ಬೆಂಗಳೂರು: ಬೆಲೆ ಬಾಳುವ ರೇಷ್ಮೆ ಬಟ್ಟೆಗಳು ಎಲ್ಲರಿಗೂ ಗೊತ್ತು. ಅದರ ರೇಷ್ಮೆ ಗೂಡುಗಳಿಂದ ಎಷ್ಟೆಲ್ಲ ಆಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ ತಿಳಿದಿದೆಯೇ?
ಬಣ್ಣ ಬಣ್ಣದ ಹಾರ, ಕೃತಕ ಹೂವು, ಹೂದಾನಿ, ತೋರಣ, ಮೊಗ್ಗಿನ ಜಡೆ, ಶುಭಾಶಯ ಪತ್ರ, ಬಳೆ, ಕಿವಿಯೋಲೆ, ನೆಕ್ಲೇಸ್... ಹೀಗೆ ಹತ್ತು ಹಲವು ಝಗಮಗಿಸುವ ಸಾಮಗ್ರಿಗಳನ್ನು ಚಿಂತಾಮಣಿಯ ರೇಷ್ಮೆ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ತಯಾರಿಸುತ್ತಾರೆ.
ನಾನಾ ಬಗೆಯ ಈ ಆಲಂಕಾರಿಕ ಸಾಮಗ್ರಿಗಳನ್ನು ಕಾಲೇಜಿನ ವತಿಯಿಂದ ಪ್ರದರ್ಶನಕ್ಕಿಡಲಾಗಿತ್ತು.
‘ಕಾಲೇಜಿನಲ್ಲಿ ರೇಷ್ಮೆ ಹುಳುಗಳ ಮೊಟ್ಟೆ ಉತ್ಪಾದಿಸಲಾಗುತ್ತದೆ. ಆಗ ಅವುಗಳ ಗೂಡನ್ನು ಉಪ ಉತ್ಪನ್ನವಾಗಿ ಬಳಸಿಕೊಂಡು ಆಲಂಕಾರಿಕ ವಸ್ತುಗಳನ್ನು ತಯಾರಿಸುತ್ತೇವೆ. ಇದು ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಯ ಭಾಗ ಕೂಡ’ ಎಂದು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಚಂದ್ರಶೇಖರ ಕಳ್ಳಿಮನಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಲಂಕಾರಿಕ ವಸ್ತುಗಳನ್ನು ತಯಾರಿಸುವ ಬಗ್ಗೆ ನಾವು ಅಂಗವಿಕಲರಿಗೆ ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗೂ ತರಬೇತಿ ನೀಡುತ್ತೇವೆ. ಅನೇಕ ಕಡೆ ಇವುಗಳ ಪ್ರದರ್ಶನ ಏರ್ಪಡಿಸಿದ್ದೇವೆ. ಇತ್ತೀಚೆಗೆ ಥಾಯ್ಲೆಂಡ್‌ನಲ್ಲೂ ಪ್ರದರ್ಶನ ಏರ್ಪಡಿಸಿದ್ದೆವು. ನಮ್ಮಲ್ಲಿ ತರಬೇತಿ ಪಡೆಯಲು ಮಡಗಾಸ್ಕರ್‌ನಿಂದಲೂ ವಿದ್ಯಾರ್ಥಿಗಳ ತಂಡ ಬಂದಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.