ADVERTISEMENT

ಮಾಲ್ಗುಡಿ ಡೇಸ್ ನೆನಪಿಸುವ ಮ್ಯೂಸಿಯಂ

ಗೌರಿ ಚಂದ್ರಕೇಸರಿ
Published 24 ಆಗಸ್ಟ್ 2020, 19:20 IST
Last Updated 24 ಆಗಸ್ಟ್ 2020, 19:20 IST
ಮಾಲ್ಗುಡಿ ಮ್ಯೂಸಿಯಂ
ಮಾಲ್ಗುಡಿ ಮ್ಯೂಸಿಯಂ   
""
""
""

ಮೂವತ್ತು ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಮಾಲ್ಗುಡಿ ಡೇಸ್’ ಧಾರಾವಾಹಿ ಎಲ್ಲರ ಮನಸೂರೆಗೊಂಡಿತ್ತು. ನಟ ಶಂಕರ್ ನಾಗ್ ಅವರ ಕನಸಿನ ಕೂಸು ಈ ಧಾರಾವಾಹಿ. ಶಿವಮೊಗ್ಗೆಯ ಶಿವಪ್ಪ ನಾಯಕನ ಅರಮನೆ, ಆಗುಂಬೆ, ಅರಸಾಳು ರೈಲು ನಿಲ್ದಾಣ ಹೀಗೆ ಮಲೆನಾಡಿನ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿತ್ತು ಮಾಲ್ಗುಡಿ ಡೇಸ್.

ಈಗ ಅರಸಾಳಿನ ಹಳೆಯ ರೈಲು ನಿಲ್ದಾಣದ ಪಕ್ಕದಲ್ಲಿಯೇ ಹೊಸತೊಂದು ರೈಲು ನಿಲ್ದಾಣ ತಲೆ ಎತ್ತಿದೆ. 1956ರಲ್ಲಿ ಕಟ್ಟಲ್ಪಟ್ಟ ಹಳೆಯ ನಿಲ್ದಾಣವನ್ನು ಹಾಗೆಯೇ ಉಳಿಸಿಕೊಂಡು ಅದನ್ನು ನವೀಕರಿಸಿ ‘ಮಾಲ್ಗುಡಿ ಮ್ಯೂಸಿಯಂ’ ಆಗಿ ಪರಿವರ್ತಿಸಿದೆ ಮೈಸೂರು ರೈಲ್ವೆ ವಿಭಾಗ. ಇದರಿಂದ ಶಿವಮೊಗ್ಗೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ.

ಹಸಿರು ಸುರಿವ ಪ್ರಕೃತಿಯ ಮಧ್ಯದಲ್ಲಿರುವ ಅರಸಾಳು ರೈಲು ನಿಲ್ದಾಣ ಶಿವಮೊಗ್ಗದಿಂದ ರಿಪ್ಪನ್‌ಪೇಟೆಗೆ ಹೋಗುವ ಮಾರ್ಗದಲ್ಲಿದೆ. ಮುಖ್ಯ ರಸ್ತೆಗೆ ತಾಗಿಕೊಂಡಿರುವ ಈ ನಿಲ್ದಾಣವನ್ನು ಕಲಾತ್ಮಕವಾಗಿ ನವೀಕರಿಸಲಾಗಿದೆ.

ADVERTISEMENT

ಜಾನ್‌ ದೇವರಾಜ್‌ ಕಲೆ

‘ಮಾಲ್ಗುಡಿ ಡೇಸ್’ ಧಾರಾವಾಹಿಯ ಮೂಲ ಸೆಟ್‌ಗಳನ್ನು ಜಾನ್ ದೇವರಾಜ್ ಅವರು ನಿರ್ಮಿಸಿದ್ದರು. ಈಗ ಪುನಃ ಅವರಿಂದಲೇ ಈ ಮ್ಯೂಸಿಯಂ ನಲ್ಲಿನ ಕಲೆ ಅರಳಿದೆ. ಗೋಡೆಯ ಮೇಲಿನ ಅಂದವಾದ ಪೇಂಟಿಂಗ್‌ಗಳು ಮನಮೋಹಕವಾಗಿವೆ. ಧಾರಾವಾಹಿಯ ಚಿತ್ರೀಕರಣದ ವೇಳೆಯ ಭಾವಚಿತ್ರಗಳು ಗೋಡೆಯನ್ನು ಅಲಂಕರಿಸಿವೆ.

ಮಲೆನಾಡಿನ ಸಂಸ್ಕೃತಿ, ಪರಿಸರ, ಕೃಷಿ, ಬಳಕೆ ಸಾಮಗ್ರಿಗಳು, ಪ್ರಾಚೀನ ಕಲಾಕೃತಿಗಳು ಇಲ್ಲಿ ಅನಾವರಣಗೊಂಡಿವೆ. ಶಂಕರ್‌ನಾಗ್ ಪ್ರತಿಮೆ ಸ್ಥಾಪಿಸಲಾಗಿದೆ. ಮಾಲ್ಗುಡಿ ಡೇಸ್‌ ಧಾರಾವಾಹಿಯಲ್ಲಿ ಕಾಣುವ ರೈಲು ನಿಲ್ದಾಣದ ಒಂಟಿ ಮರ, ಪ್ಲಾಟ್‌ಫಾರಂ, ಕಲ್ಲು ಬೆಂಚುಗಳು, ನಿಲ್ದಾಣದ ಸಾಲು ಕಂಬಿಗಳಿಗೂ ಜೀವ ತುಂಬಲಾಗಿದೆ.

ಸಂಗ್ರಹಾಲಯದಲ್ಲಿ ಹಳೆಯ ಕಾಲದಲ್ಲಿ ಬಳಸುತ್ತಿದ್ದ ಕೆಲ ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಸುತ್ತಲೂ ಅಂದವಾದ ಉದ್ಯಾನವನ್ನು ನಿರ್ಮಿಸಲಾಗಿದೆ.

ರೈಲ್ವೆ ಖಾತೆ ರಾಜ್ಯಸಚಿವ ಸುರೇಶ ಅಂಗಡಿ ಅವರು ಈ ಮ್ಯೂಸಿಯಂ ಮತ್ತು ನವೀಕೃತ ರೈಲು ನಿಲ್ದಾಣವನ್ನು ಇತ್ತೀಚೆಗೆ ಉದ್ಘಾಟಿಸಿದ್ದಾರೆ. ಆದರೆ, ಕೋವಿಡ್ ಕಾರಣದಿಂದಾಗಿ ಸದ್ಯಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ಇಲ್ಲ. ಕೊರೊನಾ ಸಮಸ್ಯೆ ಮುಗಿಯುತ್ತಿದ್ದಂತೆ, ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತದೆ. ಮುಂದೆ ಶಿವಮೊಗ್ಗೆಗೆ ಭೇಟಿ ಕೊಡುವವರು ಈ ನೂತನ ಸ್ಥಳವನ್ನು ಕಣ್ತುಂಬಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.