ಗುರುಹಿರಿಯರ ಆಶೀರ್ವಾದದಿಂದ ಸಿತಾರ್, ಸೂರ್‌ಬಹರ್, ತಾರ್ ಶೆಹನಾಯಿ, ಇಸರಾಜ್, ದಿಲ್‌ರುಬಾ ಪಂಚವಾದ್ಯ ನುಡಿಸುವ ವಿರಳಾತಿ ವಿರಳ ಕಲಾವಿದ ಎನಿಸಿಕೊಂಡಿದ್ದು ನನ್ನ ಪುಣ್ಯ. ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ನನ್ನ ಸಂಕಲ್ಪ. ಸಂಗೀತ ವಾದ್ಯಗಳ ವೈಜ್ಞಾನಿಕ ಅಧ್ಯಯನಕ್ಕಾಗಿ ರಾಷ್ಟ್ರೀಯ ಫೆಲೋಶಿಪ್ ದೊರೆತಿದ್ದು 2020ರಲ್ಲಿ ಹೊಸ ಹುಡುಕಾಟದತ್ತ ಹೆಜ್ಜೆ ಇಡುತ್ತಿದ್ದೇನೆ. ಕಮಾನು (ಬೋವಿಂಗ್) ವಾದ್ಯಗಳ ನುಡಿಸಾಣಿಕೆ ಹಾದಿಯಲ್ಲಿ ಒಮ್ಮೆಲೇ ತೂರಿಬರುವ ಅಪಸ್ವರ (ವಾಲ್ಫ್ ನೋಟ್ಸ್) ನಿವಾರಿಸುವ ಸವಾಲು ನನ್ನೆದುರಿಗಿದೆ.
ಸಮಾನ ಮನಸ್ಕರೊಂದಿಗೆ ಸೇರಿ ‘ಧಾರವಾಡ ಮ್ಯೂಸಿಕ್ ಸೊಸೈಟಿ’ ಸ್ಥಾಪನೆಯ ಕನಸು 2020ರಲ್ಲಿ ಸಾಕಾರಗೊಳ್ಳಲಿದೆ. ಹೊಸದಾಗಿ ಸಂಗೀತ ಕಲಿಕೆಗೆ ಬರುವ ವಿದ್ಯಾರ್ಥಿಗಳ ಮನಸ್ಸುಗಳಲ್ಲಿ ಕನಸು ಬಿತ್ತುವ ಸಂಕಲ್ಪ ಹೊಂದಿದ್ದೇನೆ.
ಹಾಸ್ಟೆಲ್, ಪಿ.ಜಿ, ಬಾಡಿಗೆ ಕೊಠಡಿ, ಬಾಡಿಗೆ ಮನೆಗಳಲ್ಲಿ ವಾಸಿಸುವವರು ಸಂಗೀತ ಕಲಿಯಲು ಹಲವು ಅಡೆತಡೆಗಳಿವೆ. ಇದು ನನ್ನ ಅನುಭವವೂ ಹೌದು. ಆಸಕ್ತಿ ಇದ್ದರೂ ಕಲಿಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಪ್ರತ್ಯೇಕ ಅಭ್ಯಾಸಾಲಯ ರೂಪಿಸುವ ಚಿಂತನೆ ಇದೆ. ಕೆಲವರಿಗೆ ವಾದ್ಯ ಖರೀದಿಯೂ ಸಾಧ್ಯವಾಗುವುದಿಲ್ಲ. ಗ್ರಂಥಾಲಯ ಮಾದರಿಯಲ್ಲಿ ‘ವಾದ್ಯ ಭಂಡಾರ’ ತೆರೆಯುವ ಸಂಕಲ್ಪವಿದೆ. ಗ್ರಂಥಾಲಯಯಲ್ಲಿ ಪುಸ್ತಕ ಪಡೆದು ಓದುವಂತೆ, ವಾದ್ಯ ಭಂಡಾರದಲ್ಲಿ ವಾದ್ಯ ಪಡೆದು ನುಡಿಸುವ ಪರಿಕಲ್ಪನೆ ನನ್ನದು.
2020ರಲ್ಲಿ ನನ್ನ ಎರಡು ಹೊಸ ವಾದ್ಯಗಳ ನಾದ ಕೇಳಿಸಬೇಕು ಎನ್ನುವ ಗುರಿ ಇದೆ. ಹಳೆಯ ಹಾಗೂ ಒಡೆದ ಸಿತಾರ್‌ನ ಒಂದು ಭಾಗ, ಇಸರಾಜ ವಾದ್ಯದ ಇನ್ನೊಂದು ಭಾಗ ಸೇರಿಸಿ ‘ಹೊಸ ಇಸರಾಜ’ ವಾದ್ಯ ತಯಾರಿಸುತ್ತಿದ್ದೇನೆ. ಕರ್ನಾಟಕದಲ್ಲಿ ಇಸರಾಜ ನುಡಿಸುವ, ನುಡಿಸುವವರ ಪರಂಪರೆ ಇಲ್ಲ. ಹೊಸಬರಿಗೆ ಕಲಿಸಿ ಇಸರಾಜ ಪರಂಪರೆ ಸೃಷ್ಟಿಸಬೇಕು ಎಂಬ ಕನಸಿದೆ. ಜೊತೆಗೆ ಸಾರಂಗಿಗೆ ಹೊಸರೂಪ ನೀಡಿದ್ದು ಅದೂ ಹೊಸವರ್ಷದಲ್ಲಿ ನಾದ ಹೊಮ್ಮಿಸಲಿದೆ.
12ನೇ ಶತಮಾನದ ವಚನ ಉಳಿಸುವ ಹೋರಾಟದಲ್ಲಿ ಕಾದರವಳ್ಳಿ ಗ್ರಾಮದ ಪಾತ್ರ ಬಲುದೊಡ್ಡದು. ವಚನಗಳನ್ನೇ ಪ್ರಧಾನವಾಗಿ ಹಾಡುವ, ಎಲೆಮರೆ ಕಾಯಿಯಂತಿರುವ ಹಲವು ಕಲಾವಿದರು ಈ ಹಳ್ಳಿಯಲ್ಲಿದ್ದಾರೆ. ಇಲ್ಲಿ ಈಗಲೂ ಜೀವಂತವಾಗಿರುವ ವಚನ, ಭಜನಾ, ತತ್ವಪದ ಪರಂಪರೆಯನ್ನು ನಗರ ಪ್ರದೇಶದೊಂದಿಗೆ ಹಂಚಿಕೊಳ್ಳಬೇಕು ಎಂಬ ಸಂಕಲ್ಪವನ್ನು ನಾನು ಮಾಡಿದ್ದೇನೆ.
ಪಂ. ಅರಣ್ಯ ಕುಮಾರ್, ಸಿತಾರ್ ವಾದಕ
ನಿರೂಪಣೆ: ಎಂ.ಎನ್. ಯೋಗೇಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.