ADVERTISEMENT

ಚಿತ್ರಗಳಲ್ಲಿ ಪ್ರಕೃತಿಯ ಅನಾವರಣ

ಬಳಕೂರು ವಿ.ಎಸ್.ನಾಯಕ
Published 18 ಜುಲೈ 2018, 19:30 IST
Last Updated 18 ಜುಲೈ 2018, 19:30 IST
ಬಿ.ಎನ್.ವಿದ್ಯಾ ಅವರ ಕಲಾಕೃತಿ
ಬಿ.ಎನ್.ವಿದ್ಯಾ ಅವರ ಕಲಾಕೃತಿ   

ಆಗಸದಿಂದ ಭೂಮಿಗೆ ಸ್ಪರ್ಶಿಸುವ ಕಿರಣಗಳು, ಚಂದ್ರನ ಬೆಳದಿಂಗಳ ಪ್ರಭೆ, ನಿಸರ್ಗದ ರಮಣೀಯ ತಾಣಗಳು, ಬೆಟ್ಟಗುಡ್ಡಗಳು, ಶಿಖರವನ್ನು ಆವರಿಸಿರುವ ಮಂಜು, ದೇವಾಲಯಗಳು, ಸ್ಮಾರಕಗಳು, ಹಂಪೆಯ ವಿಹಂಗಮ ನೋಟ ಹೀಗೆ ಒಂದೆ ಎರಡೇ... ಎಲ್ಲರನ್ನು ಒಂದು ಕ್ಷಣ ಚಕಿತಗೊಳಿಸುವ ವಿನೂತನ ಚಿತ್ರಗಳ ಸರಣಿಯನ್ನು ರಚಿಸಿದವರು ಕಲಾವಿದೆ ಬಿ.ಎನ್.ವಿದ್ಯಾ.

ಬೆಂಗಳೂರಿನ ವಾಜರಹಳ್ಳಿಯ ನಿವಾಸಿಯಾದ ಅವರು ಎಂ.ಎ (ಅಗ್ರೊ ಎಕಾನಾಮಿಕ್ಸ್) ಪದವೀಧರರು. ಜೊತೆಗೆ ಹವ್ಯಾಸಿ ಚಿತ್ರಕಾರರು. ಅವರು ಕುಂಚದಲ್ಲಿ ಅರಳಿಸಿದ ಚಿತ್ರಗಳು ಸಾಮಾನ್ಯವಾದುದಲ್ಲ. ನೋಡುಗರು ಒಂದು ಕ್ಷಣ ಭಾವಪರವಶರಾಗುವುದಂತೂ ಸತ್ಯ. ಅತ್ಯದ್ಭುತವಾದ ವಿಚಾರಗಳು ಕಲಾತ್ಮಕ ವಿಷಯಗಳಾಗಿ ಹೊರಹೊಮ್ಮಿದಾಗ ಎಲ್ಲರೂ ಮೆಚ್ಚುವ ಮತ್ತು ಆಕರ್ಷಿಸುವ ಕಲಾಸರಣಿ ಸಿದ್ಧವಾಗಿ ಬಿಡುತ್ತದೆ. ಅಂತಹ ಕಲಾವಿಹಾರದಲ್ಲಿ ಸಂಚಾರಿಯಾಗಿ ವಿನೂತನ ಕಲಾಕೃತಿಗಳ ಗುಚ್ಚವನ್ನು ನೀಡಿದ್ದಾರೆ ಅವರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಇದೇ 20ರಿಂದ 27ರವರೆಗೆ ನಡೆಯುವ ಅವರ ಏಕವ್ಯಕ್ತಿ ಕಲಾಪ್ರದರ್ಶನದಲ್ಲಿ ಅವರು ರಚಿಸಿದ ವಿಭಿನ್ನ 25ಕ್ಕಿಂತಲೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಇವರು ಜಲವರ್ಣ, ತೈಲವರ್ಣ, ಆಕ್ರಿಲಿಕ್‌ ಮಾದ್ಯಮದಲ್ಲಿ ರಚಿಸಿರುವ ಕಲಾಕೃತಿಗಳು ಒಂದಕ್ಕಿಂತ ಒಂದು ಭಿನ್ನವಾಗಿರುವುದಂತೂ ಸತ್ಯ. ಇಂತಹ ಕಲಾಕೃತಿಗಳನ್ನು ರಚಿಸಲು ಕಾರಣ ಅವರು ಬಾಲ್ಯದಲ್ಲಿ ನಿಸರ್ಗದ ಮಡಿಲಲ್ಲಿ ಬೆಳೆದವರು.

ADVERTISEMENT

ಮಧ್ಯಪ್ರದೇಶದ ನಿಸರ್ಗವು ಬಾಲ್ಯದಲ್ಲಿ ಅವರ ಮೇಲೆ ಅಪಾರ ಪರಿಣಾಮ ಬೀರಿದ್ದು ನಂತರದ ದಿನಗಳಲ್ಲಿ ತಾವು ರಚಿಸಿದ ಅತೀ ಹೆಚ್ಚಿನ ಕಲಾಕೃತಿಗಳಲ್ಲಿ ಅಲ್ಲಿಯ ವಿಭಿನ್ನ ತಾಣಗಳನ್ನು ರಚಿಸಿರುವುದು ವಿಶೇಷ. ಒಬ್ಬ ಕಲಾವಿದನಿಗೆ ಪ್ರಕೃತಿ ಹೇಗೆಲ್ಲ ಉತ್ತೇಜಿಸುತ್ತದೆ ಎನ್ನುವುದಕ್ಕೆ ವಿದ್ಯಾರವರ ಕಲಾಕೃತಿಗಳೇ ಸಾಕ್ಷಿ.

ಚಿತ್ರಕಲಾ ಪರಿಷತ್ತಿನಲ್ಲಿ ಆರು ತಿಂಗಳ ಕಲಾ ಹವ್ಯಾಸಿ ತರಗತಿಗೆ ಸೇರಿ ತರಬೇತಿ ಪಡೆದು ಕಲೆಯಲ್ಲಿ ಹೆಚ್ಚಿನ ನೈಪುಣ್ಯತೆಯನ್ನು ಅವರು ಪಡೆದಿದ್ದಾರೆ. ಅವರು ಹೇಳುವ ಪ್ರಕಾರ, ‘ಕಲೆ ಎಂಬುದು ತಪಸ್ಸು. ಅದನ್ನು ಕರಗತ ಮಾಡಿಕೊಂಡರೆ ಯಾವುದೂ ಅಸಾಧ್ಯವಲ್ಲ. ನಾನು ಕೂಡ ಕಲಾತಪಸ್ವಿಯಾಗಿ ಅದರಲ್ಲಿ ತಲ್ಲೀನಳಾಗಿ ಹಲವಾರು ಕಲಾಕೃತಿಗಳನ್ನು ಪ್ರಕೃತಿಯ ರಮ್ಯತಾಣಗಳ ಜೊತೆಗೆ ಚಿತ್ರಿಸಿದ್ದೇನೆ. ನನಗೆ ಈ ರೀತಿಯ ಉತ್ತೇಜನ ನೀಡಿದ ಪ್ರಕೃತಿಗೆ ವಂದಿಸುತ್ತೇನೆ’ ಎನ್ನುತ್ತಾರೆ.

ಬಿ.ಎನ್.ವಿದ್ಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.