಾಮಾನ್ಯ ಸಂದರ್ಭಗಳಲ್ಲಿ ಹೆಕ್ಟೇರ್‌ಗೆ 6,850 ಕೆ.ಜಿ ಇದ್ದರೆ, ಮುಳುಗಡೆಯಂಥ ಪರಿಸ್ಥಿತಿಗಳಲ್ಲಿ ಹೆಕ್ಟೇರಿಗೆ 3,600 ಕೆ.ಜಿ ಇಳುವರಿ ನೀಡಲಿದೆ ಎಂದು ತಿರುಮೇನಿ ಹೇಳಿದರು.
ಇದನ್ನು ಕೇಂದ್ರೀಯ ‘ವೆರೈಟಿ ರಿಲೀಸ್ ಕಮಿಟಿ’ (ಸಿವಿಆರ್‌ಸಿ) ಬಿಡುಗಡೆ ಶಿಫಾರಸು ಮಾಡಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.