ಗಣೇಶ, ವಿನಾಯಕ, ಏಕದಂತ ಹೀಗೆ ಆತನಿಗಿರುವ ಹೆಸರು ಒಂದಾ ಎರಡಾ..? ಕೇವಲ ಹೆಸರೇ ಮಾತ್ರವಲ್ಲದೇ ಭಕ್ತಾಧಿಗಳು ತನ್ನ ನೆಚ್ಚಿನ ದೇವರನ್ನು ಪೂಜಿಸುವ ವಿಧಾನಗಳು ಹಲವು. ಕಳೆದ ವರ್ಷ ಕೆಜಿಎಫ್ ರೂಪದ ಗಣಪ, ಬಾಹುಬಾಲಿ ಶೈಲಿಯ ಗಣಪನನ್ನು ಕಾಣಲು ಸಿಕ್ಕಿತ್ತು. ಆದರೆ ಈ ಬಾರಿ ಭಕ್ತರೊಬ್ಬರು ಅತಿ ಸರಳ ರೂಪದಲ್ಲಿ ವಿಭಿನ್ನವಾಗಿ ತನ್ನ ಕಲಾ ಕುಂಚದ ಮೂಲಕ ಗಣೇಶನನ್ನು ಒಲಿಸಲು ಪ್ರಯತ್ನಿಸಿದ್ದಾರೆ.
ಈ ಬಾರಿಯ ಗಣೇಶ ಹಬ್ಬದಂದು ಕನ್ನಡ ಅಕ್ಷರಗಳಲ್ಲಿ ಮೂಡಿದ ವಿನಾಯಕ ಭಾರೀ ಸದ್ದು ಮಾಡಿದ್ದಾರೆ. ಈ ಕಲಾವಿದ ಗಣಪತಿಯ ಚಿತ್ರದ ಮೂಲಕ ಕನ್ನಡ ಪ್ರೀತಿಯನ್ನು ಬಣ್ಣಗಳಲ್ಲಿ ಬಿತ್ತರಿಸಿದ್ದಾರೆ. ಪ್ರಮೋದ ಸಾಗರ ಎಂಬವರ ಕಲಾಕುಂಚದಲ್ಲಿ ಅಕ್ಷರ ಗಣಪ ಮೂಡಿಬಂದಿದ್ದಾನೆ. ಇವರು ಕರ್ನಾಟಕದ ಜಿಲ್ಲೆಗಳ ಹೆಸರಿನೊಂದಿಗೆ ಗಣಪತಿಯ ಚಿತ್ರವನ್ನು ಬಿಡಿಸಿದ್ದಾರೆ. ಹುಬ್ಬಳಿ, ಧಾರವಾಡ, ಬೀದರ್, ದಕ್ಷಿಣ ಕನ್ನಡ, ಬೆಂಗಳೂರು ಹೇಗೆ ಹಲವು ಜಿಲ್ಲೆಗಳ ಹೆಸರಿನಿಂದ ಗಣೇಶನ ಚಿತ್ರ ಬಿಡಿಸಿದ್ದಾರೆ. ಇವರು ಮೂಲತಃ ಶಿವಮೂಗ್ಗದ ಸಾಗರದವರು. ಆದರೆ ಈಗ ಬೆಂಗಳೂರಿನ ಯಲಹಂಕದಲ್ಲಿ ವಾಸವಾಗಿದ್ದಾರೆ.
ವೃತ್ತಿಯಿಂದ ಸಂಗೀತ ನಿರ್ದೇಶಕರಾಗಿರುವ ಇವರಿಗೆ ಚಿತ್ರಕಲೆ ಎಂದರೆ ಎಲ್ಲಿಲ್ಲದ ಪ್ರೀತಿ. ಹವ್ಯಾಸವಾಗಿ ಬೆಳೆದು ಬಂದ ಸಂಗೀತವನ್ನು ವೃತ್ತಿಯನ್ನಾಗಿ ರೂಪಿಸಿಕೊಂಡರು, ಅದರೊಂದಿಗೆ ಬಾಲ್ಯದ ಪ್ರೀತಿ ಚಿತ್ರಕಲೆಯನ್ನು ಹವ್ಯಾಸವಾಗಿ ಬೆಳೆಸಿದರು. ಅಲ್ಲದೇ ಸಂಗೀತ ಕ್ಷೇತ್ರದಲ್ಲಿ ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತಮ್ಮ ಹೆಸರನ್ನು 5 ಬಾರಿ ದಾಖಲಿಸಿಕೊಂಡಿದ್ದಾರೆ.
ಕಳೆದ ವರ್ಷ ಜಿಲ್ಲೆಗಳ ಹೆಸರಿನ ಮೂಲಕ ಗಣಪತಿಯ ಚಿತ್ರವನ್ನು ಬಿಡಿಸಿದ್ದರು. ಆದರೆ ಈ ಬಾರಿ ಜಿಲ್ಲೆಗಳ ಜೊತೆಗೆ, ತಾಲೂಕುಗಳ ಹೆಸರನ್ನು ಜೋಡಿಸಿದ್ದಾರೆ. ತನ್ನ ಸ್ನೇಹಿತರಿಗೆ ಪ್ರೀತಿಯ ಉಡುಗೊರೆಯಾಗಿ ಅಕ್ಷರ ಗಣಪನನ್ನು ನೀಡಲು ಪ್ರಾರಂಭಿಸಿದರು. ಆದರೆ ಗಣೇಶ ಹಬ್ಬದಂದು ‘ಅಕ್ಷರ ಗಣಪ’ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಾರಂಭದಲ್ಲಿ ಸಾಂಪ್ರದಾಯಿಕ ವಿಧಾನದ ಮೂಲಕ ಅಕ್ಷರ ಗಣಪನನ್ನು ಚಿತ್ರವನ್ನು ಬಿಡಿಸುತ್ತಿದ್ದರು. ಇದೀಗ ಬೇಡಿಕೆಗಳು ಹೆಚ್ಚಾಗುತ್ತಿದ್ದಂತೆ ಡೆಜಿಟಲ್‌ಪೈಟಿಂಗ್ ಅನ್ನು ಆರಂಭಿಸಿದ್ದಾರೆ. ಈ ಮೂಲಕ ಕನ್ನಡ ಉಳಿಸಬೇಕು, ಬೆಳಸಬೇಕು ಎಂಬ ಸಂದೇಶವನ್ನು ಸಾರುವ ಸಣ್ಣ ಪ್ರಯತ್ನವನ್ನು ಪ್ರಮೋದ್ ಅವರು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.