ADVERTISEMENT

ಕಲ್ಲರಳಿಸಿ ಹೂವಾಗಿಸಿದವರು...

ಕಷ್ಟ ಸುಖಗಳ ಹಿಮಾಲಯವನ್ನು ಸಮನಾಗಿ ಕಂಡ ಸೊಲಬಕ್ಕನವರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 19:30 IST
Last Updated 21 ನವೆಂಬರ್ 2020, 19:30 IST
ಉತ್ಸವ್‌ ರಾಕ್‌ ಗಾರ್ಡನ್‌ನಲ್ಲಿರುವ ಡಾ.ರಾಜ್‌ಕುಮಾರ್‌ ಅವರ ‘ಆಕಸ್ಮಿಕ’ ಚಲನಚಿತ್ರದಲ್ಲಿನ ದೃಶ್ಯದ ಪ್ರತಿಕೃತಿ
ಉತ್ಸವ್‌ ರಾಕ್‌ ಗಾರ್ಡನ್‌ನಲ್ಲಿರುವ ಡಾ.ರಾಜ್‌ಕುಮಾರ್‌ ಅವರ ‘ಆಕಸ್ಮಿಕ’ ಚಲನಚಿತ್ರದಲ್ಲಿನ ದೃಶ್ಯದ ಪ್ರತಿಕೃತಿ   
""

ಶಿಸ್ತು, ಸೊಗಸಾದ ಮಾತುಗಾರಿಕೆ, ಸದಾ ಕಲೆಯನ್ನು ಜೀವಂತವಾಗಿರಿಸುವ ಹಂಬಲ, ಸಮಾಜಮುಖಿ ಚಿಂತನೆಯಿಂದ ದೇಶ-ವಿದೇಶಗಳಲ್ಲಿ ಅಪಾರ ಹೆಸರು ಗಳಿಸಿದ್ದರೂ ಕೊನೆಯವರೆಗೆ ನಮ್ಮೊಡನಿದ್ದುದು ಹುಲಸೋಗಿಯ ಹೈದನಾಗಿಯೇ. ದೊಡ್ಡಾಟದ ತಿಪ್ಪಣ್ಣ ಮಾಸ್ತರರೆಂದೇ...

ಮಂದಿ ಜೋಳ ಎಷ್ಟಂತ ಬೀಸೂದು. ನಮ್ಮ ಶಕ್ತಿ, ನಮ್ಮ ಬೀಸೋ ಕಲ್ಲಿಗೇನೇ ಮೀಸಲಿಡಬೇಕು. ಮತ್ತೊಬ್ಬರ ಸಾಧನೆ ಎಷ್ಟು ಹೊಗಳೋದು?ನಮ್ಮ ಪ್ರತಿಭೆ,ನಮ್ಮ ಸಾಧನೆ ಯಾವುದರಲ್ಲಿ ಕಡಿಮೆ ಇದೆ? ನಮ್ಮ ನಾಡು,ನಮ್ಮ ಕಲೆ,ನಮ್ಮ ಪ್ರಯತ್ನದ ಬಗ್ಗೆ ಮಾತನಾಡೋಣ ಎಂದು ತಮ್ಮ ಎದುರಿಗೆ ಕುಳಿತವರನ್ನು ಸದಾ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಗಟ್ಟಿಧ್ವನಿಯ,ಸಂಸ್ಕೃತಿ ಕಳಕಳಿಯ,ಬಯಲಾಟ ಭಾರ್ಗವ,ಶಿಲ್ಪ ಕಲಾಲೋಕದ ಮಾಂತ್ರಿಕ ಡಾ.ಟಿ.ಬಿ. ಸೊಲಬಕ್ಕನವರ ಇನ್ನಿಲ್ಲವೆಂಬ ಕಠೋರ ಸುದ್ದಿ ದಿಗಿಲು ಬಡಿಸುತ್ತದೆ.

ಪಾರಂಪರಿಕ ಕುಲಕಸುಬನ್ನೂ ಸಮೂಹಕ್ಕೆ ಹತ್ತಿರಗೊಳಿಸಬೇಕು ಎಂಬ ಚಿಂತನೆಯ ಮೂಸೆಯಲ್ಲಿ ಬೆಳೆದು ಬಂದವರು ಸೊಲಬಕ್ಕನವರು. ತಮ್ಮೊಳಗಿನ ಸಹಜ ಪ್ರತಿಭೆಯ ಮೂಲಕ ನಮ್ಮ ಪ್ರಾಚೀನ ಕಲೆ, ಸಂಸ್ಕೃತಿಗಳ ಕಡೆಗೆ ಆಧುನಿಕ ಮನಸ್ಸುಗಳನ್ನು ಕರೆದೊಯ್ದ ಈ ಅಭಿಜಾತ ಕಲಾವಿದನ ಕೈಚಳಕಕ್ಕೆ,ಮಾತಿನ ಮೋಡಿಗೆ,ಕಲೆಯ ಸಾಧನೆಗೆ ತಲೆದೂಗದವರೇ ಇಲ್ಲ.

ADVERTISEMENT

ಕಲೆಯು ಸಮಷ್ಟಿ ಪ್ರಜ್ಞೆ ಮೂಡಿಸಬೇಕೇ ಹೊರತು ಮತ್ತೊಬ್ಬರನ್ನು ಓಲೈಸುವಂತಾಗಬಾರದು ಎಂದು ಸದಾ ಪ್ರತಿಪಾದಿಸುತ್ತಿದ್ದರು. ಬಹುಸಂಖ್ಯಾತ ನಮ್ಮ ಗ್ರಾಮೀಣ ಜನರಿಗೆ ಬೌದ್ಧಿಕ ವಲಯದವರು ಕೊಟ್ಟ ಕೊಡುಗೆ ಏನು ಎಂದು ಪ್ರಶ್ನಿಸುತ್ತ ಹಳ್ಳಿಗರನ್ನು ಮಡಿವಂತಿಕೆಯಿಂದ ನೋಡುವ ವಿಲಕ್ಷಣ ಮನಸ್ಸಿನ ವಿಮರ್ಶಕರ ನಿಲುವುಗಳನ್ನು ತರಾಟೆಗೆ ತೆಗೆದುಕೊಂಡವರು ಅವರು.

ಹೊಟ್ಟೆ ಪಾಡಿಗಾಗಿ ಇಪ್ಪತ್ತೆಂಟು ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ಅವರು. ವೈಯಕ್ತಿಕ ಸುಖಗಳಿಗೆ ತಿಲಾಂಜಲಿ ಇತ್ತು ಕಲಾ ಪ್ರಪಂಚಕ್ಕೆ ಕೊಡುಗೆಯನ್ನು ನೀಡಬೇಕೆಂದು ದಾವಣಗೆರೆಯಲ್ಲಿನ ಚಿತ್ರಕಲಾ ಉಪನ್ಯಾಸಕ ಹುದ್ದೆಗೆ ರಾಜೀನಾಮೆ ಪತ್ರ ನೀಡಿದಾಗ ಅವರ ಆಪ್ತರು, ತಿಪ್ಪಣ್ಣ ಮಾಸ್ತರ್ ಜೀವನ ಮುಗಿಯಿತು ಎಂದೇ ಭಾವಿಸಿದ್ದರು.

ನೌಕರಿ ಬಿಟ್ಟು ಹುಟ್ಟೂರು ಶಿಗ್ಗಾವಿ ತಾಲ್ಲೂಕಿನ ಹುಲಸೋಗಿಗೆ ಬಂದರು. ತಂದೆಯಿಂದ ಬಳುವಳಿಯಾಗಿ ಬಂದಿದ್ದಹನ್ನೊಂದು ಎಕರೆ ಒಣ ಜಮೀನಿನಲ್ಲಿ ಬಾಳಕುಸ್ತಿ ಆರಂಭಗೊಂಡಿತ್ತು. ಅದರಲ್ಲಿಯೇನಾಲ್ಕು ಎಕರೆ ಜಮೀನನ್ನು ತೋಟವನ್ನಾಗಿಸಿದರು. ಬಳಿಕ ಉತ್ತರ ಕರ್ನಾಟಕ ಭಾಗದಹದಿನೈದಕ್ಕೂ ಹೆಚ್ಚು ಜಿಲ್ಲೆಗಳಲ್ಲಿದ್ದ ದೊಡ್ಡಾಟವನ್ನು ಆಧುನಿಕ ರಂಗಭೂಮಿಯತ್ತ ತರಲು ವಿನೂತನ ಪ್ರಯೋಗಗಳಿಗೆ ಒಳಪಡಿಸಿದರು.

ಟಿ.ಬಿ.ಸೊಲಬಕ್ಕನವರ

ಮೂರು ಜಿಲ್ಲೆಯಲ್ಲಿರುವ ಯಕ್ಷಗಾನ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿರಬಹುದಾದರೆ ನಮ್ಮ ದೊಡ್ಡಾಟಕ್ಕೇಕೆ ಇದು ಸಾಧ್ಯವಿಲ್ಲವೆಂದು ಕರ್ನಾಟಕ ರಾಜ್ಯ ದೊಡ್ಡಾಟ (ಬಯಲಾಟ) ಟ್ರಸ್ಟ್ ಶುರುಮಾಡಿದರು. ದೊಡ್ಡಾಟಕ್ಕೆ ಬೇಕಿದ್ದ ರಂಗಪರಿಕರ,ಕಲಾವಿದರ ಸಂಭಾವನೆ ಸರಿಪಡಿಸಲು ಪರದಾಡಿದರು. ಸಾಲ ಮಾಡಿದರು. ಸಾಲ ತೀರಿಸಲು ಜಮೀನು ಮಾರಿದರು. ಮನೆಯಲ್ಲಿ ಸಾಕಿದ್ದ ದನಕರುಗಳ ಹೈನುಗಾರಿಕೆಯಿಂದ ಜೀವನ ಸಾಗಹತ್ತಿತು.

ಮಗಳು ವೇದಾರಾಣಿ ಸ್ನಾತ್ತಕೋತ್ತರ ಪದವಿ ಪೂರೈಸಿ ಮನೆಗೆ ಬಂದಾಗ ಆಕೆಗೆ ಮದುವೆ ವಯಸ್ಸು. ಮಗಳ ಮದುವೆ ಮಾಡಲೂ ಸಾಲ ಮತ್ತೆ ಅನಿವಾರ್ಯವಾಯಿತು. ಮೊದಮೊದಲು ಹಿತೈಷಿಗಳ ಬಳಿ ಕೈಗಡ ರೂಪದಲ್ಲಿ ಹಣ ಪಡೆದರು. ಸಾಲದ್ದಕ್ಕೆ ಶಿಗ್ಗಾವಿಯ ಕೊ ಆಪರೇಟಿವ್ ಬ್ಯಾಂಕಿಗೂ ಮೊರೆಹೋದರು. ಖಾಸಗಿ ವ್ಯಕ್ತಿಗಳ ಬಳಿಯೂ ಬಡ್ಡಿ ರೂಪದಲ್ಲಿ ಸಾಲ ಪಡೆದು ಮಗಳ ಮದುವೆ ಮಾಡಿದರು. ಆ ಸಂದರ್ಭದಲ್ಲಿ ಆಪ್ತರ ಪೈಕಿ ಕೆಲವರು ಉಡುಗೊರೆ ರೂಪದಲ್ಲಿ ಮದುವೆಗೆ ಬೇಕಿದ್ದ ಸಾಮಗ್ರಿ ಒದಗಿಸಿದ್ದನ್ನು ಕೃತಜ್ಞತೆಯಿಂದ ನೆನೆಯುತ್ತಿದ್ದರು.

ಒಂದು ಕಾಲದಲ್ಲಿ ತಮ್ಮ ಮಗಳ ಮದುವೆಗೆ ಹಣ ನೀಡಿ ಸಹಕರಿಸಿದವರನ್ನು ತಾವು ಆರ್ಥಿಕವಾಗಿ ಸುಧಾರಿಸಿದ ಬಳಿಕ ಆಹ್ವಾನಿಸಿ ಹಣದ ಪ್ರತಿರೂಪವಾಗಿ ತಾವೂ ಉಡುಗೊರೆ ನೀಡಿ ಗೌರವಿಸುತ್ತಿದ್ದ ಅವರ ಋಣಮುಕ್ತ ಧೋರಣೆ ಸ್ಮರಣೀಯ.

ಆರ್ಥಿಕವಾಗಿ ದಿವಾಳಿ ಆಗಿದ್ದರೂ ಗ್ರಾಮೀಣ ಜನರಿಂದ ಅವರೆಂದೂ ದೂರವಿರಲಿಲ್ಲ.1990ರ ದಶಕದಲ್ಲಿ ಸಾಕ್ಷರತಾ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದಾಗ,ದೊಡ್ಡಾಟ ತರಬೇತಿ ನಡೆಸುವಾಗ,ಲಲಿತ ಕಲೆಗಳ ಬಗ್ಗೆ ಆಸಕ್ತರಿಗೆ ತಿಳಿಸುವಾಗ ಅವರ ಬಿಳಿ ಅಂಗಿ ಮೇಲಿನ ಜೇಬಿನಲ್ಲಿ ಒಂದು ಪೆನ್ನು,ಎರಡು ಹಾಳೆ ಬಿಟ್ಟರೆ ಮತ್ತೇನೂ ಇರುತ್ತಿರಲಿಲ್ಲ. ಮನೆಗೆ ಬಂದವರನ್ನು ಉಪಚರಿಸುವುದರಲ್ಲಿ ಅವರೆಂದೂ ಹಿಂದೆ ಬಿದ್ದವರಲ್ಲ. ಅಲ್ಲಿಯೂ ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ ಎಂದು ಬಸವ ತತ್ವ ಮೆರೆದರು. ಜ್ಞಾನ ಜಗತ್ತನ್ನು ಆಳುತ್ತದೆ. ನನ್ನ ಬಳಿ ಬರಬೇಕಾದವರು ಜ್ಞಾನ ಸಂಗ್ರಹಕ್ಕೆ ಬರಬೇಕೇ ಹೊರತು ಹಣ ಸಂಗ್ರಹಕ್ಕಲ್ಲ ಎಂದು ಹೇಳುತ್ತಿದ್ದರು.

ಆದರೆ ಸಾಲ ಕೊಟ್ಟಿದ್ದ ಶಿಗ್ಗಾವಿಯ ವ್ಯಕ್ತಿಯೊಬ್ಬರು ಸಾಲ ಕೊಡುವವರೆಗೂ ನಮ್ಮ ಮನೆಯಿಂದ ಹೊರಗೆ ಹೋಗುವಂತಿಲ್ಲ ಎಂದು ಕೂಡಿಹಾಕಿದ್ದರು. ಆಗ ಸ್ಥಿತಪ್ರಜ್ಞರಾಗಿ ತಮ್ಮ ಪತ್ನಿ ಸಾವಿತ್ರಮ್ಮನವರ ಮೈಮೇಲಿದ್ದ ಚಿನ್ನಾಭರಣಗಳನ್ನು ಮಾರಿ ಸಾಲ ತೀರಿಸಿದ್ದನ್ನು ಬಹುತೇಕರು ಇನ್ನೂ ಮರೆತಿಲ್ಲ!

ಸೊಲಬಕ್ಕನವರ ಒಬ್ಬ ಅದ್ಭುತ ಮಾತುಗಾರ. ಚಿತ್ರಕಲೆ,ರಂಗಭೂಮಿ,ಕೃಷಿ,ಸಿನಿಮಾ ಸೇರಿದಂತೆ ಹಲವು ರಂಗಗಳಲ್ಲಿ ಅಪಾರ ಅನುಭವ ಹಾಗೂ ಅಧ್ಯಯನ ಮಾಡಿದವರು. ಚಹಾದಂಗಡಿ,ಊರಗಸಿ,ಗುಡಿ ಆವರಣಗಳಲ್ಲಿ ಜನರೊಟ್ಟಿಗೆ ಮಾತಿಗಿಳಿಯುತ್ತಿದ್ದರು. ಅವರ ಬಟ್ಟೆಗಳು ಹರಿದು ಕೈಹೊಲಿಗೆ ಕಂಡಿದ್ದವು. ಕಲೆಯ ಬೆನ್ನು ಹತ್ತಿದ ಇವನಿಗೆ ಊರಾಗ ಮನೆಯಿಲ್ಲ,ಅಡವ್ಯಾಗ ಹೊಲ ಇಲ್ಲವೆಂದು ಜನ ನಿಂದಿಸುತ್ತಿದ್ದರು.

ಬೆಂಗಳೂರಿನಲ್ಲೊಮ್ಮೆ ಬರಗೂರು ರಾಮಚಂದ್ರಪ್ಪ ಅವರು ಕಥಕ್ಕಳಿ ಹಾಗೂ ದೊಡ್ಡಾಟ ಶೈಲಿಯಲ್ಲಿ ಏಕಲವ್ಯ ಪ್ರದರ್ಶನ ಆಯೋಜಿಸಿದ್ದರು. ಸೊಲಬಕ್ಕನವರ ಅವರು ತಮ್ಮ ಕಲಾವಿದರನ್ನು ಲಾರಿಯಲ್ಲಿ ಕರೆದೊಯ್ದರು. ಏಕಲವ್ಯ ಪ್ರದರ್ಶನ ಮುಗಿದ ಬಳಿಕ ಆಯೋಜಕರು ಚೆಕ್ ಮೂಲಕ ಗೌರವ ಸಂಭಾವನೆ ಕಳಿಸುವುದಾಗಿ ಭರವಸೆ ನೀಡಿದರು. ಕಲಾವಿದರನ್ನು ಕರೆತಂದ ಲಾರಿ ಬಾಡಿಗೆ ಪಾವತಿಸಲು ಹಣ ಇಲ್ಲದಂತಾಗಿ ತಮ್ಮ ಕೈಯಲ್ಲಿದ್ದ ಚಿನ್ನದುಂಗುರ ಮಾರಿದ್ದನ್ನು ಆಗಾಗ ಮೆಲುಕು ಹಾಕುತ್ತಿದ್ದರು.

ಹುಲಸೋಗಿ ಅರೆಮಲೆನಾಡಿನ ವೈವಿಧ್ಯವನ್ನು ಉಸಿರಾಗಿಸಿಕೊಂಡ ಸಣ್ಣ ಹಳ್ಳಿ. ಸೊಲಬಕ್ಕನವರ ಅವರ ತಂದೆ ಊರಿನ ಹಿರಿತನ ನಿಭಾಯಿಸುತ್ತಿದ್ದ ಬಸವಣ್ಣೆಪ್ಪ. ಅವರದು ದಾನಧರ್ಮದಲ್ಲಿ ಎತ್ತಿದ ಕೈ. ಮೊದಲ ಪತ್ನಿ ಕುಂದಗೋಳ ತಾಲ್ಲೂಕಿನ ಗುರುವಿನಹಳ್ಳಿಯವರು. ಒಂದು ಹೆಣ್ಣು ಮಗುವಿಗೆ ತಾಯಿಯಾಗಿ ಬೇಗನೇ ತೀರಿಕೊಂಡರು. ಎರಡನೇ ಪತ್ನಿಯಾಗಿ ಬಂದವರು ಅದೇ ತಾಲ್ಲೂಕಿನ ವಿಠಲಾಪುರದ ಪಟ್ಯಾಳ ಮನೆತನದ ಬಸವಣ್ಣೆವ್ವ. ಬಸವಣ್ಣೆವ್ವಗೆ ಹುಟ್ಟಿದ ಮಕ್ಕಳು ಕಣ್ತೆರೆಯುವ ಮುನ್ನವೇ ಸಾವನ್ನಪ್ಪುತ್ತಿದ್ದವು.

ಆಲಮಟ್ಟಿಯಲ್ಲಿ ಅರಳಿದ ರಾಕ್ ಗಾರ್ಡನ್‌ನಲ್ಲಿ ಕೃಷ್ಣನ ವಿಹಾರದ ನೋಟ

1947ಮಾರ್ಚ್‌ 3ರಂದು ಹುಟ್ಟಿದ್ದು ದುಂಡನೆಯ ಗಂಡು ಮಗು. ಮಗನನ್ನು ಉಳಿಸಿಕೊಳ್ಳುವ ಕಾರಣಕ್ಕೆ ತಿಪ್ಪೆಯಲ್ಲಿ ಕುತ್ತಿಗೆವರೆಗೆ ಹುಗಿದು ಶಾಸ್ತ್ರ ಮಾಡಿದ ಹಿರಿಯರು ಮಗುವಿನ ಮೂಗಿನ ಬಲಗಡೆ ಹಚ್ಚೆ ಹಾಕಿ ತಿಪ್ಪಣ್ಣ ಎಂದು ಹೆಸರಿಟ್ಟರು. ತಿಪ್ಪಣ್ಣ, ಎರಡೂವರೆ ವರ್ಷದ ಮಗುವಿದ್ದಾಗ ತಾಯಿಯನ್ನು ಕಳೆದುಕೊಂಡರು. ತಂದೆಯ ಅಕ್ಕ ಮುಗಳಿಯ ಅರಳಿಕಟ್ಟಿ ಈರಮ್ಮ ದೇಖರೇಕಿ ಮಾಡುತ್ತಿದ್ದಳು. ಸೋದರ ಮಾವ ಗೂಳಪ್ಪ ಪಟ್ಯಾಳ ಅಳಿಯ ತಿಪ್ಪಣ್ಣನ ಮೇಲೆ ಅತೀವ ಕಾಳಜಿವಹಿಸಿ ಬೆಳೆಸಿದರು.

ಕರ್ನಾಟಕ ರಾಜ್ಯ ದೊಡ್ಡಾಟ (ಬಯಲಾಟ) ಟ್ರಸ್ಟ್ ರಚಿಸಿ30,ಏಪ್ರಿಲ್1992ರಲ್ಲಿ ದೊಡ್ಡಾಟ,ಅಡ್ಡಾಟ ಹೆಸರಿನಲ್ಲಿ ರಾಜ್ಯವನ್ನೇ ಸುತ್ತಿದರು. ತಮ್ಮೂರಿನ11ಎಕರೆ ಜಮೀನಿನಲ್ಲಿ ದೊಡ್ಡಾಟ ಶಿಬಿರ ಆಯೋಜಿಸಿ ನಾಡಿನ ಮೂಲೆಮೂಲೆಯ ಕಲಾವಿದರಿಗೆ ಅನ್ನ,ಆಶ್ರಯ ನೀಡಿದರು. ಸಾಕ್ಷರತಾ ಜಾಥಾ ಆಂದೋಲನದಲ್ಲಿ ಅಖಂಡ ಧಾರವಾಡ ಜಿಲ್ಲೆಯ ಜವಾಬ್ದಾರಿ ಹೊತ್ತರು. ರಾಜ್ಯದ ಹಲವೆಡೆ ರಾಕ್‌ ಗಾರ್ಡನ್‌ಗಳನ್ನು ನಿರ್ಮಿಸಿದರು. ಹೊಸ ಆಲೋಚನಾಕ್ರಮದ ಕಲಾವಿದರ ಪಡೆಯನ್ನು ಕಟ್ಟಿದರು.

ಯಶಸ್ಸು ಸಿಗುವಾಗ ಸಿಗುತ್ತದೆ. ಅವಸರ ಮಾಡಬಾರದು ಅನ್ನುತ್ತಲೇ ತಮ್ಮ ಐವತ್ತನೇ ವಯಸ್ಸಿನಿಂದ ಸಾಧನೆಯ ಶಿಖರವೇರಿದ ಸೊಲಬಕ್ಕನವರ, ಎಲ್ಲರಿಗೂ ಆಪ್ತರು. ಆಪದ್ಬಾಂಧವರೂ ಆಗಿದ್ದವರು. ಅಳಿಯ ಪ್ರಕಾಶ ದಾಸನೂರ ಅವರು ಸೊಲಬಕ್ಕನವರ ಅವರನ್ನು ಸೆಲಿಬ್ರಿಟಿಯನ್ನಾಗಿಸಿದರು. ರಾಜ್ಯೋತ್ಸವ ಪ್ರಶಸ್ತಿ ಗೌರವ, ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ದೊಡ್ಡಾಟವನ್ನೇ ಉಸಿರಾಗಿಸಿಕೊಂಡಿದ್ದ ಅವರು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಸಾಧನೆಗೆ ಅವಸರ ಮಾಡಬಾರದು ಎನ್ನುತ್ತಿದ್ದವರು ಬದುಕಿಗೇನೇ ವಿದಾಯ ಹೇಳಲು ಇಷ್ಟು ಅವಸರ ಮಾಡಬಾರದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.