ಹೆಣ್ಣಿನ ಭಾವ ಭಂಗಿಗೆ ಮರುಳಾಗದವರು ಅಪರೂಪ. ಸಾಹಿತ್ಯ, ಸಂಗೀತ, ಪುರಾಣಗಳಲ್ಲಿ ಹೆಣ್ಣಿನ ಅನೇಕ ಭಾವ ಬೆಡಗುಗಳು ಚಿತ್ರಿತವಾಗಿವೆ. ಯುವ ಕಲಾವಿದರೊಬ್ಬರು ಹೆಣ್ಣಿನ ನಾಟ್ಯವನ್ನೇ ವಸ್ತುವನ್ನಾಗಿಸಿಕೊಂಡು ಹಲವು ಕಲಾಕೃತಿಗಳನ್ನು ರಚಿಸಿದ್ದಾರೆ. ಆ ಕಲಾವಿದ ಎಂ.ವೈ.ರಾಜೀವ್. ವ್ಯಾಸ ಮಹರ್ಷಿಗಳು ರಚಿಸಿದ 18 ಮಹಾಪುರಾಣಗಳ ಹಿನ್ನೆಲೆಯಲ್ಲಿ, ಭಾರತೀಯ ನಾಟ್ಯಶಾಸ್ತ್ರದ ಹಲವು ಭಂಗಿಗಳನ್ನು ಅವರು ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ.
ಚಿತ್ರದುರ್ಗದ ಹಿರಿಯೂರಿನ ಎಂ.ವೈ.ರಾಜೀವ್, ಶಿಕ್ಷಕರ ಕುಟುಂಬದಿಂದ ಬಂದವರು. ಆಕಸ್ಮಿಕವಾಗಿ ಕಲಾ ಶಿಕ್ಷಣ ಪಡೆದ ಅವರು, ಮುಂದೆ ಅದರಲ್ಲಿಯೇ ಎಂ.ಫಿಲ್, ಪಿ.ಎಚ್‌ಡಿ ಕೂಡ ಮುಗಿಸಿದರು. ನಂತರ ಒಂದಷ್ಟು ಕಾಲ ಚಿತ್ರಕಲೆಯ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರೂ ಅವರ ಮನಸ್ಸು ಕಲೆಯತ್ತ ತುಡಿಯುತ್ತಿತ್ತು. ಕೆಲಸ ಬಿಟ್ಟು ಪೂರ್ಣಪ್ರಮಾಣದಲ್ಲಿ ಕಲಾಕೃತಿಗಳ ರಚನೆಯಲ್ಲಿ ತೊಡಗಿದರು.
ನಾಟ್ಯಶಾಸ್ತ್ರ ಆಧರಿಸಿ, ಪುರಾಣಗಳ ಶಿಲ್ಪ–ಚಿತ್ರಗಳನ್ನು ಬಳಸಿಕೊಂಡು ಕಲಾಕೃತಿಗಳನ್ನು ರಚಿಸಿದ್ದಾರೆ. ಇಲ್ಲಿ ನೃತ್ಯಗಾತಿಯರ ಭಾವ, ಭಂಗಿಗಳ ಜತೆಗೆ ಅವರ ವೇಷಭೂಷಣ, ಆಭರಣಗಳಿಗೂ ಹೆಚ್ಚಿನ ಒತ್ತು ನೀಡಲಾಗಿದೆ. ವಿಷ್ಣುವಿನ ದಶಾವತಾರ, ಕೃಷ್ಣಾರ್ಜುನರ ಸಂವಾದ, ಗರುಡ ವಾಹನ, ಶಿವನ ತಾಂಡವ ನೃತ್ಯ, ಗಾಂಧಾರ ಬುದ್ಧ ಹೀಗೆ ಹತ್ತು ಹಲವು ವಿಷಯ ಇಟ್ಟುಕೊಂಡು ಚಿತ್ರ ರಚಿಸಿದ್ದಾರೆ. ಭಾರತದ ಪರಂಪರೆ, ಪುರಾಣ, ಕಲೆ, ಸಾಹಿತ್ಯಗಳನ್ನು ಅವರು ತೈಲ ವರ್ಣದ ಚಿತ್ರಗಳಲ್ಲಿ ಮೂಡಿಸಿದ್ದಾರೆ.
ರಾಜೀವ್ ಅವರು ಏಕವ್ಯಕ್ತಿ ಕಲಾ ಪ್ರದರ್ಶನವನ್ನು ‘ವ್ಯಾಸವರ್ಣ’ ಎನ್ನುವ ಹೆಸರಿನಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಏರ್ಪಡಿಸಿದ್ದಾರೆ. ಈ ಕಲಾಪ್ರದರ್ಶನವು ಆಗಸ್ಟ್ 11ರವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.